ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಶಿಗ್ಗಾವಿ ತುಂತುರು ನೀರಾವರಿ ಯೋಜನೆ; ತೊಟ್ಟಿಲು ಬಿಟ್ಟೇಳದ ‘ಕನಸಿನ ಕೂಸು’

2012ರಲ್ಲಿ ಸಮರ್ಪಣೆ ಯೋಜನೆ
Last Updated 28 ಮೇ 2022, 20:20 IST
ಅಕ್ಷರ ಗಾತ್ರ

ಹಾವೇರಿ: ಕಡಿಮೆ ನೀರಿನಲ್ಲಿ ಹೆಚ್ಚು ಫಸಲು ಪಡೆಯುವ ಇಸ್ರೇಲ್‌ ಮಾದರಿಯ ‘ದೇಶದ ಮೊಟ್ಟ ಮೊದಲ ಯೋಜನೆ’ ಎಂದು ಬಿಂಬಿತವಾದ₹ 238 ಕೋಟಿ ವೆಚ್ಚದ ‘ಶಿಗ್ಗಾವಿ ತುಂತುರು ನೀರಾವರಿ ಯೋಜನೆ’ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಕೂಸು. ಆದರೆ, ಒಂದೆರಡು ವರ್ಷಗಳಲ್ಲೇ ಈ ಯೋಜನೆ ತೊಟ್ಟಿಲು ಬಿಟ್ಟೇಳದ ಸ್ಥಿತಿಗೆ ತಲುಪಿದೆ.

ಮುಖ್ಯಮಂತ್ರಿ ಕ್ಷೇತ್ರ ‘ಶಿಗ್ಗಾವಿ–ಸವಣೂರು’ ಡಾ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳು ಎಂಬ ಹಣೆಪಟ್ಟಿ ಹೊಂದಿದ್ದವು.ಬರಡಾದ ಭೂಮಿಗೆ ‘ಹಸಿರು ಸೀರೆ’ ಉಡಿಸಬೇಕು ಎಂಬ ಉದ್ದೇಶದಿಂದ, 2009ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ವರದಾ ನದಿಯಿಂದ ಪೈಪುಗಳ ಮೂಲಕ ನೀರು ತಂದು ಕ್ಷೇತ್ರದ 22 ಹಳ್ಳಿಗಳ 26 ಸಾವಿರ ಎಕರೆಗೆ ತುಂತುರು ಪದ್ಧತಿಯಲ್ಲಿ ನೀರುಣಿಸುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿದರು.

119 ಸಂಪುಗಳ ನಿರ್ಮಾಣ: ಶಿಗ್ಗಾವಿ ಏತ ನೀರಾವರಿ ಯೋಜನೆಯ ಮೊದಲ ಹಂತವಾದ ತುಂತುರು ನೀರಾವರಿ ಯೋಜನೆ2012ರಲ್ಲಿ ರೈತರಿಗೆ ಸಮರ್ಪಣೆಯಾಯಿತು.ವರದಾ ನದಿಯಿಂದ ನೀರನ್ನು ಮೇಲೆತ್ತಿ, ಪೈಪ್‌ಲೈನ್‌ ಮೂಲಕ 6 ಡೆಲಿವರಿ ಚೇಂಬರ್ಸ್‌ಗಳಿಗೆ ಸಂಪರ್ಕ ಕಲ್ಪಿಸಿ, ಅಲ್ಲಿಂದ 119 ಸಂಪುಗಳಿಗೆ ನೀರನ್ನು ಪೂರೈಸಲಾಯಿತು. ಪ್ರತಿ ಸಂಪಿನಲ್ಲಿ 10 ಎಚ್‌.ಪಿ. ಸಾಮರ್ಥ್ಯದ ನಾಲ್ಕೈದು ಮೋಟರ್‌ ಅಳವಡಿಸಿ, ಅಲ್ಲಿಂದ ಪೈಪ್‌ಲೈನ್‌ ಮೂಲಕ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸಿ, ‘ಸ್ಪ್ರಿಂಕ್ಲರ್‌’ ಉಪಕರಣಗಳಿಂದ ಬೆಳೆಗಳಿಗೆ ನೀರುಣಿಸುವ ‘ನೀಲನಕ್ಷೆ’ ಅನುಷ್ಠಾನಗೊಳಿಸಲಾಯಿತು.

ಹಳ್ಳ ಹಿಡಿದ ಯೋಜನೆ: ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ಹೊಣೆಗೇಡಿತನ, ರೈತರ ಅಸಹಕಾರ ಹಾಗೂ ತಾಂತ್ರಿಕ ದೋಷಗಳಿಂದ ತುಂತುರು ನೀರಾವರಿ ಯೋಜನೆ ಆರಂಭದಲ್ಲೇ ಮುಗ್ಗರಿಸಿದೆ. ಅಗತ್ಯ ಸಿದ್ಧತೆಗಳಿಲ್ಲದೆ ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಯೋಜನೆ ಜಾರಿಗೊಳಿಸಿದ್ದರಿಂದ ಆರಂಭದಲ್ಲೇ ವರದಾ ನದಿ ತೀರದ ರೈತರ ವಿರೋಧ ಎದುರಿಸಬೇಕಾಯಿತು.

ಬೇಸಿಗೆಯಲ್ಲಿ ನೀರು ಸಿಗಲಿಲ್ಲ: ‘ವರ್ಷದಲ್ಲಿ 6 ತಿಂಗಳು ಮಾತ್ರ ಹರಿಯುವ ವರದಾ ನದಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಪೂರೈಸಲು ಅಗತ್ಯವಾಗಿದ್ದ ಡ್ಯಾಂ ನಿರ್ಮಿಸದೇ ಯೋಜನೆ ಜಾರಿಗೊಳಿಸಿದರು. ಹೀಗಾಗಿ, ರೈತರಿಗೆ ನೀರು ಸಿಗಲಿಲ್ಲ, ಮಳೆಗಾಲದಲ್ಲಿ ಪೈಪ್‌ಲೈನ್‌ ನೀರಿನ ಅಗತ್ಯ ರೈತರಿಗೆ ಕಂಡುಬರಲಿಲ್ಲ. ಇದರಿಂದ ಯೋಜನೆ ಫಲಪ್ರದವಾಗಲಿಲ್ಲ’ ಎನ್ನುತ್ತಾರೆ ಬಂಕಾಪುರ ನೀರು ಬಳಕೆದಾರರ ಸಂಘದ ಸದಸ್ಯರು.

ದುರಸ್ತಿಗೆ ವಿಳಂಬ: ’ಪೈಪ್‌ಲೈನ್‌ ಅವೈಜ್ಞಾನಿಕವಾಗಿದ್ದರಿಂದ ಎತ್ತರದ ಪ್ರದೇಶಗಳಿಗೆ ನೀರು ಹೋಗುತ್ತಿರಲಿಲ್ಲ. ಕಟ್ಟ ಕಡೆಯ ರೈತನಿಗೆ ನೀರೇ ಸಿಗುತ್ತಿರಲಿಲ್ಲ. ನೀರಿನ ಒತ್ತಡ ಜಾಸ್ತಿಯಾಗಿ ಪೈಪ್‌ ಒಡೆದು, ಮೋಟರ್‌ಗಳು ಸುಟ್ಟು ಹೋದರೆ ಗುತ್ತಿಗೆದಾರರಾಗಿದ್ದ ಜೈನ್‌ ಕಂಪನಿಯವರು ಕೂಡಲೇ ಬಂದು ರಿಪೇರಿ ಮಾಡುತ್ತಿರಲಿಲ್ಲ. ಇದರಿಂದ ನೀರು ವೇಳಾಪಟ್ಟಿಯ ಪ್ರಕಾರ ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ. ನೀರು ಹಂಚಿಕೆ ‘ಸಿಕ್ಕವರಿಗೆ ಸೀರುಂಡೆ’ ಎಂಬಂತಾಯಿತು’ ಎಂದು ಬೇಸರಿಸುತ್ತಾರೆ ರೈತ ಶೇಖರಗೌಡ ಪಾಟೀಲ.

ಕೆರೆಗಳು ಭರ್ತಿ: ‘ಶಿಗ್ಗಾವಿ ಏತ ನೀರಾವರಿಯಿಂದ ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕಿನ 80ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ ಬಳಕೆಗೆ ಕೆರೆ ನೀರು ಬಳಕೆಯಾಗುತ್ತಿದೆ. ತುಂತುರುನೀರಾವರಿ ವಿಫಲವಾದರೂ, ಕೆರೆ–ಕಟ್ಟೆಗಳು ತುಂಬಿರುವುದು ರೈತರಿಗೆ ಸಿಕ್ಕ ಸಮಾಧಾನಕರ ಬಹುಮಾನ’ ಎನ್ನುತ್ತಾರೆ ಮುನವಳ್ಳಿ ಮತ್ತು ಕುಂದೂರು ರೈತರು.

‘ತುಂತುರು ನೀರಾವರಿ ಯೋಜನೆ’ ಸ್ಥಗಿತಗೊಂಡು ಏಳೆಂಟು ವರ್ಷ ಕಳೆದಿದ್ದರೂ ಅಸ್ತಿತ್ವದಲ್ಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಂಬಿಸಲು ಪ್ರಯತ್ನಿಸುತ್ತಾರೆ. ಯೋಜನೆಯ ಪ್ರಗತಿಯ ವಿವರ ಕೇಳಿದರೆ, ಮಾಹಿತಿ ನೀಡಲು ನಿರಾಕರಿಸುತ್ತಾರೆ.

ಕಳ್ಳರ ಪಾಲಾದ ಮೋಟರ್‌, ಪೈಪು
ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವಾಗ ಚಾಲಕರ ನಿರ್ಲಕ್ಷ್ಯದಿಂದ ‘ಸ್ಪ್ರಿಂಕ್ಲರ್’ಗಳು ಹಾಳಾದವು. ಇದರಿಂದ ಪೈಪ್‌ಲೈನ್‌ನಲ್ಲಿ ನೀರು ಸೋರಿಕೆಯಾಯಿತು. ನೀರು ಸಿಗದಿದ್ದ ರೈತರು ಪೈಪ್‌ಲೈನ್‌ ಒಡೆದು ತಮ್ಮ ಜಮೀನುಗಳಿಗೆ ನೀರು ತಿರುವಿಕೊಂಡರು.ಪೈಪ್‌ಲೈನ್‌ ಅಗೆದರೆ ಬೆಳೆ ಹಾಳಾಗುತ್ತದೆ ಎಂಬ ಕಾರಣಕ್ಕೆ ರೈತರು ಕೂಡ ರಿಪೇರಿ ಕೆಲಸಕ್ಕೆ ಅಡ್ಡಿಪಡಿಸಿದರು. ಕಾಲಕ್ರಮೇಣ ಸಂಪುಗಳಲ್ಲಿದ್ದ ಮೋಟರ್‌, ಸ್ಟಾರ್ಟರ್‌, ಪೈಪು, ಸ್ಪ್ರಿಂಕ್ಲರ್‌ ಕಳ್ಳರ ಪಾಲಾದವು. ಈಗ ಉಳಿದಿರುವುದು ರೈತರ ಜಮೀನಲ್ಲಿ ನಿರ್ಮಿಸಿದ 119 ಸಂಪುಗಳು ಮತ್ತು ಪಾಳುಬಿದ್ದ ಪಂಪ್‌ಹೌಸ್‌ಗಳು ಮಾತ್ರ.

ಪರಿಹಾರದಲ್ಲೂ ತಾರತಮ್ಯ
‘ಎಕರೆಗೆ 25 ಕ್ವಿಂಟಲ್‌ ಹತ್ತಿ ಬೆಳೆಯುತ್ತಿದ್ದ ಫಲವತ್ತಾದ ಜಮೀನಿನಲ್ಲಿ 15 ಗುಂಟೆಯನ್ನು ತುಂತುರು ನೀರಾವರಿ ಯೋಜನೆಯ ಸಂಪು ನಿರ್ಮಾಣಕ್ಕಾಗಿ ಬಳಸಿಕೊಂಡರು. ₹5 ಲಕ್ಷ ಪರಿಹಾರ ಕೊಡುತ್ತೇವೆ ಎಂದು ನಂಬಿಸಿದ ಅಧಿಕಾರಿಗಳು ಕೊಟ್ಟಿದ್ದು ಕೇವಲ ₹29 ಸಾವಿರ. ರೈತ ಮುಖಂಡರಿಗೆ ರೊಕ್ಕ ತಿನಿಸಿದ್ರು. ದುಡ್ಡು ಹೊಡೆಯಲು ಕೆಲವು ಕಡೆ ಪೈಪ್‌ಮಾರ್ಗವನ್ನೇ ಬದಲಿಸಿದರು. ಒಟ್ಟಿನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪ್ಲ್ಯಾನ್‌ ಮಾಡಿ ಗವರ್ಮೆಂಟ್‌ ರೊಕ್ಕ ಹೊಡೆದ್ರು’ ಎಂದು ಬಾಡ ಮತ್ತು ನಾರಾಯಣಪುರ ರೈತರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT