ಬುಧವಾರ, ಜನವರಿ 19, 2022
27 °C

ಒಳನೋಟ: ಮಲ್ಟಿಪ್ಲೆಕ್ಸ್‌, ಕುಟುಂಬ ಪ್ರೇಕ್ಷಕರ ಹರಿವು ಹೆಚ್ಚಳ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

DH Photo

ಹುಬ್ಬಳ್ಳಿ: ಏಕ ಪರದೆಯ ಚಿತ್ರಮಂದಿರಗಳಲ್ಲಷ್ಟೇ ತೆರೆಕಾಣುತ್ತಿದ್ದ ಸಿನಿಮಾ ಉದ್ಯಮಕ್ಕೆ ಹೊಸ ಆಯಾಮ ನೀಡಿದ್ದು ಮಲ್ಟಿಪ್ಲೆಕ್ಸ್‌ಗಳು. ವಿವಿಧ ಭಾಷೆಯ ಸಿನಿಮಾಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳಲು ವೇದಿಕೆ ಒದಗಿಸಿರುವ ಇವು, ‘ಮಾಸ್’ ಪ್ರೇಕ್ಷಕರನ್ನು ಸೆಳೆಯುುವಲ್ಲೂ ಯಶಸ್ವಿಯಾಗಿವೆ.

ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಸೇರಿ ವಿವಿಧೆಡೆ ಪಿವಿಆರ್, ಸಿನಿಪೊಲಿಸ್, ಐನಾಕ್ಸ್, ಬಿಗ್ ಸಿನಿಮಾಸ್, ಐಮ್ಯಾಕ್ಸ್, ಮೀರಜ್ ಸಿನಿಮಾಸ್, ಡಿಆರ್‌ಸಿ ಮಲ್ಟಿಪ‍್ಲೆಕ್ಸ್‌ಗಳಿವೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಇವುಗಳ ವಹಿವಾಟು ಮಂದಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕುಟುಂಬ ಪ್ರೇಕ್ಷಕರ ಹರಿವು ಹೆಚ್ಚಾಗಿರುವುದು ಆಶಾದಾಯಕವೆನಿಸಿದೆ. ಕೋವಿಡ್–19 ನಿಯಮಗಳ ಕಟ್ಟುನಿಟ್ಟಿನ ಪಾಲನೆ ಇದಕ್ಕೆ ಕಾರಣ.

ಪ್ರಮಾಣಪತ್ರ, ಮಾಸ್ಕ್ ಕಡ್ಡಾಯ: ‘ಪೂರ್ಣಪ್ರಮಾಣದ ಸೀಟುಗಳೊಂದಿಗೆ ಸಿನಿಮಾ ಪ್ರದರ್ಶನ ಆರಂಭಗೊಂಡರೂ, ಕೋವಿಡ್–19 ನಿಯಮಗಳನ್ನು ಸಡಿಲಿಸಿಲ್ಲ. ಟಿಕೆಟ್ ಪಡೆಯಲು ಕೋವಿಡ್ ಲಸಿಕೆಯ ಪ್ರಮಾಣಪತ್ರ ತೋರಿಸಬೇಕು. ಚೀಟಿ ರೂಪದ ಟಿಕೆಟ್ ಬದಲಿಗೆ, ಪ್ರೇಕ್ಷಕರ ಮೊಬೈಲ್ ಸಂಖ್ಯೆಗೆ ಸೀಟು ನಂಬರ್ ಒಳಗೊಂಡ ಸಂದೇಶ ಬರುತ್ತದೆ’ ಎಂದು ಹುಬ್ಬಳ್ಳಿಯ ಪಿವಿಆರ್‌ ಮ್ಯಾನೇಜರ್ ರಾಜು ಅವರು  ಮಲ್ಟಿಪ್ಲೆಕ್ಸ್‌ನಲ್ಲಿ ಕೈಗೊಂಡಿರುವ ಸುರಕ್ಷಾ ಕ್ರಮಗಳನ್ನು ತಿಳಿಸಿದರು.

‘ಸುರಕ್ಷತೆಗೆ ಆದ್ಯತೆ ನೀಡುವ ಮಲ್ಟಿಪ್ಲೆಕ್ಸ್‌ಗಳಿಗೆ ಜನ ಬರುತ್ತಿದ್ದಾರೆ. ‘ಕೋಟಿಗೊಬ್ಬ–3’, ‘ಭಜರಂಗಿ–2’, ತಮಿಳಿನ ‘ಅಣ್ಣಾತ್ತೆ’, ಹಿಂದಿಯ ‘ಸೂರ್ಯವಂಶಿ’ ಸಿನಿಮಾಗಳಿಗೆ ಕುಟುಂಬ ಪ್ರೇಕ್ಷಕರ ಹರಿವು ಹೆಚ್ಚಾಗಿದೆ’ ಎಂದರು.

ಅವರ ಮಾತಿಗೆ ಮಂಗಳೂರಿನ ಸಿನಿಪೊಲಿಸ್‌ನ ಕೆ. ಶೆಟ್ಟಿ ಹಾಗೂ ಕಲಬುರಗಿಯ ಮೀರಜ್ ಸಿನಿಮಾಸ್‌ ವ್ಯವಸ್ಥಾಪಕ ಅಮಿತ್ ಸಹಮತ ವ್ಯಕ್ತಪಡಿಸಿದರು.

ನಷ್ಟ ಭರ್ತಿಗೆ ತಿಂಗಳುಗಳೇ ಬೇಕು: ‘ಕೋವಿಡ್‌ನಿಂದಾಗಿ ಮಲ್ಟಿಪ್ಲೆಕ್ಸ್‌ಗಳಿಗೆ ಅಂದಾಜು ₹5 ಸಾವಿರ ಕೋಟಿ ನಷ್ಟವಾಗಿದೆ. ಇದನ್ನು ಭರಿಸಿಕೊಳ್ಳಲು ತಿಂಗಳುಗಳೇ ಬೇಕು. ಜನರನ್ನು ಮಲ್ಟಿಪ್ಲೆಕ್ಸ್‌ಗಳತ್ತ ಕರೆತರುವ ಉತ್ತಮ ಸಿನಿಮಾಗಳು ತೆರೆ ಕಾಣಬೇಕು’ ಎಂದು ಅಭಿಪ್ರಾಯಪಟ್ಟ ಐನಾಕ್ಸ್ ಲೀಸರ್ ಲಿಮಿಟೆಡ್‌ನ ಪ್ರಾದೇಶಿಕ (ದಕ್ಷಿಣ) ನಿರ್ದೇಶಕ ಮೋಹಿತ್ ಭಾರ್ಗವ, ‘ನಷ್ಟವಾಗಿದ್ದರೂ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದರು.

ಸಿನಿಮಾ ಆಧರಿಸಿ ಸ್ಲಾಟ್: ‘ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗೆ ಸಿಗುವ ಪ್ರತಿಕ್ರಿಯೆ ಆಧರಿಸಿ, ಪ್ರದರ್ಶನ ಸಮಯದಲ್ಲಿ ವ್ಯತ್ಯಾಸವಾಗುತ್ತದೆ. ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ನ ಸ್ಟಾರ್ ನಟರ ಸಿನಿಮಾ, ಪ್ಯಾನ್ ಇಂಡಿಯಾ ಚಿತ್ರಗಳು ಹಾಗೂ ಉತ್ತಮ ಕಥೆಯ ಸಿನಿಮಾಗಳನ್ನು ಆಧರಿಸಿಯೂ ಸ್ಲಾಟ್ ನಿರ್ಧರಿಸಲಾಗುತ್ತವೆ’ ಎಂದು ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್ ಮಾಲೀಕರಾದ ವೈಶಾಲಿ ಪದಕಿ, ಪ್ರದರ್ಶನ ಸಮಯದ ಸಮೀಕರಣವನ್ನು ಬಿಚ್ಚಿಟ್ಟರು.

ಅಂಕಿ ಅಂಶ...

270: ಕರ್ನಾಟಕದಲ್ಲಿರುವ ಮಲ್ಟಿಪ್ಲೆಕ್ಸ್‌ಗಳ ಒಟ್ಟು ಪರದೆಗಳು

200: ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್ ಪರದೆಗಳು

4 ಲಕ್ಷ: ಮಲ್ಟಿಪ್ಲೆಕ್ಸ್‌ಗಳಲ್ಲಿರುವ ಸೀಟುಗಳ ಸಂಖ್ಯೆ

12 ಲಕ್ಷ: ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಸೇರಿದಂತೆ ಕನ್ನಡ ಚಿತ್ರೋದ್ಯಮ ಅವಲಂಬಿಸಿರುವವರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು