ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಹಣದ ಹೊಳೆ: ಹೊಲಕ್ಕಿಲ್ಲ ನೀರು

ನಾಲೆಗಳ ಆಧುನೀಕರಣದಲ್ಲಿ ಭ್ರಷ್ಟಾಚಾರದ ವಾಸನೆ; ಹಸನಾಗದ ರೈತರ ಬದುಕು
Last Updated 24 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಕಲಬುರಗಿ: ನೀರಾವರಿ ಉದ್ದೇಶಕ್ಕೆ ರಾಜ್ಯದ ಹಲವು ಕಡೆ ಸಾವಿರಾರು ಕೋಟಿ ರೂಪಾಯಿ ಅನುದಾನ ಸುರಿದು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ವಹಣೆ, ಆಧುನೀಕರಣಕ್ಕೆ ಪ್ರತಿ ವರ್ಷ ನೂರಾರು ಕೋಟಿ ಖರ್ಚು ಮಾಡಲಾಗುತ್ತದೆ. ಆದರೆ, ಆಶಯದಂತೆ ಹೊಲಗಳಿಗೆ ಮಾತ್ರ ಸಮರ್ಪಕವಾಗಿ ನೀರು ಹರಿದುಬರುತ್ತಿಲ್ಲ. ಇವೆಲ್ಲದರ ಮಧ್ಯೆ ಕಳಪೆ ಕಾಮಗಾರಿ, ಭ್ರಷ್ಟಾಚಾರದ ಆರೋಪಗಳೂ ಕೇಳಿಬರುತ್ತಲೇ ಇವೆ.

ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ತುಂಗಭದ್ರಾ, ಕಾವೇರಿ, ಭದ್ರಾ, ಮಲಪ್ರಭಾ, ಘಟಪ್ರಭಾ, ಕಾರಂಜಾ, ಅಮರ್ಜಾ ನೀರನ್ನು ಬಳಸಿಕೊಳ್ಳಲು ದಶಕಗಳ ಹಿಂದೆಯೇ ಅಣೆಕಟ್ಟುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಯಿತು. ನಾಲೆಗಳ ಕಾಮಗಾರಿಯೂ ನಡೆಯಿತು. ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಯೋಜನೆಯ ಕಾಮಗಾ
ರಿಯ ಹಲವೆಡೆ ಸಿಮೆಂಟ್ ಕಿತ್ತು ಹೋಗಿದ್ದು ಕಳಪೆ ಕಾಮಗಾರಿಗೆ ‘ಸಾಕ್ಷಿ’ಯಾದವು. ರೈತ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ತನಿಖೆಗೆ ಒತ್ತಾಯಿ
ಸಿದರು. ಆದರೆ ಕಾಟಾಚಾರದ ತನಿಖೆ ನಡೆಯಿತೇ ಹೊರತು ಸಂಬಂಧ ಪಟ್ಟ ಎಂಜಿನಿಯರ್‌ಗಳ ವಿರುದ್ಧ ಕ್ರಮ, ದುರ್ಬಳಕೆಯಾದ ಹಣ ವಸೂಲಿ, ಗುತ್ತಿಗೆ ದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತಹ ಪ್ರಕ್ರಿಯೆ ನಡೆದಿಲ್ಲ.

ಹಲ್ಲೆ ಯತ್ನ: ಆಧುನೀಕರಣ ಕಾಮಗಾರಿ ಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ತನಿಖೆಗಾಗಿ, ಕಳೆದ ಮೇ ತಿಂಗಳ 5ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಸ್ಥಳ ಪರಿಶೀಲಿಸಲು ಬಂದಿದ್ದ ವಿಧಾನಮಂಡಲದ ಸದನ ಸಮಿತಿ ಸದಸ್ಯರ ಮೇಲೆ ಗುತ್ತಿಗೆದಾರರ ಬೆಂಬಲಿಗರ ಹಲ್ಲೆ ಯತ್ನವೂ ನಡೆದಿತ್ತು!

ಯಾದಗಿರಿ–ರಾಯಚೂರು ಜಿಲ್ಲೆಗ ಳಲ್ಲಿ ಹಾದುಹೋಗುವ ನಾರಾಯಣಪುರ ಬಲದಂಡೆ ಕಾಲುವೆಯ ಮುಖ್ಯ ಕಾಲುವೆ ದುರಸ್ತಿಗೆ 2020ರಲ್ಲಿ ₹ 980 ಕೋಟಿ ಹಾಗೂ ವಿತರಣಾ ಕಾಲುವೆ ಮತ್ತು ಹೊಲ ಗಾಲುವೆಗಳ ದುರಸ್ತಿಗಾಗಿ ₹ 1,440 ಕೋಟಿ ಬಿಡುಗಡೆ ಮಾಡಲಾಗಿತ್ತು.

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಸಂಪೂರ್ಣವಾಗಿ ಗಿಡಗಳಿಂದ ಆವೃತ್ತವಾಗಿರುವ ಸಿಂಗಟಾಲೂರುಏತ ನೀರಾವರಿ ಯೋಜನೆಯ ಬೃಹತ್‌ ಕಾಲುವೆ
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಸಂಪೂರ್ಣವಾಗಿ ಗಿಡಗಳಿಂದ ಆವೃತ್ತವಾಗಿರುವ ಸಿಂಗಟಾಲೂರು
ಏತ ನೀರಾವರಿ ಯೋಜನೆಯ ಬೃಹತ್‌ ಕಾಲುವೆ

ಇದರಲ್ಲಿ ಶೇ 50ರಷ್ಟು ಕಾಮಗಾರಿ ನಡೆದೇ ಇಲ್ಲ ಎಂದು ರೈತ ಹಾಗೂ ದಲಿತ ಸಂಘಟನೆಗಳು ಆರೋಪಿಸಿ ಹೋರಾಟ ನಡೆಸಿದ್ದವು.

ಒತ್ತಡಕ್ಕೆ ಮಣಿದ ಸರ್ಕಾರ ವಿಧಾನಸಭೆಯ ಅಂದಾಜು ಸಮಿತಿ ಅಧ್ಯಕ್ಷ ಅಭಯ ಪಾಟೀಲ ನೇತೃತ್ವದ ತಂಡವನ್ನು ರಾಯಚೂರು ಜಿಲ್ಲೆಗೆ ಕಳುಹಿಸಿತ್ತು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಹಿಂಬಾಲಕರು ಅಭಯ ಪಾಟೀಲ ಹಾಗೂ ತಂಡದವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆ ಮೂಲಕ ಗುತ್ತಿಗೆದಾರರು ಯಾವ ಹಂತಕ್ಕೂ ಹೋಗಬಲ್ಲರು ಎಂಬ ಮಾತಿಗೆ ಪುಷ್ಟಿ ಒದಗಿತ್ತು.

ನೀರಾವರಿ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಹಲವು ನೀರಾವರಿ ಯೋಜನೆಗಳು 1970–80ರ ದಶಕದಲ್ಲಿ ಅನುಷ್ಠಾನಗೊಂಡಿವೆ. ಆದರೆ, ಕಾಲುವೆಗಳ ದುರಸ್ತಿಗೆ ಆದ್ಯತೆ ನೀಡದ ಕಾರಣ ಕೃಷಿ ಜಮೀನುಗಳಿಗೆ ನೀರು ಹರಿದಿಲ್ಲ. ರೈತರ ಬದುಕು ನಿರೀಕ್ಷಿಸಿದಷ್ಟು ಹಸನಾಗಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮುಲ್ಲಾಮಾರಿ ಕೆಳದಂಡೆ ಯೋಜನೆಯ ನಾಗರಾಳ ಜಲಾಶಯ ಅಣೆಕಟ್ಟು ದುರಸ್ತಿ ಹಾಗೂ ಕಾಲುವೆಗಳ ಆಧುನೀಕರಣಕ್ಕೆ ₹ 124 ಕೋಟಿ ಹಣ ಬಿಡುಗಡೆ ಮಾಡಿತ್ತು. 80 ಕಿ.ಮೀ. ಉದ್ದದ ಮುಖ್ಯ ಕಾಲುವೆಯ ದುರಸ್ತಿ, ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಬೇಕಾಬಿಟ್ಟಿ, ಕಳಪೆಯಾಗಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಆರೋಪ– ಪ್ರತ್ಯಾರೋಪ ಮಾಡಿದ್ದರು.

ಜಿಲ್ಲೆಯಲ್ಲಿ ಕೆಲಕಾಲ ಇದೊಂದು ಚರ್ಚೆಯ ವಿಷಯವಾಗಿತ್ತು. ಅದರಲ್ಲೂ ರಾಜಕೀಯ ವಿರೋಧಿಗಳಾದ ಸಂಸದ ಡಾ.ಉಮೇಶ ಜಾಧವ್ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಮಧ್ಯೆ ಈ ಯೋಜನೆಗೆ ಬಿಡುಗಡೆಯಾದ ಹಣದ ದುರ್ಬಳಕೆ ಬಗ್ಗೆಯೇ ವಾಗ್ವಾದಗಳು ನಡೆದಿದ್ದವು.

ಒತ್ತಡಕ್ಕೆ ಮಣಿದ ಸರ್ಕಾರ ಕಾಲುವೆಗಳ ಆಧುನೀಕರಣಕ್ಕೆ ಬಿಡುಗಡೆಯಾದ ಹಣ ದುರ್ಬಳಕೆಯಾಗಿದೆಯೇ ಎಂಬ ಕುರಿತು ತನಿಖೆಗೆ ಆದೇಶ ಹೊರಡಿಸಿತ್ತು. ಹಲವು ತಿಂಗಳ ಬಳಿಕ ತನಿಖಾ ವರದಿ ಬಂದರೂ ತಪ್ಪಿತಸ್ಥರು ಯಾರು ಎಂಬುದನ್ನು ಗುರುತಿಸಲಿಲ್ಲ. ಬದಲಾಗಿ, ಬಾಕಿ ಇರುವ ಕಾಮಗಾರಿಗಳನ್ನು ತುರ್ತಾಗಿಪೂರ್ಣಗೊಳಿಸಬೇಕು ಎಂಬ ಷರಾ ಬರೆದು ವರದಿಯನ್ನುಮುಕ್ತಾಯಗೊಳಿಸಲಾಗಿತ್ತು ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ ಒಬ್ಬರು ಹೇಳುತ್ತಾರೆ.

ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮ ಸಮೀಪದ ಕಾರಂಜಾ ಯೋಜನೆ ಕಾಮಗಾರಿ 1969ರಲ್ಲಿ ಮುಕ್ತಾಯವಾದ ನಂತರ 1972ರಲ್ಲಿ ಕಾಲುವೆಗಳ ಮೂಲಕ ರೈತರಿಗೆ ನೀರು ಬಿಡಬೇಕಿತ್ತು. ಮಳೆಯ ಕೊರತೆಯಿಂದ ಕಾಲುವೆಗೆ ನೀರು ಹರಿಸದ ಕಾರಣ ಕಾಲುವೆಗಳು ಹಾಳಾಗಿದ್ದವು. 2016ರಲ್ಲಿ ಸಚಿವರಾಗಿದ್ದ ಈಶ್ವರ ಖಂಡ್ರೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಿರಂತರ ಒತ್ತಡ ತಂದು ಕಾಲುವೆ ಆಧುನೀಕರಣಕ್ಕೆ₹ 500 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ನಂತರ 131 ಕಿ.ಮೀ. ಬಲದಂಡೆ ಮತ್ತು 31 ಕಿ.ಮೀ. ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ.

ಹನಿ ನೀರಾವರಿ ಪದ್ಧತಿಗೆ ಅಳವಡಿಸುವ ಅಪಾರ ಪ್ರಮಾಣದ ಸಣ್ಣ ಗಾತ್ರದ ಪೈಪ್ ಮುಂಡರಗಿ ಪಟ್ಟಣದ ಜಮೀನಿನಲ್ಲಿ ಹಾಳು ಬಿದ್ದಿದೆ
ಹನಿ ನೀರಾವರಿ ಪದ್ಧತಿಗೆ ಅಳವಡಿಸುವ ಅಪಾರ ಪ್ರಮಾಣದ ಸಣ್ಣ ಗಾತ್ರದ ಪೈಪ್ ಮುಂಡರಗಿ ಪಟ್ಟಣದ ಜಮೀನಿನಲ್ಲಿ ಹಾಳು ಬಿದ್ದಿದೆ

2017ರ ಜನವರಿ 18ರಂದು ಅಂದಿನ ಮುಖ್ಯಮಂತ್ರಿಯಾಗಿದ್ದಸಿದ್ದರಾಮಯ್ಯ ಅವರು ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಾರಂಜಾ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕಾಮಗಾರಿ ವಿಳಂಬಕ್ಕೆತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಯೋಜನೆಗೆ ನೂರಾರು ಕೋಟಿ ಹಣ ಖರ್ಚಾದರೂ ಅದರಿಂದ ರೈತರಿಗೆ ಮಾತ್ರ ಅನುಕೂಲವಾಗಿಲ್ಲ. ಎಂಜಿನಿಯರುಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಬಗ್ಗೆ ತಜ್ಞರ ಸಮಿತಿಯಿಂದ ತನಿಖೆ ನಡೆಸಿ ವರದಿ ಪಡೆಯಬೇಕು’ ಎಂದು ಜಲಸಂಪನ್ಮೂಲ ಇಲಾಖೆಗೆ ಸೂಚಿಸಿದ್ದರು. ಅಧಿಕಾರಿಗಳು ಗೋಪ್ಯ ವರದಿಯನ್ನೂ ಕೊಟ್ಟಿದ್ದರು.

ಕಾರಂಜಾಯೋಜನೆಯಡಿ ಕೈಗೊಳ್ಳಲಾದ ಕಾಲುವೆ ಆಧುನೀಕರಣ ಕಾಮಗಾರಿ ಸಮಪರ್ಕವಾಗಿ ನಡೆದಿಲ್ಲ. ಕಾಲುವೆಗಳು ಅನೇಕ ಕಡೆ ಸಮತಟ್ಟಾಗಿಲ್ಲ. ನೀರು ಸರಾಗವಾಗಿ
ಹರಿದುಹೋಗುತ್ತಿಲ್ಲ. ಹಿಂದೆ ಅರಗಲ್ಲು ಹಾಸಿ ಸಿಮೆಂಟ್‌ ಲೇಪಿಸಿದ್ದರು. ನೀರು ಹೆಚ್ಚು ಹರಿದಾಗ ಎಲ್ಲವೂ ಕಿತ್ತುಕೊಂಡು ಹೋಗುತ್ತಿದ್ದವು. ಮುಖ್ಯ ಕಾಲುವೆಯಿಂದ ವಿತರಣಾ ಕಾಲುವೆ ಕಾಮಗಾರಿ ಕಳಪೆಯಾಗಿವೆ ಎನ್ನುವ ಆರೋಪಗಳು ಇವೆ.

‘ಸರ್ಕಾರ ಕಾಲುವೆ ಆಧುನೀಕರಣ ಕಾಮಗಾರಿಗೆ ₹ 500 ಕೋಟಿ ಖರ್ಚು ಮಾಡಿದೆ. ಕಬ್ಬಿಣದ ಸಲಾಕೆಗಳನ್ನು ಬಳಸದೇ ಕಾಂಕ್ರೀಟ್‌ ಬೆಡ್‌ ಹಾಕಿದ್ದಾರೆ. ಕಪ್ಪು ಮಣ್ಣಿನ ನೆಲದಲ್ಲಿ ಬಹುಬೇಗ ಬಿರುಕು ಕಾಣಿಸಿಕೊಳ್ಳುತ್ತದೆ. 100 ಕಿ.ಮೀ ಕಾಲುವೆ ಮಾಡುವ ಬದಲು ಕಬ್ಬಿಣದ ಸಲಾಕೆಗಳನ್ನು ಹಾಕಿ ಅದೇ ವೆಚ್ಚದಲ್ಲಿ 80 ಕಿ.ಮೀ ವರೆಗೆ ಕಾಲುವೆ ಮಾಡಬಹುದಿತ್ತು. ಇದರಿಂದ 50 ವರ್ಷ ಕಾಲುವೆಗಳು ಗಟ್ಟಿಮುಟ್ಟಾಗಿ ಉಳಿದುಕೊಳ್ಳುತ್ತಿದ್ದವು’ ಎಂದು ರೈತ ಸಂಘದ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹೇಳುತ್ತಾರೆ.

‘ಕಾರಂಜಾ ಯೋಜನೆ ಉಪಯುಕ್ತವಾಗಿದೆ. ವಿತರಣಾ ವ್ಯವಸ್ಥೆ ಸರಿ ಇಲ್ಲ. ಅಧಿಕಾರಿಗಳು ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ರಾಜಕಾರಣಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸುತ್ತಾರೆ.

‘ಇವತ್ತಿನವರೆಗೂ ಕಾಲುವೆಯಲ್ಲಿ ಸರಿಯಾಗಿ ನೀರು ಹರಿದಿಲ್ಲ.ರೈತರು ಕಾಲುವೆ ನೀರು ಪಡೆದು ಸಮೃದ್ಧವಾಗಿ ಬೆಳೆ ಬೆಳೆದ ಉದಾಹರಣೆ ಇಲ್ಲ. ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿದರೆ ಮಾತ್ರ ಭತ್ತ ಬೆಳೆಯಲು ಸಾಧ್ಯವಿದೆ’ ಎಂದು ರೈತ ಸಂಘದ(ಕೋಡಿಹಳ್ಳಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ವಿವರಿಸುತ್ತಾರೆ.

‘ಕಾಲುವೆ ಮೂಲಕ ಹೊಲಕ್ಕೆ ನೀರು ಬಂದರೆ ರೈತರು ಕರ ಪಾವತಿಸಬಹುದು. ನೀರು ಬರದೇ ತೆರಿಗೆ ಪಾವತಿಸಲು ಹೇಗೆ ಸಾಧ್ಯ. ಕರ್ನಾಟಕ ನೀರಾವರಿ ನಿಗಮವು ಜಿಲ್ಲೆಯಲ್ಲಿ2020ರ ವರೆಗೂ ನೀರಾವರಿ ಯೋಜನೆಗೆ ₹ 698 ಕೋಟಿ ಖರ್ಚು ಮಾಡಿದೆ. ಆದರೆ, ರೈತರಿಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲ
ವಾಗದಿರುವುದು ದುರ್ದೈವ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ರೈತರು ಹೊಲಗಾಲುವೆಗಳಲ್ಲಿ ಕಸ ಹಾಗೂ ಮಣ್ಣು ಬೀಳದಂತೆ ಎಚ್ಚರ ವಹಿಸಬೇಕು. ಆಗ ಮಾತ್ರ ಕೊನೆಯ ಹಂತದವರೆಗೂ ನೀರು ಸುಲಭವಾಗಿ ಹರಿಯುತ್ತದೆ’ ಎನ್ನುತ್ತಾರೆ ನೀರಾವರಿ ನಿಗಮದ ಕಾರ್ಯಕಾರಿ ಎಂಜಿನಿಯರ್ ಶಿವಕುಮಾರ.

ಅತಿವಾಳ ಏತ ನೀರಾವರಿ: ₹ 78.77 ಕೋಟಿ ವೆಚ್ಚದಲ್ಲಿ 600 ಎಕರೆಗೆ ನೀರು ಪೂರೈಸುವ ಅತಿವಾಳ ಏತ ನೀರಾವರಿ ಯೋಜನೆಗೆ 2012ರ ಜನವರಿ 27ರಂದು ಬೀದರ್ ತಾಲ್ಲೂಕಿನ ಅತಿವಾಳದಲ್ಲಿ ಅಂದು ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಭೂಸ್ವಾಧೀನ ಸಮಸ್ಯೆಯಿಂದಾಗಿ
ವಿಳಂಬವಾಗಿತ್ತು. ಕಂದಾಯ ಇಲಾಖೆ ಮಾಡಿದ ಸರ್ವೆ ಸರಿ
ಇರಲಿಲ್ಲ. ಕೆಲ ರೈತರು ಕೋರ್ಟ್‌ ಮೆಟ್ಟಿಲೇರಿದ್ದು, ಸಮಸ್ಯೆ ಇನ್ನೂ ಮುಂದುವರಿದಿದೆ. ಕಾಮಗಾರಿ ಆರಂಭವಾದರೂ ಗುತ್ತಿಗೆದಾರರು ಕಬ್ಬಿಣದ ಸಲಾಕೆಗಳನ್ನು ಅಳವಡಿಸದೇ ಸಿಸಿ ಬೆಡ್‌ ಹಾಕುತ್ತಿದ್ದರಿಂದ ಬೀದರ್ ತಾಲ್ಲೂಕಿನ ಬಾವಗಿ ಸಮೀಪ ರೈತರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಡೆದಿದ್ದರು.

ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿ ಮಾಡಲು ಸಾಕಷ್ಟು ನೀರು ಇದ್ದರೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಜನರಿಗೆ ಅನುಕೂಲವಾಗಿಲ್ಲ. ತುಂಗಭದ್ರಾ ಜಲಾಶಯದಿಂದ ಈ ವರ್ಷ 404 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಪ್ರತಿ ವರ್ಷ ನೀರು ಪೋಲಾಗುವುದನ್ನು ತಪ್ಪಿಸಿ ಜನರಿಗೆ ನೀರಾವರಿ ಕಲ್ಪಿಸಲು ರಾಜ್ಯ ಸರ್ಕಾರ ಸಿಂಗಟಾಲೂರು ಏತ ನೀರಾವರಿ ಯೋಜನೆ ಆರಂಭಿಸಿತು. ಈ ಯೋಜನೆ ಲೋಕಾರ್ಪಣೆಗೊಂಡು ರೈತರಿಗೆ ಹತ್ತು ವರ್ಷಗಳಾದರೂ ಹನಿ ನೀರೂ ಸಿಕ್ಕಿಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿದರೂ, ಕೊಳವೆ ಮಾರ್ಗ ಮಾಡುವುದಕ್ಕೆ ಹಿಂದೇಟು ಹಾಕಲಾಗುತ್ತಿದೆ. ಯಾವ ಮಾದರಿಯ ನೀರಾವರಿ ಮಾಡಬೇಕು ಎನ್ನುವುದರ ಬಗ್ಗೆ ಪದೇ ಪದೇ ಯೋಜನೆ ಬದಲಿಸಿದ್ದು ಕೂಡ ಸಮಸ್ಯೆಗೆ ಕಾರಣವಾಗಿದೆ.

ಕೊಪ್ಪಳ ಸಮೀಪದ ಭಾಗ್ಯನಗರ ಬಳಿ ಹಿರೇಹಳ್ಳ ಕಾಮಗಾರಿಗೆ ₹ 12.42 ಕೋಟಿ ಅನುದಾನ ನೀಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಯಲಬುರ್ಗಾ, ಕುಷ್ಟಗಿ ತಾಲ್ಲೂಕುಗಳಿಗೆ ನಿರಂತರ ನೀರು ಪೂರೈಕೆಗೆ ಕೃಷ್ಣಾ ನದಿಯಿಂದ ನೀರು ಪಡೆಯುವ ಕೊಪ್ಪಳ ಏತ ನೀರಾವರಿ ಯೋಜನೆ10 ವರ್ಷಗಳಾದರೂ ಪೂರ್ಣಗೊಂಡಿಲ್ಲ.

ಕಿನ್ನಾಳ ಬಳಿ ಇರುವ ಜಲಾಶಯ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೆ ಹಿರೇಹಳ್ಳ ಯೋಜನೆ ಆಶಯ ಈಡೇರಿಲ್ಲ. ಕಾಲುವೆಗಳು ಪೂರ್ಣಗೊಂಡಿಲ್ಲ. ಅರ್ಧ ಭಾಗಕ್ಕೆ ನೀರು ಬಂದರೆ ಇನ್ನರ್ಧಕ್ಕೆ ನೀರಿಲ್ಲ!

ಮಂಡ್ಯ ಜಿಲ್ಲೆಯಲ್ಲಿ ಕೆಆರ್‌ಎಸ್‌ ಜಲಾಶಯ ನಿರ್ಮಾಣವಾಗಿ ದಶಕಗಳೇ ಮುಗಿದರೂ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ವ್ಯಾಪ್ತಿಯ ಯತ್ತಂಬಾಡಿ ಭಾಗದ ರೈತರು ಇಂದಿಗೂ ಎರಡು ಬೆಳೆ ಭತ್ತ ಬೆಳೆದುಕೊಳ್ಳಲು ಸಾಧ್ಯವಾಗಿಲ್ಲ. ಯತ್ತಂಬಾಡಿ ಭಾಗ ವಿಶ್ವೇಶ್ವರಯ್ಯ ನಾಲೆಯ ಕೊನೆ (ಟೇಲ್‌ ಎಂಡ್‌) ಭಾಗವಾಗಿದ್ದು, ಅಲ್ಲಿಯವರೆಗೆ ಇಂದಿಗೂ ನೀರು ತಲುಪುತ್ತಿಲ್ಲ.

ನಾಲೆಗಳ ಆಧುನೀಕರಣಕ್ಕಾಗಿ ಹಲವು ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿವೆ. ಏತ ನೀರಾವರಿ, ಬಹುಗ್ರಾಮ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.ಆದರೂ ನಾಲೆಯ ಕೊನೆ ಭಾಗಕ್ಕೆ ನೀರು ಬಾರದಿರುವುದು ಯೋಜನೆಗಳ ಔಚಿತ್ಯದ ಮೇಲೆಯೇ ಅನುಮಾನ ಹುಟ್ಟಿಸುತ್ತದೆ.

ಮಳವಳ್ಳಿ ತಾಲ್ಲೂಕು ಮಾತ್ರವಲ್ಲದೇ ಕೆಆರ್‌ಎಸ್‌ ಜಲಾಶಯದ ಸಮೀಪವೇ ಇರುವ ಮದ್ದೂರು ತಾಲ್ಲೂಕಿನ ಕೆಲ ಭಾಗ ‘ಟೇಲ್‌ ಎಂಡ್‌’ ಸಮಸ್ಯೆಯಿಂದ ಬಳಲುತ್ತಿದೆ. ಶಿಂಷಾ ನದಿ ಮೇಲ್ಭಾಗದಲ್ಲಿ ಬರುವ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ತವರು ಸೋಮನಹಳ್ಳಿ, ಕೆಸ್ತೂರು, ಕೆ.ಹೊನ್ನಲಗೆರೆ ಭಾಗಕ್ಕೆ ಶಿಂಷಾ, ಕಾವೇರಿ ನೀರು ತಲುಪುತ್ತಿಲ್ಲ. ‘ಟೇಲ್‌ ಎಂಡ್‌’ ಭಾಗಕ್ಕೆ ನೀರು ಒದಗಿಸಲು ಜಾರಿಗೊಳಿಸಲಾದ ಏತ ನೀರಾವರಿ ಯೋಜನೆಗಳು ಕೂಡ ವಿಫಲಗೊಂಡಿದ್ದು ಸಮಸ್ಯೆ ಬಗೆಹರಿದಿಲ್ಲ.

ಹಾಸನ ಜಿಲ್ಲೆ ಹೇಮಾವತಿ ಜಲಾಶಯದ ನೀರು ಪಡೆಯುವ ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕಿನ ಹಲವು ಭಾಗಗಳಿಗೆ ನೀರು ತಲುಪದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿಯ ನವಿಲುತೀರ್ಥ ಜಲಾಶಯದ ಬಲ ದಂಡೆ ಕಾಲುವೆ ಮೂಲಕ ಹರಿಯುವ ಮಲಪ್ರಭಾ ನೀರು ಶಿರೂರು ಗ್ರಾಮದ ಮೂಲಕ ಧಾರವಾಡ ಜಿಲ್ಲೆ ಪ್ರವೇಶಿಸುತ್ತದೆ. ಅಲ್ಲಿಂದ82 ಕಿ.ಮೀ. ದೂರದ ದಾಟನಾಳ ಬಳಿ ಸಾಗಿ ಗದಗ ಜಿಲ್ಲೆ
ಪ್ರವೇಶಿಸುತ್ತದೆ.

ಹಿಂಗಾರಿನಲ್ಲಿ ಮೂರು ತಿಂಗಳು ನಿತ್ಯ 300 ಕ್ಯುಸೆಕ್ ನೀರು ಹರಿಯುವ ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಶೇ 38ರಷ್ಟು ಸೋರಿಕೆ ಇತ್ತು.ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 1,065 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಗುತ್ತಿಗೆ ಪಡೆದ ಡಿ.ವೈ.ಉಪ್ಪಾರ ಕನ್‌ಸ್ಟ್ರಕ್ಷನ್ಸ್‌ ಕಂಪನಿಯು, ಕಾಲುವೆಯ ಎರಡೂ ದಂಡೆಗಳಿಗೆ ಕಾಂಕ್ರೀಟ್ ಹಾಕುವ ಕೆಲಸ ಮಾಡುತ್ತಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಬಳಿ ನಿರ್ಮಿಸಿದ ನವಿಲುತೀರ್ಥ ಜಲಾಶಯದಿಂದ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಗ್ರಾಮಗಳ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸುವುದಕ್ಕಾಗಿಯೇ ಉಗರಗೋಳ ಬಳಿ ಪ್ರತ್ಯೇಕ ನರಗುಂದ ಬ್ಲಾಕ್ ಕಾಲುವೆಯನ್ನು (ಎನ್‌ಬಿಸಿ) ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. 40 ಕಿ.ಮೀ. ಉದ್ದ ಇರುವ ಈ ಕಾಲುವೆ ಸುಮಾರು 80 ಸಾವಿರ ಹೆಕ್ಟೇರ್ ಭೂಮಿಗೆ ನೀರುಣಿಸಬೇಕು. ಆದರೆ, ಈ ಮಾರ್ಗದಲ್ಲಿ ಹಲವೆಡೆ ಕಾಲುವೆ ಎರಡೂ ಬದಿಯ ಕಾಂಕ್ರೀಟ್ ಒಡೆದಿದ್ದು, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲೇ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.

ಹಾಗಾಗಿ ಗದಗ ಜಿಲ್ಲೆಯ ಹಳ್ಳಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿಯುತ್ತಿಲ್ಲ. ತಾಲ್ಲೂಕಿನ ಕೊನೆಯ ಗ್ರಾಮಗಳಾದ ಕುರಗೋವಿನಕೊಪ್ಪ, ಹದಲಿ, ಸುರಕೋಡ ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ.

‘ರೋಣ ತಾಲ್ಲೂಕಿನಲ್ಲಿ ಕೊನೆಯವರೆಗೂ ಸರಾಗವಾಗಿ ಮಲಪ್ರಭಾ ಬಲದಂಡೆ ಕಾಲುವೆ ನೀರು ತಲುಪುತ್ತದೆ. ಕಾಲುವೆಯ ದುರಸ್ತಿ ಕಾರ್ಯ ಸಂಪೂರ್ಣವಾಗಿದೆ. ಆದರೆ, ಉಪ ವಿಭಾಗ ಕಾಲುವೆಗಳ ಕಾಮಗಾರಿ ದುರಸ್ತಿಯಲ್ಲಿ ಇರುವುದರಿಂದ ಅವುಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ’ ಎಂದು ಬಿಎಂಆರ್‌ಬಿಸಿ ಎಇಇ ಜಗದೀಶ ತಿಳಿಸಿದ್ದಾರೆ.

ಘಟಪ್ರಭಾ ನದಿಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಬಳಿ ನಿರ್ಮಿಸಿರುವ ಜಲಾಶಯದ ಘಟಪ್ರಭಾ ಎಡದಂಡೆ ಕಾಲುವೆಯ ವ್ಯಾಪ್ತಿಗೆ ಬರುವ ಮೂಡಲಗಿ ಭಾಗದ ಕೊನೆಯ ತುದಿ (ಟೇಲ್‌ಎಂಡ್‌)ಯಲ್ಲಿ ಪಟಗುಂದಿ, ಕಮಲದಿನ್ನಿ ಮತ್ತು ರಂಗಾಪುರ ಗ್ರಾಮಗಳಿವೆ. ಕಾಲುವೆ ನೀರು ಅಧಿಸೂಚಿತ ಪ್ರದೇಶಗಳಿಗೆ ತಲುಪುತ್ತಿಲ್ಲ. ದಶಕಗಳ ಹಿಂದೆ ನಿರ್ಮಿಸಿರುವ ಕಾಲುವೆಗಳ ಕಾಂಕ್ರೀಟ್, ಗೇಟ್‌ಗಳು ಮತ್ತು ತಡೆಗೋಡೆಗಳ ಕಲ್ಲುಗಳು ಕಿತ್ತು ಹೋಗಿವೆ. ಕಾಲುವೆ ತುಂಬೆಲ್ಲಾ ಗಿಡಗಂಟಿಗಳು ತುಂಬಿದ್ದು, ನೀರು ಹರಿಯುವಿಕೆಗೆ ಅಡೆತಡೆಯಾಗಿದೆ. ನೀರು ಹರಿಯದೆ ಪೋಲಾಗುತ್ತಿದೆ. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತಿಗಡಿ, ಹರಿನಾಲಾ ಯೋಜನೆಯ ಲಾಭ ತಾಲ್ಲೂಕಿನ ಹೊಳಿಹೊಸೂರು, ನೇಗಿನಹಾಳ ಸೇರಿದಂತೆ ಕೆಲವು ಊರುಗಳಿಗೆ ಸಿಗಬೇಕಾಗಿತ್ತು. ಆದರೆ, ಕೊನೆಯವರೆಗೆ ನೀರು ಇನ್ನೂ ಹರಿದಿಲ್ಲ ಎಂದು ರೈತರು ಆರೋಪಿಸುತ್ತಾರೆ.

ಪ್ರತ್ಯೇಕ ನಿಗಮದ ಕೂಗು

ತುಂಗಭದ್ರಾ ಜಲಾಶಯದಿಂದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ.

ಆದರೆ, ಕಲ್ಯಾಣ ಕರ್ನಾಟಕ ಭಾಗದ ಬೃಹತ್ ನೀರಾವರಿ ಯೋಜನೆಯಾದ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಅನುದಾನ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ವಿಶ್ವೇಶ್ವರಯ್ಯ ಜಲಭಾಗ್ಯ, ಕಾವೇರಿ ನೀರಾವರಿ ಮತ್ತು ಕೃಷ್ಣ ಜಲಭಾಗ್ಯ ನಿಗಮಗಳು ತುಂಗಭದ್ರಕ್ಕಿಂತಲೂ ಕಡಿಮೆ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಅವುಗಳಿಗೆ ಭರಪೂರ ಅನುದಾನ ಸಿಗುತ್ತದೆ. ಈ ತಾರತಮ್ಯ ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಭಾಗಕ್ಕೂ ಪ್ರತ್ಯೇಕ ನಿಗಮವಾಗಬೇಕು ಎನ್ನುತ್ತಾರೆ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಯ ಸದಸ್ಯ ಪಂಪಾಪತಿ ರಾಟಿ.

ಕಿತ್ತು ಹೋದ ನಾಲೆಗಳು

‘ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿ 24 ಗಂಟೆಯ ಒಳಗೆ ಕೊನೆಯ ಭಾಗಕ್ಕೆ ತಲುಪಬೇಕು. ಅದಕ್ಕಾಗಿ ಸೆಮಿ ಮಾಡೆಲ್‌ ಎಂದು ಐದು ವರ್ಷಗಳ ಹಿಂದೆ ಕಾಡಾದವರು ಯೋಜನೆ ರೂಪಿಸಿ ₹ 1,200 ಕೋಟಿ ಖರ್ಚು ಮಾಡಿದ್ದರು. ಆದರೆ ಕಳಪೆ ಕಾಮಗಾರಿಯಿಂದ ಒಂದೇ ವರ್ಷದಲ್ಲಿ ಸೆಮಿ ಮಾಡೆಲ್ ನಾಲೆಗಳು ಕಿತ್ತುಹೋಗಿವೆ. ಕೊನೇಭಾಗಕ್ಕೆ ನೀರು ತಲುಪುವುದು ಸಮಸ್ಯೆಯಾಗಲು ಇದೂ ಒಂದು ಕಾರಣ’ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಹೇಳುತ್ತಾರೆ.

ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ, ಗುಂಡಾಲ, ಚಿಕ್ಕಹೊಳೆ ಜಲಾಶಯಗಳನ್ನು ನಿರ್ಮಿಸಿ ಮೂರು ದಶಕಗಳು ಸಂದಿವೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಜಲಾಶಯಗಳು ಶಿಥಿಲಗೊಂಡು ಯೋಜನೆಗಳು ವಿಫಲವಾಗಿವೆ.

****

ಅಧಿಕಾರಿಗಳ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೆ. ತನಿಖಾ ವರದಿ ತರಿಸಿ ಕ್ರಮ ಕೈಗೊಳ್ಳುತ್ತೇನೆ.

-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

****

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಆಧುನೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರ ಬಗ್ಗೆ ಧ್ವನಿ ಎತ್ತಿದ್ದೆವು. ತನಿಖೆಯೂ ನಡೆಯಿತು. ಆದರೆ, ಯಾರನ್ನೂ ಹೊಣೆ ಮಾಡಲಿಲ್ಲ. ಹಾಗಿದ್ದರೆ ಹಣ ಹೋಗಿದ್ದಾದರೂ ಎಲ್ಲಿ?

-ಪ್ರಿಯಾಂಕ್ ಖರ್ಗೆ, ಶಾಸಕ, ಚಿತ್ತಾಪುರ

****

ಜಲಾಶಯ ನಿರ್ಮಾಣವಾಗಿ ನಮ್ಮ ಹೊಲಗಳಿಗೆ ನೀರು ಬರುತ್ತದೆ ಎಂಬ ಆಸೆಯಿಂದ ಮನೆಗಳು ಮುಳುಗಡೆಯಾದರೂ ಸುಮ್ಮನಿದ್ದೆವು. ಪುನರ್ವಸತಿ ಕೇಂದ್ರದಲ್ಲಿ ಕಾಟಾಚಾರಕ್ಕೆ ಕಾಮಗಾರಿ ಕೈಗೊಂಡಿದ್ದು, ಸಂಚಾರ ಇಲ್ಲದಿದ್ದರೂ ರಸ್ತೆಗಳು ಕಿತ್ತು ಹೋಗಿವೆ

-ಗೌರಿಶಂಕರ ಉಪ್ಪಿನ, ಗ್ರಾ.ಪಂ. ಅಧ್ಯಕ್ಷ, ಗಡಿಲಿಂಗದಳ್ಳಿ, ಚಿಂಚೋಳಿ ತಾಲ್ಲೂಕು

****

ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ನೀರಿದೆ, ಅಣೆಕಟ್ಟುಗಳಿವೆ. ಸೇತುವೆಗಳಿವೆ. ಕಾಲುವೆ ಇವೆ. ಆದರೆ ಅದರ ಉಪಯೋಗ ಮಾತ್ರ ತುಂಬಾ ಕಡಿಮೆ. ಇದಕ್ಕೆ ಕಾರಣ ಆಡಳಿತಗಾರರ ಬೇಜವಾಬ್ದಾರಿ ಮತ್ತು ಅವೈಜ್ಞಾನಿಕ ಹಂಚಿಕೆ

-ಭೀಮಶೆಟ್ಟಿ ಮುಕ್ಕಾ, ನೀರಾವರಿ ಹೋರಾಟಗಾರ, ಕಲಬುರಗಿ

****
ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ನಾಗರಾಜ ಚಿನಗುಂಡಿ, ಸೂರ್ಯನಾರಾಯಣ ವಿ., ಎಂ.ಎನ್‌. ಯೋಗೇಶ್‌, ಪ್ರಮೋದ,
ಸತೀಶ್ ಬೆಳ್ಳಕ್ಕಿ, ಬಾಲಕೃಷ್ಣ ಶಿಬಾರ್ಲ, ಸಂತೋಷ ಈ. ಚಿನಗುಡಿ,
ಜಗನ್ನಾಥ ಡಿ. ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT