ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಉತ್ತರ ಕನ್ನಡದಲ್ಲಿ ಪಾರಂಪರಿಕ ತಳಿ ಸಂರಕ್ಷಣೆಗೆ ಕಂಕಣ

ಉತ್ತರ ಕನ್ನಡದ ಶಿರಸಿ, ಕುಮಟಾ ತಾಲ್ಲೂಕುಗಳಲ್ಲಿ ಹಲವು ಪ್ರಭೇದಗಳ ಬಿತ್ತನೆ
Last Updated 21 ಮೇ 2022, 19:45 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡದಲ್ಲಿ ಒಂದೆಡೆ ಭತ್ತದ ಬೇಸಾಯದ ಪ್ರದೇಶ ಇಳಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಕೆಲವರು ಸಾಂಪ್ರದಾಯಿಕವಾಗಿ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ. ಅವುಗಳನ್ನೇ ಬಳಕೆ ಮಾಡಿ ಇತರರಿಗೂ ಪ್ರೇರೇಪಿಸುತ್ತಿದ್ದಾರೆ.

265 ತಳಿ ಸಂರಕ್ಷಕ: ಶಿರಸಿ ತಾಲ್ಲೂಕಿನ ದೇವತೆಮನೆ ಗ್ರಾಮದ ರಾಮಕೃಷ್ಣ ಭಟ್ ಎಂಬುವವರು, 265 ಬಗೆಯ ಪಾರಂಪರಿಕ ತಳಿಗಳನ್ನು ನಾಟಿ ಮಾಡುತ್ತಾರೆ. ವಿಶೇಷವೆಂದರೆ ಅವರು ಅದಕ್ಕೆ ಕೇವಲ ನಾಲ್ಕು ಗುಂಟೆ ಜಮೀನು ಬಳಕೆ ಮಾಡಿಕೊಳ್ಳುತ್ತಾರೆ.

ಪ್ರತಿ ತಳಿಯ ಸಸಿಯನ್ನು ಗುರುತಿಸಲು ಪ್ರತ್ಯೇಕ ಸಂಖ್ಯೆ ನೀಡಿ ಅಂಟಿಸಿಡುತ್ತಾರೆ. ಅದನ್ನು ಆಧರಿಸಿ ನೊಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸುತ್ತಾರೆ. 200ಕ್ಕಿಂತ ಹೆಚ್ಚು ಭತ್ತ ತಳಿಗಳ ಮಾಹಿತಿ ಅವರ ಬಳಿ ಸದ್ಯಕ್ಕೆ ಲಭ್ಯವಿದೆ. 65 ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ಕಳವೆ, ಮಟ್ಟಳಗ, ಹೊನ್ನಕಟ್ಟು, ಜೇನುಗೂಡು, ಗೌಡರ ಭತ್ತ, ದೊಡ್ಡ ಭತ್ತ, ಜಿಗ್ಗ ವರಟಿಗ, ನೀರ ಮುಳುಗ, ಕರಿ ಕಂಟಕ, ಲಿಂಬೆ ಮೊಹರಿ ಸೇರಿದಂತೆ ಹಲವು ಸ್ಥಳೀಯ ತಳಿಯ ಮತ್ತು ನೇಪಾಳ, ಥಾಯ್ಲೆಂಡ್ ಭಾಗದಲ್ಲಿ ಬೆಳೆಯುವ ವಿದೇಶಿ ತಳಿಯ ಭತ್ತಗಳು ಅವರ ಬಳಿಯಿವೆ.

‘ಇವೆಲ್ಲವನ್ನು ಬೆಳೆಯಲು ತಜ್ಞರ ಸಲಹೆ ಪಡೆಯುತ್ತಿಲ್ಲ. ಹಲವು ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಅಧ್ಯಯನ ನಡೆಸುತ್ತಾರೆ’ ಎಂದು ಅವರು ಹೇಳುತ್ತಾರೆ.

ಕೊಯ್ಲಿನ ಬಳಿಕ ಬೀಜಗಳನ್ನು ಮುಂದಿನ ವರ್ಷದ ನಾಟಿಗೆ ಮೀಸಲಿಡುತ್ತಾರೆ. ಉಳಿದ ಭತ್ತವನ್ನು ಅಧ್ಯಯನ ಆಸಕ್ತರಿಗೆ, ಒಂದಷ್ಟು ಕೃಷಿಕರಿಗೆ ಉಚಿತವಾಗಿ ಕೊಡುತ್ತಾರೆ.

‘ತಳಿ ಸಂರಕ್ಷಣೆ ಆಗಬೇಕು ಎಂಬುದೇ ನನ್ನ ಕಾಳಜಿ’ ಎಂದು ಅವರು ಹೇಳುತ್ತಾರೆ.

ಮನೆಯಂಗಳದಲ್ಲೇ ಮಡಿಗೆ ಸಿದ್ಧತೆ: ಕುಮಟಾ ತಾಲ್ಲೂಕು ಕಾಗಾಲ ಗ್ರಾಮದ ಯುವ ಕೃಷಿಕ ನಾಗರಾಜ ನಾಯ್ಕ ಅಂಥವರಲ್ಲಿ ಒಬ್ಬರು. ಅವರು 170 ಬಗೆಯ ಭತ್ತದ ತಳಿಗಳನ್ನು ಬೆಳೆಸುತ್ತಿದ್ದಾರೆ. ಅಳಿವಿನ ಅಂಚಿನಲ್ಲಿರುವ ವಿವಿಧ ಪ್ರಭೇದಗಳನ್ನು ಸಂರಕ್ಷಿಸುತ್ತಿದ್ದಾರೆ.

ಜಿಲ್ಲೆಯ ಗಜನಿ ಭೂಮಿಯಲ್ಲಿ ಬೆಳೆಯುವ ಬಿಳಿ ಕಗ್ಗ, ಕರಿ ಕಗ್ಗ ತಳಿಗಳೂ ಅವರ ಸಂಗ್ರಹದಲ್ಲಿವೆ. ಜ್ಯೋತಿ, ಮಹಾವೀರ, ರಾಜಮುಡಿ, ಜಯಪದ್ಮ, ಸೇಲಂ, ಗೋವಾಧನ-1, 2, 3, 4 ಪ್ರಭೇದಗಳು, ರಾಜಭೋಗ, ನಾಗಭತ್ತ, ಶಕ್ತಿ, ಪಲಗಾರ, ರತ್ನಚೂಡ, ಭೂತನಾಥ, ಮೈಸೂರು ಮಲ್ಲಿಗೆ, ಕಜೆ ಜಯ, ಕೆಂಪು ಭತ್ತ, ಕಂದು ಭತ್ತ, ಔಷಧಿಯುಕ್ತ ಭತ್ತ ಹಾಗೂ ಉಪ್ಪು ನೀರು, ಆಳ ನೀರಿನಲ್ಲಿ ಬೆಳೆಯುವ ಭತ್ತದ ಬೀಜಗಳು ಅವರ ಬಳಿಯಿವೆ.

ತಮ್ಮ ಮನೆಯಂಗಳದಲ್ಲೇ ವಿವಿಧ ತಳಿಗಳ ಮಡಿಗಳನ್ನು ತಯಾರಿಸುತ್ತಾರೆ. ಅವುಗಳನ್ನು ತಮ್ಮ ಪರಿಚಯದವರ ಪಾಳುಬಿದ್ದ ಗದ್ದೆಯಲ್ಲಿ ಬೇಸಾಯ ಮಾಡುತ್ತಾರೆ. ಪ್ರಾಯೋಗಿಕವಾಗಿ ಮಾಡುವ ಕಾರಣ ಎಲ್ಲ ತಳಿಯ ಸುಮಾರು ಐದು ಕೆ.ಜಿ.ಗಳಷ್ಟು ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ.

‘ಅಸ್ಸಾಂನ ‘ಮೌದಾಮಣಿ’ ತಳಿಯನ್ನು ಕರಾವಳಿ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನಾಟಿ ಮಾಡಿದ್ದೆ. ಅವು ಉತ್ತಮ ಫಲಿತಾಂಶ ಕೊಟ್ಟಿತ್ತು. ಒಂದು ತೆನೆಯಲ್ಲಿ 500ರಿಂದ 600 ಕಾಳು ಕಟ್ಟುವುದು ಇದರ ವಿಶೇಷ. ಇದರಿಂದ ಸ್ಫೂರ್ತಿ ಪಡೆದು ಇತರ ತಳಿಗಳ ಸಂರಕ್ಷಣೆಗೆ ಮುಂದಾದೆ’ ಎಂದು ‘ಪ್ರಜಾವಾಣಿ’ ಜೊತೆ ಅವರು ಅನುಭವ ಹಂಚಿಕೊಂಡರು.

‘ಕಗ್ಗ’ ಭತ್ತ ಬಿತ್ತನೆ

ಕುಮಟಾ ತಾಲ್ಲೂಕಿನ ‘ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘ’ವು ಅಪರೂಪದ ದೇಸಿ ತಳಿ ‘ಕಗ್ಗ’ದ ಸಂರಕ್ಷಣೆಗೆ ಮಹತ್ವದ ಕಾರ್ಯ ನಡೆಸುತ್ತಿದೆ. ಪ್ರತಿ ವರ್ಷ ಸಹಕಾರ ತತ್ವದ ಅಡಿಯಲ್ಲಿ ಸುಮಾರು 30 ಎಕರೆ ಪ್ರದೇಶದಲ್ಲಿ ಈ ತಳಿಯ ಭತ್ತವನ್ನು ಬಿತ್ತನೆ ಮಾಡಲಾಗುತ್ತದೆ. ಗಜನಿ (ಖಾರ್ಲೆಂಡ್) ಗದ್ದೆಯ ಸುತ್ತಮುತ್ತಲಿನ ಸುಮಾರು 200 ರೈತರು ಇದರಲ್ಲಿ ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT