ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸ್ವಾವಲಂಬನೆ ಹಾದಿಯಲ್ಲಿ ಪ್ರಶ್ನೆಗಳು ಹಲವು

Last Updated 14 ಮೇ 2022, 21:03 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಕರ್ನಾಟಕವು ಸ್ವಾವಲಂಬಿ ಆಗುವುದು ಸಾಧ್ಯವಿದೆ. ಆದರೆ, ಅದಕ್ಕೆ ಕನಿಷ್ಠ ಹತ್ತು ವರ್ಷ ಬೇಕು. ಅಲ್ಲದೆ, ಎಣ್ಣೆಬೀಜ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧರಿದ್ದಾರೆಯೇ, ನೀರಿನ ಲಭ್ಯತೆ ಇದೆಯೇ, ಮಾರುಕಟ್ಟೆಯಲ್ಲಿ ರೈತರಿಗೆ ಆಕರ್ಷಕ ಬೆಲೆ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.

ಎಣ್ಣೆ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು, ರಾಜ್ಯಕ್ಕೆ ಅಗತ್ಯವಿರುವಷ್ಟು ಅಡುಗೆ ಎಣ್ಣೆ ಇಲ್ಲಿಯೇ ಉತ್ಪಾದನೆ ಆಗುವಂತೆ ಮಾಡಬಹುದೇ ಎಂಬ ಪ್ರಶ್ನೆಗೆ ಉದ್ಯಮದ ಮೂಲಗಳು ನೀಡುವ ವಿವರಣೆ ಇದು.

ರಾಜ್ಯದ ಒಂದು ತಿಂಗಳ ಅಡುಗೆ ಎಣ್ಣೆ ಅಗತ್ಯ 1 ಲಕ್ಷ ಟನ್. ವರ್ಷಕ್ಕೆ 12 ಲಕ್ಷ ಟನ್ ಅಡುಗೆ ಎಣ್ಣೆ ಬೇಕು. ಇದರಲ್ಲಿ ಶೇಕಡ 60ರಷ್ಟನ್ನು ಈಗ ಆಮದು ಮಾಡಿಕೊಳ್ಳಲಾಗುತ್ತಿದೆ.

‘ರಾಜ್ಯದ ರೈತರು ಕಡಿಮೆ ರಿಸ್ಕ್ ಇರುವ ಬೆಳೆಗಳ ಕಡೆ ಮುಖ ಮಾಡಿದ್ದಾರೆ. ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೇಕು ಎಂದಾದರೆ, ರೈತರು ಎಣ್ಣೆಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು’ ಎಂದು ಅಡುಗೆ ಎಣ್ಣೆಗಳ ಉತ್ಪಾದನೆ, ಮಾರಾಟದಲ್ಲಿ ತೊಡಗಿರುವ ಸಂಸ್ಥೆಯೊಂದರ ಅಧಿಕಾರಿ ಹೇಳಿದರು.

ವ್ಯಾಪಕವಾಗಿ ಬಳಕೆಯಾಗುತ್ತಿರುವ ತಾಳೆ ಎಣ್ಣೆ ಉತ್ಪಾದನೆ ಜಾಸ್ತಿ ಆಗಬೇಕು ಎಂದಾದರೆ, ತಾಳೆ ಕೃಷಿ ದೊಡ್ಡ ಪ್ರಮಾಣದಲ್ಲಿ ಇರಬೇಕು. ತಾಳೆ ಕೃಷಿಗೆ ನೀರು ಹೆಚ್ಚು ಬೇಕು. ಆದರೆ, ನೀರು ಹೆಚ್ಚು ಲಭ್ಯವಿರುವ ಕಡೆ ಅಡಿಕೆ, ಭತ್ತ ಬೆಳೆಯಲಾಗುತ್ತಿದೆ. ನೀರು ಹೆಚ್ಚು ಲಭ್ಯವಿದ್ದೂ ತಾಳೆಯನ್ನೇ ಬೆಳೆಯಬೇಕು ಎಂದಾದರೆ, ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗಬೇಕು. ಇಂಡೊನೇಷ್ಯಾ ಅಥವಾ ಮಲೇಷ್ಯಾದಿಂದ ಕಡಿಮೆ ಬೆಲೆಗೆ ತಾಳೆ ಎಣ್ಣೆ ಆಮದಾಗುವಾಗ ಇಲ್ಲಿನ ಬೆಳೆಗೆ ಹೆಚ್ಚಿನ ಬೆಲೆ ಸಿಗುವುದಿಲ್ಲ ಎಂದು ಅವರು ಹೇಳಿದರು.

‘ಈಗ ರಾಜ್ಯದಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯುವ ಪ್ರದೇಶವು 1.25 ಲಕ್ಷ ಹೆಕ್ಟೇರ್‌ಗೆ ಇಳಿದಿದೆ. ಇದಕ್ಕೆ ಒಂದು ಕಾರಣ ಈ ಬೆಳೆಗೆ ಎದುರಾದ ರೋಗದ ಸಮಸ್ಯೆ. ನಾವೇ ಸೂರ್ಯಕಾಂತಿ ಬೆಳೆದು, ಎಣ್ಣೆ ಸಿದ್ಧಪಡಿಸಿಕೊಳ್ಳುವುದಾದರೆ ಪ್ರತಿ ಕೆ.ಜಿ.ಗೆ ₹ 160 ಪಾವತಿಸಲು
ಸಿದ್ಧರಿರಬೇಕು. ಆದರೆ, ಉಕ್ರೇನ್–ರಷ್ಯಾ ಯುದ್ಧಕ್ಕೂ ಮೊದಲು ಅದೇ ಸೂರ್ಯಕಾಂತಿ ಎಣ್ಣೆಯನ್ನು ಕೆ.ಜಿ.ಗೆ ₹ 120ರ ದರದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಿತ್ತು’ ಎಂದು ಅಡುಗೆ ಎಣ್ಣೆಗಳ ಉದ್ಯಮದ ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT