ಭಾನುವಾರ, ಸೆಪ್ಟೆಂಬರ್ 19, 2021
25 °C
ಸದ್ಬಳಕೆಯಾಗದ ಕ್ರೀಡಾ ಇಲಾಖೆಯ ಮೂಲಸೌಲಭ್ಯಗಳು

ಒಳನೋಟ: ಕ್ರೀಡಾಂಗಣಕ್ಕೆ ಬೇಕು ನೀತಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಿಲ್ಲಾ ಕೇಂದ್ರಕ್ಕೊಂದು ಕ್ರೀಡಾಂಗಣ, ತಾಲ್ಲೂಕಿಗೊಂದು ಮೈದಾನ ಮತ್ತು ರಾಜ್ಯದ ದೊಡ್ಡ ನಗರಗಳಲ್ಲಿ ಒಳಾಂಗಣ ಕ್ರೀಡಾಂಗಣಗಳು. ಅವುಗಳ ನಿರ್ಮಾಣ ಮತ್ತು ನಿರ್ವಹಣೆಗೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ವೆಚ್ಚ. ಆದರೆ, ಅದರಿಂದ ಸಿಕ್ಕ ಲಾಭಗಳೇನು?

ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನೀಡುವ ಅಂಕಿ ಸಂಖ್ಯೆಗಳ ಮೇಲೆ ಕಣ್ಣಾಡಿಸಿದರೆ ಅಚ್ಚರಿಯಾಗುವುದು ಸಹಜ. ತಾಲ್ಲೂಕಿನಿಂದ ಬೆಂಗಳೂರು ನಗರದವರೆಗೆ ಇರುವ ಕ್ರೀಡಾ ಮೂಲಸೌಲಭ್ಯಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವವರ ಸಂಖ್ಯೆ ನಿರಾಶದಾಯಕ. ಏಕೆಂದರೆ, ಇರುವ ಸೌಲಭ್ಯಗಳ ಬಳಕೆಯಲ್ಲಿ ಆಗುತ್ತಿರುವ ಹಿನ್ನಡೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಕ್ರೀಡಾಂಗಣಗಳ ಬಳಕೆಗೆ ಒಂದು ನಿರ್ದಿಷ್ಟವಾದ ನೀತಿಯ ಚೌಕಟ್ಟು ಇಲ್ಲದಿರುವುದು. ಬೆಂಗಳೂರಿನಲ್ಲಿ ಸದಾ ಕ್ರೀಡಾ ತರಬೇತಿ, ಟೂರ್ನಿಗಳು ಮತ್ತಿತರ ಚಟುವಟಿಕೆಗಳು ನಡೆಯುವ ಕಂಠೀರವ ಕ್ರೀಡಾಂಗಣಕ್ಕೂ ಒಂದು ನೀತಿ–ನಿಯಮ ಇದುವರೆಗೆ ಇರಲಿಲ್ಲ. 

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡಕ್ಕೆ ಕಂಠೀರವದಲ್ಲಿ ಫುಟ್‌ಬಾಲ್  ಪಂದ್ಯಗಳನ್ನು ನಡೆಸಲು ಅವಕಾಶ ಕೊಟ್ಟಿದ್ದು, ಅಥ್ಲೀಟ್‌ಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಕೋರ್ಟ್ ಮೆಟ್ಟಿಲು ಕೂಡ ಏರಿದೆ. ಈಚೆಗೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಕ್ರೀಡಾಂಗಣ ಬಳಕೆಯ ನೀತಿ ಏನಿದೆ ಎಂದು ಪ್ರಶ್ನಿಸಿದಾಗ ಇಲಾಖೆ ನಿರುತ್ತರವಾಗಿತ್ತು. ಹೊಸದೊಂದು ನೀತಿ ಸಿದ್ಧಪಡಿಸಿಕೊಂಡು ಬನ್ನಿ ಎಂದು ನ್ಯಾಯಾಲಯ ಸೂಚಿಸಿತ್ತು. ಅದಕ್ಕಾಗಿ ಹಿರಿಯ ಅಥ್ಲೀಟ್ ಮತ್ತು ಕೋಚ್‌ಗಳಿದ್ದ ಸಮಿತಿಯನ್ನೂ ರಚಿಸಲಾಯಿತು.

ಇಂಥ ನೀತಿಯ ಕೊರತೆಯಿಂದಾಗಿ ಕ್ರೀಡಾಂಗಣಗಳಲ್ಲಿ ರಾಜಕೀಯ ಸಭೆ, ಸಮಾರಂಭ ಆಯೋಜಿಸುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳೂ ಇವೆ.

‘ಈ ಸಂಬಂಧ ನೀತಿ ಸಿದ್ಧವಾಗಿದೆ. ಕರ್ನಾಟಕದ ಕ್ರೀಡಾ ಪ್ರಾಧಿಕಾರದ ಸಭೆ ನಡೆಸಿ ಜಾರಿಗೆ ತರುವುದೊಂದು ಬಾಕಿ ಇದೆ. ಕಂಠೀರವಕ್ಕೆ ಒಂದು ನೀತಿ–ನಿಯಮ ಮಾಡಲಾಗಿದೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ನೀತಿ ರೂಪಿಸಲಾಗುವುದು’ ಎಂದು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಗತ್ಯಕ್ಕೆ ತಕ್ಕ ಸೌಲಭ್ಯವಿಲ್ಲ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಜ್ಯದ ಹಲವು ಕ್ರೀಡಾಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ. ಅದರಿಂದಾಗಿ ಸಿಗಬೇಕಾದ ಫಲ ಸಿಗುತ್ತಿಲ್ಲ. ಕೆಲವು ಕಡೆ ಅನಗತ್ಯವಾಗಿ ಸೌಲಭ್ಯ ಒದಗಿಸಿರುವುದು ಮತ್ತು ಇನ್ನು ಕೆಲವು ಕಡೆ ಅಗತ್ಯವಿರುವ ಮೂಲಸೌಲಭ್ಯ ನಿರ್ಮಾಣವಾಗದಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಇದರ ಫಲವಾಗಿ ಬಹಳಷ್ಟು ಕ್ರೀಡಾಂಗಣಗಳು ಮತ್ತು ಮೈದಾನಗಳಿಗೆ ಸರ್ಕಾರದ ಹಣ ವೆಚ್ಚವಾಗುತ್ತಿದೆ. ಫಲಿತಾಂಶ ಸಿಗುತ್ತಿಲ್ಲ.

ಉದಾಹರಣೆಗೆ; ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್. ತಾಲ್ಲೂಕು ಕೇಂದ್ರವೊಂದಕ್ಕೆ ದುಬಾರಿ ವೆಚ್ಚದ ಟ್ರ್ಯಾಕ್‌ನ ಅಗತ್ಯವಿರಲಿಲ್ಲ. ಸಿಂಡರ್ ಟ್ರ್ಯಾಕ್ ಇದ್ದರೆ ಸಾಕಾಗುತ್ತಿತ್ತು.

ಹಲವಾರು ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಕ್ರೀಡಾ ಸಂಘಟನೆಗಳು ಇರುವ ದಾವಣಗೆರೆಯಂತಹ ದೊಡ್ಡ ನಗರದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ಸೌಲಭ್ಯವಿಲ್ಲ. ಇನ್ನು ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆಯಿಂದ ಹಲವು ಹಾಕಿ ಪಟುಗಳು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆದರೆ, ಅಲ್ಲಿ ಇದುವರರೆಗೂ ಆಸ್ಟ್ರೋ ಟರ್ಫ್ ಅಳವಡಿಸಿಲ್ಲ. ಮೈಸೂರಿನ ಚಾಮುಂಡಿ ವಿಹಾರದಲ್ಲಿ ಜಿಮ್ನಾಸ್ಟಿಕ್ಸ್‌ ಸೌಲಭ್ಯಗಳದ್ದು ಮತ್ತೊಂದು ಕಥೆ. ‘ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಲಕರಣೆ ಮತ್ತು ಸೌಲಭ್ಯ ಇದೆ. ಆದರೆ ದಿನಂಪ್ರತಿ ತರಬೇತಿಗೆ ಬೇಕಾದ ಸೌಲಭ್ಯಗಳ ಕೊರತೆ ಇದೆ’ ಎಂದು ಪಾಲಕರು ಮತ್ತು ಕೋಚ್‌ಗಳು ದೂರುತ್ತಾರೆ.

‘ಇಲ್ಲಿರುವ ಸೌಲಭ್ಯಗಳು ಪ್ರತಿವರ್ಷ ದಸರಾ ಕ್ರೀಡಾಕೂಟದ ಸಂದರ್ಭದಲ್ಲಿ ಬಳಕೆಯಾಗುತ್ತಿರುವುದು ಸಮಾಧಾನದ ಸಂಗತಿ’ ಎಂದು ಕ್ರೀಡಾಸಕ್ತರು ಹೇಳುತ್ತಾರೆ. ಆದರೆ ರಾಜ್ಯದ ಎಲ್ಲೆಡೆಯೂ ಇಂತಹ ಪರಿಸ್ಥಿತಿ ಇಲ್ಲ.

ಸೈಕ್ಲಿಂಗ್ ಕಣಜದ ಖ್ಯಾತಿಯ ವಿಜಯಪುರದಲ್ಲಿ ವೆಲೋಡ್ರಂ ನಿರ್ಮಾಣದ ಕನಸು ಇನ್ನೂ ನನಸಾಗಿಲ್ಲ. ಸುಮಾರು ಒಂದು ದಶಕದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ಟ್ರ್ಯಾಕ್‌ ಸೈಕ್ಲಿಂಗ್‌ ಅಭ್ಯಾಸಕ್ಕೆ ತೊಡಕಾಗಿದೆ. ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಪಂಜಾಬ್, ಹರಿಯಾಣ  ಸೈಕ್ಲಿಸ್ಟ್‌ಗಳ ಮಟ್ಟಕ್ಕೇರಲೂ ಸಾಧ್ಯವಾಗುತ್ತಿಲ್ಲ.ರಾಜ್ಯದುದ್ದಕ್ಕೂ ಇಂತಹ ಹಲವು ಸಮಸ್ಯೆಗಳು ಕ್ರೀಡಾಕ್ಷೇತ್ರದಲ್ಲಿವೆ. ಈ ವರ್ಷ ಕೋವಿಡ್‌ ಪಿಡುಗಿನಿಂದಾಗಿ ಕ್ರೀಡಾಕೂಟಗಳು ನಡೆದಿಲ್ಲ. ಈ ವರ್ಷದ ಮಟ್ಟಿಗೆ ಸಮಸ್ಯೆಗಳು ತೆರೆಮರೆಗೆ ಸರಿದಿವೆ.

**

ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಭಿವೃದ್ಧಿಗೆ ಸರ್ಕಾರದಿಂದ ಹಣ ಬರುತ್ತಿದೆ. ಅದರಿಂದಾಗಿ ಮೂಲಸೌಲಭ್ಯಗಳೂ ನಿರ್ಮಾಣವಾಗುತ್ತಿವೆ. ಆದರೆ ಅವುಗಳ ಬಳಕೆಗೆ ಒಂದು ಕಟ್ಟುನಿಟ್ಟಾದ ನೀತಿಯ ಚೌಕಟ್ಟು ಇಲ್ಲ. ಅದೇ ಕಾರಣಕ್ಕೆ ಕಂಠೀರವ ಕ್ರೀಡಾಂಗಣದ ವಿವಾದವಾಗಿದ್ದು. ನಾವು ಫುಟ್‌ಬಾಲ್ ದ್ವೇಷಿಗಳಲ್ಲ. ಆದರೆ ಅಥ್ಲೀಟ್‌ಗಳ ಹಿತಾಸಕ್ತಿ ಕಡೆಗಣಿಸಿ ಐಎಸ್‌ಎಲ್ ತಂಡಕ್ಕೆ ಕ್ರೀಡಾಂಗಣವನ್ನು ಕೊಟ್ಟಿದ್ದು ತಕರಾರಿಗೆ ಕಾರಣ. ಸರಿಯಾದ ನೀತಿ, ನಿಯಮಗಳಿರದ ಕಾರಣ ಕ್ರೀಡಾಂಗಣಗಳು ಬೇರೆ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತವೆ. ಬಹೂಪಯೋಗಿ ಕ್ರೀಡಾಂಗಣಗಳೆಂದು ಜಿಲ್ಲೆಗಳಲ್ಲಿ ನಿರ್ಮಾಣವಾಗಿವೆ. ಅವುಗಳ ಉದ್ದೇಶ ಸರಿಯಾಗಿ ಈಡೇರುವಂತಾಗಬೇಕು. ಹಿರಿಯ ಕ್ರೀಡಾಪಟುಗಳು, ಕೋಚ್‌ಗಳ ಸಮಿತಿ ರಚನೆ ಮಾಡಿ ಸಲಹೆ ಸೂಚನೆಗಳೊಂದಿಗೆ ನೀತಿ ನಿರೂಪಣೆಯಾಗಬೇಕು.
-ಎಸ್‌.ಡಿ. ಈಶನ್, ಅಂತರರಾಷ್ಟ್ರೀಯ ಅಥ್ಲೀಟ್–ಕೋಚ್

**

ನಮ್ಮ ಸುಪರ್ದಿಯಲ್ಲಿರುವ ಕ್ರೀಡಾಂಗಣಗಳಲ್ಲಿ ತರಬೇತಿ,  ಕ್ರೀಡಾಚಟುವಟಿಕೆಗಳು ನಡೆಯುತ್ತಿವೆ. ಬೆಂಗಳೂರಿನ ಕೋರಮಂಗಲದಲ್ಲಿ ಪ್ರತಿವರ್ಷವೂ ಒಂದಿಲ್ಲೊಂದು ಕ್ರೀಡಾ ಚಟುವಟಿಕೆ  ನಡೆಯುತ್ತದೆ. ಈ ವರ್ಷ ಅಲ್ಲಿ ಕೋವಿಡ್ ಕೇರ್ ಕೇಂದ್ರ ಮಾಡಲಾಗಿದೆ. ಜಿಲ್ಲಾಮಟ್ಟದಲ್ಲಿ ಕ್ರೀಡಾಂಗಣಗಳ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿಗಳು ಅನುದಾನ ನೀಡುತ್ತವೆ. ನಮ್ಮ ಇಲಾಖೆಯು ಕ್ರೀಡಾಂಗಣಗಳನ್ನು ಸುಸ್ಥಿತಿಯಲ್ಲಿಟ್ಟಿದೆ. ಯಾವ ಸೌಲಭ್ಯಗಳೂ ನಿರುಪಕಯುಕ್ತವಾಗಿಲ್ಲ.
-ಶ್ರೀನಿವಾಸ್, ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

**

ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿರುವುದು ಸ್ಥಳೀಯ ಪ್ರತಿಭೆಗಳ ಬೆಳವಣಿಗೆಗಾಗಿ. ಕೆಲವು ಕಡೆ ತರಬೇತುದಾರರನ್ನು ಒದಗಿಸುವುದು ಸುಲಭವಲ್ಲ. ಆದ್ದರಿಂದ ಸ್ಥಳೀಯ ಕ್ರೀಡಾ ಮತ್ತು ಯುವ ಸಂಘಟನೆಗಳಲ್ಲಿರುವ ಅನುಭವಿ ಕ್ರೀಡಾಪಟುಗಳಿಗೆ ಕೋಚ್ ಮಾಡುವ ಅವಕಾಶ ನೀಡಲಾಗುವುದು. ಅವರನ್ನು ಆಯ್ಕೆ ಮಾಡಿ ಸ್ಥಳೀಯ ಕ್ರೀಡಾಪಟುಗಳಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ರಾಜ್ಯದ ಸೌಲಭ್ಯಗಳು ಚೆನ್ನಾಗಿವೆ. ಆದ್ದರಿಂದಲೇ ವಿದ್ಯಾನಗರದ ಕ್ರೀಡಾ ಶಾಲೆಗೆ ಕೇಂದ್ರ ಸರ್ಕಾರವು ಖೇಲೊ ಇಂಡಿಯಾ ಉತ್ಕೃಷ್ಟತಾ ಕೇಂದ್ರವನ್ನು ಮಂಜೂರು ಮಾಡಿದೆ.
-ರಮೇಶ್,ಜಂಟಿ ನಿರ್ದೇಶಕ, ಡಿವೈಇಎಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು