ಸೋಮವಾರ, ಮಾರ್ಚ್ 1, 2021
28 °C
ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ಸರ್ಕಾರ

ಮನೆಯಲ್ಲೇ ಡಯಾಲಿಸಿಸ್‌ಗೆ ಕೋವಿಡ್ ಅಡ್ಡಿ: ಆಸ್ಪತ್ರೆಗಳಿಗೆ ರೋಗಿಗಳ ಅಲೆದಾಟ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಮನೆಯಲ್ಲಿಯೇ ಡಯಾಲಿಸಿಸ್ ಚಿಕಿತ್ಸೆ ಒದಗಿಸುವ ರಾಜ್ಯದ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಕೋವಿಡ್ ಕಾರಣ ನೀಡಿ ತಿರಸ್ಕರಿಸಿದೆ. ಇದರಿಂದಾಗಿ ಬಡ ರೋಗಿಗಳು ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ನಿರಂತರ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಆಸ್ಪತ್ರೆಗಳಲ್ಲಿ ಹಾಸಿಗೆ, ನೀರು, ವಿದ್ಯುತ್, ಔಷಧ ಹಾಗೂ ವೈದ್ಯರ ಕೊರತೆಯು ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಸಮಸ್ಯೆಯಾಗುತ್ತಿದೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಜಿಲ್ಲಾ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಟ್ಟ ಪರಿಣಾಮ ಕೋವಿಡೇತರ ರೋಗಿಗಳು ಚಿಕಿತ್ಸೆಗೆ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಅಲ್ಲಿನ ಡಯಾಲಿಸಿಸ್ ಘಟಕಗಳಲ್ಲಿ ಸೇವೆ ವ್ಯತ್ಯಯವಾಗಿ, ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ವಾರಕ್ಕೆ ಮೂರು ಬಾರಿ ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗಲು ಸಾಧ್ಯವಾಗಿತ್ತು.

ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಒಬ್ಬರಿಗೆ ತಿಂಗಳಿಗೆ ₹15 ಸಾವಿರದಿಂದ ₹30 ಸಾವಿರದವರೆಗೆ ವೆಚ್ಚವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಸಹಯೋಗದಲ್ಲಿ ಆರೋಗ್ಯ ಇಲಾಖೆಯು ಗೃಹ ಆಧಾರಿತ ಡಯಾಲಿಸಿಸ್ ಯೋಜನೆ ರೂಪಿಸಿತ್ತು. ಕೇರಳದಲ್ಲಿ ಈಗಾಗಲೇ ಈ ಮಾದರಿಯಲ್ಲಿ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಅದೇ ರೀತಿ, ರಾಜ್ಯದಾದ್ಯಂತ ಸೇವೆ ಪ್ರಾರಂಭಿಸಲು ಮೊದಲ ಹಂತದಲ್ಲಿ ₹5 ಕೋಟಿ ವೆಚ್ಚದ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಇಲಾಖೆ ಕಳುಹಿಸಿತ್ತು. ಆದರೆ, ಕೇಂದ್ರ ಸರ್ಕಾರವು ಅನುಮೋದನೆ ನೀಡದ ಪರಿಣಾಮ ಮನೆಯಲ್ಲಿಯೇ ಡಯಾಲಿಸಿಸ್ ಒದಗಿಸುವ ಯೋಜನೆ ಸಾಕಾರಗೊಂಡಿಲ್ಲ.

ರೋಗಿಗಳಿಗೆ ತರಬೇತಿ: ರಾಜ್ಯದಲ್ಲಿ ಸದ್ಯ ನೆಫ್ರೊ ಯುರಾಲಜಿ ಸಂಸ್ಥೆ ಮಾತ್ರ ಮನೆ ಆಧಾರಿತ ಡಯಾಲಿಸಿಸ್ ಸೇವೆ ಒದಗಿಸುತ್ತಿದೆ. ಅಲ್ಲಿ 34 ಮಂದಿ ಮನೆ ಡಯಾಲಿಸಿಸ್‌ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಬಿಪಿಎಲ್‌ ಕುಟುಂಬದ ರೋಗಿಗಳಿಗೆ ಅಗತ್ಯವಾದ ದ್ರಾವಣವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಯಾವ ರೀತಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು ಎಂದು ತರಬೇತಿಯನ್ನೂ ನೀಡಲಾಗುತ್ತಿದೆ. ಈ ಮಾದರಿಯ ಡಯಾಲಿಸಿಸ್‌ಗೆ ಒಳಪಡುವವರು ತಿಂಗಳಿಗೆ ಒಮ್ಮೆ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

‘ಮನೆಯಲ್ಲಿ ಡಯಾಲಿಸಿಸ್‌ ಮಾಡಿಕೊಳ್ಳುವವರು ದ್ರವಾಂಶವನ್ನು ಅಳವಡಿಸಿಕೊಂಡು, ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ವಿದೇಶದಲ್ಲಿ ಹೆಚ್ಚಿನ ರೋಗಿಗಳು ಈ ವಿಧಾನಕ್ಕೆ ಒಳಪಡುತ್ತಿದ್ದಾರೆ. ಎಪಿಎಲ್‌ ಕುಟುಂಬಗಳು ಈ ಮಾದರಿಯ ಚಿಕಿತ್ಸೆಗೆ ಹಣ ಪಾವತಿಸಬೇಕಾಗುತ್ತದೆ’ ಎಂದು ನೆಫ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಆರ್. ಕೇಶವಮೂರ್ತಿ ತಿಳಿಸಿದರು.

‘ಶುಚಿತ್ವ ಕಾಯ್ದುಕೊಂಡರೆ ಉತ್ತಮ ವಿಧಾನ’

‘ಯಂತ್ರದ ಮೂಲಕ ಮಾಡುವ ರಕ್ತದ ಶುದ್ಧೀಕರಣಕ್ಕೆ ‘ಹಿಮೋಡಯಾಲಿಸಿಸ್’ ಎಂದು, ಮನೆಯಲ್ಲಿ ಮಾಡುವ ಡಯಾಲಿಸಿಸ್‌ಗೆ ‘ಪೆರಿಟೋನಿಯಲ್’ ಡಯಾಲಿಸಿಸ್ ಎಂದು ಕರೆಯಲಾಗುತ್ತದೆ. ಗ್ಲುಕೋಸ್‌ ನೀಡುವ ಮಾದರಿಯಲ್ಲೇ ದ್ರವಾಂಶಗಳನ್ನು ನೀಡುವ ಮೂಲಕವೂ ಡಯಾಲಿಸಿಸ್ ಮಾಡಿಕೊಳ್ಳಬಹುದು. ರೋಗಿಗಳಿಗೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಗೆ ನಳಿಕೆಯನ್ನು ಅಳವಡಿಕೆ ಮಾಡಲಾಗುತ್ತದೆ. ಬಳಿಕ ದ್ರಾವಣವನ್ನು ನೀಡಲಾಗುತ್ತದೆ. ಶುಚಿತ್ವ ಕಾಯ್ದುಕೊಂಡಲ್ಲಿ ಇದು ಉತ್ತಮ ವಿಧಾನ’ ಎಂದು ಡಾ.ಆರ್. ಕೇಶವಮೂರ್ತಿ ತಿಳಿಸಿದರು.

‘ನಳಿಕೆಗೆ ದ್ರಾವಣದ ಚೀಲವನ್ನು ಅಳವಡಿಸಿಕೊಳ್ಳಬೇಕು. ದ್ರಾವಣ ಪೂರ್ಣ ಪ್ರಮಾಣದಲ್ಲಿ ದೇಹ ಸೇರಲು ನಾಲ್ಕರಿಂದ ಐದು ಗಂಟೆ ಬೇಕಾಗುತ್ತದೆ. ಈ ಅವಧಿಯಲ್ಲಿ ದೈನಂದಿನ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಕೂಲಿ ಕಾರ್ಮಿಕರಿಗೆ ಈ ಮಾದರಿಯ ಡಯಾಲಿಸಿಸ್ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರಿಗೆ ಈ ಮಾದರಿಯ ಡಯಾಲಿಸಿಸ್‌ಗೆ ಸಲಹೆ ನೀಡುವುದಿಲ್ಲ. ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಒಮ್ಮೆ ತಪಾಸಣೆ ನಡೆಸಿ, ದ್ರಾವಣ ನೀಡುತ್ತೇವೆ’ ಎಂದರು.

***

ಮನೆಯಲ್ಲಿಯೇ ಡಯಾಲಿಸಿಸ್ ಸೇವೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿಲ್ಲ. ಕೆಲ ಡಯಾಲಿಸಿಸ್ ಘಟಕದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ.

– ಡಾ.ಎಂ.ಸೆಲ್ವರಾಜನ್, ಆರೋಗ್ಯ ಇಲಾಖೆ ವೈದ್ಯಕೀಯ ವಿಭಾಗದ ಉಪನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು