ಶುಕ್ರವಾರ, ಜುಲೈ 1, 2022
27 °C

ಒಳನೋಟ: ಅರ್ಧ ವೇತನ ಪಾವತಿಸಿದ್ದ ಹೋಟೆಲ್‌ಗಳು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಹೊಸಪೇಟೆ (ವಿಜಯನಗರ): ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಹಂಪಿ ಸುತ್ತಮುತ್ತಲಿನ ತಾರಾ ಹೋಟೆಲ್‌ಗಳು ತೀವ್ರ ನಷ್ಟ ಅನುಭವಿಸಿದ್ದವು.

ನಗರ ಸೇರಿದಂತೆ ಹಂಪಿ ಸುತ್ತಮುತ್ತ ಹತ್ತು ತಾರಾ ಹೋಟೆಲ್‌ಗಳಿವೆ. ಪ್ರತಿ ಹೋಟೆಲ್‌ಗಳಲ್ಲಿ ಕನಿಷ್ಠ 40ರಿಂದ 50 ಜನ ಕೆಲಸ ನಿರ್ವಹಿಸುತ್ತಾರೆ. ಲಾಕ್‌ಡೌನ್‌ ವೇಳೆ ಪ್ರವಾಸಿಗರು ಸುಳಿಯದ ಕಾರಣ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಶೆಫ್‌ಗಳು, ಮ್ಯಾನೇಜ್‌ಮೆಂಟ್‌ ಸಿಬ್ಬಂದಿ ಹೊರಗಿನವರಾಗಿದ್ದರಿಂದ ಅವರು ಊರುಗಳಿಗೆ ಮರಳಿದ್ದರು. ಕೆಲವರು ಹೋಟೆಲ್‌ನಲ್ಲೇ ಉಳಿದುಕೊಳ್ಳಲು ಬಯಸಿದ್ದರಿಂದ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಕೆಳಹಂತದ ಸಿಬ್ಬಂದಿ ಸ್ಥಳೀಯರಾಗಿದ್ದರಿಂದ ಅವರು ಮನೆಗಳಿಗೆ ಹೋಗಿದ್ದರು. ಈ ಪೈಕಿ ಕೆಲವು ಹೋಟೆಲ್‌ನವರು ಎಲ್ಲ ಸಿಬ್ಬಂದಿಗೆ ಒಟ್ಟು ವೇತನದಲ್ಲಿ ಅರ್ಧ ಸಂಬಳ ಪಾವತಿಸಿದ್ದರು. ಮತ್ತೆ ಕೆಲವರು, ತೀವ್ರ ನಷ್ಟದ ನೆಪವೊಡ್ಡಿ ಸಂಬಳ ಪಾವತಿಸಿರಲಿಲ್ಲ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗಲೆಲ್ಲ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರುತ್ತಿರುವುದರಿಂದ ಹೋಟೆಲ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಹೋಟೆಲ್‌ಗಳಲ್ಲಿ ನಿತ್ಯ ಸಂಜೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳು ಪುನಃ ಆರಂಭಗೊಂಡಿವೆ. ಇಷ್ಟುದಿನ ಕೆಲಸವಿಲ್ಲದೆ ಮನೆಯಲ್ಲಿ ಕೂತಿದ್ದ ಕಲಾವಿದರಿಗೆ ಕೆಲಸ ಸಿಕ್ಕಿದೆ.

ಸಂಕಷ್ಟದಲ್ಲಿ ತಾರಾ ಹೋಟೆಲ್‌!

ಮೈಸೂರು: ಪ್ರವಾಸಿಗರ ನೆಚ್ಚಿನ ತಾಣ ಎನಿಸಿರುವ ಮೈಸೂರು ನಗರದಲ್ಲಿ ಸಣ್ಣ ಹಾಗೂ ಮಧ್ಯಮ ಮಟ್ಟದ ಹೋಟೆಲ್‌ಗಳಲ್ಲದೇ; ತಾರಾ‌ ಹೋಟೆಲ್‌ಗಳು ಕೂಡ ಸಂಕಷ್ಟದಿಂದ ಹೊರಬಂದಿಲ್ಲ. ಪೂರ್ಣ ಲಾಕ್‌ಡೌನ್‌, ವಾರಾಂತ್ಯ ಕರ್ಫ್ಯೂ ಸೇರಿ ಕೋವಿಡ್‌ ಕಾರಣ ಎರಡು ವರ್ಷಗಳಿಂದ ಭಾರಿ ನಷ್ಟ ಅನುಭವಿಸಿವೆ.

ಮೈಸೂರು ನಗರದಲ್ಲಿ 405 ಲಾಡ್ಜ್‌ಗಳಿವೆ. ಇವುಗಳಲ್ಲಿ 22 ತಾರಾ‌ ಹೋಟೆಲ್‌ಗಳು. ಹಿಂದೆ ಉದ್ಯಮಿಗಳು ಕಾರ್ಯಾಗಾರ, ವಿಚಾರ ಸಂಕಿರಣ ನಡೆಸುತ್ತಿದ್ದರು. ಈಗ ಅವರೂ ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಯಕ್ರಮ ಆಯೋಜಿಸಲು ವರ್ಚುವಲ್‌ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ.

‘ಆದಾಯವಿಲ್ಲದೆ ತೆರಿಗೆ, ನೀರು, ವಿದ್ಯುತ್‌ ಶುಲ್ಕ, ನೌಕರರ ವೇತನ, ಈಜುಕೊಳ, ಸ್ಪಾ ನಿರ್ವಹಣೆಗೆ ಹಣ ಹೊಂದಿಸುವುದು ಹೇಗೆ’ ಎಂದು ಹೋಟೆಲ್‌ ಮಾಲೀಕರು ಪ್ರಶ್ನಿಸುತ್ತಾರೆ.

ಹಳಿಗೆ ಮರಳದ ತಾರಾ ಹೋಟೆಲ್‌ ಉದ್ಯಮ

ಬೆಂಗಳೂರು: ಕೋವಿಡ್‌ ದೇಶಕ್ಕೆ ಕಾಲಿರಿಸಿದ ಕೆಲವೇ ದಿನಗಳಲ್ಲಿ ಹೋಟೆಲ್‌ ಉದ್ಯಮಕ್ಕೆ ಸಂಕಷ್ಟ ಆವರಿಸಿಕೊಂಡಿತ್ತು. ಲಾಕ್‌ಡೌನ್‌ ಹೇರಿಕೆಯಿಂದ ಬಂದ್‌ ಆಗಿದ್ದ ತಾರಾ ಹೋಟೆಲ್‌ಗಳು ಪುನಃ ಚಟುವಟಿಕೆ ಆರಂಭಿಸಿದ್ದರೂ, ಇನ್ನೂ ಹಳಿಗೆ ಮರಳಿಲ್ಲ.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ– ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ತಾರಾ ಹೋಟೆಲ್‌ಗಳಿವೆ. ಅಲ್ಲೀಗ ಹಿಂದಿನಂತೆ ವಹಿವಾಟು ನಡೆಯುತ್ತಿಲ್ಲ. ಹೆಚ್ಚಿನ ಹೋಟೆಲ್‌ಗಳಲ್ಲಿ ಆರ್ಥಿಕ ಮುಗ್ಗಟ್ಟು ತಾಳಲಾರದೇ ಸಿಬ್ಬಂದಿ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಲಾಗಿದೆ.

ತಾರಾ ಹೋಟೆಲ್‌ಗಳಲ್ಲಿ ಬಾಣಸಿಗರಾಗಿ ದುಡಿಯುತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಸಾವಿರಾರು ಮಂದಿ ಉದ್ಯೋಗವಿಲ್ಲದೇ ವಾಪಸ್‌ ಹೋಗಿದ್ದಾರೆ. ಮಾಸಿಕ ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಹೋಟೆಲ್‌ ನೌಕರರಲ್ಲಿ ಅರ್ಧದಷ್ಟು ಮಂದಿ ಕೆಲಸ ಕಳೆದುಕೊಂಡು ಊರು ಸೇರಿದ್ದಾರೆ.

ತಾರಾ ಹೋಟೆಲ್‌ ಮಾಲೀಕರು ಮತ್ತು ಕಾರ್ಮಿಕರು ಇಬ್ಬರೂ ಸಂಕಷ್ಟದ ಸುಳಿಯಿಂದ ಹೊರಬಂದಿಲ್ಲ. ಹತ್ತಾರು ಸಾವಿರ ಉದ್ಯೋಗಗಳು ನಷ್ಟವಾಗಿದ್ದು, ಹೋಟೆಲ್‌ ಉದ್ಯಮವನ್ನೇ ನೆಚ್ಚಿಕೊಂಡ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು