ಶುಕ್ರವಾರ, ಜನವರಿ 22, 2021
21 °C
ಬಾಯಾರಿದ ಕೆರೆಗಳು

ಒಳನೋಟ: ಕೆರೆ ಭರ್ತಿ ಯೋಜನೆಗೆ ಗರ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೆರೆ ತುಂಬಿಸಿ ಬರ ಓಡಿಸಿ’ ಎಂಬ ಅಬ್ಬರದ ಪ್ರಚಾರದೊಂದಿಗೆ ರೂಪುಗೊಂಡಿದ್ದು ವಿವಿಧ ಜಲಮೂಲಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ. ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ಕಂದಾಯ ವಿಭಾಗಗಳಲ್ಲಿ ಈ ಯೋಜನೆ ‘ಪರವಾಗಿಲ್ಲ’ ಎನ್ನುವಷ್ಟು ಅನುಷ್ಠಾನಗೊಂಡಿದ್ದರೆ, ಕಲ್ಯಾಣ ಕರ್ನಾಟದಲ್ಲಿ ನದಿಯ ನೀರು ಹರಿದಿದ್ದು ಆರು ಕೆರೆಗಳಿಗೆ ಮಾತ್ರ!

ಅನುದಾನದ ಕೊರತೆಯಿಂದ ಕೆಲ ಯೋಜನೆಗಳು ಸ್ಥಗಿತಗೊಂಡಿದ್ದರೆ, ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಯೋಜನೆಗಳು ಇನ್ನೂ ಕಾಗದದಲ್ಲೇ ಇವೆ. ಮಂಗಳೂರು ಭಾಗದಲ್ಲಿ ಕಿಂಡಿ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರಿಂದ ಈ ಯೋಜನೆಗೆ ಮಹತ್ವ ನೀಡಿಲ್ಲ.

ಕೆರೆಗಳು ಜನರ ಜೀವನಾಡಿ. ಕೆರೆಯಲ್ಲಿ ಸದಾ ನೀರಿದ್ದು, ಅದು ಕಂಗೊಳಿಸುತ್ತಿದ್ದರೆ ಆ ಊರು ಅಷ್ಟೇ ಅಲ್ಲ, ಸುತ್ತಲಿನ ಪ್ರದೇಶಕ್ಕೂ ಜೀವಂತಿಕೆ ಬರುತ್ತದೆ. ಜಲಚರ, ಪ್ರಾಣಿ ಪಕ್ಷಿಗಳ ಆವಾಸ ತಾಣವಾಗಿ ಅದು ರೂಪುಗೊಳ್ಳುತ್ತದೆ. ಅಂತರ್ಜಲ ಮರುಪೂರಣಕ್ಕೂ ನೆರವಾಗುತ್ತದೆ. ಊರಿಗೊಂದು ಕೆರೆ ಪರಿಕಲ್ಪನೆಯನ್ನು ನಮ್ಮ ಹಿರಿಯರು ಜಾರಿಗೆ ತಂದಿದ್ದು ಈ ಕಾರಣಕ್ಕಾಗಿಯೇ.

ರಾಜ–ಮಹಾರಾಜರ ಕಾಲದಲ್ಲಿ ಕೆರೆ–ಕಟ್ಟೆ ಕಟ್ಟಿಸುವುದೇ ದೊಡ್ಡ ಅಭಿವೃದ್ಧಿಯ ಕೆಲಸವೆನಿಸಿಕೊಳ್ಳುತ್ತಿತ್ತು. ಸಕಾಲಕ್ಕೆ ಮಳೆಯಾಗಿ ಕೆರೆಗಳೆಲ್ಲ ಭರ್ತಿಯಾಗುತ್ತಿದ್ದವು. ಕೆಲ ದಶಕಗಳಿಂದ ಈಚೆಗೆ ಮಳೆ ಅನಿಶ್ಚಿತತೆಯ ಕಾರಣ ಬಹುಪಾಲು ಕೆರೆಗಳು ಬರಿದಾಗಿ ‘ಕಾಣೆ’ಯಾಗಿವೆ. ನಗರ–ಪಟ್ಟಣ ಪ್ರದೇಶಗಳಲ್ಲಿಯ ಕೆರೆಗಳು ಕಾಂಕ್ರೀಟ್‌ ಕಾಡುಗಳಾಗಿ ಪರಿವರ್ತನೆ ಆದರೆ, ಉಳಿದವು ಒತ್ತುವರಿಯಾಗಿವೆ. ಅಂತರ್ಜಲ ಪಾತಾಳಕ್ಕೆ ಕುಸಿದು ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ರಾಜ್ಯದ ಬಹುತೇಕ ಕಡೆ ನಿರ್ಮಾಣವಾಗಿದೆ.

ಕೆರೆಗಳಿಗೆ ನೀರು ತುಂಬಿಸುವುದು ಬಹುಪಯೋಗಿ ಯೋಜನೆ. ಬೃಹತ್‌ ನೀರಾವರಿ ಯೋಜನೆಗಳಿಗೆ ಹೋಲಿಸಿದರೆ ಆರ್ಥಿಕವಾಗಿಯೂ ಮಿತವ್ಯಯಕಾರಿ. ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಇದರ ಬಹುಮುಖ್ಯ ಕೊಡುಗೆ.ಕೊಳವೆ ಬಾವಿಯ ನೀರಿಗಿಂತ ಭೂಮಿಯ ಮೇಲಿರುವ ನೀರು ಕುಡಿಯಲು ಯೋಗ್ಯ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಕೊಳವೆಬಾವಿಯಿಂದ ಎತ್ತುವ ನೀರು ಅರ್ಸೆನಿಕ್‌, ಫ್ಲೋರೈಡ್‌ನಂತಹ ರಾಸಾಯನಿಕ ಹೊಂದಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಲವಣಾಂಶಯುಕ್ತ ನದಿ–ಕೆರೆಯ ನೀರು ಕುಡಿಯಲು ಯೋಗ್ಯವಾದುದು.

ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳು ಮಳೆಗಾಲದಲ್ಲಿ ನದಿಯಲ್ಲಿ ಹೆಚ್ಚಿನ ನೀರು ಹರಿದು ಹೋಗುವ ಸಂದರ್ಭ ದಲ್ಲಿ ನಾಲೆಗಳ ಮೂಲಕ ಕೆರೆಗಳನ್ನು ತುಂಬಿಸುವುದಾಗಿವೆ. ಒಮ್ಮೆ ಕೆರೆ ತುಂಬಿದರೆ ಹೆಚ್ಚುಕಡಿಮೆ ಒಂದು ವರ್ಷ ನೀರು ಇರುತ್ತದೆ.

ಯಶಸ್ಸಿನ ನಿದರ್ಶನಗಳೂ ಇವೆ:

ವಿಜಯಪುರ ಜಿಲ್ಲೆಯ ಜೈನಾಪುರ ಗ್ರಾಮ ಕೃಷ್ಣಾ ನದಿ ತೀರದಲ್ಲಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಅಲ್ಲಿಯ ಕೊಳವೆ ಬಾವಿಗಳು ಬತ್ತುತ್ತಿದ್ದವು. ಮಮದಾಪುರ ಕೆರೆ ತುಂಬಿ ಸುವ ಯೋಜನೆ ಕಾರ್ಯಗತಗೊಂಡ ಮೇಲೆ ಮಮದಾಪುರ ಅಷ್ಟೇ ಅಲ್ಲ, ಜೈನಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಅಂತರ್ಜಲ ವೃದ್ಧಿಯಾಗಿ ಆ ಪ್ರದೇಶದ ಜಲಸಮೃದ್ಧಿ ಹೆಚ್ಚಿದೆ. ವಿಜಯಪುರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಈ ಯೋಜನೆ ಮಾದರಿ ಎನ್ನುವಷ್ಟು ಯಶಸ್ಸು ಕಂಡಿದೆ. ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿನ ಕೆಲವು ಕೆರೆಗಳಿಗೂ ನದಿ ನೀರು ಹರಿಯುತ್ತಿರುವುದರಿಂದ ಅಲ್ಲಿಯೂ ಸಮೃದ್ಧಿ ಮನೆಮಾಡಿದೆ. ಒಳನಾಡು ಮೀನುಗಾರಿಕೆಯ ಆದಾಯವನ್ನೂ ತಂದುಕೊಡುತ್ತಿವೆ.

ಇನ್ನು ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ದಾವಣಗೆರೆ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಕಲಬುರ್ಗಿ ಜಿಲ್ಲೆಯ ಭೀಮಾ ನದಿಯಿಂದ ಅಫಜಲಪುರ ಮತ್ತು ಆಳಂದ ತಾಲ್ಲೂಕು ಗಳ ಕೆರೆ ತುಂಬಿಸುವ ಯೋಜನೆ ಅನುದಾ ನದ ಕೊರತೆಯಿಂದ ಅರ್ಧಕ್ಕೇ ನಿಂತಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ.

ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ಮರುಜೀವನೀಡಿದೆ. ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಇಲ್ಲಿಯ ಕೆರೆಗಳನ್ನು ತುಂಬಿಸಲಾಗುತ್ತಿದೆ.

* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಯಕ್ಕುಂಡಿ, ಕಾತ್ರಾಳ ಕೆರೆಗಳಿಗೆ ನೀರು ತುಂಬಿಸಿದ ಬಳಿಕ ನಮ್ಮ 100 ಎಕರೆ ಜಮೀನಿನಲ್ಲಿ ದ್ರಾಕ್ಷಿ, ಕಬ್ಬು ಬೆಳೆಯುತ್ತಿದ್ದೇನೆ. ಕೆರೆಗಳನ್ನು ತುಂಬುವ ಯೋಜನೆಯಿಂದ ಬಾಳು ಬಂಗಾರವಾಗಿದೆ.

-ಚನ್ನಪ್ಪ ಕೊಪ್ಪದ, ರೈತ, ಯಕ್ಕುಂಡಿ

* 17 ವರ್ಷಗಳಿಂದ ಕುಡಿಯುವ ನೀರಿಗೂ ತೊಂದರೆಯಾಗಿತ್ತು. ಅಂತರ್ಜಲ ಬತ್ತಿಹೋಗಿತ್ತು. ಮತ್ತಿಘಟ್ಟ ಕೆರೆಗೆ ನೀರು ತುಂಬಿದ್ದರಿಂದ ಸಮಸ್ಯೆ ನೀಗಿದೆ.

-ರಂಗಪ್ಪ, ರೈತ, ಮತ್ತಿಘಟ್ಟ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು