ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಶೇ 40 ಕಮಿಷನ್‌ ಆರೋಪ, ಶಿಕ್ಷಣ ವ್ಯವಸ್ಥೆಯಲ್ಲೂ ಲಂಚವೇ ‘ಭೂಷಣ’!

ಪ್ರಧಾನಿ ಕಚೇರಿಗೆ ದೂರು ಕೊಟ್ಟ ‘ರುಪ್ಸಾ’
Last Updated 3 ಸೆಪ್ಟೆಂಬರ್ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚದ ಆರೋಪ ಸರ್ಕಾರವನ್ನು ಮುಜುಗರಕ್ಕೆ ದೂಡಿರುವ ಮಧ್ಯೆಯೇ, ದೇಶಕ್ಕೆ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯಲ್ಲೂ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರುಗಳೀಗ ಮುನ್ನೆಲೆಗೆ ಬಂದಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಲಂಚದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇರುವ ಬಗ್ಗೆ ರಾಜ್ಯ ಸರ್ಕಾರದ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಕೊಟ್ಟು ಬಸವಳಿದಿದ್ದ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ‌ವು (ರುಪ್ಸಾ) ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಈ ಬಗ್ಗೆ ಪತ್ರ ಬರೆದು ಅಳಲು ತೋಡಿಕೊಂಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು ಈ ಆರೋಪವನ್ನು ಸ್ಪಷ್ಟ ಮಾತುಗಳಿಂದ ಅಲ್ಲಗಳೆದಿದ್ದಾರೆ. ಅಲ್ಲದೇ, ರುಪ್ಸಾ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕಾಮಗಾರಿ ನಡೆಸುವ ಇಲಾಖೆಗಳಲ್ಲಿ ಹಾಸು ಹೊಕ್ಕಾಗಿದ್ದ ಭ್ರಷ್ಟಾಚಾರದ ಕರಾಳಮುಖ, ಶಿಕ್ಷಣಕ್ಕೂ ತನ್ನ ಕೆನ್ನಾಲಿಗೆ ಚಾಚಿರುವುದು ನಾಡಿನ ಭವಿಷ್ಯವನ್ನೆ ಅಂಧಕಾರಕ್ಕೆ ತಳ್ಳಲಿದೆ ಎಂಬ ಆತಂಕವನ್ನು ಶೈಕ್ಷಣಿಕ ವಲಯದಲ್ಲಿ ಮೂಡಿಸಿದೆ.

ಇಲಾಖೆಯ ಅಧಿಕಾರಿಗಳು ಯಾವುದಕ್ಕೆ ಎಷ್ಟೆಲ್ಲ ಲಂಚ ಪಡೆಯುತ್ತಾರೆ ಎನ್ನುವುದನ್ನು ರುಪ್ಸಾ ಪ್ರಧಾನಮಂತ್ರಿಗೆ ಬರೆದ ಪತ್ರ ದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕೋವಿ ಡೋತ್ತರ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ನಿರ್ವಹಿಸುವ ಅಧಿಕಾರಿಗಳ ಭ್ರಷ್ಟಾಚಾರ ದುಪ್ಪಟ್ಟಾಗಿದೆ.

‘ಮೂಲ ಸೌಕರ್ಯ ಇಲ್ಲದ್ದಿದ್ದರೂ, ಹಣ ಪಡೆದು ಈ ಹಿಂದೆಯೇ ಖಾಸಗಿ ಶಾಲೆಗಳ ಆರಂಭಕ್ಕೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗ ಕಟ್ಟಡ ಸುರಕ್ಷತೆ, ಅಗ್ನಿ ಅವಘಡಗಳ ಸುರಕ್ಷತೆಯ ಖಾತರಿ ನಿಯಮಗಳ ಪಾಲನೆ ಹೆಸರಿನಲ್ಲಿ ಅಡ್ಡ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ರುಪ್ಸಾ ಆರೋಪಿಸಿದೆ.

ಖಾಸಗಿ ಶಾಲೆಗಳಿಂದ ಎತ್ತುವಳಿ ಮಾಡುವ ಬಿಇಒ, ಡಿಡಿಪಿಐ ಮತ್ತಿತರ ಅಧಿಕಾರಿಗಳು ತಮಗೆ ಬೇಕಾದ ಜಿಲ್ಲೆ, ತಾಲ್ಲೂಕು, ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ, ಕೆಲವು ಜನಪ್ರತಿನಿಧಿಗಳಿಗೆ ದೊಡ್ಡಮೊತ್ತವನ್ನೇ ಪಾವತಿಸುತ್ತಾರೆ. ಒಂದು ಸ್ಥಳದಲ್ಲಿನ ಗರಿಷ್ಠ ಸೇವಾವಧಿ ಮೊದಲು ಎರಡು ವರ್ಷ ಇತ್ತು. ಆ ನಿಯಮ ಮುರಿದ ಹಿಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅದನ್ನು ಒಂದು ವರ್ಷಕ್ಕೆ ಇಳಿಸಿದರು. ವರ್ಷಕ್ಕೊಮ್ಮೆ ವರ್ಗಾವಣೆ ನಡೆಯತೊಡಗಿದ್ದರಿಂದಾಗಿ, ಆಯಕಟ್ಟಿನ ಹುದ್ದೆ ಬೇಕಾದ ಅಧಿಕಾರಿಗಳು ವರ್ಗಾವಣೆಗೆ ಖರ್ಚು ಮಾಡಲು ತಾವು ಪಡೆಯುವ ಲಂಚದ ಮೊತ್ತವನ್ನು ಹೆಚ್ಚಿಸಿದರು ಎಂದು ಹೆಸರು ಹೇಳಬಯಸದ ಶಿಕ್ಷಣಾಧಿಕಾರಿಗಳು ತಮ್ಮ ಅಂತರಂಗದ ಮಾತುಗಳನ್ನು ಬಿಚ್ಚಿಡುತ್ತಾರೆ.

ಸರ್ಕಾರಿ ಶಾಲಾ ಶಿಕ್ಷಕರು ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಕೆಲಸ ಮಾಡಿಕೊಡಲು ಇಂತಿಷ್ಟು ಲಂಚ ಕೊಡಲೇಬೇಕು. ನಿವೃತ್ತಿ ಬಳಿಕ ಬರಬೇಕಾದ ನಿವೃತ್ತಿ ಪರಿಹಾರ, ಪಿಂಚಣಿ, ನಿವೃತ್ತಿ ವೇತನ ಪಡೆಯಲು ಹಣ ನೀಡದೇ ಇದ್ದರೆ ವರ್ಷ ಕಳೆದರೂ ಕಡತ ಮುಂದಕ್ಕೆ ಹೋಗುವುದೇ ಇಲ್ಲ. ಯಾವುದೇ ರೀತಿಯ ಲಂಚ ಇಲ್ಲದ ಶಿಕ್ಷಕ ವೃತ್ತಿ ನಡೆಸುವವರು ಇಳಿಗಾಲದಲ್ಲಿ ದೊಡ್ಡ ಮೊತ್ತದ ಲಂಚ ಎಲ್ಲಿಂದ ತರುವುದು ಎಂದು ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ಪ್ರಶ್ನಿಸುತ್ತಾರೆ.

ನವೀಕರಣವೆಂಬ ದುಡ್ಡಿನ ಚೀಲ: 2004ರಲ್ಲಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸರ್ಕಾರ ಆದೇಶ ಹೊರಡಿಸಿದರೂ, 2014ರವರೆಗೆ ಕಡ್ಡಾಯ ಗೊಳಿಸಿರಲಿಲ್ಲ. 2014ರಿಂದ ಮತ್ತೆ ಮಾನ್ಯತೆ ನವೀಕರಣ ಚಟುವಟಿಕೆ ಆರಂಭವಾದರೂ, ಅದನ್ನು 10 ವರ್ಷಗಳಿಗೆ ಒಮ್ಮೆ ಎಂದು ನಿಗದಿ ಮಾಡಲಾಯಿತು.

‘ಇಷ್ಟು ವರ್ಷಗಳು ಶಾಲೆಗಳ ಮಾನ್ಯತೆ ನವೀಕರಣದ ಸಮಸ್ಯೆ ಇರಲಿಲ್ಲ. 2020ರಲ್ಲಿ ಅಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಪ್ರತಿ ವರ್ಷ ನವೀಕರಣಕ್ಕೆ ಆದೇಶ ಮಾಡಿದರು. ಅರ್ಜಿ ಸಲ್ಲಿಸಿದ ಶಾಲೆಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) ₹ 20 ಸಾವಿರ, ಉಪ ನಿರ್ದೇಶಕರಿಗೆ (ಡಿಡಿಪಿಐ) ₹ 20 ಸಾವಿರ ಕೊಡುವಂತಾಯಿತು. ಹಿಂದೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ ಒಂದೆರಡು ಸಾವಿರ ರೂಪಾಯಿ ಕೊಟ್ಟರೂ ಸಾಕಿತ್ತು. 10 ವರ್ಷಕ್ಕೆ ಒಮ್ಮೆ ನವೀಕರಣ ಮಾಡುತ್ತೇವೆ ಎಂದು ಕೋರ್ಟ್‌ ಮುಂದೆ ಅಫಿಡವಿಟ್‌ ಸಲ್ಲಿಸಿದ ಅಧಿಕಾರಿಗಳು ಮತ್ತೆ ಹೊಸ ನೀತಿಗೆ ಅಂಟಿಕೊಂಡರು. ಇದರಿಂದ 8 ಸಾವಿರ ಶಾಲೆಗಳ ಮಾನ್ಯತೆ ನವೀಕರಣ ಸಾಧ್ಯವಾಗಿಲ್ಲ’ ಎಂದುರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ವಿವರಿಸುತ್ತಾರೆ.

‘ನವೀಕರಣ ಪ್ರಮಾಣಪತ್ರ ಇಲ್ಲದಿದ್ದರೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ನೀಡುವುದಿಲ್ಲ. ಮಾಮೂಲಿ ವಸೂಲಿಗಾಗಿ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅನಗತ್ಯ ದಾಖಲೆಗಳ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಒಟ್ಟು ₹ 1.25 ಲಕ್ಷ ಖರ್ಚಾಗುತ್ತಿದೆ. ಶಾಲೆಯ ಮಾನ್ಯತೆ ನವೀಕರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಗೆ ಲಂಚ ಕೇಳಿರುವ ಆಡಿಯೊ ಸಂಭಾಷಣೆಯ ಸಿ.ಡಿ, ವಾಟ್ಸ್‌ಆ್ಯಪ್‌ ಚರ್ಚೆಯ ದಾಖಲೆಗಳೂ ನಮ್ಮ ಬಳಿ ಇವೆ’ ಎಂದು ಅವರು ಹೇಳುತ್ತಾರೆ.

‘ರಾಜ್ಯದ ಇಬ್ಬರು ಬಿಇಒಗಳ ವಿರುದ್ಧ ದಾಖಲೆಗಳ ಸಮೇತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದೆವು. ದೂರು ನೀಡಿದ ಕಾರಣಕ್ಕಾಗಿ 3–4 ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡಿದ ಸಂಸ್ಥೆಗಳ ಮೇಲೆಯೇ ದಾಳಿ ನಡೆಸಿ, ಬಾಗಿಲು ಮುಚ್ಚಿಸಿದರು. ಕೊನೆಗೆ ಕೋರ್ಟ್‌ ಮೆಟ್ಟಿಲು ಹತ್ತಿದೆವು. ₹ 1 ಕೋಟಿ ದಂಡ ಕಟ್ಟಲು ಬಿಇಒಗೆ ಕೋರ್ಟ್‌ ತೀರ್ಪು ನೀಡಿತು. ₹ 65 ಲಕ್ಷ ಕಟ್ಟಿದ್ದಾರೆ. ಆದರೂ, ಸರ್ಕಾರ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ತಾಳಿಕಟ್ಟೆ ಹೇಳುತ್ತಾರೆ.

ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಸದೃಢತೆಯ ಪ್ರಮಾಣಪತ್ರ, ಅಗ್ನಿ ಶಾಮಕ ಸೇವಾ ಘಟಕದಿಂದ ಶಾಲೆಯಲ್ಲಿ ಅಳವಡಿಸಿದ ಅಗ್ನಿ ದುರಂತ ಸೌಲಭ್ಯಗಳ ಖಾತ್ರಿಯ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಅಗ್ನಿಶಾಮಕ ಸುರಕ್ಷತೆ, ಕಟ್ಟಡ ಗುಣಮಟ್ಟ ಖಾತ್ರಿ ಪ್ರಮಾಣಪತ್ರಕ್ಕೆ ತಲಾ ₹ 2.50 ಲಕ್ಷದಿಂದ ₹ 3 ಲಕ್ಷ ನೀಡಬೇಕಿದೆ ಎನ್ನುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಆರೋಪ.

ಸಮೃದ್ಧ ಹುಲ್ಲುಗಾವಲು ಆರ್‌ಟಿಇ:2012ರಲ್ಲಿ (ಕಡ್ಡಾಯ ಶಿಕ್ಷಣ ಹಕ್ಕು) ಆರ್‌ಟಿಇ ಜಾರಿ ಮಾಡಿದಾಗ, ಪ್ರತಿ ವರ್ಷ 1.20 ಲಕ್ಷ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಸರ್ಕಾರ ಇದಕ್ಕಾಗಿ ₹ 900 ಕೋಟಿಗೂ ಹೆಚ್ಚು ಬಿಡುಗಡೆ ಮಾಡುತ್ತಿತ್ತು. 2018–19ರಲ್ಲಿ ಆರ್‌ಟಿಇ ಒಳಗೊಳ್ಳುವ ಪ್ರವೇಶದ ವ್ಯಾಪ್ತಿ ಮರು ವ್ಯಾಖ್ಯಾನ ಮಾಡಿದ ನಂತರ 7 ಸಾವಿರ ಮಕ್ಕಳು ಮಾತ್ರ ಆರ್‌ಟಿಇ ಸೌಲಭ್ಯ ಪಡೆಯುತ್ತಿದ್ದಾರೆ.

‘ಪೂರ್ವ ಪ್ರಾಥಮಿಕ ಮಗುವಿಗೆ ₹ 8 ಸಾವಿರ, 1ರಿಂದ 8ನೇ ತರಗತಿವರೆಗಿನ ಮಗುವಿಗೆ ₹ 16 ಸಾವಿರದಂತೆ ಸರ್ಕಾರ ಹಣ ನೀಡುತ್ತಿದೆ. ಎರಡು ವರ್ಷಗಳಿಂದ ಬರಬೇಕಾದ ಬಾಕಿಯೇ ₹ 300 ಕೋಟಿಗೂ ಅಧಿಕವಿದೆ. ಈ ಹಣ ಪಡೆಯಲೂ ಶೇ 40ರಷ್ಟು ಲಂಚ ನೀಡಬೇಕಿದೆ. ಒಂದು ಶಾಲೆಯ ಆರ್‌ಟಿಇ ಬಾಕಿ ₹ 2 ಲಕ್ಷ ಇದ್ದರೆ, ಅವರು ಬಿಇಒಗೆ ₹ 40 ಸಾವಿರ, ಡಿಡಿಪಿಐಗೆ ₹ 40 ಸಾವಿರ ಲಂಚ ನೀಡಬೇಕಿದೆ. ಲಂಚ ನೀಡಲು ಬಯಸದ ಹಲವು ಶಾಲೆಗಳು ಆರ್‌ಟಿಇ ಹಣಕ್ಕಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ’ ಎಂದು ನೇರ ಆರೋಪ ಮಾಡುತ್ತಾರೆ ಕೆಲವು ಶಾಲೆಗಳ ಆಡಳಿತ ಮಂಡಳಿಗಳು.

ಹೊಸ ಶಾಲೆಗಳಿಗೆ ತ್ರಿಸದಸ್ಯ ಸಮಿತಿ: ರಾಜ್ಯದಲ್ಲಿ ಹೊಸ ಶಾಲೆಗಳನ್ನು ಆರಂಭಿಸಲು ಅರ್ಜಿ ಸಲ್ಲಿಸುವ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಶಿಕ್ಷಣ ಇಲಾಖೆ ತ್ರಿಸದಸ್ಯ ಸಮಿತಿ ನೇಮಿಸಿದೆ.

ಆಯಾ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಒಬ್ಬ ಅಧಿಕಾರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಹಿರಿಯ ಮುಖ್ಯ ಶಿಕ್ಷಕರೊಬ್ಬರು ಸಮಿತಿಯಲ್ಲಿರುತ್ತಾರೆ. ಸಮಿತಿಯ ಸದಸ್ಯರ ಮನೋಸ್ಥಿತಿಯ ಆಧಾರದಲ್ಲಿ ಭ್ರಷ್ಟಾಚಾರ ಅಥವಾ ಭ್ರಷ್ಟಾಚಾರರಹಿತವಾಗಿ ಅನುಮತಿ ಪಡೆಯುವ ಪ್ರಕ್ರಿಯೆಗಳು ನಡೆಯುತ್ತವೆ. ನಂತರ ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಮಾಮೂಲಿ ಕೊಡಲೇಬೇಕಾಗುತ್ತದೆ ಎನ್ನುತ್ತಾರೆ ಈಚೆಗಷ್ಟೆ ಹೊಸ ಶಾಲೆ ಆರಂಭಕ್ಕೆ ಅನುಮತಿ ಪಡೆದಿರುವ ಓರ್ವ ವ್ಯಕ್ತಿ.

ಎನ್‌ಒಸಿಗೂ ಭಾರಿ ಲಂಚ
ಬಹುತೇಕ ಆಡಳಿತ ಮಂಡಳಿಗಳುರಾಜ್ಯ ಪಠ್ಯಕ್ರಮ ತೊರೆದು ಸಿಬಿಎಸ್‌ಇ, ಐಸಿಎಸ್‌ಇ ಮತ್ತಿತರ ಕೇಂದ್ರೀಯ ಪಠ್ಯಕ್ರಮ ಅನುಸರಿಸುತ್ತಿವೆ. ಈ ಬೋರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಹೀಗೆ ನಿರಾಕ್ಷೇಪಣಾ ಪತ್ರ ಪಡೆಯಲೂ ಹಲವು ಹಂತಗಳಲ್ಲಿ ಹಣ ಸಂದಾಯ ಮಾಡಬೇಕು ಎನ್ನುವುದು ರುಪ್ಸಾ ಆರೋಪ.

ಮೊದಲು ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅಲ್ಲಿನ ಉಪ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮೇಜುದಾಟಿ, ಸಚಿವರಿಗೆ ತಲುಪುತ್ತದೆ. ನಂತರಆಯುಕ್ತರ ಕಚೇರಿ ಸುತ್ತಿ ಡಿಡಿಪಿಐ, ಬಿಇಒ ಅತ್ತ ಸಾಗುತ್ತದೆ. ನಂತರ ಮತ್ತೆ ಮೇಲ್ಮುಖವಾಗಿ ಬಂದು ಎರಡು ಸುತ್ತು ಸಚಿವಾಲಯ ಸುತ್ತಿ ನಿರಾಕ್ಷೇಪಣಾ ಪತ್ರ ಸಿದ್ಧವಾಗುತ್ತದೆ. ಪ್ರತಿ ಹಂತದಲ್ಲೂ ಅಧಿಕಾರಿಗಳ ಸ್ಥಾನಮಾನದ ಆಧಾರದಲ್ಲಿ ₹ 2 ಲಕ್ಷದಿಂದ ₹ 5 ಲಕ್ಷದವರೆಗೂ ಹಣ ಸಂದಾಯ ಮಾಡಬೇಕಿದೆ. ಒಟ್ಟು ಖರ್ಚು ₹ 15 ಲಕ್ಷದಷ್ಟಾಗುತ್ತದೆ ಎಂದು ಎನ್‌ಒಸಿ ಪಡೆಯುವಲ್ಲಿನ ಲಂಚಾವತಾರವನ್ನು ಹಲವು ಶಾಲೆಗಳು ತೋಡಿಕೊಂಡಿವೆ.

*
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ‘ರುಪ್ಸಾ’ ಆರೋಪ ಆಧಾರರಹಿತ. ಈ ಕುರಿತು ಇಲಾಖೆಯ ಅಧಿಕಾರಿಗಳು ಶೀಘ್ರ ಮಾಹಿತಿ ನೀಡುವರು
-.ಸಿ.ನಾಗೇಶ್‌, ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ

*
ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಖಲೆ ಸಹಿತ ದೂರು ನೀಡಿದರೂ, ಅವರಿಂದಲೇ ಮತ್ತಷ್ಟು ಲಾಭ ಮಾಡಿಕೊಳ್ಳುವ ವ್ಯವಸ್ಥೆ ಶಿಕ್ಷಣ ಇಲಾಖೆಯಲ್ಲಿ ಇದೆ.
-ಕೇಶ್‌ ತಾಳಿಕಟ್ಟೆ, ಅಧ್ಯಕ್ಷ, ರುಪ್ಸಾ

*
ರುಪ್ಸಾ ಮಾಡಿರುವ ಭ್ರಷ್ಟಾಚಾರದ ಆರೋಪದಲ್ಲಿ ಹುರುಳಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅಂತಹ ಅಧಿಕಾರಿಗಳು ಶೇ 2ರಷ್ಟೂ ಇಲ್ಲ. ಅವರನ್ನು ಸಂಘ ಎಂದೂ ಬೆಂಬಲಿಸುವುದಿಲ್ಲ.
-ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ

*
ಸಚಿವರ ನಡವಳಿಕೆ ಮೇಲೆ ವ್ಯವಸ್ಥೆಯ ಸ್ವರೂಪ ನಿರ್ಧಾರವಾಗುತ್ತದೆ. ನನ್ನ ಅವಧಿಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿದ್ದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ.
-ಕಿಮ್ಮನೆ ರತ್ನಾಕರ, ಮಾಜಿ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT