ಶುಕ್ರವಾರ, ಆಗಸ್ಟ್ 6, 2021
21 °C

ಒಳನೋಟ: ಸೋಂಕಿನ ದಾಳಿಗೆ ಕ್ರೀಡಾ ವಹಿವಾಟು ‘ಕ್ಲೀನ್‌ ಬೌಲ್ಡ್‌’

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರತಿ ವರ್ಷ ಬೇಸಿಗೆ ಕ್ರೀಡಾ ಶಿಬಿರಗಳನ್ನು ನಡೆಸಿ ವರ್ಷಪೂರ್ತಿ ಗಳಿಸುತ್ತಿದ್ದ ಆದಾಯವನ್ನು ಅಕಾಡೆಮಿಗಳು ಹಾಗೂ ಕ್ರೀಡಾ ಸಾಮಗ್ರಿಗಳ ಮಾರಾಟಗಾರರು ಕೇವಲ ಎರಡ್ಮೂರು ತಿಂಗಳುಗಳಲ್ಲಿ ಸಂಪಾದಿಸುತ್ತಿದ್ದರು. ಆದರೆ, ಎರಡು ವರ್ಷಗಳಿಂದ ಬೇಸಿಗೆ ಸಮಯದಲ್ಲಿಯೇ ಕೋವಿಡ್‌ ಕಾಡಿದ್ದರಿಂದ ಕ್ರೀಡಾ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ.

ಕ್ರೀಡಾ ಕ್ಲಬ್‌ಗಳು ಈಗ ಮೈದಾನದ ಬಾಡಿಗೆ, ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಪಾವತಿಸುವುದಕ್ಕೂ ಪರದಾಡುತ್ತಿವೆ. ದೆಹಲಿ, ಕೋಲ್ಕತ್ತ, ಪಂಜಾಬ್‌ ಮತ್ತು ಉತ್ತರ ಪ್ರದೇಶದಿಂದ ಪೂರೈಕೆಯಾಗುವ ಕ್ರೀಡಾ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ.

ಪ್ರಮುಖವಾಗಿ ಕ್ರಿಕೆಟ್‌, ಬ್ಯಾಡ್ಮಿಂಟನ್‌ ಹಾಗೂ ಈಜು ಶಿಬಿರಗಳಿಗೆ ಬೇಡಿಕೆ ಇರುತ್ತಿತ್ತು. ಅಕಾಡೆಮಿಗಳಲ್ಲಿ, ಶಾಲಾ ಹಾಗೂ ಕಾಲೇಜುಗಳಿಗೆ ಕ್ರೀಡಾಸಾಮಗ್ರಿಗಳ ಮಾರಾಟವೂ ಜೋರಾಗಿರುತ್ತಿತ್ತು. ಸೋಂಕಿನ ಹಾವಳಿಯಿಂದ ಶಿಕ್ಷಣ ಸಂಸ್ಥೆಗಳ ಬಾಗಿಲು ತೆರೆದಿಲ್ಲ; ಯಾವ ಟೂರ್ನಿಗಳೂ ನಡೆದಿಲ್ಲ. ವ್ಯಾಪಾರವೂ ಇಲ್ಲ.

ಸಾಮಗ್ರಿಗಳು ಬಂದು ಕೆಲ ಸಮಯದ ನಂತರ ವ್ಯಾಪಾರಿಗಳು ಹಣ ಪಾವತಿಸಬಹುದಾಗಿತ್ತು. ಈಗ, ಮೊದಲು ಹಣ ಕೊಟ್ಟರಷ್ಟೇ ಉತ್ಪಾದಕ ಕಂಪನಿಗಳು ಕ್ರೀಡಾ ಪರಿಕರಗಳನ್ನು ಕಳುಹಿಸುತ್ತಿವೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡದಲ್ಲಿ ಕ್ರೀಡಾ ಸಾಮಗ್ರಿಗಳು ಹೆಚ್ಚು ಮಾರಾಟವಾಗುತ್ತಿದ್ದವು.

ರಾಜ್ಯದ ವಿವಿಧ ಭಾಗಗಳಲ್ಲಿ ಕ್ರೀಡಾ ಮಳಿಗೆಗಳು ನಷ್ಟದ ಕಾರಣದಿಂದ ಬಾಗಿಲು ಹಾಕುತ್ತಿವೆ. ಕರ್ನಾಟಕ ಕ್ರೀಡಾ ಸರಕುಗಳ ವಿತರಕರ ಸಂಘದಲ್ಲಿ 275 ನೋಂದಾಯಿತ ಹಾಗೂ 400ಕ್ಕೂ ಹೆಚ್ಚು ನೋಂದಾವಣೆಯಾಗದ ವ್ಯಾಪಾರಿಗಳಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಕ್ರೀಡಾ ಸಾಮಗ್ರಿಗಳ ವ್ಯಾಪಾರಿಗಳು ಅಂಗಡಿ ಬಾಗಿಲು ಮುಚ್ಚಿದ್ದಾರೆ.

ಕೋವಿಡ್‌ ಎರಡನೆ ಅಲೆಯ ಸಮಯದಲ್ಲಿ ಉಂಟಾದ ಗಂಭೀರ ಆರೋಗ್ಯ ಸಮಸ್ಯೆಯಿಂದ ಜನ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ರಾಜಧಾನಿಯಲ್ಲಿ ವಹಿವಾಟು ಶೇ 10ಕ್ಕಿಂತಲೂ ಕಡಿಮೆಯಾಗಿದೆ. ಹಳೆಯ ಕ್ರೀಡಾ ಸಾಮಗ್ರಿಗಳನ್ನೇ
ರಿಪೇರಿ ಮಾಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.

‘ರಾಜ್ಯದಲ್ಲಿ ವಾರ್ಷಿಕವಾಗಿ ಅಂದಾಜು ₹300ರಿಂದ ₹350 ಕೋಟಿಯಷ್ಟು ವಹಿವಾಟು ನಡೆಸುತ್ತಿದ್ದ ಕ್ರೀಡಾ ವ್ಯಾಪಾರಿಗಳಿಗೆ, ಈಗ ಅರ್ಧದಷ್ಟು ಕೂಡ ವ್ಯಾಪಾರ ಆಗುತ್ತಿಲ್ಲ. ಅನೇಕ ಉದ್ಯೋಗಿಗಳಿಗೆ ಕಂಪನಿಗಳು ಪೂರ್ಣ ವೇತನ ಪಾವತಿಸುತ್ತಿಲ್ಲ. ಕುಟುಂಬ ನಡೆಸುವುದೇ ಕಷ್ಟವಾಗಿರುವಾಗ ಯಾವ ಪೋಷಕರೂ ತಮ್ಮ ಮಕ್ಕಳನ್ನು ಕ್ರೀಡಾ ತರಬೇತಿಗೆ ಕಳುಹಿಸುವುದಿಲ್ಲ’ ಎಂದು ವಿತರಕರ ಸಂಘದ ಅಧ್ಯಕ್ಷ ಸುರೇಶ್ ಜೈನ್‌ ಹಾಗೂ ಕಾರ್ಯದರ್ಶಿ ಪ್ರಶಾಂತ ಕುಮಾರ್‌ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು