ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ತತ್ತರಿಸಿದೆ ಹೋಟೆಲ್ ಉದ್ಯಮ

ಹೋಟೆಲ್‌ಗೆ ಕೋವಿಡ್‌ ಹೊಡೆತ
Last Updated 26 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂದೂ ಕುಸಿಯದ ಉದ್ಯಮ’ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ರಾಜ್ಯದ ಹೋಟೆಲ್ ಉದ್ಯಮವು ಕೋವಿಡ್‌ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಉದ್ದೇಶ ದಿಂದ ಜಾರಿಗೆ ತಂದ ಎರಡು ಲಾಕ್‌ಡೌನ್‌ ಗಳ ಪರಿಣಾಮ ಅಕ್ಷರಶಃ ತತ್ತರಿಸಿಹೋಗಿದೆ.

ಈ ಉದ್ಯಮದಲ್ಲಿ ಹೊಸದಾಗಿ ಹೂಡಿಕೆ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಕಾರ್ಮಿಕರು ಕೆಲಸ ಕಳೆದುಕೊಂಡಿರುವ, ಮಾಲೀಕರು ಆತ್ಮಹತ್ಯೆಗೆ ಶರಣಾಗಿರುವ ವರದಿಗಳು ಇವೆ. ಮುಂದೆಂದೂ ಕೋವಿಡ್‌ನ ಅಲೆಗಳು ಬಾರದೆ ಇದ್ದರೆ, ಸರ್ಕಾರಗಳು ನಿರ್ಬಂಧಗಳನ್ನು ವಿಧಿಸದೇ ಇದ್ದರೆ, ಕೋವಿಡ್‌ ಕುರಿತು ಜನರಲ್ಲಿ ಈಗಾಗಲೇ ಇರುವ ಭಯ ದೂರವಾದರೆ ಮಾತ್ರ ಹೋಟೆಲ್‌ ಉದ್ಯಮ ಚೇತರಿಸಿಕೊಳ್ಳಬಹುದು. ಹಾಗೆ ಚೇತರಿಕೆ ಕಾಣಲಿಕ್ಕೆ ಕನಿಷ್ಠ ಎರಡು ವರ್ಷಗಳು ಬೇಕು ಎನ್ನುತ್ತಿದ್ದಾರೆ ಉದ್ಯಮದ ಪ್ರತಿನಿಧಿಗಳು.

‘ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ತಂದಾಗ, ನೋಟು ರದ್ದತಿ ಜಾರಿಯಾದಾಗ ಕೂಡ ನಮ್ಮ ಉದ್ಯಮಕ್ಕೆ ಹೆಚ್ಚು ತೊಂದರೆ ಆಗಿರಲಿಲ್ಲ. ಆದರೆ, ಕೋವಿಡ್‌–ಲಾಕ್‌ಡೌನ್‌ನಿಂದಾಗಿ ನಾವು ಕುಸಿದುಹೋಗಿದ್ದೇವೆ’ ಎಂದು ಹೇಳುತ್ತಾರೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್.

‘ಸಾಮಾನ್ಯವಾಗಿ ನಾವು ಬಂದ್‌ ಕರೆಗಳಿಗೂ ಬೆಂಬಲ ನೀಡುತ್ತಿರಲಿಲ್ಲ. ಮೊದಲ ಬಾರಿಗೆ ಲಾಕ್‌ಡೌನ್‌ ಜಾರಿಯಾದಾಗ ಉದ್ಯಮ ಬಂದ್‌ ಆಯಿತು, ಕುಸಿದುಬಿತ್ತು. ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಊರು ತೊರೆದರು. ಹಲವರು ಇಂದಿಗೂ ಹಿಂತಿರುಗಿಲ್ಲ. ಈ ಉದ್ಯಮದಲ್ಲಿ ಬದುಕು ಕಂಡುಕೊಂಡಿದ್ದ ಒಂದು ಲಕ್ಷಕ್ಕಿಂತ ಹೆಚ್ಚಿನ ಜನ ಕೆಲಸ ಕಳೆದುಕೊಂಡಿದ್ದಾರೆ. ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ 10ರಿಂದ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ’ ಎಂದು ರಾವ್ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಕೋವಿಡ್‌ನ ಮೊದಲನೆಯ ಅಲೆ ಅಪ್ಪಳಿಸುವ ಮೊದಲು ರಾಜ್ಯದ ಹೋಟೆಲ್ (ತಾರಾ ಹೋಟೆಲ್‌ಗಳು ಹಾಗೂ ಬ್ಯಾಂಕ್ವೆಟ್ ಹಾಲ್ ಒಳಗೊಂಡು) ಉದ್ಯಮದಲ್ಲಿ ಪ್ರತಿನಿತ್ಯ ಸರಾಸರಿ ₹ 200 ಕೋಟಿ ವಹಿವಾಟು ನಡೆಯುತ್ತಿತ್ತು. ಅಂದಿನ ವಹಿವಾಟಿನ ಮಟ್ಟಕ್ಕೆ ಹೋಲಿಸಿದರೆ, ಇಂದು ನಡೆಯುತ್ತಿರುವ ಪ್ರಮಾಣ ಶೇಕಡ 30ರಷ್ಟು ಕಡಿಮೆ.

ರಾಜ್ಯದಲ್ಲಿ ಹೋಟೆಲ್ ನಡೆಸುತ್ತಿದ್ದ ಸರಿಸುಮಾರು ಮೂರು ಸಾವಿರ ಮಾಲೀಕರು ನಿರುದ್ಯೋಗಿಗಳಾಗಿದ್ದಾರೆ. ಬೆಂಗಳೂರಿನಲ್ಲಿಯೇ ಒಂದು ಸಾವಿರ ಮಂದಿ ಮಾಲೀಕರು ಹೋಟೆಲ್ ಬಾಗಿಲು ಮುಚ್ಚಿ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದ ಹೋಟೆಲ್ ಉದ್ಯಮವು ಎರಡು ವರ್ಷಗಳಿಂದ ಬೆಳವಣಿಗೆ ದಾಖಲಿಸಿಲ್ಲ ಎಂದು ಮೂಲಗಳು ಹೇಳುತ್ತವೆ.

ಕೋವಿಡ್‌ಗೂ ಮೊದಲಿನ ಸಂದರ್ಭದಲ್ಲಿ ಹೋಟೆಲ್ ಕಾರ್ಮಿಕರ ವೇತನವನ್ನು ವಾರ್ಷಿಕವಾಗಿ ಸರಾಸರಿ ಶೇ 7ರಿಂದ ಶೇ 10ರವರೆಗೆ ಹೆಚ್ಚಿಸಲಾಗುತ್ತಿತ್ತು. ಆದರೆ, ಎರಡು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಕೆಲವು ಕಡೆಗಳಲ್ಲಿ ದೊಡ್ಡ ಮೊತ್ತದ ವೇತನ ಪಡೆಯುತ್ತಿದ್ದವರು, ಆದಾಯ ಕಡಿತ ಅನುಭವಿಸಿದ್ದಾರೆ.

ರಾಜ್ಯದ ಹೋಟೆಲ್ ಉದ್ಯಮವು 2023ರ ಸುಮಾರಿಗೆ ಮೊದಲಿನ ಬೆಳವಣಿಗೆಯ ಮಟ್ಟವನ್ನು ತಲುಪಬಹುದು ಎಂಬ ಅಂದಾಜು ಇದೆ. ಹಾಗೆ ಆಗಬೇಕು ಎಂದಾದರೆ, ಮತ್ತೆ ಕಚೇರಿಗಳಿಂದಲೇ ಕೆಲಸ ಮಾಡುವುದು ಶುರುವಾಗಬೇಕು. ಪ್ರವಾಸೋದ್ಯಮ ಮೊದಲಿನ ಹಂತ ತಲುಪಬೇಕು. ಹೊಸದಾಗಿ ಕೋವಿಡ್ ಅಲೆ ಬರಬಾರದು ಎಂದು ರಾವ್ ಹೇಳಿದರು. ಬೇರೆ ಎಲ್ಲ ಉದ್ಯಮಗಳ ವ್ಯಾಪಾರ-ವ್ಯವಹಾರ ಸಹಜ ಸ್ಥಿತಿಯಲ್ಲಿದ್ದರೆ ತಮ್ಮ ಉದ್ಯಮವೂ ಚೆನ್ನಾಗಿ ನಡೆಯುತ್ತದೆ ಎಂದರು.

ಹೋಟೆಲ್‌ ಉದ್ಯಮವನ್ನೂ ಒಳಗೊಂಡಿರುವ ಆತಿಥ್ಯ ಉದ್ಯಮದ ಪುನಶ್ಚೇತನಕ್ಕೆ, ತುರ್ತು ಸಾಲ ಖಾತರಿ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ, ಅದಕ್ಕಾಗಿ ₹ 50 ಸಾವಿರ ಕೋಟಿ ಮೀಸಲಿಡುವುದಾಗಿ ಕೇಂದ್ರ ಸರ್ಕಾರವು 2022–23ನೇ ಸಾಲಿನ ಬಜೆಟ್‌ನಲ್ಲಿ ಹೇಳಿದೆ. ‘ಇದು ಈ ಉದ್ಯಮಕ್ಕೆ ಒಂದಿಷ್ಟು ನೆರವು ನೀಡಬಹುದು. ಸಕಾಲಕ್ಕೆ ಹಣ ಒದಗಿಸುವುದರಿಂದ ಈ ಉದ್ಯಮಕ್ಕೆ ಶಕ್ತಿ ತುಂಬಬಹುದು’ ಎಂದು ಬ್ರಿಕ್‌ವರ್ಕ್ಸ್‌ ರೇಟಿಂಗ್ಸ್‌ನ ರೇಟಿಂಗ್ಸ್‌ ವಿಭಾಗದ ನಿರ್ದೇಶಕ ಚಿಂತನ್ ಲಖಾನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

* ಎರಡು ವರ್ಷಗಳಲ್ಲಿ ರಾಜ್ಯದ ಹೋಟೆಲ್ ಉದ್ಯಮ ಅನುಭವಿಸಿರುವ ನಷ್ಟದ ಮೊತ್ತವು ₹ 25 ಸಾವಿರ ಕೋಟಿಗೂ ಹೆಚ್ಚು. ಇದು ಅಂದಾಜು ಮಾತ್ರ. ವಾಸ್ತವದಲ್ಲಿ ನಷ್ಟದ ಮೊತ್ತವು ಇನ್ನೂ ಹೆಚ್ಚಿರಬಹುದು ಎಂದು ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದರು. ರಾಜ್ಯದ ಸರಿಸುಮಾರು ಶೇಕಡ 50ರಷ್ಟು ಹೋಟೆಲ್‌ಗಳು ಸಾಲದ ಸುಳಿಯಲ್ಲಿವೆ. ಸಾಲ ಎಂದರೆ ಕಟ್ಟಡದ ಬಾಡಿಗೆ ಬಾಕಿಯೂ ಸೇರಿದೆ ಎಂದು ಅವರು ವಿವರಿಸಿದರು.

ಚಂದ್ರಶೇಖರ ಹೆಬ್ಬಾರ್
ಚಂದ್ರಶೇಖರ ಹೆಬ್ಬಾರ್

* ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಉದ್ಯೋಗಿಗಳು ಮನೆಗಳಿಂದಲೇ ಕೆಲಸ ಮಾಡುತ್ತಿರುವುದು ನಮ್ಮ ಉದ್ಯಮಕ್ಕೆ ದೊಡ್ಡ ಏಟು ನೀಡಿದೆ.

–ಪಿ.ಸಿ.ರಾವ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

ಪಿ.ಸಿ.ರಾವ್
ಪಿ.ಸಿ.ರಾವ್

₹ 25 ಸಾವಿರ ಕೋಟಿಗೂ ಹೆಚ್ಚು

ಲಾಕ್‌ಡೌನ್‌ ನಂತರ ರಾಜ್ಯದ ಹೊಟೆಲ್ ಉದ್ಯಮ ಅನುಭವಿಸಿದ ನಷ್ಟ

65,000

ರಾಜ್ಯದಲ್ಲಿ ಇರುವ ನೋಂದಾಯಿತ ಹೋಟೆಲ್‌ಗಳ ಸಂಖ್ಯೆ

3 ಲಕ್ಷ

ಉದ್ಯಮದಲ್ಲಿ ತೊಡಗಿಸಿಕೊಂಡರ ಅಂದಾಜು ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT