ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್ ಮಾಫಿಯಾ | ಹಗಲು ದರೋಡೆಗೆ ಅಧಿಕಾರಿಗಳದ್ದೇ ರಕ್ಷಣೆ...?

ಕಾಲ ಕಸವಾದ ಕಾನೂನು, ಹಣವಿದ್ದವರಿಗೆ ಅಟೆಂಡೆನ್ಸ್, ಇಲಾಖೆಯಲ್ಲಿ ಕೋಚಿಂಗ್ ಸೆಂಟರ್‌ಗಳ ಮಾಹಿತಿಯೇ ಇಲ್ಲ, ಬಡ ವಿದ್ಯಾರ್ಥಿಗಳಲ್ಲಿ ಆತಂಕ
Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ಬಡ ವರ್ಗದ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಇಂಟಿಗ್ರೇಟೆಡ್ ಕೋಚಿಂಗ್ ಸೇರಲಾರದೆ, ಕೋಚಿಂಗ್ ಪಡೆದ ವಿದ್ಯಾರ್ಥಿಗಳ ಜತೆ ಸ್ಪರ್ಧಿಸಲಾರದೆ ನಲುಗುತ್ತಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ ಅಂಕಿ ಅಂಶ ಗಮನಿಸಿದಾಗ, ಶೇ 60ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಅವರಿಗೆ ಯಾವುದೇ ಕೋಚಿಂಗ್ ಸೌಲಭ್ಯ ಇರುವುದಿಲ್ಲ. ಇದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವಿನ ಅಂತರ ಹೆಚ್ಚಲು ಕಾರಣವಾಗುತ್ತಿದೆ....

ಬೆಂಗಳೂರು : ‘ಇಂಟಿಗ್ರೇಟೆಡ್ ಕೋಚಿಂಗ್’ ರಾಜ್ಯದಲ್ಲಿ ದೊಡ್ಡ ದಂಧೆಯಾಗಿ ಮಾರ್ಪಾಡಾಗಿದ್ದು, ಸರ್ಕಾರದ ನಿಯಂತ್ರಣ ಇಲ್ಲದಿರುವುದರಿಂದ ನಾಯಿಕೊಡೆಗಳಂತೆ ಬೆಳೆಯುತ್ತಿವೆ.

ಈ ಸಂಸ್ಥೆಗಳು ಯಾವ ರೀತಿ ಕಾನೂನು ಉಲ್ಲಂಘನೆ ಮಾಡುತ್ತಿವೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ: ಇತ್ತೀಚೆಗೆ ವೃತ್ತಿ ಶಿಕ್ಷಣ ಪ್ರವೇಶ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಅತ್ಯುತ್ತಮ ರ‍್ಯಾಂಕ್ ಗಳಿಸಿದ್ದ, ಅದೂ ರಾಷ್ಟ್ರಮಟ್ಟದಲ್ಲಿ. ಆದರೆ ಅವನನ್ನು ಮಾತನಾಡಿಸಲು ಕರೆ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಆಶ್ಚರ್ಯ ಕಾದಿತ್ತು. ಕೇಂದ್ರ ಸರ್ಕಾರಿ ಸಂಸ್ಥೆಯೊಂದರಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆತನ ತಾಯಿ ಹೇಳಿದ ಪ್ರಕಾರ, ಆ ವಿದ್ಯಾರ್ಥಿಯನ್ನು ಕಳೆದ ಒಂದು ವರ್ಷ ಹೆಚ್ಚಿನ ಇಂಟಿಗ್ರೇಟೆಡ್ ತರಬೇತಿಗೆಂದು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಈಗ ಉದ್ಭವಿಸುವ ಬಹು ಮುಖ್ಯ ಪ್ರಶ್ನೆ ಎಂದರೆ, ಭರ್ತಿ ಒಂದು ವರ್ಷ ಪರ ಊರಿನಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಾದ ಈ ವಿದ್ಯಾರ್ಥಿಗೆ ಪದವಿ ಪೂರ್ವ ತರಗತಿಯ ಶೇಕಡಾ 75 ಕಡ್ಡಾಯ ಹಾಜರಾತಿ ಹೇಗೆ ಲಭ್ಯವಾಯಿತು ಎಂದು?

ಶೇ75ರಷ್ಟು ಹಾಜರಾತಿ ಇಲ್ಲ ಎನ್ನುವ ಕಾರಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಒಂದಿಡೀ ವರ್ಷವನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಸಂಬಂಧಿಸಿದ ಇಲಾಖೆ ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್ ಮತ್ತು ಖಾಸಗಿ ಪಿಯುಸಿ ಕಾಲೇಜುಗಳ ನಡುವಿನ ಬಾಂಧವ್ಯ; ಬೆಂಗಳೂರಿನಲ್ಲಿ ನಡೆಯುತ್ತಿರುವ ಒಂದು ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆ ನಗರದ ಹಲವು ಪ್ರತಿಷ್ಠಿತ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಕಾಲೇಜಿಗೆ ಪ್ರವೇಶ ಪಡೆಯೋ ಪ್ರತಿ ವಿದ್ಯಾರ್ಥಿಯೂ ತರಗತಿಗೆ ಹಾಜರಾಗುವುದು ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್‌ನಲ್ಲಿ. ಆ ವಿದ್ಯಾರ್ಥಿಗಳಿಗೆ ಶೇ 75ರಷ್ಟು ಅಟೆಂಡೆನ್ಸ್ ನೀಡುವುದು ಮಾತ್ರ ಕಾಲೇಜಿನ ಕರ್ತವ್ಯ.

ಇಲ್ಲಿ ಹೆಸರು ಮತ್ತು ಹಣ ಎರಡೂ ಹಂಚಿಕೆ ಆಗುತ್ತವೆ! ಆ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದರೆ, ಕಾಲೇಜು ಮತ್ತು ಸಂಸ್ಥೆ ಎರಡೂ ‘ಕ್ರೆಡಿಟ್’ ಪಡೆಯುತ್ತವೆ. ಇನ್ನು ಹಣದ ವಿಚಾರ, ವಿದ್ಯಾರ್ಥಿ ಪ್ರವೇಶ ಸಂದರ್ಭದಲ್ಲೇ ಈ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಿರುತ್ತದೆ, ಪೋಷಕರು ನೀಡುವ ಪ್ರವೇಶ ಶುಲ್ಕದಲ್ಲಿ ಶೇಕಡಾ 50ರಷ್ಟು ಹಣ, ಇಂಟಿಗ್ರೇಟೆಡ್ ಕೋಚಿಂಗ್‌ಗೆ! ಪ್ರತಿ ವರ್ಷ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುತ್ತಿದ್ದರೂ, ಈ ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಯ ಹತ್ತನೇ ತರಗತಿ ಫಲಿತಾಂಶ ಹೊರಬೀಳುವ ಮುನ್ನವೇ ಪಿಯುಸಿಗೆ ಪ್ರವೇಶ ನೀಡುತ್ತವೆ. ಇದಕ್ಕೆ ಸಂಸ್ಥೆಗಳು ಆಧಾರವಾಗಿಟ್ಟುಕೊಳ್ಳೋದು ಪ್ರಿಪರೇಟರಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದ ಅಂಕಗಳನ್ನು ಅಂದರೆ ನೀವು ನಂಬಲೇಬೇಕು.

ಇದೂ ಸಹ ನಿಯಮಬಾಹಿರ ಎಂದು ತಿಳಿದಿದ್ದರೂ, ಸಾಕಷ್ಟು ದೂರುಗಳು ದಾಖಲಾಗಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಇಂತಹ ಸಂಸ್ಥೆಗಳನ್ನು ನಿಯಂತ್ರಿಸಬೇಕಾದ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕಡೇ ಪಕ್ಷ ಈ ಸಂಸ್ಥೆಗಳಲ್ಲಿ ಎಷ್ಟು ನೋಂದಣಿ ಆಗಿವೆ, ಎಷ್ಟು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯೂ ಇಲಾಖೆ ಬಳಿ ಲಭ್ಯವಿಲ್ಲ.

ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೂಡಾ ಕೋಚಿಂಗ್ ಸಂಸ್ಕೃತಿಯ ಬಗ್ಗೆ ಪ್ರಸ್ತಾಪವಿದೆ. ಹೆಚ್ಚುತ್ತಿರುವ ಕೋಚಿಂಗ್ ಸಂಸ್ಕೃತಿಯಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಉಲ್ಲೇಖಿಸಲಾಗಿದೆ.

ಅಸಹಾಯಕತೆಯೇ ಬಂಡವಾಳ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕೈಗೆಟುಕದ ಈ ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆಗಳಿಗೆ ದಾಖಲಾಗದಿದ್ದರೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದೇ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹರಡಲಾಗಿದೆ. ಇದರಿಂದ ಆತಂಕಕ್ಕೆ ಬಿದ್ದಿರುವ ಗ್ರಾಮೀಣ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಂಥ ನಗರಗಳನ್ನು ಅರಸಿ ಬರುತ್ತಿರುವುದು ಹೆಚ್ಚುತ್ತಿದೆ. ಒಂದು ವರದಿ ಪ್ರಕಾರ ಈ ಕೋಚಿಂಗ್ ಸಂಸ್ಥೆಗಳ ವಾರ್ಷಿಕ ವಹಿವಾಟು ಸಾವಿರ ಕೋಟಿ ರೂಪಾಯಿಗೂ ಅಧಿಕ. ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಸಮೀಕ್ಷೆಯೊಂದರ ಪ್ರಕಾರ, ರಾಜಸ್ಥಾನದ ಕೋಟಾ ನಗರದಲ್ಲಿನ ಕೋಚಿಂಗ್ ಸೆಂಟರ್‌ಗಳ ವಹಿವಾಟು ಅಂದಾಜು ₹1,500 ಕೋಟಿಗೂ ಅಧಿಕ! ಈ ಸಂಸ್ಥೆಗಳು ವಸೂಲಿ ಮಾಡುವ ಶುಲ್ಕ ದುಬಾರಿ, ಸಾಮಾನ್ಯರ ಕೈಗೆ ಎಟಕುವಂಥದ್ದಲ್ಲ. ಇನ್ನು ಬೆಂಗಳೂರಿನಂತಹ ನಗರದಲ್ಲಿ ವಾರ್ಷಿಕ ₹ 3 ಲಕ್ಷದಿಂದ ಪ್ರಾರಂಭ ಆಗುವ ಕೋಚಿಂಗ್ ₹7 ಲಕ್ಷ ದಾಟುತ್ತದೆ. ಇಷ್ಟು ಹಣದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮ್ಯಾನೇಜ್‍ಮೆಂಟ್ ಕೋಟಾದಡಿ ಎಂಜಿನಿಯರಿಂಗ್ /ಮೆಡಿಕಲ್ ಸೀಟು ಕೊಡಿಸಬಹುದು.

ಇತರೆ ನಗರಗಳಿಗೂ ವಿಸ್ತರಣೆ

ಕಳೆದ ಐದಾರು ವರ್ಷದಿಂದ ಹೆಚ್ಚಾಗಿರುವ ಈ ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆಗಳ ಹಾವಳಿ ಪ್ರಾರಂಭದ ದಿನಗಳಲ್ಲಿ ಬೆಂಗಳೂರಿಗೆ ಸೀಮಿತವಾಗಿತ್ತು.ಆದರೆ ಈಗ ರಾಜ್ಯದ ಹಲವು ಕಡೆ ವಿಸ್ತರಿಸಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಂಥ ನಗರಗಳಲ್ಲಿ ಒಂದೆರಡು ಪ್ರತಿಷ್ಠಿತ ಕಾಲೇಜುಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಂಡು ಅಲ್ಲಿ ಬೇರುಬಿಡುತ್ತಿವೆ. ಅಲ್ಲೆಲ್ಲಾ ಮಕ್ಕಳನ್ನು ಇಂಟಿಗ್ರೇಟೆಡ್ ಕೋಚಿಂಗ್ ದಾಖಲಿಸುವುದು ಈಗ ಪ್ರತಿಷ್ಟೆ ಪ್ರಶ್ನೆಯಾಗಿದೆ.

ಒತ್ತಡ ಒಳ್ಳೆಯದಲ್ಲ...

ಭಾರತಿಸಿಂಗ್
ಭಾರತಿಸಿಂಗ್

ಬಿಡುವಿಲ್ಲದೆ ಓದುವ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಮುಗಿಯುವಷ್ಟರಲ್ಲಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಾವು ನೀರೀಕ್ಷಿಸಿದ್ದಕ್ಕಿಂತ ಒಂದು ಅಂಕ ಕಡಿಮೆ ಬಂದರೂ ತಡೆದುಕೊಳ್ಳುವ ಮನಃಸ್ಥಿತಿ ಅವರಲ್ಲಿ ಉಳಿದಿರುವುದಿಲ್ಲ. ಇದು ಆತ್ಮಹತ್ಯೆಯಂತಹ ಅತಿರೇಕದ ಮಟ್ಟ ತಲುಪಿದರೂ ಆಶ್ಚರ್ಯವಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಲೇಜುಗಳಲ್ಲಿ ಇಂಟಿಗ್ರೇಟೆಡ್ ಕೋಚಿಂಗ್ ವ್ಯಾಪಾರ ವಾಗಿದೆ. ಕಾಲೇಜುಗಳ ಜತೆ ಸೇರಿ ಅತ್ಯುತ್ತಮ ಅಂಕ ಗಳಿಸಲು ಪೋಷಕರು ನೀಡುವ ಒತ್ತಡದಿಂದ ಮಕ್ಕಳು ಮಾನಸಿಕವಾಗಿ

ನಲುಗುತ್ತಿದ್ದಾರೆ. ಇನ್ನು ಇಂಟಿಗ್ರೇಟೆಡ್ ಕೋರ್ಸ್ ಹೆಸರಿನಲ್ಲಿ ಪೀಕುತ್ತಿರುವ ಶುಲ್ಕ ವರ್ಷಕ್ಕೆ ಮೂರು ಲಕ್ಷಕ್ಕೂ ಅಧಿಕ. ಈ ವರ್ಷ ನಾನು ಸ್ವತಃ 35 ಕ್ಕೂ ಹೆಚ್ಚು ಓದಿನ ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದ ಮಕ್ಕಳು ಮತ್ತು ಪೋಷಕರಿಗೆ ಆಪ್ತ ಸಮಾಲೋಚನೆ ನಡೆಸಿದ್ದೇನೆ. ಇಂಟಿಗ್ರೇಟೆಡ್ ವ್ಯವಸ್ಥೆ ಎಷ್ಟು ಅಪಾಯಕಾರಿ ಎಂದರೆ, ಇಂಟಿಗ್ರೇಟೆಡ್ ನಲ್ಲಿ ಬಯಾಸ್‌ಗೆ ಒಳಗಾದ ಇಬ್ಬರು ಮಕ್ಕಳು ಪರೀಕ್ಷೆ ಬರೆಯಲು ಆತ್ಮ ವಿಶ್ವಾಸ ಕಳೆದುಕೊಂಡು ಪರೀಕ್ಷೆಯಿಂದ ಹೊರಗುಳಿದು. ಒಬ್ಬ ವಿದ್ಯಾರ್ಥಿನಿ ಹೆಚ್ಚಾದ ಒತ್ತಡದಿಂದ ಆತ್ಮಹತ್ಯೆಗೆ ಮುಂದಾದ ನಿದರ್ಶನವೂ ಇದೆ.

– ಡಾ ಭಾರತಿಸಿಂಗ್, ಆಪ್ತ ಸಮಾಲೋಚಕರು, ಸಾಮುದ್ರಾ ಫೌಂಡೇಷನ್.

ವಿದ್ಯಾರ್ಥಿಗಳಿಗೆ ನರಕ ದರ್ಶನ ....

ಇಂಟಿಗ್ರೇಟೆಡ್ ಕೋಚಿಂಗ್ ಗೆ ದಾಖಲಾಗುವ ವಿದ್ಯಾರ್ಥಿಗಳ ಜೀವನ ಮುಂದಿನ ಎರಡು ವರ್ಷಗಳ ಕಾಲ ಅಕ್ಷರಶಃ ನರಕ. ಬೆಳಿಗ್ಗೆ 5.30ಕ್ಕೆ ಶುರು ಆಗೋ ತರಗತಿಗಳು ಸತತವಾಗಿ 8.30ರ ತನಕ ನಡೆಯುತ್ತವೆ. ಅಲ್ಲಿಂದ ರೆಗ್ಯುಲರ್ ಪಿಯುಸಿ ಕ್ಲಾಸ್‌ಗೆ ಓಡಬೇಕು. ಸಂಜೆ 5.30ಕ್ಕೆ ಪಿಯುಸಿ ತರಗತಿ ಮುಗಿಸಿದರೆ, ಮತ್ತೆ 6 ರಿಂದ 9ರ ತನಕ ಇಂಟಿಗ್ರೇಟೆಡ್ ಕೋಚಿಂಗ್...! ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಬೆಳಿಗ್ಗೆ 5.30ರ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಕನಿಷ್ಟ 4 ಗಂಟೆಗೆ ಹಾಸಿಗೆ ಬಿಟ್ಟೇಳಬೇಕು. ಇನ್ನು ಸಂಜೆ 8.30 ರಿಂದ 9ಕ್ಕೆ ಕಾಲೇಜು ಬಿಡೋ ವಿದ್ಯಾರ್ಥಿಗಳು ಮನೆ ತಲುಪುವಾಗ ರಾತ್ರಿ 10 ಆಗಿರುತ್ತದೆ. ಇದು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸಿದ್ದು, ಎರಡು ವರ್ಷಗಳ ಕಾಲ ನೈಜ ಪ್ರಪಂಚದಿಂದ ದೂರ ಉಳಿಸಿಬಿಡುತ್ತದೆ, ಒಂದೆಡೆ ಪೋಷಕರ ಒತ್ತಡ, ಇನ್ನೊಂದೆಡೆ ಕಾಲೇಜುಗಳ ಪ್ರತಿಷ್ಠೆಯ ಪ್ರಶ್ನೆ, ಮತ್ತೊಂದೆಡೆ ಕಾಂಪಿಟೇಷನ್, ಈ ಎಲ್ಲದರಿಂದ, ಸರಿಯಾಗಿ ಊಟ, ನಿದ್ದೆಯೂ ಇಲ್ಲದೆ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ನಲುಗುತ್ತಾರೆ.

ಇಂಟಿಗ್ರೇಟೆಡ್ ಕೋಚಿಂಗ್ ಹೆಸರಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡದಲ್ಲಿ ಸಂಸ್ಥೆಗಳಷ್ಟೇ ಪಾಲು ಪೋಷಕರದ್ದೂ ಇದೆ. ಬಹುತೇಕ ಮಂದಿ ಪೋಷಕರು, ತಮ್ಮ ಮಕ್ಕಳಿನ್ನೂ ಹತ್ತನೆ ತರಗತಿಯಲ್ಲಿ ಇರುವಾಗಲೇ, ಪಿಯುಸಿ ಪ್ರವೇಶ ಬಯಸಿ ಕಾಲೇಜುಗಳಿಗೆ ಎಡತಾಕುತ್ತಾರೆ. ಯಾವ ಕಾಲೇಜಿನಲ್ಲಿ ಇಂಟಿಗ್ರೇಟೆಡ್ ಕೋಚಿಂಗ್ ಲಭ್ಯವಿದೆಯೋ ಅಲ್ಲಿಯೇ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುತ್ತಾರೆ. ಹತ್ತನೇ ತರಗತಿ ಫಲಿತಾಂಶ ಹೊರಬೀಳುವ ವೇಳೆಗೆ, ಈ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯ ಅರ್ಧ ಅಧ್ಯಯನ ಮುಗಿಸಿರುತ್ತಾರೆ.

ಇಲಾಖಾ ನೇಮಕಗಳಿಗೆ ಸೀಮಿತ...?

ಬಡ ಮತ್ತು ಮೆರಿಟ್ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣ ಕೈಗೆಟುಕಬೇಕೆಂಬ ಉದ್ದೇಶದಿಂದ ಆರಂಭವಾದ ಸಿಇಟಿ ವ್ಯವಸ್ಥೆ ಇನ್ನು ಕೆಲವೇ ವರ್ಷಗಳಲ್ಲಿ ಮತ್ತೊಂದು ಲೋಕಸೇವಾ ಆಯೋಗದಂತೆ (ಕೆಪಿಎಸ್‍ಸಿ) ಬದಲಾದರೆ ಆಶ್ಚರ್ಯ ಪಡಬೇಕಿಲ್ಲ. ನೀಟ್ ಜಾರಿ ನಂತರ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗಳಿಗೆ ಸಿಇಟಿ ರದ್ದಾಗಿದೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೂ ನೀಟ್ ಮಾದರಿಯ ಏಕರೂಪ ಪ್ರವೇಶ ಪರೀಕ್ಷೆ ಬೇಡಿಕೆ ಇರುವುದರಿಂದ ಮುಂದೊಂದು ದಿನ ಎಂಜಿನಿಯರಿಂಗ್ ಕೂಡಾ ಹೊರಗುಳಿದರೆ ಅಚ್ಚರಿಯಿಲ್ಲ. ಆಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೇವಲ ಇಲಾಖಾ ಮಟ್ಟದ ನೇಮಕಾತಿ ಪರೀಕ್ಷೆಗಳಿಗೆ ಸೀಮಿತವಾಗೋ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಓದುಗರುಪ್ರತಿಕ್ರಿಯಿಸಲುವಾಟ್ಸಪ್‌ ಸಂಖ್ಯೆ9513322930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT