ಮಂಗಳವಾರ, ಸೆಪ್ಟೆಂಬರ್ 22, 2020
22 °C

ಒಳನೋಟ | ಕಲ್ಯಾಣ ಕರ್ನಾಟಕ, ಶಿಕ್ಷಣ ಸೌಲಭ್ಯಕ್ಕೆ ವರದಾನ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವಿಶೇಷ ಸ್ಥಾನಮಾನದ ಅಡಿ ಶಿಕ್ಷಣ ಕ್ಷೇತ್ರದಲ್ಲಿ ದೊರೆತಿರುವ ಮೀಸಲಾತಿ ಸೌಲಭ್ಯವು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಸರ್ಕಾರಿ, ಅನುದಾನಿತ, ಖಾಸಗಿ ತಾಂತ್ರಿಕ–ವೈದ್ಯಕೀಯ ಶಿಕ್ಷಣ ಮತ್ತು ಇನ್ನಿತರ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ 70ರಷ್ಟು ಸೀಟುಗಳನ್ನು ಸ್ಥಳೀಯರಿಗೆ ಮೀಸಲಿಡಲಾಗಿದೆ. ರಾಜ್ಯದ ಇತರ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲ್ಯಾಣ ಕರ್ನಾಟಕದವರಿಗೆ ಶೇ 8ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಶ್ರೀಮಂತರು ಮಾತ್ರವಲ್ಲದೇ ಬಡ ಮತ್ತು ಮಧ್ಯಮ ವರ್ಗದವರೂ ವೈದ್ಯರಾಗುವ ಅವಕಾಶ ಲಭಿಸಿದೆ. ಆಯುಷ್, ಕೃಷಿ, ಫಾರ್ಮಸಿ ಕೋರ್ಸ್‌ಗಳಲ್ಲೂ ಈ ಭಾಗದವರಿಗೆ ಹೆಚ್ಚಿನ ಸೀಟುಗಳು ಸಿಗುತ್ತಿವೆ.

ಮೀಸಲಾತಿ ಸೌಲಭ್ಯ ಸಿಗುವ ಮುನ್ನ ಸಾಮಾನ್ಯ ಪ್ರವೇಶ ಪರೀಕ್ಷೆಯಡಿ (ಸಿಇಟಿ) ಕಲ್ಯಾಣ ಕರ್ನಾಟಕ ಪ್ರದೇಶದಿಂದ 130 ಇಲ್ಲವೇ 150 ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುತಿತ್ತು. ಈಗ ಪ್ರತಿ ವರ್ಷ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ‘ಮೀಸಲಾತಿ ಸೌಲಭ್ಯದಿಂದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ. ನಮ್ಮ ಮಕ್ಕಳ ಕನಸುಗಳು ನನಸಾಗುತ್ತಿವೆ’ ಎಂದು ಪೋಷಕರು ಖುಷಿಯಿಂದ ಹೇಳುತ್ತಾರೆ.

‘ವಿಶ್ವವಿದ್ಯಾಲಯ ಸೇರಿ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಸಮರ್ಪಕವಾಗಿ ಜಾರಿಯಾದರೂ ಕೆಲ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾವಕಾಶ ಸಿಗುತ್ತಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರವು ವಿಶೇಷ ಗಮನ ಹರಿಸಬೇಕಿದೆ’ ಎಂದು ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಹೇಳುತ್ತಾರೆ.
**

‘ಶಾಸಕರಿಗೇಕೆ ಅಧ್ಯಕ್ಷ ಸ್ಥಾನ?’
ವಿದರ್ಭ, ತೆಲಂಗಾಣಕ್ಕೆ ನೀಡಲಾದ ವಿಶೇಷ ಸ್ಥಾನಮಾನದಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಹಾಗೂ ಅನುದಾನ ಈ ಮೂರೂ ಸೌಲಭ್ಯಗಳಿಲ್ಲ. ಆದರೆ ನಮ್ಮಲ್ಲಿದೆ. ಶಾಸಕರಿಗೆ ಮಂಡಳಿ ಅಧ್ಯಕ್ಷ ಸ್ಥಾನವನ್ನೇ ನೀಡಬೇಕಿರಲಿಲ್ಲ. ಶಾಸಕರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೆ ಸಾಕಿತ್ತು. ಅಧ್ಯಕ್ಷರಾಗಿ ಸಂಪುಟ ದರ್ಜೆಯ ಸಚಿವರೇ ಮುಂದುವರಿಯಬೇಕಿತ್ತು.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

**

‘ದೋಷ ಸರಿಪಡಿಸಬೇಕು’
ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತಿದೆ. ಖಾಲಿ ಹುದ್ದೆಗಳು ಭರ್ತಿಯಾಗುತ್ತಿವೆ. ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ಆದಾಗ್ಯೂ, ಅನುಷ್ಠಾನ ಹಂತದಲ್ಲಿ ಇರಬಹುದಾದ ಲೋಪದೋಷಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ ಅನುದಾನ ಬಳಕೆಗೆ ಒತ್ತು ನೀಡಬೇಕು. ಕೇಂದ್ರ ಸರ್ಕಾರದ ಹಂತದಲ್ಲಿ ದೋಷಗಳನ್ನು ಸರಿಪಡಿಸಬೇಕಿದ್ದರೆ ಅದಕ್ಕೂ ರಾಜ್ಯ ಸರ್ಕಾರ ಯತ್ನಿಸಬೇಕು.
-ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕದ ಹಿರಿಯ ಮುಖಂಡ

**

‘ಕಾಯಂ ಕಾರ್ಯದರ್ಶಿ ಬೇಕು’
ಮಂಡಳಿಗೆ ಪ್ರಭಾರಿ ಬದಲು ಪೂರ್ಣಾವಧಿ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು. 2014–15ರಲ್ಲಿ ಆರಂಭಗೊಂಡ ಕಾಮಗಾರಿಗಳು ಇನ್ನೂ ಮುಂದುವರಿದಿವೆ. ಇದಕ್ಕೆ ಕಾರಣ ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ ಹಾಗೂ ಕೆಆರ್‌ಐಡಿಎಲ್‌ನಂತಹ ಸಂಸ್ಥೆಗಳಿಗೆ ವಹಿಸುವುದು. ಇದರ ಬದಲಾಗಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವನ್ನು ಮಂಡಳಿ ರಚಿಸಿಕೊಳ್ಳಬೇಕು.
-ರಜಾಕ್‌ ಉಸ್ತಾದ್‌, ಉಪಾಧ್ಯಕ್ಷ, ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ, ರಾಯಚೂರು

**

‘ಸುಸ್ಥಿರ ಅಭಿವೃದ್ಧಿ ಬೇಕು’
ಭೌತಿಕ ಅಭಿವೃದ್ಧಿ ಆಗುತ್ತಿದೆ. ಆದರೆ, ಸುಸ್ಥಿರ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆಗಳು ಬೇಕು. ಇದು ಬಿಸಿಲು ಪ್ರದೇಶ. ಬಡವರು ಬೇಸಿಗೆಯಲ್ಲಿ ಉದ್ಯೋಗ ವಂಚಿತರಾಗಿ ಗುಳೆ ಹೋಗುತ್ತಾರೆ. ಕೆರೆ ಹೂಳು ತೆಗೆಯುವ, ಮಳೆನೀರು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕು. ತಾಲ್ಲೂಕುಗಳನ್ನು ಘಟಕವನ್ನಾಗಿ ಪರಿಗಣಿಸುವ ಬದಲು ಗ್ರಾಮ ಆಧಾರಿತ ಯೋಜನೆಗಳು ರೂಪುಗೊಳ್ಳಬೇಕು.
-ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ

**

‘ಎಲ್ಲದಕ್ಕೂ ಮಂಡಳಿ ಹಣವೇ?’
ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಗುರಿ ತಲುಪುವಂತಹ ಯೋಜನೆಗಳನ್ನು ರೂಪಿಸ ಬೇಕು. ಅಭಿವೃದ್ಧಿ ಮತ್ತು ಕೊರತೆಯ ಪುನರ್‌ ಸಮೀಕ್ಷೆ ನಡೆಯಬೇಕು. ಕೆಲ ಇಲಾಖೆಗಳಿಗೆ ಸರ್ಕಾರ ನಿಯಮಿತ ಅನುದಾನವನ್ನೂ ನೀಡುತ್ತಿಲ್ಲ. ಎಲ್ಲದಕ್ಕೂ ಮಂಡಳಿಯ ಅನುದಾನ ಎನ್ನುವ ಮನೋ ಭಾವ ಸರಿಯಲ್ಲ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ವಿಮಾನ ನಿಲ್ದಾಣಕ್ಕೆ ಮಂಡಳಿಯ ಅನುದಾನ ಬಳಸಿಕೊಂಡಿದ್ದು ಎಷ್ಟು ಸರಿ? 
-ಬಿ.ಆರ್‌. ಪಾಟೀಲ, ಹಿರಿಯ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು