ಬುಧವಾರ, ಜೂನ್ 16, 2021
23 °C

ಒಳನೋಟ: ಒಣಗಿದ ದ್ರಾಕ್ಷಿ ಬೆಳೆಗಾರ, ವಹಿವಾಟಿಗೆ ಹುಳಿ ಹಿಂಡಿದ ಕೋವಿಡ್‌ ಲಾಕ್‌ಡೌನ್

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಯ ಕೆಳ ಭಾಗಗಳ ಸುಮಾರು 30 ಸಾವಿರ ದ್ರಾಕ್ಷಿ ಬೆಳೆಗಾರರು ಕೋವಿಡ್‌ ಲಾಕ್‌ಡೌನ್‌ ಪರಿಣಾಮ ಒಣದ್ರಾಕ್ಷಿ ಮಾರಾಟ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ.

ಆರು ಜಿಲ್ಲೆಗಳ ವ್ಯಾಪ್ತಿಯ 24 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈ ವರ್ಷ ಉತ್ಪಾದನೆಯಾಗಿರುವ 1.20 ಲಕ್ಷ ಟನ್‌ ಒಣದ್ರಾಕ್ಷಿಯಲ್ಲಿ ಅರ್ಧಕ್ಕೂ ಹೆಚ್ಚು ಇನ್ನೂ ಮಾರಾಟವಾಗದೇ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ಸಂಗ್ರಹವಾಗಿದೆ.

ಲಾಕ್‌ಡೌನ್‌ಗೂ ಪೂರ್ವದಲ್ಲಿ ಪ್ರತಿ ಕೆ.ಜಿ. ಒಣದ್ರಾಕ್ಷಿಗೆ ಕನಿಷ್ಠ ₹150ರಿಂದ ಗರಿಷ್ಠ ₹ 300ರ ವರೆಗೂ ದರ ಲಭಿಸಿತ್ತು. ಹೋದವರ್ಷ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದರು. ಈಗ ಕೋವಿಡ್‌ ಲಾಕ್‌ಡೌನ್‌ ಒಣ ದ್ರಾಕ್ಷಿ ವ್ಯಾಪಾರ, ವಹಿವಾಟು ಸ್ಥಗಿತಗೊಳ್ಳುವಂತೆ ಮಾಡಿದೆ.  

ರಾಜ್ಯದಲ್ಲಿ ವಾರ್ಷಿಕ ಸುಮಾರು ₹ 3 ಸಾವಿರ ಕೋಟಿ ಮೊತ್ತದ ಒಣದ್ರಾಕ್ಷಿ ವಹಿವಾಟಾಗುತ್ತದೆ. ಆದರೂ ನೆರೆಯ ಮಹಾರಾಷ್ಟ್ರ ಮಾರುಕಟ್ಟೆಯನ್ನು ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ರಾಜ್ಯದ ಬೆಳೆಗಾರರದ್ದಾಗಿದೆ. ಒಣದ್ರಾಕ್ಷಿಗೆ ಶೇ 5ರಷ್ಟು ಜಿಎಸ್‌ಟಿ ಇರುವುದರಿಂದ ಇದರ ಲಾಭ ಮಹಾರಾಷ್ಟ್ರದ ಪಾಲಾಗುತ್ತಿದೆ.

ವಿಜಯಪುರ ಸೇರಿ ನೆರೆಯ ಮಹಾರಾಷ್ಟ್ರದ ತಾಸಗಾಂವ್‌, ಸಾಂಗ್ಲಿ, ಪಂಢರಾಪುರ ಒಣದ್ರಾಕ್ಷಿಯ ಪ್ರಮುಖ ಮಾರುಕಟ್ಟೆಗಳಾಗಿವೆ. ಕೋವಿಡ್‌ ಎರಡನೇ ಅಲೆಯಿಂದಾಗಿ ಮಹಾರಾಷ್ಟ್ರದಲ್ಲಿ ಎರಡು ತಿಂಗಳಿಂದ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿದೆ. ವಿಜಯಪುರದಲ್ಲೂ ಒಂದು ತಿಂಗಳಿಂದ ಒಣದ್ರಾಕ್ಷಿ ಇ–ಟ್ರೇಡಿಂಗ್‌ ಪ್ರಕ್ರಿಯೆ ಸ್ಥಗಿತವಾಗಿದೆ. ಮಾರುಕಟ್ಟೆಯೂ ಇಲ್ಲ, ಬೆಲೆಯೂ ಇಲ್ಲದೇ ಒಣದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. 

ಒಣದ್ರಾಕ್ಷಿಯ ಸಂಗ್ರಹಕ್ಕೆ ಅಗತ್ಯ ಶೀತಲಿಕರಣ ಘಟಕಗಳು (ಕೋಲ್ಡ್‌ ಸ್ಟೋರೇಜ್‌) ರಾಜ್ಯದಲ್ಲಿ ಇಲ್ಲ. ಮಹಾರಾಷ್ಟ್ರದ ತಾಸಗಾಂವ್‌, ಸಾಂಗ್ಲಿ, ಪಂಢರಾಪುರವನ್ನೇ ಆಶ್ರಯಿಸಬೇಕಾಗಿದೆ. ತಿಂಗಳಿಗೆ ಪ್ರತಿ ಟನ್‌ ಒಣದ್ರಾಕ್ಷಿಗೆ ₹700 ರಿಂದ ₹1 ಸಾವಿರ ಬಾಡಿಗೆ ನೀಡಬೇಕಿದೆ. 

ನೆಪಮಾತ್ರಕ್ಕೆ: ವಿಜಯಪುರದಲ್ಲಿ ಇ–ಟ್ರೇಡಿಂಗ್‌ ಮಾರುಕಟ್ಟೆ ನೆಪಮಾತ್ರಕ್ಕೆ ಎಂಬಂತಿದ್ದು, ಏಳೆಂಟು ಪ್ರಬಲ ವ್ಯಾಪಾರಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಹೊರರಾಜ್ಯದ ವ್ಯಾಪಾರಿಗಳು ಪಾಲ್ಗೊಳ್ಳದಂತೆ ತಡೆದಿದ್ದು, ಗುಣಮಟ್ಟದ ಒಣದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಲಭಿಸುತ್ತಿಲ್ಲ. ನೆರೆಯ ಮಹಾರಾಷ್ಟ್ರದ ಮಾರುಕಟ್ಟೆಯತ್ತ ಬೆಳೆಗಾರರು ಮುಖ ಮಾಡುವಂತಾಗಿದೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್‌ ನಾಂದ್ರೇಕರ್‌ ಆರೋಪಿಸುತ್ತಾರೆ.

ಇಲ್ಲಿಯ ಗುಣಮಟ್ಟದ ಒಣದ್ರಾಕ್ಷಿಗೆ ಒಂದು ಬ್ರ್ಯಾಂಡ್‌ನ ಅಗತ್ಯವಿದೆ. ಜೊತೆಗೆ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ ಎನ್ನುತ್ತಾರೆ ಅವರು. ಹಸಿ ದ್ರಾಕ್ಷಿ (ಟೇಬಲ್‌ ಗ್ರೇಪ್ಸ್) ಮಾರಾಟಕ್ಕೆ ಈ ಬಾರಿ ತೊಂದರೆಯಾಗಿಲ್ಲ. ಪ್ರತಿ ಕೆ.ಜಿ.ಗೆ ₹ 25ರಿಂದ ₹ 60ರ ವರೆಗೂ ಬೆಳೆಗಾರರಿಗೆ ಲಭಿಸಿದೆ. ಕೊನೆ ಕೊಯ್ಲಿನ ವೇಳೆ ಕೋವಿಡ್‌ ಎರಡನೇ ಅಲೆ ಆರಂಭವಾಗಿ ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾದರೂ ಹೇಳಿಕೊಳ್ಳುವಷ್ಟು ನಷ್ಟ ಆಗಲಿಲ್ಲ ಎನ್ನುತ್ತಾರೆ ವಿಜಯಪುರದ ದ್ರಾಕ್ಷಿ ಬೆಳೆಗಾರ ರಿಜ್ವಾನ್‌ ಜಹಗೀರದಾರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು