ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಕ್ಕೇ ಅಂಗವೈಕಲ್ಯ...! ತ್ರಿಶಂಕು ಸ್ಥಿತಿಯಲ್ಲಿ ಅಂಗವಿಕಲರು

ಆಕರ್ಷಕ ಯೋಜನೆಗಳಿದ್ದರೂ ಜಾರಿ ವ್ಯವಸ್ಥೆ ಊನ
Last Updated 3 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕುಟುಂಬದವರ ನಿರ್ಲಕ್ಷ್ಯ, ಸಮಾಜದ ಕಡೆಗಣನೆ, ಅವಹೇಳನಗಳನ್ನು ಸಹಿಸಿ ಬದುಕಬೇಕಿರುವ ಅಂಗವಿಕಲರದ್ದು ಹೋರಾಟದ ಬದುಕು. ಶೋಷಣೆಗೆ ಕಡಿವಾಣ ಹಾಕಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರಿಗೆ ಕಾಯ್ದೆಯ ಬಲವಿದ್ದರೂ ಪ್ರಯೋಜನವಿಲ್ಲ ಎಂಬ ಪರಿಸ್ಥಿತಿಯ ಮೇಲೆ ಈ ವಾರದ ಒಳನೋಟ ಬೆಳಕು ಚೆಲ್ಲಿದೆ....

ಬೆಂಗಳೂರು: ‘ಅಂಗವಿಕಲರಿಗೆ ಬೇಕಿರುವುದು ಅನುಕಂಪವಲ್ಲ, ಅವಕಾಶ’. ಆತ್ಮಗೌರವದ ಬದುಕು ಕಟ್ಟಿಕೊಳ್ಳಲು ಸ್ವಾಭಿಮಾನದಿಂದ ಹೋರಾಟ ನಡೆಸುತ್ತಿರುವ ಅಂಗವಿಕಲ ಸಮುದಾಯದ ಆತ್ಮಾಭಿಮಾನದ ನುಡಿಗಳಿವು.

ಅಂಗವಿಕಲರ ನೆರವಿಗೆ, ಸೌಲಭ್ಯ ಒದಗಿಸಲು ರಾಜ್ಯದಲ್ಲಿ ಪ್ರತ್ಯೇಕ ಇಲಾಖೆಯಿದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳಿವೆ. ಅವು ಆಕರ್ಷಕವಾಗಿಯೂ ಇವೆ. ಅನುದಾನವೂ ಲಭ್ಯವಿದೆ. ಆದರೆ, ಕೊಡುವ ಮನಸ್ಸು ಮತ್ತು ಅರ್ಹರಿಗೆ ಯೋಜನೆಗಳನ್ನು ತಲುಪಿಸುವ ವ್ಯವಸ್ಥೆಗೇ ‘ಅಂಗವೈಕಲ್ಯ’ಕ್ಕೆ ಒಳಗಾದರೆ ?

ಆಗ, ಪಡೆದುಕೊಳ್ಳುವವರ ಆತ್ಮವಿಶ್ವಾಸ ಕುಂದುತ್ತದೆ. ಸೌಲಭ್ಯ ಕೇಳಿಯೇ ಸಾಕಾಗಿ ಅಥವಾ ಅನ್ಯಾಯ ನೋಡಿ ಜಿಗುಪ್ಸೆ ಭಾವ ಹೆಪ್ಪು
ಗಟ್ಟುತ್ತಾ ಹೋಗುತ್ತದೆ. ಅದು ಅಂಗವಿಕಲತೆಗಿಂತಲೂ ಹೆಚ್ಚಿನ ನೋವು ಮೂಡಿಸುತ್ತದೆ. ಸದ್ಯ ಆಗುತ್ತಿರುವುದು ಅದೇ. ನಿಮಗೆ ಏನೇನು ಸೌಲಭ್ಯ ಸಿಗುತ್ತಿದೆ ಎಂಬ ಪ್ರಶ್ನೆ ಕೇಳಿದರೆ ಅಂಗವಿಕಲರಿಂದ ಉತ್ತರ ಸಿಗುವುದಿಲ್ಲ. ‘ಅದನ್ಯಾಕೆ ಕೇಳ್ತಿರಿ ಬಿಡಿ’ ಎಂಬ ನಿಟ್ಟುಸಿರಿನ ಮರುಪ್ರಶ್ನೆ ಎದುರಾಗಿ ಆತಂಕ ಹುಟ್ಟಿಸುತ್ತದೆ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13,24,205 ಮಂದಿ ಅಂಗವಿಕಲರಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಇವರ ಸಂಖ್ಯೆ ಹೆಚ್ಚಿರಬಹುದು. ಆದರೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಮಾಹಿತಿ ಪರಿಷ್ಕರಣೆ ಆಗಿಲ್ಲ. ಹೀಗಾಗಿ, ಅಂಗವಿಕಲರ ಸಂಖ್ಯೆ ಖಚಿತವಾಗಿ ಎಷ್ಟು ಎಂಬುದೇ ಸ್ಪಷ್ಟವಿಲ್ಲ. 2001ರ ಜನಗಣತಿಯಂತೆ ಇವರ ಪೈಕಿ ಶಿಕ್ಷಣ ಪಡೆದವರು 4,73,844.ಅಂದರೆ, ಶೇಕಡಾ 51.40 ಮಾತ್ರ. ಉಳಿದವರಿಗೆ ಶಿಕ್ಷಣದ ಗಾಳಿಯೂ ಸೋಕಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಅಂಗವಿಕಲರದ್ದು ಹೋರಾಟದ ಬದುಕು. ಕುಟುಂಬದವರ ನಿರ್ಲಕ್ಷ್ಯ, ಸಮಾಜದ ಕಡೆಗಣನೆ, ಅವಹೇಳನವೂ ಇದೆ. ಇವುಗಳಿಗೆ ಕಡಿವಾಣ ಹಾಕಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾಯ್ದೆಯ ಬಲವಿದೆ. ಆದರೂ ಪ್ರಯೋಜನವಿಲ್ಲ ಎಂಬ ಪರಿಸ್ಥಿತಿಯಿದೆ.

ಅಂಗವಿಕಲರ ಶ್ರೇಯೋಭಿವೃದ್ಧಿಗೆ 1998ರಲ್ಲಿಪ್ರತ್ಯೇಕ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. 2003ರಲ್ಲಿ ಇದಕ್ಕೆ ಹಿರಿಯ ನಾಗರಿಕರ ಕಲ್ಯಾಣವನ್ನೂ ಸೇರಿಸಲಾಗಿದೆ. ಅಂಗವಿಕಲರ ಒಟ್ಟು ಕಲ್ಯಾಣವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಪ್ರತ್ಯೇಕ ಇಲಾಖೆಯ ಸ್ಥಾಪನೆ, ಕಾರ್ಯಕ್ರಮಗಳ ಅನುಷ್ಠಾನದ ನಿಗಾವ ಹಿಸಲು ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿ, ಆಯುಕ್ತರು ಮತ್ತು ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಗಳಿವೆ. ವ್ಯವಸ್ಥೆ ಚೆನ್ನಾಗಿದೆ. ಆದರೆ, ಇವುಗಳ ಒಟ್ಟು ಫಲ, ಅಂಗವಿಕಲರಿಗೆ ತಲುಪುತ್ತಿದೆಯೇ, ಆಶಯ ಈಡೇರುತ್ತಿದೆಯೇ ಎಂಬುದಕ್ಕೆ ಉತ್ತರ ನಿರಾಸೆ ಮೂಡಿಸುತ್ತದೆ. ಭ್ರಮನಿರಸನವಾಗುತ್ತದೆ.

ಬಹುತೇಕ ಯೋಜನೆಗಳ ನೆರವನ್ನು ಜಿಲ್ಲೆಗಳಲ್ಲಿ ತಲೆ ಎತ್ತಿರುವ ಸ್ವಯಂ ಸೇವಾ ಸಂಘಗಳ ಮೂಲಕ ಅಂಗವಿಕಲರಿಗೆ ತಲುಪಿಸಲಾಗುತ್ತಿದೆ. ಆದರೆ, ಅನುದಾನದ ಮೇಲೆ ಕಣ್ಣಿಟ್ಟಿರುವ ಕೆಲವು ಸೇವಾ ಸಂಸ್ಥೆಗಳು ಮೂಲ ಆಶಯವನ್ನೇ ಮರೆತಿವೆ. ಎಲ್ಲ ಸೇವಾ ಸಂಸ್ಥೆಗಳನ್ನು ಶಂಕೆಯ ದೃಷ್ಟಿಯಿಂದ ನೋಡುವುದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಆದರೆ, ಬೆಳಕಿಗೆ ಬಂದಿರುವ ಕೆಲವು ಅವ್ಯವಹಾರದ ಘಟನೆಗಳನ್ನು, ಅಡ್ಡದಾರಿಯ ಮಾರ್ಗಗಳನ್ನು ಗಮನಿಸಿದರೆ ಇಂಥ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳ ಉತ್ತರದಾಯಿತ್ವ ಕುರಿತು ಯಾವುದೇ ಸಂಸ್ಥೆಗಳನ್ನು ನಂಬಿಕೆ, ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಅಂಗವಿಕಲರು ಇಲ್ಲ.

ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿಯೇ, ದಾಖಲೆಗಳಲ್ಲಿ ತೋರಿಸುವ ಸಲುವಾಗಿ ಅಂಗವಿಕಲ ಮಕ್ಕಳಿಗೆ ತಲಾ ಇಂತಿಷ್ಟು ಎಂದು ದರ ನಿಗದಿಪಡಿಸಿ, ಇನ್ನೊಂದು ಜಿಲ್ಲೆಗೆ ಕರೆದೊಯ್ಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅಧಿಕಾರಿಗಳು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸೇವೆಯ ಮುಖವಾಡ ಧರಿಸಿದವರು ಮಾನವ ಸಹಜ ಕಾಳಜಿ ಇರಬೇಕಾದ ಕಡೆಯೂ ಹೇಗೆ ಹಣಕ್ಕಾಗಿ ಎಂಥ ಸ್ಥಿತಿಗೂ ಇಳಿಯಬಲ್ಲರು ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿತ್ತು.

ಆ ಘಟನೆಯಲ್ಲಿ ಬೆಂಗಳೂರಿನ ಬ್ರೈಟ್ ಸೇವಾ ಸಂಸ್ಥೆಯ ಮೇಲ್ವಿಚಾರಕ ಸೇರಿ ಮೂವರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದರು. ಹಾಜರಿ ಪುಸ್ತಕದಲ್ಲಷ್ಟೇ ಇರುವ ಅಂಗವಿಕಲರು, ಕಡಿಮೆ ಬೆಲೆಯ, ಕಳಪೆ ಗುಣಮಟ್ಟದ ಪರಿಕರಗಳನ್ನು ವಿತರಿಸುವುದು, ಸೌಲಭ್ಯಗಳನ್ನು ತಲುಪಿಸದೇ ಇರುವುದು, ಕ್ರೀಡೆಗಳನ್ನು ಆಯೋಜಿಸದೇ ನಕಲಿ ಸಂಸ್ಥೆಯ ಬಿಲ್ ಪಾವತಿಸಿ ಹಣ ಲೂಟಿ ಮಾಡುವುದು ಹೀಗೆ ಅವ್ಯವಹಾರಕ್ಕೆ ಲಜ್ಜೆಯ ಲವಲೇಶವೂ ಇಲ್ಲದ ಹಲವು ಮುಖಗಳಿವೆ. ಇವುಗಳಿಂದಾಗಿ ವಿಶೇಷ ವ್ಯಕ್ತಿಗಳಿಗೆ ಅಂಗವಿಕಲತೆಯೊಂದಿಗೆ, ಅವ್ಯವಸ್ಥೆಯೂ ಅಸಹನೀಯವಾಗಿ ಕಾಡುತ್ತಿದೆ.

ಅಂಗವಿಕಲರಿಗಾಗಿ ನಡೆಸುವ ಶಾಲೆ, ವಸತಿ ಶಾಲೆ, ಇವುಗಳಿಗೆ ಒದಗಿಸಬೇಕಿರುವ ಮೂಲ ಸೌಲಭ್ಯ, ಅಂಗವಿಕಲರಿಗೆ ವಿತರಿಸುವ ಪರಿಕರಗಳು, ಕ್ರೀಡಾ ಚಟುವಟಿಕೆ, ನೆರವು ಯೋಜನೆ ಹೀಗೆ ಅಂಗವಿಕಲರ ಹೆಸರಿನ ಹತ್ತಾರು ಕಾರ್ಯಕ್ರಮಗಳ ಸುತ್ತ ಅಧಿಕಾರಿಗಳು, ಗುತ್ತಿಗೆದಾರರು, ಸ್ವಯಂಸೇವಾ ಸಂಘಟನೆ ಹೆಸರಿನ ಲೂಟಿಕೋರರ ಗುಂಪು ಆವರಿಸಿಕೊಂಡಿದೆ. ಅಂಗವಿಕಲರ ಹೆಸರಿ ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಈ ಅಕ್ರಮ ಕೂಟಕ್ಕೆ ಸಡ್ಡು ಹೊಡೆದು ನಿಂತ ಅಪರೂಪದ ಪ್ರಾಮಾಣಿಕ ಅಧಿಕಾರಿಗಳನ್ನು ಚಂದಾ ಎತ್ತಿ ಎತ್ತಂಗಡಿ ಮಾಡಿಸುವಷ್ಟು ಲೂಟಿಕೋರ ಗುಂಪು ಬಲಶಾಲಿಯಾಗಿದೆ. ಅಂಗವಿಕಲರಿಗೆ ಸ್ಪಂದಿಸ ಬೇಕಿರುವ ವ್ಯವಸ್ಥೆಯೇ ಅಂಗವೈಕಲ್ಯಕ್ಕೆ ಒಳಗಾದರೇ ಕೇಳುವವರು ಯಾರು ಎಂಬ ಸ್ಥಿತಿಯಿದೆ.‌

* ಅಂಗವಿಕಲರ ಅಧಿನಿಯಮ 2016 (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ, ಪೂರ್ಣ ಭಾಗವಹಿಸುವಿಕೆ) ಅನುಸಾರ, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ಊನವಾಗಿದ್ದು, ವ್ಯಕ್ತಿ ನಿತ್ಯದ ಚಟವಟಿಕೆಗಳನ್ನು ಸ್ವತಃ ಮಾಡಿಕೊಳ್ಳಲು ಅಸಮರ್ಥನಿದ್ದರೆ ಅಂಗವಿಕಲ ಎಂದು ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT