ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬ್ಯಾಂಕ್‌ಗಳಲ್ಲೇ ಉಳಿದಿದೆ ₹ 1,475 ಕೋಟಿ!

Last Updated 27 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2015ರಿಂದ 2021ರ ಫೆಬ್ರುವರಿ ಅಂತ್ಯದವರೆಗೆ ₹ 2,399 ಕೋಟಿಯಷ್ಟು ಜಿಲ್ಲಾ ಖನಿಜ ನಿಧಿ ಸಂಗ್ರಹವಾಗಿದೆ. ಈ ಪೈಕಿ ₹ 1,475.50 ಕೋಟಿ ಬ್ಯಾಂಕ್‌ ಖಾತೆಗಳಲ್ಲೇ ಉಳಿದಿದೆ!

ಗಣಿ ಮತ್ತು ಖನಿಜ ಕಾಯ್ದೆಗೆ 2015ರಲ್ಲಿ ತಂದಿರುವ ತಿದ್ದುಪಡಿಯ ಪ್ರಕಾರ, ಎಲ್ಲ ಜಿಲ್ಲೆಗಳಲ್ಲೂ ಪ್ರತ್ಯೇಕವಾದ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಗಣಿ ಗುತ್ತಿಗೆದಾರರದಿಂದ ನಿಯಮಾನುಸಾರ ವಂತಿಗೆ ಸಂಗ್ರಹಿಸುತ್ತಿದ್ದು, ಬಳಕೆಯ ಪ್ರಮಾಣ ಮಾತ್ರ ಶೇಕಡ 50ಕ್ಕಿಂತಲೂ ಕಡಿಮೆ ಇದೆ.

ಒಟ್ಟು ಸಂಗ್ರಹವಾದ ಮೊತ್ತದಲ್ಲಿ ಶೇ 10ರಷ್ಟನ್ನು (₹ 239.90 ಕೋಟಿ) ಭವಿಷ್ಯದ ಯೋಜನೆಗಳಿಗಾಗಿ ದತ್ತಿನಿಧಿ ರೂಪದಲ್ಲಿ ತೆಗೆದಿರಿಸಲಾಗಿದೆ. ಶೇ 5ರಷ್ಟನ್ನು (₹ 119.95 ಕೋಟಿ) ನೇರವಾಗಿ ಅಭಿವೃದ್ಧಿ ಕಾಮಗಾರಿಗಳು ಮತ್ತು ಗಣಿಗಾರಿಕೆಯಿಂದ ಬಾಧಿತರಾದ ಜನರಿಗೆ ನೆರವು ಒದಗಿಸುವುದಕ್ಕೆ ₹ 2,039 ಕೋಟಿ ಲಭ್ಯವಿತ್ತು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಭವಿಷ್ಯದಲ್ಲಿನ ಸಂಗ್ರಹವನ್ನೂ ಗುರಿಯಾಗಿಟ್ಟುಕೊಂಡು ರಾಜ್ಯದ 30 ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನಗಳು ₹ 3,635.78 ಕೋಟಿ ವೆಚ್ಚದ ಪ್ರಸ್ತಾವಗಳಿಗೆ ಅನುಮೋದನೆ ನೀಡಿವೆ. ಆದರೆ, ಕೋವಿಡ್‌ ಅವಧಿಯಲ್ಲಿನ ವೆಚ್ಚವೂ ಸೇರಿದಂತೆ ₹ 827.62 ಕೋಟಿ ಮಾತ್ರ ಬಳಕೆಯಾಗಿದೆ.

ಚುರುಕಾಗುತ್ತಿರುವ ಪ್ರಕ್ರಿಯೆ: 2015ರಿಂದಲೇ ಹೊಸ ಕಾಯ್ದೆ ಜಾರಿಗೆ ಬಂದರೂ, ಜಿಲ್ಲಾ ಖನಿಜ ನಿಧಿ ಸ್ಪಷ್ಟವಾದ ರೂಪ ಪಡೆದಿದ್ದು 2017–18ರ ವೇಳೆಗೆ. ಆ ಬಳಿಕ ಪ್ರಸ್ತಾವಗಳನ್ನು ಸಿದ್ಧಪಡಿಸುವುದು, ನಿಧಿ ಸಂಗ್ರಹಕ್ಕೆ ಎರಡರಿಂದ ಮೂರು ವರ್ಷ ವ್ಯಯವಾಗಿದೆ. ಒಂದು ವರ್ಷದಿಂದ ಕಾಮಗಾರಿಗಳ ಅನುಷ್ಠಾನ ಆರಂಭವಾಗಿದೆ.

ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಸದಸ್ಯರು ಪ್ರತಿಷ್ಠಾನದ ಭಾಗವಾಗಿದ್ದು, ವಿಧಾನ ಪರಿಷತ್‌ ಸದಸ್ಯರಿಗೆ ಅವರು ವಾಸಿಸುವ ತಾಲ್ಲೂಕಿಗೆ ಸೀಮಿತವಾಗಿ ಸದಸ್ಯತ್ವ ನೀಡಲಾಗಿದೆ. ಪ್ರತಿಷ್ಠಾನವೇ ಹಣ ಬಳಕೆಯ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ.

‘ಶಾಸಕರಿಂದ ಪ್ರಸ್ತಾವಗಳನ್ನು ಸ್ವೀಕರಿಸಿ, ಪ್ರತಿಷ್ಠಾನದಲ್ಲಿ ಅನುಮೋದನೆ ಪಡೆದ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಶಾಸಕರು ಪದೇ ಪದೇ ಪ್ರಸ್ತಾವಗಳನ್ನು ಬದಲಾವಣೆ ಮಾಡುವುದು ಕೂಡ ಕೆಲಸ ವಿಳಂಬವಾಗಲು ಕಾರಣ. ರಾಜಕೀಯ ಕಾರಣಗಳಿಂದಾಗಿಯೂ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿ ಬಳಕೆ ನಿಧಾನಗತಿಯಲ್ಲಿ ಸಾಗಿದೆ’ ಎನ್ನುತ್ತವೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು.

ಹಣಸಂಗ್ರಹ– ವಿನಿಯೋಗ ಕಡಿಮೆ:

ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಧಿಕ ₹1,401 ಕೋಟಿ ಖನಿಜ ನಿಧಿ ಸಂಗ್ರಹವಾಗಿದ್ದು, ₹ 433.58 ಕೋಟಿ ಬಳಕೆಯಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ₹ 337.85 ಕೋಟಿಯಲ್ಲಿ ₹ 122.55 ಕೋಟಿ ಬಳಕೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ₹ 4.11 ಕೋಟಿ ಸಂಗ್ರಹವಾಗಿದ್ದರೂ, ನಯಾಪೈಸೆಯೂ ಬಳಕೆಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ₹ 23.22 ಕೋಟಿ ಸಂಗ್ರಹವಾಗಿದ್ದು, ₹ 17.10 ಲಕ್ಷ ಮಾತ್ರ ವಿನಿಯೋಗವಾಗಿದೆ.

‘ಒಂದು ವರ್ಷದಿಂದ ಜಿಲ್ಲಾ ಖನಿಜ ನಿಧಿಯಲ್ಲಿನ ಹಣ ಬಳಕೆಯ ವೇಗ ಹೆಚ್ಚಿದೆ. ಈಗ ಲಭ್ಯವಿರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. ಮುಂದಿನ ಎರಡು ವರ್ಷಗಳ ಒಳಗಾಗಿ ಪೂರ್ಣ ಮೊತ್ತದ ಖನಿಜ ನಿಧಿ ಬಳಕೆಯಾಗಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಡಿ.ಎಸ್‌. ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

₹ 16,802 ಕೋಟಿ ಬಳಕೆಗೆ ಅನುಮತಿ ಕೋರಿಕೆ

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತಿಯಾದ ಗಣಿಗಾರಿಕೆಯಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್‌ ಆದೇಶದಂತೆ ಪರಿಹಾರ ಮತ್ತು ಪುನರ್ವಸತಿ (ಆರ್‌ ಅಂಡ್‌ ಆರ್‌) ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಇದಕ್ಕಾಗಿ ಗಣಿ ಪರಿಸರ ಪುನಶ್ಚೇತನ ನಿಗಮವನ್ನೂ ಅಸ್ತಿತ್ವಕ್ಕೆ ತರಲಾಗಿದೆ.

‘ಸಿ’ ದರ್ಜೆ ಗಣಿಗಳಲ್ಲಿ ಉಳಿದಿದ್ದ ಅದಿರಿನ ಮಾರಾಟ, ಈ ಗಣಿಗಳ ಹರಾಜಿನಲ್ಲಿ ಬಂದ ಮೊತ್ತದಲ್ಲಿ ವಂತಿಗೆ, ‘ಎ’ ಮತ್ತು ‘ಬಿ’ ದರ್ಜೆ ಗಣಿಗಳ ಅದಿರು ಮಾರಾಟದ ಮೊತ್ತದಲ್ಲಿನ ವಂತಿಗೆ, ದಂಡದ ಮೊತ್ತ ಎಲ್ಲವನ್ನೂ ಪರಿಹಾರ ಮತ್ತು ಪುನರ್ವಸತಿ ಯೋಜನೆಗೆ ಬಳಕೆ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿ ಸಮಿತಿಯ ನಿಗಾದಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ₹ 16,802 ಕೋಟಿ ಸಂಗ್ರಹವಾಗಿದೆ. ಈ ಪೈಕಿ ₹ 6,528 ಕೋಟಿ ಬಡ್ಡಿಯಿಂದಲೇ ಬಂದಿದೆ. ಮೂರೂ ಜಿಲ್ಲೆಗಳಲ್ಲಿ ಒಟ್ಟು ₹ 24,996.71 ಕೋಟಿ ಮೊತ್ತದ ಗಣಿ ಪರಿಸರ ಪುನಶ್ಚೇತನ ಯೋಜನೆಯ ಪ್ರಸ್ತಾವ ಮತ್ತು ಮೊದಲ ಹಂತದಲ್ಲಿ ₹ 16,802 ಕೋಟಿ ಬಳಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT