ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ- ಹಾರುಬೂದಿ ವಿಲೇವಾರಿ ಆದರೂ ತಪ್ಪದ ಗೋಳು

Last Updated 17 ಏಪ್ರಿಲ್ 2021, 21:46 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಕೂಡಗಿಯಲ್ಲಿರುವ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಶನ್‌ನ (ಎನ್‌ಟಿಪಿಸಿ) ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಡಿಮೆ ನೀರು ಮತ್ತು ಕಲ್ಲಿದ್ದಲು ಬಳಸಿ ಸಾಮಾನ್ಯ ಶಾಖೋತ್ಪನ್ನ ಘಟಕಗಳಿಗಿಂತ ಶೇ 5ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಹಾರುಬೂದಿ ಗಾಳಿಗೆ ಸೇರುವ ಪ್ರಮಾಣ ಕಡಿಮೆ. ಪೇಸ್ಟ್ ಮಾದರಿಯಲ್ಲಿ ಹಾರುಬೂದಿ ಹೊರಬರುವ ವ್ಯವಸ್ಥೆಯಿದ್ದು, ಇದನ್ನು ಸಿಮೆಂಟ್, ಇಟ್ಟಿಗೆ ಮತ್ತು ರಸ್ತೆ ನಿರ್ಮಾಣ ಸಂಸ್ಥೆಗಳಿಗೆ ನೀಡಲಾಗುತ್ತಿದೆ.

ವಿದ್ಯುತ್ ಉತ್ಪಾದನೆಗಾಗಿ ಬಳಸುವ ಕಲ್ಲಿದ್ದಲನ್ನು ಬಾಯ್ಲರ್‌ನಲ್ಲಿ ಹಾಕಿದಾಗ ಅದು ಹೊರಸೂಸುವ ಬೂದಿ ನಿಯಂತ್ರಣಕ್ಕೆ ಎನ್‌ಟಿಪಿಸಿ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹಾರುಬೂದಿ ಹಾಗೂ ಕೆಳಗೆ ಬೀಳುವ ಬೂದಿ–ಹೀಗೆ ಎರಡು ರೂಪದಲ್ಲಿ ಸಂಗ್ರಹವಾಗುತ್ತದೆ.

ಪ್ರತಿದಿನಕ್ಕೆ ಅಂದಾಜು 8 ಸಾವಿರ ಟನ್ ಹಾರುಬೂದಿ ಹಾಗೂ 2 ಸಾವಿರ ಟನ್ ಕೆಳಗೆ ಬೀಳುವ ಬೂದಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.

ಕೃಷಿಗೆ ತೊಂದರೆ

‘ಹಾರುಬೂದಿಯನ್ನು ಸಂಗ್ರಹಿಸಿ ಸರಬರಾಜು ಮಾಡಲು ಮಸೂತಿ ಗ್ರಾಮದ ಸಮೀಪ ನಿರ್ಮಿಸಿರುವ ಬೃಹತ್‌ ಕೆರೆಗಳಿಂದ ಕಲುಷಿತ ನೀರು ಸಮೀಪದ ಹಳ್ಳಕ್ಕೆ ಸೇರುತ್ತಿದೆ.ಕೆರೆ ಸುತ್ತಮುತ್ತಲಿನ ಸುಮಾರು 200 ಎಕರೆಯಷ್ಟು ಕೃಷಿಭೂಮಿ ಫಲವತ್ತತೆ ಕಳೆದುಕೊಂಡು ಇಳುವರಿ ಕಡಿಮೆಯಾಗಿದೆ’ ಎನ್ನುತ್ತಾರೆ ರೈತರಾದ ಶಿವಪ್ಪ ಹಂಗರಗಿ, ಮಲ್ಲಪ್ಪ ಆಳಪ್ಪನವರ, ಗಿಡ್ಡಯ್ಯ ಬೇನಾಳ, ಭೀಮಾಶಂಕರ ಬಿಸ್ಟಗೊಂಡ, ವಿವೇಕ ಪಾಟೀಲ.

‘ಎನ್‌ಟಿಪಿಸಿ ಈ ಭಾಗದ ರೈತರಿಗೆ ಪರಿಹಾರ ನೀಡಬೇಕು. ಇಲ್ಲವೇ, ಇಳುವರಿ ಕಳೆದುಕೊಂಡಿರುವ ಭೂಮಿಗೆ ಯೋಗ್ಯ ದರ ನೀಡಿದರೆ ಎನ್‌ಟಿಪಿಸಿಗೇ ಭೂಮಿ ನೀಡಲು ಸಿದ್ದರಿದ್ದೇವೆ’ ಎನ್ನುತ್ತಾರೆ ಅವರು.

‘ಸವಳು–ಜವಳು ಜಮೀನುಗಳಿಗೆ ಶಾಶ್ವತ ಪರಿಹಾರ, ಬಾಧಿತ ಕೂಡಗಿ, ತೆಲಗಿ, ಮಸೂತಿ, ಮುತ್ತಗಿ ಹಾಗೂ ಗೊಳಸಂಗಿ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. 24 ಗಂಟೆ ಉಚಿತ ವಿದ್ಯುತ್ ಪೂರೈಸಬೇಕು’ ಎಂಬುದು ಎನ್‌ಟಿಪಿಸಿ ಸಂತ್ರಸ್ತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಪಿ.ಪಾಟೀಲ ಅವರ ಒತ್ತಾಯ.

ವಿದ್ಯುತ್‌ ಬರ ನೀಗಿಸಿದ ಎನ್‌ಟಿಪಿಸಿ

ವಿಜಯಪುರ ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪಾದಿಸುವ ಒಟ್ಟು ವಿದ್ಯುತ್‌ನಲ್ಲಿ ಶೇ 50ರಷ್ಟು ರಾಜ್ಯಕ್ಕೆ ಲಭಿಸುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ದೊಡ್ಡ ಕೊಡುಗೆ ನೀಡುವ ಮೂಲಕ ವಿದ್ಯುತ್ ಬರ ನೀಗಿಸಿದೆ.

ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ, ಮಸೂತಿ, ತೆಲಗಿ, ಮುತ್ತಗಿ ಹಾಗೂ ಗೊಳಸಂಗಿ ವ್ಯಾಪ್ತಿಯ ಸುಮಾರು 3,200 ಎಕರೆ ಭೂಮಿಯನ್ನು ರೈತರಿಂದ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿಕೊಂಡು, 2012 ಜೂನ್ 2ರಂದು ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ 2016ರಲ್ಲಿ ವಿದ್ಯುತ್‌ ಉತ್ಪಾದನೆ ಪ್ರಾರಂಭವಾಯಿತು. 800 ಮೆಗಾವಾಟ್‌ ಸಾಮರ್ಥ್ಯದ ಮೂರು ಘಟಕಗಳಿದ್ದು, ಸ್ಥಾವರವು ಒಟ್ಟು 2,400 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT