ಭಾನುವಾರ, ಜೂನ್ 13, 2021
25 °C

ಒಳನೋಟ: ಮಾವು ಬೆಳೆಗಾರರ ಹುಲಿ ಮೇಲಿನ ಸವಾರಿ

ಆರ್.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೋವಿಡ್‌ ನಿರ್ಬಂಧಗಳ ಪರಿಣಾಮ ಮಾವು ತೋಪುಗಳಲ್ಲಿಯೇ ಕೊಳೆಯುವಂತಾಗಿದೆ. ಸಣ್ಣ ಪ್ರಮಾಣದ ಬೆಳೆಗಾರರು ಆರ್ಥಿಕ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದಾರೆ. ಮಾವು ಮಾರಾಟವಾಗಿ ಹಣ ಕೈಸೇರದಿದ್ದರೆ ಬೆಳೆಗಾರರ ಬದುಕು ಮೂರಾಬಟ್ಟೆಯಾಗಲಿದೆ. ಮತ್ತೊಂದೆಡೆ ವ್ಯವಹಾರ ನಡೆಯದಿದ್ದರೆ ದಿವಾಳಿಯಾಗುವ ಆತಂಕ ವರ್ತಕರದ್ದು. ಕೊಯ್ಲಿಗೆ ಸಜ್ಜಾಗುತ್ತಿರುವ ಬೆಳೆಗಾರರ ಸ್ಥಿತಿಯು ಹುಲಿಯ ಮೇಲಿನ ಸವಾರಿಯಂತಿದೆ. ಕೆಳಗಿಳಿದರೂ ಅಪಾಯ; ಸವಾರಿ ಮಾಡುತ್ತಿದ್ದರೂ ಅಪಾಯ!

ರಾಜ್ಯದಲ್ಲಿ ಮೊದಲು ಮಾವು ಕೊಯ್ಲು ನಡೆಯುವುದು ರಾಮನಗರ ಜಿಲ್ಲೆಯಲ್ಲಿ. ಈ ವರ್ಷ ಕೊಯ್ಲು ಹೆಚ್ಚಾಗುವ ಹೊತ್ತಿಗೆ ಲಾಕ್‌ಡೌನ್ ಆರಂಭವಾಗಿದೆ. ಸದ್ಯ ಎಪಿಎಂಸಿಗಳಲ್ಲಿ ವಹಿವಾಟು ನಡೆದಿದ್ದು, ಹೆಚ್ಚಿನ ಪ್ರಮಾಣದ ಹಣ್ಣು ಮಹಾರಾಷ್ಟ್ರಕ್ಕೆ ಹೋಗಿದೆ. ಪಲ್ಪ್‌ ತಯಾರಿಕಾ ಕಾರ್ಖಾನೆಗಳು, ಕೆಲ ದಲ್ಲಾಳಿಗಳು ಮಾರುಕಟ್ಟೆ ಬಿಕ್ಕಟ್ಟನ್ನೇ ಬಂಡವಾಳ‌ ಮಾಡಿಕೊಂಡು ಬೆಲೆ‌ ಕುಸಿಯುವಂತೆ ಮಾಡಿದ್ದಾರೆ.

ಮಾವು ಅಭಿವೃದ್ಧಿ ನಿಗಮವು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ವೇದಿಕೆ ಕಲ್ಪಿಸಿದ್ದು, ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದೆ. ಆದರೆ, ಇದರ ಪ್ರಮಾಣ ಅತ್ಯಲ್ಪ.

ರೈತ ಉತ್ಪನ್ನ ಕಂಪನಿಗಳು (ಎಫ್‌ಪಿಒ) ಮಾವು ಬೆಳೆಗಾರರ ನೆರವಿಗೆ ನಿಂತಿವೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ  ಮಾರಾಟಕ್ಕೆ ಮಾವು‌ ಮಂಡಳಿ ಮಾತುಕತೆ ನಡೆಸಿತ್ತು. ಅದು ಕಾರ್ಯಗತವಾಗಿಲ್ಲ. 

ಧಾರವಾಡ ಜಿಲ್ಲೆಯಲ್ಲಿ ‘ಒಂದು ಜಿಲ್ಲೆ ಒಂದು ಬೆಳೆ’ ಯೋಜನೆಯಡಿ ಆಯ್ಕೆಯಾಗಿರುವ ಬೆಳೆ ಮಾವು. ಆದರೆ, ಜಿಲ್ಲೆಯಲ್ಲಿ ಮಾವಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಮೌಲ್ಯವರ್ಧನೆ ಮಾಡುವ ಯೋಜನೆಯೂ ಅನುಷ್ಠಾನಗೊಂಡಿಲ್ಲ. ಜಿಲ್ಲೆಯಲ್ಲಿ ಮಾವಿನ ತಿರುಳು ತೆಗೆದು ಮೌಲ್ಯವರ್ಧನೆ ಮಾಡುವ ಎರಡು ಖಾಸಗಿ ಕಾರ್ಖಾನೆಗಳಿವೆ. ಇಲ್ಲಿ ಪ್ರತಿ ಕೆ.ಜಿ. ಮಾವಿನ ಹಣ್ಣಿಗೆ ₹ 25ರಿಂದ ₹ 30ರ ವರೆಗೆ ಬೆಲೆ ಇದೆ. ಧಾರವಾಡ ಬಳಿಯ ಚಿಕ್ಕಮಲ್ಲಿಗವಾಡದಲ್ಲಿ ತೆರೆದ ಮಾರುಕಟ್ಟೆಯಲ್ಲಿ ಮಾವು ಮಾರಾಟವಾಗುತ್ತದೆ. ತೊಟ್ಟು ಇರುವ ದೊಡ್ಡ ಗಾತ್ರದ ಕಾಯಿಗಳನ್ನು ಮಾತ್ರ ಖರೀದಿಸಲಾಗುತ್ತದೆ. ಕಾರ್ಖಾನೆಗಿಂತ ಪ್ರತಿ ಕೆ.ಜಿ.ಗೆ ₹ 10 ಹೆಚ್ಚು ಸಿಗುತ್ತದಷ್ಟೇ.

ಕೊಪ್ಪಳ ಜಿಲ್ಲೆಯ ಬೆಳೆಗಾರರ ಸ್ಥಿತಿಯೂ ಹೀಗೆಯೇ ಇದೆ. ಇಲ್ಲಿನ ‘ಕೊಪ್ಪಳ ಕೇಸರ’ ಮಾವು ಬ್ರ್ಯಾಂಡ್  ಆಗಿದ್ದು, ದೇಶ, ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ 60ರಷ್ಟು ಬೆಳೆ ಬಂದಿದೆ. ತೋಟಗಾರಿಕೆ ಇಲಾಖೆಯಿಂದ ಬೆಳೆಗಾರರಿಗೆ ಪ್ರತಿ ಗುರುವಾರ ರೈತ ಸಂತೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಬೇರೆಡೆಗೆ ಪೂರೈಕೆ ಸಾಧ್ಯವಾಗುತ್ತಿಲ್ಲ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷವೂ ಮಾವು ಬೆಳೆಗಾರರಿಗೆ ಲಾಕ್‌ಡೌನ್ ಬಿಸಿ ತಟ್ಟಿತ್ತು. ಆಗ ಚಿಂತಾಮಣಿಯ ಮಾವು ಬೆಳೆಗಾರರು ಕಂಪನಿಯೊಂದರ ಮೂಲಕ ವಿದೇಶಕ್ಕೂ ರಫ್ತು ಮಾಡಿಸಿದ್ದರು. ಈಗ ಮಾರಾಟದ್ದೇ ಸಮಸ್ಯೆ.

ಆನ್‌ಲೈನ್‌ ವಹಿವಾಟಿಗೆ ಮೊರೆ
ರಾಜ್ಯದಲ್ಲೇ ಅತಿಹೆಚ್ಚು ಮಾವು ಬೆಳೆಯುವುದು ಕೋಲಾರದಲ್ಲಿ. ಜಿಲ್ಲೆಯಲ್ಲಿ ಮಾವು ಕೊಯ್ಲಿಗೆ ದಿನಗಣನೆ ಆರಂಭವಾಗಿದೆ. ಹಿಂದಿನ ವರ್ಷದಂತೆ ಈ ಬಾರಿಯೂ ರೈತರಿಗೆ ಮಾರುಕಟ್ಟೆ ಸಮಸ್ಯೆಯದ್ದೇ ಚಿಂತೆ.

ಜಿಲ್ಲೆಯ 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಸುಮಾರು 2.75 ಲಕ್ಷ ಟನ್‌ ಫಸಲು ನಿರೀಕ್ಷಿಸಲಾಗಿದೆ. 

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೋವಿಡ್‌ನಿಂದಾಗಿ ಈ ಬಾರಿ ಆನ್‌ಲೈನ್‌ ಮೂಲಕ ಮಾವಿನ ವಹಿವಾಟು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯ ಮಾವು ಅಭಿವೃದ್ಧಿ ನಿಗಮ ಮತ್ತು ಅಂಚೆ ಇಲಾಖೆ ಸಹಭಾಗಿತ್ವದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸುವ ಪ್ರಯತ್ನ ನಡೆದಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತು ಬೆಳೆಗಾರರ ನಡುವೆ ಸಂಪರ್ಕ ಕಲ್ಪಿಸಿ ಮಾವು ಮಾರಾಟಕ್ಕೆ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು