ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ಸರ್ಕಾರದ ನೆರಳಲ್ಲೇ ಶೋಷಣೆ, ನಾನಾ ಇಲಾಖೆಗಳಲ್ಲಿ ಸಾವಿರಾರು ಹುದ್ದೆ ಖಾಲಿ

ಭರ್ತಿಗೆ ಮೀನಮೇಷ * ನಿರುದ್ಯೋಗಿಗಳ ಕನಸು ನುಚ್ಚುನೂರು
Last Updated 3 ನವೆಂಬರ್ 2019, 2:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಹಲವು ವರ್ಷಗಳಿಂದ ಸಾವಿರಾರು ಹುದ್ದೆ ಖಾಲಿ ಬಿದ್ದಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ 2.60 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

2017ರ ನವಂಬರ್‌ನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2,52,625 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ವಿಧಾನಮಂಡಲದಲ್ಲಿ 2018ರ ಡಿ. 20ರಂದು ನೀಡಿದ ಮಾಹಿತಿ ಪ್ರಕಾರ ಈ ಸಂಖ್ಯೆ 2,51,423. ಈ ಪೈಕಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 47 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇನ್ನು ಆಂತರಿಕ ಭದ್ರತಾ ವಿಭಾಗದಲ್ಲಿ 32,866, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 32,840 ಹುದ್ದೆಗಳು ಖಾಲಿ ಇವೆ.

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 2001ರಿಂದ 2019ರ ಜುಲೈ 18ರ ಅಂತ್ಯದವರೆಗೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ 1,917 ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡಿಕೊಂಡಿದೆ. ನಾನಾ ಇಲಾಖೆಗಳ ‘ಸಿ’ ಗುಂಪಿನ ಹುದ್ದೆಗಳೂ ಸೇರಿದಂತೆ ವಿವಿಧ ಶ್ರೇಣಿಗಳ ಸಾವಿರಾರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವ ಕೆಪಿಎಸ್‌ಸಿ, ಹಲವು ಪರೀಕ್ಷೆಗಳ ಫಲಿತಾಂಶವನ್ನೇ ಪ್ರಟಿಸಿಲ್ಲ. ಹಲವು ಹುದ್ದೆಗಳಿಗೆ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರೂ, ನೇಮಕ ಆದೇಶ ನೀಡಿಲ್ಲ.

ಅಧಿಕಾರಕ್ಕೆ ಬಂದ ಪಕ್ಷಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಭರ್ತಿಯಾಗದ ಹುದ್ದೆಗಳಿಂದಾಗಿ ಸರ್ಕಾರದ ಬೊಕ್ಕಸದಲ್ಲಿ ಕೋಟ್ಯಂತರ ಹಣ ಉಳಿತಾಯವಾಗುತ್ತಿದೆ. ಅಷ್ಟೇ ಅಲ್ಲ, ಹುದ್ದೆಗಳನ್ನು ತುಂಬುವುದರಿಂದ ‘ಹೊರೆ’ ಹೆಚ್ಚುತ್ತದೆ ಎನ್ನುವುದು ಆರ್ಥಿಕ ಇಲಾಖೆ ವಾದ. ಅಲ್ಲದೆ, ಮಿತವ್ಯಯ ನೆಪ ಮುಂದಿಟ್ಟು ಹುದ್ದೆ ಭರ್ತಿಗೆ ಅಡ್ಡಗಲು ಹಾಕುತ್ತಿದೆ. ಈ ಧೋರಣೆಯಿಂದ ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿರುವ ಯುವ ಸಮೂಹ ತೀವ್ರ ನಿರಾಸೆ ಅನುಭವಿಸುತ್ತಿದೆ. ಆ ವರ್ಗದಲ್ಲಿ ಆಕ್ರೋಶವೂ ಮಡುಗಟ್ಟಿದೆ.

ಆಡಳಿತಕ್ಕೆ ಚುರುಕು ಮುಟ್ಟಿಸಿ, ಭ್ರಷ್ಟಾಚಾರ ಮತ್ತು ಅನಗತ್ಯ ಖರ್ಚು- ವೆಚ್ಚಕ್ಕೆ ಕಡಿವಾಣ ಹಾಕಲು ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ಶಿಫಾರಸ್ಸಿನ ಅನ್ವಯ ವಿವಿಧ ಇಲಾಖೆಗಳಲ್ಲಿ 25,144 ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಆದರೆ, ನಂತರ ಬೇರೆ ರೂಪದಲ್ಲಿ ಕೆಲವು ಹುದ್ದೆಗಳನ್ನು ಹಿಂದಿನ ಸರ್ಕಾರಗಳು ಸೃಜಿಸಿವೆ. ಆದರೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರ, ಹೊರಗುತ್ತಿಗೆ ಏಜೆನ್ಸಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ವಿಪರ್ಯಾಸ.

ಖಾಲಿ ಇರುವ ‘ಡಿ’ ಗ್ರೂಪ್ ಹುದ್ದೆಗಳ ನೇರ ನೇಮಕ ಪ್ರಸ್ತಾವನೆಗೆ ಅನುಮೋದನೆ ನೀಡುವ ಬದಲು, ಬಾಹ್ಯ ಮೂಲಗಳಿಂದ ಭರ್ತಿ ಮಾಡುವಂತೆ ಕೆಲವು ಇಲಾಖೆಗಳಿಗೆ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಕಾಯಂ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ ಅನ್ವಯವಾಗುತ್ತದೆ. ಅದರಿಂದ ಹೆಚ್ಚಿನ ಹೊರೆ. ಅದರ ಬದಲು ಹೊರ ಗುತ್ತಿಗೆ ವ್ಯವಸ್ಥೆ ಉತ್ತಮ ಎನ್ನುವುದು ಆರ್ಥಿಕ ಇಲಾಖೆ ವಾದ.

ಬೀದಿಗೆ ಬಿದ್ದ ಬದುಕು

ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡದ ಕಾರಣ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಮೀರಿ ಬೀದಿಗೆ ಬಿದ್ದಿದ್ದಾರೆ. ಗರಿಷ್ಠ ವಯೋಮಿತಿ ಹೆಚ್ಚಿಸಬೇಕೆಂಬ ನಿರುದ್ಯೋಗಿಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.

2012 ರಿಂದ 2015ರವರೆಗೆ ಯಾವುದೇ ನೇಮಕ ಅಧಿಸೂಚನೆ ಹೊರಡಿಸಿಲ್ಲ. ಈ ಕಾರಣಕ್ಕೆ ಸರ್ಕಾರಿ ಉದ್ಯೋಗ ವಂಚಿತರ ಸಂಖ್ಯೆ ಕೂಡಾ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 1977ರ ನಿಯಮ 6ರಲ್ಲಿ ಪ್ರವರ್ಗವಾರು ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 35, ಹಿಂದುಳಿದ ವರ್ಗ 38, ಪರಿಶಿಷ್ಟ ಜಾತಿ, ಪರಿಶಿಷ್ಡ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ವಿಧಾನಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ 2018ರ ನ. 17ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಗರಿಷ್ಠ ವಯೋಮಿತಿ ಹೆಚ್ಚಿಸಲು ಆಗ್ರಹಿಸಿದ್ದರು. ಉದ್ಯೋಗ ಆಕಾಂಕ್ಷಿಗಳು ಮನವಿ ಸಲ್ಲಿಸುತ್ತಲೇ ಇದ್ದಾರೆ. 'ಗರಿಷ್ಠ ವಯೋಮಿತಿ ಹೆಚ್ಚಳ ಮಾಡುವುದು ಸೂಕ್ತವಲ್ಲ ಮತ್ತು ಈ ಸಂಬಂಧದ ಪ್ರಸ್ತಾವನೆ ಕೂಡಾ ಸಮಂಜಸವಲ್ಲ' ಎಂದು ಈ ಬೇಡಿಕೆಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿರಸ್ಕರಿಸಿದ್ದಾರೆ.

ಬೇಕಾಬಿಟ್ಟಿ ನೇಮಕಕ್ಕೆ ಬ್ರೇಕ್

ಹೊರ ಗುತ್ತಿಗೆ ನೇಮಕವನ್ನೇ ಕೆಲ ಇಲಾಖೆಗಳು ‘ದಂಧೆ’ ಮಾಡಿ ಕೊಂಡಿವೆ. ಅಂಥ ಇಲಾಖೆಗಳ ಮುಖ್ಯಸ್ಥರು, ತಮ್ಮ ಸಂಬಂಧಿಕರಿಗೆ, ಆಪ್ತರಿಗೆ, ನಿವೃತ್ತ ಸಿಬ್ಬಂದಿಗೆ ಕೆಲಸ ಕೊಡುವ ಉದ್ದೇಶದಿಂದ ಗುತ್ತಿಗೆ ಏಜೆನ್ಸಿಗಳ ಜೊತೆ ‘ಹೊಂದಾಣಿಕೆ’ ಮಾಡಿಕೊಳ್ಳುತ್ತಾರೆ. ಖಾಲಿ ಹುದ್ದೆ ಇಲ್ಲದಿದ್ದರೂ ಅಥವಾ ಅಗತ್ಯ ಇಲ್ಲದಿದ್ದರೂ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಹೊರ ಗುತ್ತಿಗೆ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳವ ಅಧಿಕಾರವನ್ನು ಆರ್ಥಿಕ ಇಲಾಖೆ 2018ರ ಡಿ. 29ರಂದು ಇಲಾಖಾ ಮುಖ್ಯಸ್ಥರಿಂದ ಕಿತ್ತುಕೊಂಡಿತ್ತು. ಆದರೆ, ಕೆಲ ಷರತ್ತು ವಿಧಿಸಿ ಇದೇ ಮಾರ್ಚ್ 22ರಂದು ಮತ್ತೆ ಅನುಮತಿ ನೀಡಿದೆ. ‘ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಹೊರಗುತ್ತಿಗೆ ಮೇಲೆ ನೇಮಿಸಿಕೊಳ್ಳಬೇಕು. ಮಂಜೂರಾಗದ/ಹುದ್ದೆಗಳಿಲ್ಲದೆ ಹೊರಗುತ್ತಿಗೆಯಲ್ಲಿ ನೇಮಿಸಿಕೊಂಡಿದ್ದರೆ ತಕ್ಷಣ ರದ್ದುಪಡಿಸಬೇಕು. ಅದರ ಹೊರತಾದ ಯಾವುದೇ ಹೊರಗುತ್ತಿಗೆ ನೇಮಕಕ್ಕೆ ಆರ್ಥಿಕ ಇಲಾಖೆಯ ಪೂರ್ವಾನುಮತಿ ಕಡ್ಡಾಯ’ ಎಂದೂ ಸ್ಪಷ್ಟಪಡಿಸಿದೆ.

ಲೋಕಾಯುಕ್ತಕ್ಕೆ ದೂರು!

ಅರಣ್ಯ ಇಲಾಖೆ, ಶಿಕ್ಷಕರು, ಬಿಬಿಎಂಪಿ ಪೌರಕಾರ್ಮಿಕರು ಸೇರಿದಂತೆ ಕೆಲವು ಇಲಾಖೆಗಳ ಹೊರಗುತ್ತಿಗೆ ನೌಕರರು, ತಾವು ಎದುರಿಸುತ್ತಿರುವ ಶೋಷಣೆ ವಿರುದ್ಧ ಲೋಕಾಯುಕ್ತ ಮೆಟ್ಟಿಲೇರಿದ್ದಾರೆ. ದೂರುದಾರರ ಅವಸ್ಥೆ– ಆಡಳಿತ ವರ್ಗದ ವ್ಯವಸ್ಥೆಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ, ಹಲವು ಪ್ರಕರಣಗಳಲ್ಲಿ ತಕ್ಷಣ ವೇತನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಕಾರಣಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಇದೇ ಜೂನ್ 26ರಂದು ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಸರ್ಕಾರದ ಎಲ್ಲ ಇಲಾಖೆಗಳು ಹಾಗೂ ಅಧೀನದಲ್ಲಿರುವ ನಿಗಮ, ಮಂಡಳಿ, ಸೊಸೈಟಿ ಸೇರಿದಂತೆ ಎಲ್ಲ ರೀತಿಯ ಸಂಸ್ಥೆಗಳು ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಎರಡು ವರ್ಷಗಳಿಂದ ಇಲ್ಲಿವರೆಗೆ ಪಾವತಿಸಿರುವ ವೇತನ, ಪಿ.ಎಫ್, ಇ.ಎಸ್.ಐ ಸೇರಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕಾರ್ಮಿಕ ಇಲಾಖೆಗೆ ಆದೇಶಿಸಿದ್ದಾರೆ.

ಸರ್ಕಾರ ಏನು ಮಾಡಬೇಕು?
* ಹೊರಗುತ್ತಿಗೆ ವ್ಯವಸ್ಥೆಯನ್ನು ಆನ್‌ಲೈನ್‌ಗೊಳಿಸಬೇಕು

* ಸರ್ಕಾರದ ವ್ಯವಸ್ಥೆ ಮೂಲಕವೇ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು

* ಹೊರಗುತ್ತಿಗೆ/ಗುತ್ತಿಗೆ ನೌಕರರ ಹಾಜರಾತಿಗೂ ಬಯೋಮೆಟ್ರಿಕ್‌ ಕಡ್ಡಾಯಗೊಳಿಸಬೇಕು

* ಪ್ರತಿ ತಿಂಗಳು 5ನೇ ತಾರೀಕಿಗೆ ವೇತನ ಪಾವತಿಸಬೇಕು

* ಪಿಎಫ್‌, ಇಎಸ್‌ಐ ಪಾವತಿ ಬಗ್ಗೆ ಇಲಾಖೆ ಮುಖ್ಯಸ್ಥರು ನಿಗಾ ವಹಿಸಬೇಕು. ಲೋಪಗಳಿಗೆ ಅವರನ್ನೇ ಹೊಣೆ ಮಾಡಬೇಕು

* ಏಜೆನ್ಸಿ ಮೂಲಕ ನೇಮಕಗೊಂಡರೂ, ಸರ್ಕಾರವೇ ನೌಕರರ ಹಿತ ಕಾಪಾಡಬೇಕು

**
ಏನು ಹೇಳುತ್ತಾರೆ?

ಉತ್ತರದಾಯಿತ್ವ ಇರುವುದಿಲ್ಲ

‘ಹೊರಗುತ್ತಿಗೆ ನೌಕರರಿಗೆ ಉತ್ತರದಾಯಿತ್ವ, ಜವಾಬ್ದಾರಿ ಇರುವುದಿಲ್ಲ. ಆ ನೌಕರರು ಸರ್ಕಾರದ ಕಡತಗಳಲ್ಲಿರುವ ರಹಸ್ಯ ಮಾಹಿತಿ ಸೋರಿಕೆ ಮಾಡಿರುವ ನಿದರ್ಶನಗಳಿವೆ. ಅವರ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆ ನೇಮಕದಲ್ಲೂ ಪಾರದರ್ಶಕತೆ ಇಲ್ಲ. ನೌಕರರಿಗೆ ಸರಿಯಾಗಿ ಸಂಬಳ ನೀಡದೆ, ಟೆಂಡರ್‌ದಾರರೇ ಹಣ ಗಳಿಸುತ್ತಿದ್ದಾರೆ. ಖಾಲಿ ಹುದ್ದೆ ಭರ್ತಿ ಮಾಡಿ ಹೊರಗುತ್ತಿಗೆ ನೌಕರರ ಸಂಖ್ಯೆ ಕಡಿಮೆ ಮಾಡಬೇಕು’


–ಕೆ. ರತ್ನಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿ


ಏಜೆನ್ಸಿಗಳಿಗೆ ಲಾಭ

‘ಹೊರಗುತ್ತಿಗೆ ನೌಕರರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ಶೇ 28ರಷ್ಟು ಹೊರೆ ಬೀಳುತ್ತಿದೆ. ಅಂದರೆ ಶೇ 10ರಷ್ಟು ಏಜೆನ್ಸಿಗಳಿಗೆ ಕಮಿಷನ್‌, ಶೇ 18 ಜಿಎಸ್‌ಟಿ ಪಾವತಿಬೇಕಿದೆ. ಗುತ್ತಿಗೆ ಪಡೆದು ನೌಕರರನ್ನು ಉದ್ಯೋಗಕ್ಕೆ ನೇಮಿಸಿಕೊಂಡ ಸಂಸ್ಥೆಗಳು ಕಾನೂನುಗಳನ್ನು ಗಾಳಿಗೆ ತೂರಿ ದುಡಿಸಿಕೊಳ್ಳುತ್ತಿವೆ. ನೌಕರರನ್ನು ಶೋಷಿಸುವ ಈ ಕೆಟ್ಟ ಪದ್ಧತಿ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದೇವೆ. 10- 15 ವರ್ಷ ದುಡಿದವರಿಗೂ ಸೇವಾ ಭದ್ರತೆ ನೀಡದ ಈ ಅಮಾನವೀಯ ವ್ಯವಸ್ಥೆಗೆ ಅಂತ್ಯವಾಡಬೇಕಿದೆ’


-ಡಾ.ಕೆ.ಎಸ್. ಶರ್ಮಾ, ಅಧ್ಯಕ್ಷ, ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘ


ಹೊರಗುತ್ತಿಗೆ ರದ್ದಾಗಬೇಕು

‘ಹೊರಗುತ್ತಿಗೆ ಮೂಲಕ ಏಜೆನ್ಸಿಗಳಿಗೆ ಸರ್ಕಾರ ಲಾಭ ಮಾಡಿಕೊಡುತ್ತಿದೆ. ಸರಿಯಾಗಿ ವೇತನ, ಪಿಎಫ್‌, ಇಎಸ್‌ಐ ಪಾವತಿಸದೆ ಶೋಷಿಸುತ್ತಿರುವುದು ಗೊತ್ತಿರುವ ಸತ್ಯ. ಈ ಪದ್ಧತಿ ರದ್ದುಪಡಿಸಬೇಕು ಎನ್ನುವುದು ಸಂಘದ ಸ್ಪಷ್ಟ ನಿಲುವು. ಅದರ ಬದಲು, ಖಾಲಿ ಹುದ್ದೆ ಭರ್ತಿ ಮಾಡಲಿ ಅಥವಾ ಸರ್ಕಾರವೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ನೌಕರರ ಹಿತ ರಕ್ಷಣೆಗೆ ಮುಂದಾಗಬೇಕು. ಏಜೆನ್ಸಿಗಳಿಗೆ ಲಾಭ ಮಾಡಿಕೊಡುವ ಹೊರಗುತ್ತಿಗೆ ಪದ್ಧತಿಯನ್ನು ಮುಂದುವರಿಸಬಾರದು’


–ಸಿ.ಎಸ್. ಷಡಕ್ಷರಿ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ


ಮೋಸದ ವ್ಯವಸ್ಥೆ

‘ನೌಕರರಿಗೂ, ಸರ್ಕಾರಕ್ಕೂ ಏಕಕಾಲದಲ್ಲಿ ಮೋಸ ಮಾಡುವ ಹೊರಗುತ್ತಿಗೆ ವ್ಯವಸ್ಥೆ ರದ್ದಾಗಬೇಕು. ಗುತ್ತಿಗೆ ಏಜೆನ್ಸಿಗಳು ಅಧಿಕಾರಿ ಮತ್ತು ರಾಜಕಾರಣಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಲೂಟಿ ಹೊಡೆಯುತ್ತವೆ. ಎಲ್ಲ ಶೋಷಣೆಗಳನ್ನು ಸಹಿಸಿಕೊಂಡು ದುಡಿಯುವ ನೌಕರರ ಅಸಹಾಯಕತೆಯನ್ನು ಬಳಸಿಕೊಂಡು ಏಜೆನ್ಸಿಗಳು ಮೆರೆಯುತ್ತಿವೆ. ಏಜೆನ್ಸಿಗಳನ್ನಷ್ಟೇ ಶ್ರೀಮಂತರನ್ನಾಗಿ ಮಾಡುವ ಈ ಪದ್ಧತಿ ಕೊನೆ ಆಗಲೇಬೇಕು’


–ಡಿ. ನಾಗಲಕ್ಷ್ಮಿ, ರಾಜ್ಯ ನಾಯಕರು, ಎಐಯುಟಿಯುಸಿ


ಉದ್ಯೋಗ ಭದ್ರತೆ ನೀಡಲಿ

‘ಹೊರಗುತ್ತಿಗೆ ಎನ್ನುವ ಅಕ್ರಮ ವ್ಯವಸ್ಥೆ ಪೋಷಿಸುವ ಸರ್ಕಾರದ ಧೋರಣೆ ಸರಿಯಲ್ಲ. ಗುತ್ತಿಗೆದಾರರು, ಪ್ರಭಾವಿಗಳ ಲಾಬಿಯಿಂದ ಈ ವ್ಯವಸ್ಥೆ ಮುಂದುವರಿದಿದೆ. ಆಡಳಿತದ ಕಾರ್ಯಕ್ಷಮತೆ ಕುಗ್ಗಿಸುತ್ತಿರುವ, ನೌಕರರನ್ನು ಶೋಷಿಸುವ, ಗುತ್ತಿಗೆದಾರರ ಲೂಟಿಗೆ ಅನುವು ಮಾಡಿಕೊಡುವ ಈ ಪದ್ಧತಿ ರದ್ದಾಗಬೇಕು‌. ಹೊರಗುತ್ತಿಗೆ ನೌಕರರನ್ನು ಸರ್ಕಾರ ‌‌‌ಪರಿಗಣಿಸಿ ಒಳಗುತ್ತಿಗೆ ನೌಕರರನ್ನಾಗಿ ಪರಿವರ್ತಿಸಿ ಉದ್ಯೋಗ ಭದ್ರತೆ ನೀಡಬೇಕು’


–ಡಾ. ವಾಸು ಎಚ್‌.ವಿ, ಸಂಚಾಲಕರು, ಉದ್ಯೋಗಕ್ಕಾಗಿ ಯುವಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT