ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಎಸ್‌ಟಿ: ವಂಚನೆಯ ನಾನಾ ಮುಖಗಳ ಅನಾವರಣ * ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಹೆಸರಲ್ಲಿ ವಹಿವಾಟು

ಒಳನೋಟ: ಸತ್ತವರ ಹೆಸರಲ್ಲಿ ಕೋಟ್ಯಂತರ ವ್ಯವಹಾರ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವರ ಹೆಸರು ವಿಮಲಾದೇವಿ. ಅವರ ದೇವಿ ಟ್ರೇಡರ್ಸ್ ಹೆಸರಿನಲ್ಲಿ ನಡೆದಿದ್ದು ₹245 ಕೋಟಿ ಮೊತ್ತದ ವ್ಯವಹಾರ. ಅದರಲ್ಲಿ ₹ 42 ಕೋಟಿ ಜಿಎಸ್‌ಟಿ ಪಾವತಿಯಾಗಿದೆ ಎಂದು ನಮೂದಿಸಲಾಗಿದೆ. ವಿಪರ್ಯಾಸವೆಂದರೆ, ‘ದೇವಿ ಟ್ರೇಡರ್ಸ್’ ಯಾವುದೇ ಸರಕು ಅಥವ ಸೇವೆಯನ್ನು ಒದಗಿಸಿಯೇ ಇಲ್ಲ. ಅಷ್ಟಕ್ಕೂ ಅಂಥದ್ದೊಂದು ಕಂಪನಿಯೇ ಇಲ್ಲ. ಇನ್ನೂ ಆಶ್ಚರ್ಯವೆಂದರೆ, ವಿಮಲಾದೇವಿ ನಿಧನರಾಗಿ ಎರಡು ವರ್ಷಗಳೇ ಆಗಿವೆ ! ತೀರಿಹೋದ ಅವರ ಹೆಸರಿನಲ್ಲಿ ಈ ವ್ಯವಹಾರ ನಡೆಸಿದ್ದು ಮಾಂಗಿಲಾಲ್.

***

ಗುಜರಾತ್‌ನಿಂದ ಕರ್ನಾಟಕಕ್ಕೆ ಟೈಲ್ಸ್ ಹಾಗೂ ಶೌಚಾಲಯ ಉಪಕರಣಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ‘ಎ’ ಕಂಪನಿಯಿಂದ ‘ಬಿ’ ಕಂಪನಿಯು ಈ ಸರಕುಗಳನ್ನು ತರಿಸಿಕೊಳ್ಳುತ್ತಿದೆ. ಹುಡುಕಿದರೆ ಗುಜರಾತ್‌ನಲ್ಲಿ ‘ಎ’ ಕಂಪನಿಯೇ ಇಲ್ಲ. ಕರ್ನಾಟಕದಲ್ಲಿ ‘ಬಿ’ ಕಂಪನಿಯೂ ಇಲ್ಲ! ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ನಡುವೆ ನಡೆಯುತ್ತದೆ ಅಕ್ರಮ ವ್ಯವಹಾರ !

***

ಅವರು ಚನ್ನಬಸಪ್ಪ (ಹೆಸರು ಬದಲಿಸಲಾಗಿದೆ). ಶೌಚಾಲಯ ಕಟ್ಟಿಸಿಕೊಡುತ್ತೇವೆ. ಸರ್ಕಾರಕ್ಕೆ ದಾಖಲೆ ಕೊಡಬೇಕು. ನಿನ್ನ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕೊಡು ಎಂದು ಕೆಲವರು ಅವನ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವನಿಗೆ ₹10 ಸಾವಿರವನ್ನೂ ಕೊಟ್ಟಿದ್ದಾರೆ. ಆರು ತಿಂಗಳೂ ಕಳೆದಿಲ್ಲ. ಚನ್ನಬಸಪ್ಪನ ಹೆಸರಲ್ಲಿ ₹ 200 ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರ ನಡೆದಿದೆ. ಆದರೆ, ತೆರಿಗೆ ಕಟ್ಟಿಲ್ಲ. ಅಧಿಕಾರಿಗಳು ಅವನನ್ನು ಕಟಕಟೆಗೆ ತಂದು ನಿಲ್ಲಿಸಿದ್ದಾರೆ. ನಿರಪರಾಧಿ ಎಂದು ಸಾಬೀತು ಪಡಿಸಬೇಕಾದ ಒತ್ತಡದಲ್ಲಿದ್ದಾನೆ ಚನ್ನಬಸಪ್ಪ.

***

ಕಚೇರಿ ಕಟ್ಟಡದ ಬಾಡಿಗೆ ಕರಾರು ಪತ್ರವಿದೆ‌. ಆ ಪತ್ರದಲ್ಲಿನ ಅಕ್ಷರಗಳ ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಕಟ್ಟಡದ ಮಾಲೀಕ ಮತ್ತು ಬಾಡಿಗೆದಾರನ ಹೆಸರನ್ನು ತಿದ್ದಿ ಬೇರೆಯವರ ಹೆಸರನ್ನು ಬರೆಯಲಾಗಿದೆ. ಮೂರು ದಿನ ಸರ್ಕಾರಿ ರಜೆ ಇರುವ ಸಮಯ ನೋಡಿ, ಜಿಎಸ್‌ಟಿ ನೋಂದಣಿಗೆ ಆನ್‌ಲೈನ್ ನಲ್ಲಿ ಅರ್ಜಿ ಹಾಕಲಾಗುತ್ತದೆ. ಸ್ವಯಂ ಚಾಲಿತವಾಗಿ ಜಿಎಸ್‌ಟಿ ನೋಂದಣಿ ಆಗಿ, ಸಂಖ್ಯೆಯೂ ಸಿಕ್ಕಿಬಿಡುತ್ತದೆ.

***
ಇದನ್ನೂ ಓದಿ... ಒಳನೋಟ: ಜಿಎಸ್‌ಟಿ ಮಾಯಾಮೃಗ, ಹೊಸ ತೆರಿಗೆ ಹಾದಿಯಲ್ಲಿ ಕಲ್ಲು – ಮುಳ್ಳು

ಆ ಮೀನಿನ ಲಾರಿಯಲ್ಲಿ ಅಡಿಕೆ ಸಾಗಿಸುತ್ತಿದ್ದಾರೆ. ಕಾರಣ, ಮೀನು ಸಾಗಣೆಗೆ ಜಿಎಸ್‌ಟಿ ವಿಧಿಸುವುದಿಲ್ಲ. ಆದರೆ, ಅಡಿಕೆಗೆ ಶೇ 5ರಷ್ಟು ತೆರಿಗೆ ಕಟ್ಟಬೇಕು. ಆದ್ದರಿಂದ, ಮೀನು ಸಾಗಿಸುವ ಲಾರಿಯಲ್ಲಿ ಅಡಿಕೆ ತುಂಬಿದರೆ ತೆರಿಗೆಯೂ ಉಳಿಸಬಹುದು. ವಾಸನೆಯ ಕಾರಣದಿಂದ ಮೀನಿನ ಲಾರಿ ಪರೀಕ್ಷಿಸಲು ಯಾರೂ ಮುಂದಾಗುವುದೂ ಇಲ್ಲ!

ಹೀಗೆ, ಸರ್ಕಾರ ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರುವ ಕೆಲವು ವರ್ತಕರು ಮಾಡುವ ವಂಚನೆಯ ಉದಾಹರಣೆಗಳಿವು. ತೆರಿಗೆ ವಂಚಿಸುವ ಮನೋಭಾವ, ಅತಿಯಾದ ಲಾಭದ ಆಸೆ, ಅತಿ ಹೊರೆ ಎನಿಸುವಂತಹ ದಂಡದಿಂದ ಪಾರಾಗಲು ಮತ್ತು ಕಾನೂನಿನಲ್ಲಿನ ಲೋಪ-ದೋಷಗಳ ಲಾಭ ಪಡೆಯಲು ಇಂತಹ ಅಕ್ರಮ ಹಾದಿ ಹಿಡಿಯುತ್ತಿದ್ದಾರೆ ಕೆಲವು ವರ್ತಕರು. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಅಧಿಕಾರಿಗಳು ಇಂತಹ ವಂಚಕರ ಮೇಲೆ ಸತತವಾಗಿ ದಾಳಿ ಮಾಡುತ್ತಿದ್ದಾರೆ. ಆದರೆ, ಇಂತಹ ಅಕ್ರಮಗಳ ಒಂದು ಹಾದಿಯನ್ನು ಭೇದಿಸಿದರೆ, ಇತರ ಹಲವು ವಾಮಮಾರ್ಗಗಳ ಮೂಲಕ ತೆರಿಗೆಯನ್ನು ವಂಚಿಸುತ್ತಿದ್ದಾರೆ ಹಲವು ಉದ್ಯಮಿಗಳು.

ವಂಚಕರ ಬಂಧನ: ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತ ನಿತೇಶ್ ಕೆ. ಪಾಟೀಲ ನೇತೃತ್ವದ ತಂಡ ಈ ರೀತಿ ₹2 ಕೋಟಿಗೂ ಹೆಚ್ಚು ಮೊತ್ತದ ತೆರಿಗೆ ವಂಚನೆ ಮಾಡಿದ ಒಂಬತ್ತು ಜನರನ್ನು ಬಂಧಿಸಿದೆ. ಹೀಗೆ ನಕಲಿ ದಾಖಲೆ ಸೃಷ್ಟಿಸಿ, ತೆರಿಗೆ ವಂಚಿಸಿ ಕಂಬಿ ಎಣಿಸುತ್ತಿರುವವರಲ್ಲಿ ಮಾಂಗಿಲಾಲ್ ಕೂಡ ಒಬ್ಬ. ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಗಳ ಹೆಸರಲ್ಲಿ ಗುಜರಾತ್‌ನಿಂದ ಕರ್ನಾಟಕಕ್ಕೆ ಟೈಲ್ಸ್ ತರುತ್ತಿದ್ದವರಿಗೆ ₹ 95 ಲಕ್ಷ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದವರಿಗೆ ದಂಡ ಹಾಕಿ, ಕೇಸ್ ಜಡಿಯಲಾಗಿದೆ. ಆದರೆ, ಚನ್ನಬಸಪ್ಪನಂಥ ಅನೇಕರು ಈಗಲೂ ಯಾವುದೋ ಸಣ್ಣ ಆಮಿಷಕ್ಕೆ ಒಳಗಾಗಿ ತಮ್ಮ ದಾಖಲೆಗಳನ್ನು ಅಪರಿಚಿತರಿಗೆ ನೀಡಿ ಮೋಸ ಹೋಗುತ್ತಿದ್ದಾರೆ. ವಂಚಕರಿಗೆ ಬಲಿಯಾಗುತ್ತಿದ್ದಾರೆ.

ದಾಖಲೆಗಳನ್ನು ನೀಡಿದರೆ ಸಂಕಷ್ಟ
‘ಸಾಲ, ಸಹಾಯಧನ, ಉದ್ಯೋಗ ಅಥವಾ ಸರ್ಕಾರದ ಯಾವುದೇ ಸೌಲಭ್ಯ ಕೊಡಿಸುತ್ತೇವೆ ಎಂದು ಅಪರಿಚಿತರು ಕೇಳಿದರೆ ಆಧಾರ, ಪ್ಯಾನ್ ದಾಖಲೆ, ವಿಳಾಸ ಮತ್ತಿತರ ವಿವರಗಳನ್ನು ಹಂಚಿಕೊಂಡರೆ ಸಂಕಷ್ಟ ಎದುರಾಗುತ್ತದೆ. ನಾಗರಿಕರು ಈ ಬಗ್ಗೆ ಜಾಗೃತರಾಗಿರಬೇಕು’ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ (ಜಾರಿ) ಹೆಚ್ಚುವರಿ ಆಯುಕ್ತ ನಿತೇಶ್ ಪಾಟೀಲ ಸಲಹೆ‌ ನೀಡುತ್ತಾರೆ.

ಜಿಎಸ್‌ಟಿ ಕಾಯ್ದೆಯ 132ನೇ ಸೆಕ್ಷನ್‌ ಪ್ರಕಾರ, ₹2 ಕೋಟಿಗಿಂತ ಅಧಿಕ ವಂಚನೆ ಮಾಡಿದವರಿಗೆ 3 ವರ್ಷ ಜೈಲು, ದಂಡ ಹಾಗೂ ₹5 ಕೋಟಿಗೂ ಅಧಿಕ ವಂಚಿಸಿದವರಿಗೆ 7 ವರ್ಷ ಜೈಲು ಮತ್ತು ದಂಡ ವಿಧಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಹೀಗೆ, ದಾಖಲೆ ನೀಡಿ ಪರೋಕ್ಷವಾಗಿ ವಂಚನೆಗೆ ಕಾರಣವಾದ ಹಲವರನ್ನು ಬಂಧಿಸಲಾಗಿದೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ... ಜಿಎಸ್‌ಟಿ: ಬಲಗೊಳ್ಳಬೇಕು ಬೆನ್ನೆಲುಬಿನಂತಿರುವ ಜಾಲತಾಣ

ಜಿಎಸ್‌ಟಿ ತರಬೇತಿ ದಂಧೆ!
ಮುನ್ನೂರು ತಿದ್ದುಪಡಿ, ಮುನ್ನೂರು ಸ್ಪಷ್ಟೀಕರಣ, ಮುನ್ನೂರು ಅಧಿಸೂಚನೆ ! ಜಿಎಸ್‌ಟಿ ಜಾರಿಯಿಂದ ಈವರೆಗೆ ಕಾನೂನಿನಲ್ಲಾಗಿರುವ ಬದಲಾವಣೆಗಳ ಸಂಖ್ಯೆ ಇದು. ನಿರಂತರ ಬದಲಾವಣೆಯಿಂದ, ತಕ್ಷಣಕ್ಕೆ ಹಿರಿಯ ಅಧಿಕಾರಿಗಳಿಗೂ ಜಿಎಸ್‌ಟಿ ಬಗ್ಗೆ ವಿವರಿಸಲು ಕಷ್ಟವಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಲೆಕ್ಕಪರಿಶೋಧಕರು, ಜಿಎಸ್‌ಟಿ ತರಬೇತಿ ಕಾರ್ಯಾಗಾರ ನಡೆಸುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.

ಮೂರೇ ತಿಂಗಳ ವಹಿವಾಟು!
ಯಾರದೋ ಆಧಾರ್, ಪ್ಯಾನ್ ನಂಬರ್ ಪಡೆದು ಜಿಎಸ್‌ಟಿ ನೋಂದಣಿ ಮಾಡುವ ವಂಚಕರು ದೀರ್ಘಾವಧಿ ವ್ಯವಹಾರ ನಡೆಸುವುದಿಲ್ಲ. ತ್ರೈಮಾಸಿಕವಾಗಿ ಜಿಎಸ್‌ಟಿ ಕಟ್ಟುವ ಆಯ್ಕೆಯನ್ನು ಮಾಡಿಕೊಂಡಿರುತ್ತಾರೆ. ಮೂರೇ ತಿಂಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಾರೆ. ತೆರಿಗೆ ಕಟ್ಟುವ ಸಮಯ ಬಂದಾಗ ವ್ಯವಹಾರ ಮುಗಿಸಿಬಿಡುತ್ತಾರೆ.

ಅಧಿಕಾರಿಗಳು ಪರಿಶೀಲನೆ ನಡೆಸಿ ದಾಳಿ ಮಾಡಿದಾಗ, ಯಾರ ಹೆಸರಲ್ಲಿ ಮೂಲ ದಾಖಲೆಗಳಿರುತ್ತವೆಯೋ ಅವರು ಸಿಕ್ಕಿ ಬೀಳುತ್ತಾರೆ. ಹೀಗೆ, ರಾಜಸ್ಥಾನದ ವ್ಯಕ್ತಿಯ ದಾಖಲೆಗಳನ್ನು (ಪ್ಯಾನ್, ಆಧಾರ್) ಪಡೆದು, ಕರ್ನಾಟಕದಲ್ಲಿ ಅವನ ಹೆಸರಿನಲ್ಲಿ ವಹಿವಾಟು ನಡೆಸಿದ ಉದಾಹರಣೆಯೂ ಇದೆ. ಅಧಿಕಾರಿಗಳಿಂದ ನೋಟಿಸ್ ಹೋದ ಮೇಲೆಯೇ ಆ ವ್ಯಕ್ತಿಗೆ ತನ್ನ ದಾಖಲೆಗಳು ದುರುಪಯೋಗವಾಗಿದ್ದು ಗಮನಕ್ಕೆ ಬಂದಿದೆ.

ಅಪರಿಚಿತರ ದಾಖಲೆ ಮಾತ್ರವಲ್ಲದೆ, ಸಂಬಂಧಿಗಳು, ಕಾರು ಚಾಲಕ, ಮನೆಗೆಲಸದವರು, ಅಡುಗೆಯವರ ದಾಖಲೆಗಳನ್ನು ಪಡೆದು ಅಕ್ರಮ ವಹಿವಾಟು ನಡೆಸುತ್ತಿರುವ ಉದ್ಯಮಿಗಳೂ ಇದ್ದಾರೆ.

ಇದನ್ನೂ ಓದಿ... ಒಳನೋಟ: ತೆರಿಗೆ ಸಂಗ್ರಹ ಕುಸಿತಕ್ಕೆ ಸಿಗದ ಉತ್ತರ

ತೆರಿಗೆ ವಂಚನೆಯ ಸ್ವರೂಪಗಳು
ಪ್ರತಿ ತಿಂಗಳು ಜಿಎಸ್‌ಟಿ ಆರ್ 3ಬಿ ಸಲ್ಲಿಸದೇ ಇರುವುದು, ತೆರಿಗೆ ಮೊತ್ತವನ್ನು ಬಚ್ಚಿಡುವುದು, ತೆರಿಗೆಗೆ ಒಳಪಡುವ ವಹಿವಾಟನ್ನು ತೆರಿಗೆ ವಿನಾಯ್ತಿಯ ವಹಿವಾಟು ಎಂದು ತಪ್ಪಾಗಿ ಘೋಷಿಸಿಕೊಳ್ಳುವುದು, ಸೇವಾ ವಲಯದಲ್ಲಿನ ಜಿಎಸ್‌ಟಿಯನ್ನು ಸರಿಯಾಗಿ ಘೋಷಿಸದಿರುವುದು, ಜಿಎಸ್‌ಟಿ ದರವನ್ನು ತಪ್ಪಾಗಿ ವರ್ಗೀಕರಿಸುವುದು, ವಾಹನಗಳಲ್ಲಿ ಸಾಗಿಸುವ ಸರಕಿಗೆ ತೆರಿಗೆ ಕಟ್ಟದಿರುವುದು ಅಥವಾ ಸರಕಿನ ಮೌಲ್ಯವನ್ನು ತಪ್ಪಾಗಿ ಹಾಕುವುದು, ಖೊಟ್ಟಿ ಬಿಲ್ ಗಳ ಮೂಲಕ ಐಟಿಸಿ (ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್) ದುರುಪಯೋಗ ಪಡಿಸಿಕೊಳ್ಳುವುದು... ಹೀಗೆ ನಾನಾರೂಪದಲ್ಲಿ ತೆರಿಗೆ ವಂಚಿಸಲಾಗುತ್ತಿದೆ.

ಸರಳತೆಯೇ ಸವಾಲು!
ಉದ್ಯಮದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ, ವಿಳಾಸವನ್ನು ಒಳಗೊಂಡ ವೈಯಕ್ತಿಕ ದಾಖಲೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಿದರೆ, ಮೂರು ದಿನಗಳಲ್ಲಿ ನಿಮಗೆ ಜಿಎಸ್‌ಟಿ ಸಂಖ್ಯೆ ಸಿಗುತ್ತದೆ. ಅಂದರೆ, ನೀವು ನೋಂದಾಯಿತ ಡೀಲರ್ ಆಗಬಹುದು. ಉದ್ಯಮಿಗಳಿಗೆ ಅನುಕೂಲವಾಗಲಿ, ಕಚೇರಿಗೆ ಅಲೆಯುವುದು ತಪ್ಪಲಿ ಎಂಬ ಸದುದ್ದೇಶದಿಂದ ಸರ್ಕಾರವು ನೋಂದಣಿ ಪ್ರಕ್ರಿಯೆಯನ್ನು ಇಷ್ಟು ಸರಳಗೊಳಿಸಿದೆ. ಆದರೂ, ಅಪ್‌ಲೋಡ್ ಮಾಡಿದ ದಾಖಲೆಗಳ ಬಗ್ಗೆ ಅಧಿಕಾರಿಗಳಿಗೆ ಸಂಶಯ ಬಂದರೆ, ಆ ಅರ್ಜಿಯನ್ನು ತಿರಸ್ಕರಿಸಬಹುದು. ಇದನ್ನು ಮನಗಂಡಿರುವ ವಂಚಕರು, ಸತತ ಮೂರು ದಿನ ಸರ್ಕಾರಿ ರಜೆ ಇರುವ ಸಂದರ್ಭ ನೋಡಿ ಆನ್‌ಲೈನ್ ನಲ್ಲಿ ಅರ್ಜಿ ಹಾಕುತ್ತಾರೆ. ಮೂರು ದಿನಗಳ ನಂತರ ಸ್ವಯಂಚಾಲಿತವಾಗಿ ಅವರಿಗೆ ಜಿಎಸ್‌ಟಿ ಸಂಖ್ಯೆ ಸಿಗುತ್ತದೆ. ನಕಲಿ ದಾಖಲೆಗಳ ಹೆಸರಲ್ಲೇ ವಹಿವಾಟು ಆರಂಭವಾಗುತ್ತದೆ.


ನಿತೇಶ್‌ ಪಾಟೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು