ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ರಾಜ್ಯದಲ್ಲಿ ಇನ್ನೂ ಉಸಿರಾಡುತ್ತಿದೆ ಗಾಣದೆಣ್ಣೆ ಉದ್ಯಮ

Last Updated 15 ಮಾರ್ಚ್ 2020, 2:49 IST
ಅಕ್ಷರ ಗಾತ್ರ
ADVERTISEMENT
""

ಖಾದ್ಯ ತೈಲದ ಗುಣಮಟ್ಟದ ಬಗ್ಗೆ ತಿಳಿವಳಿಕೆ ಹೊಂದಿದವರು ಗಾಣದೆಣ್ಣೆಯತ್ತ ಮುಖ ಮಾಡಿದರೆ, ಕಲಬೆರಕೆ ಕುರಿತು ಅರಿವಿಲ್ಲದವರು ಮಾರುಕಟ್ಟೆಯಲ್ಲಿ ಸಿಗುವ ಅಗ್ಗದೆಣ್ಣೆ ಖರೀದಿಗೆ ಮುಗಿಬೀಳುತ್ತಿದ್ದಾರೆ...

ಧಾರವಾಡದಲ್ಲಿ ಹೆಚ್ಚುತ್ತಲೇ ಇದೆ ಬೇಡಿಕೆ
ಧಾರವಾಡ: ‘ಪಾಕೇಟು ಎಣ್ಣೆ ಹಕೀಕತ್ತು ಜನಕ್ಕ ಸಾವ್ಕಾಶ ಅರ್ಥ ಆಗಾಕ ಹತೈತಿ. ಅದಕ್ಕ, ಗಾಣದೆಣ್ಣಿಗೆ ಮತ್ತ ಹೊಳ್ಳಿ ಬರಲಿಕ್ಹತ್ಯಾರ. ಮತ್ತ ಬೇಡಿಕೆ ಏರಾಕ್ಹತೈತಿ’

ಹೀಗೆಂದವರು ಧಾರವಾಡದ ಗೋವಿಂದ ರೋಣ ಅವರು. ‘ರೋಣ’ ಎಂಬ ಹೆಸರಿನಲ್ಲಿ ಶೇಂಗಾ ಹಾಗೂ ಕುಸುಬಿ ಎಣ್ಣೆಯನ್ನು ತಯಾರಿಸುತ್ತಿರುವ ಅವರು, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲೂ ತಮ್ಮ ಗ್ರಾಹಕರನ್ನು ಹೊಂದಿದ್ದಾರೆ.

ಧಾರವಾಡ ತಾಲ್ಲೂಕಿನ ಮಂಡಿಹಾಳದ ಬಳಿ ಗಾಣದೆಣ್ಣೆಯ ಪುಟ್ಟ ಘಟಕ ಹೊಂದಿರುವ ಇವರು‘ಒಂದು ಕ್ವಿಂಟಲ್‌ ಶೇಂಗಾಕ್ಕೆ ಸರ್ಕಾರ ನಿಗದಿಪಡಿಸಿರುವ ಬೆಲೆ ₹5090. ಜಿಎಸ್‌ಟಿ ಶೇ 5, ಎಪಿಎಂಸಿ ಶುಲ್ಕ ಶೇ 1.5, ದಲ್ಲಾಳಿಗಳ ಕಮಿಷನ್ ಶೇ 2 ಹಾಗೂ ಇತರೆ ವೆಚ್ಚ ಎಲ್ಲವೂ ಸೇರಿ ಶೇ 10ರಷ್ಟು ಇತರೆ ಖರ್ಚು ಇದೆ’ ಎಂದು ಗಾಣದ ಎಣ್ಣೆಗೆ ತಗಲುವ ವೆಚ್ಚದ ವಿವರ ನೀಡುತ್ತಾರೆ.

‘ಯಾವುದೇ ಗಾಣದಲ್ಲಿ ಹಿಂಡಿ ಉಪ ಉತ್ಪನ್ನ. ಒಂದು ಕ್ವಿಂಟಲ್ ಶೇಂಗಾ ಕಾಳಿಗೆ 40 ಲೀಟರ್ ಎಣ್ಣೆ ದೊರೆತರೆ, 60 ಕೆ.ಜಿ.ಯಷ್ಟು ಹಿಂಡಿ ಸಿಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹32 ಇದೆ’ ಎಂದು ರೋಣ ಅವರು ತಿಳಿಸುತ್ತಾರೆ.

‘ಹಳೇ ಮಾದರಿಯಂತೆ ರುಬ್ಬಿದರೆ ಶೇ 32ರಿಂದ 33ರಷ್ಟು ಎಣ್ಣೆ ಸಿಗಲಿದೆ. ಎಣ್ಣೆ ಧಾರಣೆ ₹230ರಿಂದ 240 ಆಗಲಿದೆ. ತುಸು ಆಧುನಿಕ ಎನ್ನುವ, ಹವೆ ಹಾಯಿಸಿ, ಶೇಂಗಾ ಕಾಳನ್ನು ಬೆಚ್ಚಗೆ ಮಾಡಿ ಗಾಣಕ್ಕೆ ಹಾಕುವುದರಿಂದ ಶೇ 37ರಷ್ಟು ಎಣ್ಣೆ ಸಿಗಲಿದೆ. ಶೇ 28ರಷ್ಟು ಎಣ್ಣೆ ಅಂಶವಿರುವ ಕುಸುಬಿ ತೈಲಕ್ಕೆ ಪ್ರತಿ ಲೀಟರ್‌ಗೆ 5 ಕೆ.ಜಿ. ಕಾಳು ಬೇಕು’ ಎನ್ನುತ್ತಾರೆ.

ಅಗ್ಗದ ದರದಲ್ಲಿ ಎಣ್ಣೆ ನೀಡಲು ಹಲವೆಡೆ ಹೆಕ್ಸೇನ್‌ ಎಂಬ ಹಾನಿಕಾರಕ ರಾಸಾಯನಿಕ ಬಳಸಲಾಗುತ್ತಿದೆ. ಇದಕ್ಕಾಗಿ 400 ಡಿಗ್ರಿಗೂ ಅಧಿಕ ಉಷ್ಣತೆಯಲ್ಲಿ ಎಣ್ಣೆಯನ್ನು ಕುದಿಸಲಾಗುತ್ತದೆ. ರಿನ್ಸಿಂಗ್, ಬ್ಲೀಚಿಂಗ್ ಮತ್ತು ಡಿಒಡರೈಸಿಂಗ್ (ಆರ್‌ಬಿಡಿ) ಪದ್ಧತಿಯಲ್ಲಿ ಕಳ‍ಪೆ ಗುಣಮಟ್ಟದ ಆಮದಾದ ಎಣ್ಣೆಯನ್ನು ಶುದ್ಧೀಕರಿಸಿ ನೀಡಲಾಗುತ್ತಿದೆ’ ಎಂದು ವಿವರಿಸುತ್ತಾರೆ.

ಧಾರವಾಡ ಹಾಗೂ ಗದಗ ಭಾಗದಲ್ಲಿ ಮೊದಲು ಸಾಕಷ್ಟು ಗಾಣಗಳಿದ್ದವು. ಬಹುತೇಕ ಈ ಗಾಣದವರೇ ಆ ಕಂಪನಿಗಳ ಮಾರಾಟ ಪ್ರತಿನಿಧಿಗಳಾಗಿದ್ದಾರೆ. ಇದೇ ಲಾಭದಾಯಕ ಎನ್ನುವುದು ಇವರ ಅನಿಸಿಕೆ.

***

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಎಣ್ಣೆ ತಯಾರಿಸುವ ಗಾಣದ ಯಂತ್ರ

ಬಯಲು ಸೀಮೆಯಲ್ಲಿ ಈ ಎಣ್ಣೆ ಕೇಳುವವರಿಲ್ಲ
ಚಿತ್ರದುರ್ಗ:
ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಕಲಬೆರಕೆ ಎಣ್ಣೆಯ ಪ್ರಭಾವದಿಂದ ಗಾಣದ ಎಣ್ಣೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

‘25 ವರ್ಷಗಳಿಂದ ಗಾಣದ ಎಣ್ಣೆ ಉದ್ಯಮ ದಲ್ಲಿ ತೊಡಗಿಸಿಕೊಂಡಿದ್ದೇನೆ. ಯುಗಾದಿ ಹಬ್ಬಕ್ಕೆ ತಿಂಗಳು ಕಾಲ ಹಗಲು–ರಾತ್ರಿ ಎಣ್ಣೆ ತೆಗೆಯಬೇಕಿತ್ತು. ಈಗ ಗಾಣದ ಎಣ್ಣೆ ಕೇಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶ್ರೀರಾಂಪುರದ ಎಣ್ಣೆ ಗಾಣದ ಮಾಲೀಕ ಹರ್ಷ.

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯಲ್ಲಿ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಕೊಬ್ಬರಿ ಎಣ್ಣೆ ತಯಾರಿಸುವ ಹಲವು ಗಾಣಗಳಿವೆ. 1,300 ತೆಂಗು ಬೆಳೆಗಾರರು ಷೇರುದಾರರಾಗಿ ಸ್ಥಾಪಿಸಿದ ‘ಕಲ್ಪವೃತ್ತ ಕೋಕೋನಟ್‌ ಪ್ರೊಡ್ಯೂ ಸರ್ಸ್‌ ಕಂಪನಿ’ ಮಾತ್ರ ಸುಸ್ಥಿತಿಯಲ್ಲಿದೆ. ಅಡುಗೆ ಹಾಗೂ ದೇಹಕ್ಕೆ ಬಳಕೆ ಮಾಡುವ ಕೊಬ್ಬರಿ ಎಣ್ಣೆಯನ್ನು ಇಲ್ಲಿ ತಯಾರಿಸಲಾಗುತ್ತಿದೆ.

‘ತೆಂಗಿನಕಾಯಿ ಹಾಗೂ ಒಣ ಕೊಬ್ಬರಿ ಬಳಸಿ ಎರಡು ವಿಧಾನದಲ್ಲಿ ಎಣ್ಣೆ ತಯಾರಿಸ ಲಾಗುತ್ತದೆ. ಒಂದು ಕೆ.ಜಿ ಒಣ ಕೊಬ್ಬರಿಗೆ ಸರಾಸರಿ 650 ಎಂ.ಎಲ್‌ ಎಣ್ಣೆ ಬರುತ್ತದೆ. ಒಂದು ಕೆ.ಜಿ ಕೊಬ್ಬರಿ ಎಣ್ಣೆಗೆ ಕಂಪನಿ ₹ 250 ಬೆಲೆ ನಿಗದಿ ಮಾಡಿದೆ. ಬಹುತೇಕ ತೆಂಗು ಬೆಳೆಗಾರರು ಕೊಬ್ಬರಿಯನ್ನು ಗಾಣಕ್ಕೆ ತಂದು ಎಣ್ಣೆ ತಯಾರಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಕಂಪನಿಯ ನಿರ್ದೇಶಕ ರಂಗನಾಥ್‌.

ತೆಂಗಿನಕಾಯಿಯಿಂದ ತಯಾರಿಸುವ ಎಣ್ಣೆ ಕೊಂಚ ದುಬಾರಿ. 20 ಕೆ.ಜಿ ಹಸಿ ತೆಂಗಿನಕಾಯಿಗೆ ಒಂದು ಕೆ.ಜಿ ಎಣ್ಣೆ ಸಿಗುತ್ತದೆ. ಪರಿಶುದ್ಧವಾಗಿರುವ ಈ ಕೊಬ್ಬರಿ ಎಣ್ಣೆ ಕೆ.ಜಿ.ಗೆ ₹ 750ಕ್ಕೆ ಸಿಗುತ್ತದೆ. ಇದನ್ನು ಅಡುಗೆ ಉದ್ದೇಶಕ್ಕೆ ಬಳಸಲಾಗುತ್ತದೆ.

ಕೊಬ್ಬರಿ, ಶೇಂಗಾ ಬೀಜದಿಂದ ಎಣ್ಣೆ ತಯಾ ರಿಸಿದ ಬಳಿಕ ಉಳಿಯುವ ಚರಟದಲ್ಲಿ ಉಪ ಉತ್ಪನ್ನಗಳು ಸಿದ್ಧವಾಗುತ್ತವೆ. ಸಿಹಿ ಖಾದ್ಯ, ಚಿಪ್ಸ್‌ ಹಾಗೂ ಜಾನುವಾರಿಗೆ ಹಿಂಡಿ ತಯಾರಿಸಲಾಗುತ್ತದೆ. ಈ ಉಪ ಉತ್ಪನ್ನಗಳ ಆದಾಯದಿಂದ ಎಣ್ಣೆ ಗಾಣದ ಉದ್ಯಮ ಉಸಿರಾಡುತ್ತಿದೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT