ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸೌಕರ್ಯ ವಂಚಿತ ಜಾನಪದ ವಿಶ್ವವಿದ್ಯಾಲಯ

Last Updated 25 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಹಾವೇರಿ:‘ಜಾನಪದ ವಿವಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಕಾಯಂ ಹುದ್ದೆಗಳಿಲ್ಲದಿರುವುದು. ಕಾಯಂ ಹುದ್ದೆಗಳಿದ್ದರೆ ಯುಜಿಸಿ ಅನುದಾನ, ಗುಣಮಟ್ಟದ ಶಿಕ್ಷಣ, ಪ್ರವೇಶಾತಿ ಹೆಚ್ಚಳ, ಸಂಶೋಧನೆಗೆ ಒತ್ತು, ಬೋಧಕರ ಗುಣಮಟ್ಟ ವೃದ್ಧಿ ಸೇರಿದಂತೆ ವಿವಿ ಸಮಗ್ರ ಅಭಿವೃದ್ಧಿಯಾಗುತ್ತಿತ್ತು’ ಎಂದು ಪ್ರಾಧ್ಯಾಪಕರೊಬ್ಬರು ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ. ಜಾ‍ನಪದ ವಿಶ್ವವಿದ್ಯಾಲಯದ ಸ್ಥಿತಿಗತಿಗಳನ್ನು ಈ ಮಾತು ಸ್ಪಷ್ಟಪಡಿಸುತ್ತದೆ.

ಅನುದಾನದ ತೀವ್ರ ಕೊರತೆಯಿಂದ ವಿವಿ ಮೂಲ ಸೌಕರ್ಯ ವಂಚಿತವಾಗಿದೆ. ಯುಜಿಸಿ ಮಾನ್ಯತೆ ದೊರಕದ ಕಾರಣ ಸರ್ಕಾರದ ಅನುದಾನವನ್ನು ಅವಲಂಬಿಸಿದೆ.

ಶೈಕ್ಷಣಿಕ ಭವನ, ಗ್ರಂಥಾಲಯದ ಕಟ್ಟಡ, ಜನರಲ್‌ ಹಾಸ್ಟೆಲ್‌, ಕ್ಯಾಂಟೀನ್‌, ಅತಿಥಿ ಗೃಹ, ಕಾಂಪೌಂಡ್‌, ಕುಲಪತಿ ವಸತಿಗೃಹ, ಬೋಧಕರ ವಸತಿಗೃಹ, ಬೋಧಕೇತರ ವಸತಿಗೃಹ ಹಾಗೂ ಬಸ್‌ ಸೌಲಭ್ಯದ ಕೊರತೆಗಳನ್ನು ವಿವಿ ಎದುರಿಸುತ್ತಿದೆ. ಕನಿಷ್ಠ ₹25 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತದೆ ಎನ್ನುತ್ತದೆ ವಿವಿ ಆಡಳಿತ ಮಂಡಳಿ.

ವಿವಿಗೆ ಮಂಜೂರಾದ ಹುದ್ದೆಗಳು ಒಟ್ಟು 56. ಇದರಲ್ಲಿ ಕುಲಪತಿ ಮತ್ತು ಇಬ್ಬರು ಕುಲಸಚಿವರ ಹುದ್ದೆಗಳು ನಿಯೋಜಿತ ಹುದ್ದೆಗಳಾಗಿವೆ. ಉಳಿದಂತೆ 21 ಬೋಧಕ ಮತ್ತು 32 ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ.

‘ಅಗತ್ಯಗಳನ್ನೇ ಪೂರೈಸಿಲ್ಲ’
30 ಸಾವಿರ ಹಳ್ಳಿಗಳ ಚರಿತ್ರೆ ತಿಳಿಸುವ‘ಗ್ರಾಮ ಚರಿತ್ರೆ ಕೋಶ’ ಯೋಜನೆ ಪೂರ್ಣಗೊಂಡಿಲ್ಲ. ಮ್ಯೂಸಿಯಂ ಕೆಲಸ ನನೆಗುದಿಗೆ ಬಿದ್ದಿದೆ. ಜಾನಪದ ಕಲೆಯು ಕಾಲಕ್ರಮೇಣ ಕಾಲಗರ್ಭದಲ್ಲಿ ನಶಿಸಿ ಹೋಗುವ ಮುನ್ನ, ಲಭ್ಯವಿರುವುದನ್ನು ದಾಖಲೀಕರಣ ಮಾಡಬೇಕಿದೆ. ಆಧುನಿಕ ಕಾಲಮಾನದಲ್ಲಿ ಜನಪದೀಯ ಕೆಲವು ಅಂಶಗಳನ್ನು ಇಂದಿಗೂ ಅನ್ವಯಿಸಬಹುದು. ಭಾಷೆ, ಸಂಸ್ಕೃತಿ, ಉಪಕರಣಗಳ ತಯಾರಿಕೆಯಲ್ಲಿ, ಕುಶಲಕಲೆಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ.

ಜಾನಪದ ವಿವಿಗೆ ಆರಂಭಿಕ ಹಂತದಲ್ಲಿ ಸ್ಥಳ ಗುರುತಿಸುವಿಕೆಗೆ ಬಸವರಾಜ ಬೊಮ್ಮಾಯಿ ಅವರು ಬಹಳ ಸಹಾಯ ಮಾಡಿದ್ದರು. ಇಂದು ಅವರೇ ಮುಖ್ಯಮಂತ್ರಿಯಾಗಿರುವ ಕಾರಣ ವಿಶೇಷ ಆಸಕ್ತಿ ವಹಿಸಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡುತ್ತೇನೆ.

–ಗೊ.ರು.ಚನ್ನಬಸಪ್ಪ, ಜಾನಪದ ವಿದ್ವಾಂಸ
–ಗೊ.ರು.ಚನ್ನಬಸಪ್ಪ, ಜಾನಪದ ವಿದ್ವಾಂಸ

**
ಇಚ್ಛಾಶಕ್ತಿ ಕೊರತೆ
ಈ ವಿವಿಯಲ್ಲಿ ಅಧ್ಯಯನ ಮಾಡಿದ ಪದವೀಧರ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬಹುದು. ಜನಪದ ಕಲೆ, ಜನಪದ ಸಂಸ್ಕೃತಿಯನ್ನು ಮುಂಬರುವ ಪೀಳಿಗೆಗೆ ಉಳಿಸಲು ಸಾಧ್ಯವಿದೆ. ವಿಶ್ವವಿದ್ಯಾಲಯದಲ್ಲಿನ ಮುಖ್ಯಸ್ಥರು ಹಾಗೂ ಸಿಬ್ಬಂದಿ ನಡುವಿನ ಬಿನ್ನಾಭಿಪ್ರಾಯ ಶಮನವಾಗಬೇಕು.

ಗ್ರಾಮೀಣ ಜನಪದ ಕಲೆ ಗುರುತಿಸಲು ವಿವಿ ಜನರ ಬಳಿ ಹೋಗಬೇಕಾಗಿತ್ತು, ಇದುವರೆಗೂ ಹೋಗಿಲ್ಲ. ಜನಪದ ಕಲೆಯನ್ನು ಕ್ರೋಡೀಕರಣ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸುಗ್ಗಿ, ಸೋಬಾನೆ, ಹಂತಿಪದ, ಭಜನೆ, ಚರ್ಮ ವಾದ್ಯ ಮತ್ತು ಹಾಡುಗಾರಿಕೆ, ಕರಡಿ ಮಜಲು, ಡೊಳ್ಳು ಮಜಲು, ಕೋಲಾಟ ಸೇರಿದಂತೆ ಗ್ರಾಮೀಣ ಕಲೆಯನ್ನು ವಿಡಿಯೊ ದಾಖಲಾತಿ ಮಾಡಬೇಕು. ಅಲ್ಲದೆ ಅವುಗಳ ಸಣ್ಣ ಪುಸ್ತಕಗಳನ್ನು ಪ್ರಕಟಿಸಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಬೇಕು. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೊಡ್ಡ ಗ್ರಂಥಗಳನ್ನು ಬರೆದು ಗ್ರಂಥಾಲಯದಲ್ಲಿ ಕಟ್ಟಿಟ್ಟರೆ ಜನಮನಕ್ಕೆ ಪ್ರಚಾರವಾಗಲು ಸಾಧ್ಯವಿಲ್ಲ.

–ಶಂಕರ ಅರ್ಕಸಾಲಿ, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯ
–ಶಂಕರ ಅರ್ಕಸಾಲಿ, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT