ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಮುದ್ರಕ್ಕೆ ಸೇರುತ್ತಿದೆ ವಿಷ!

Last Updated 24 ಏಪ್ರಿಲ್ 2021, 20:28 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿರುವ ಬಹುತೇಕ ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಎರಡು ದಶಕಗಳಿಂದ ಎಷ್ಟೇ ಹೋರಾಟ ನಡೆದರೂ ಅರಬ್ಬಿ ಸಮುದ್ರಕ್ಕೆ ವಿಷ ಸೇರುವುದು ತಪ್ಪಿಲ್ಲ.

‘ಎಂಆರ್‌ಪಿಎಲ್‌, ಎಂಸಿಎಫ್‌ ಸೇರಿದಂತೆ ಬೈಕಂಪಾಡಿಯಲ್ಲಿರುವ 850 ಕೈಗಾರಿಕೆಗಳು, ಜಿಲ್ಲೆಯಲ್ಲಿರುವ 1,400 ಕೈಗಾರಿಕೆಗಳು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಗಾಳಿಗೆ ತೂರಿವೆ. ತ್ಯಾಜ್ಯ ನೀರನ್ನು ನೇರವಾಗಿ ಸಮುದ್ರಕ್ಕೆ ಅಥವಾ ನದಿಗೆ ಹರಿಸುತ್ತಿವೆ. ಇದನ್ನು ನಿಯಂತ್ರಿಸಬೇಕಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಚಾಲಕ ಶಶಿಧರ ಶೆಟ್ಟಿ ದೂರುತ್ತಾರೆ.

‘ಬಂದರಿನಿಂದ ಸುರತ್ಕಲ್‌ವರೆಗೆ ಸಮುದ್ರದಲ್ಲಿ ಹಿಂದೆ 25ರಿಂದ 30 ಬಗೆಯ ಮೀನುಗಳು ಸಿಗುತ್ತಿದ್ದವು. ಕಾರ್ಖಾನೆ ತ್ಯಾಜ್ಯ ಸೇರುವ ಪ್ರದೇಶಗಳಲ್ಲಿ ಮೀನಿನ ಸಂತತಿ ಕ್ಷೀಣಿಸಿದೆ’ ಎನ್ನುವುದು ನಗರದ ಮೀನುಗಾರಿಕಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ರಾಮಚಂದ್ರ ಭಟ್ ಅವರ ಆರೋಪ.

‘ಮಂಗಳೂರಿನ ಕಾವೂರು, ಬಜಾಲ್‌, ಸುರತ್ಕಲ್‌ ಮತ್ತು ಪಚ್ಚನಾಡಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿವೆ. ಕಾವೂರು ಘಟಕದ ಸಂಸ್ಕರಿತ ನೀರನ್ನು ಎಸ್‌ಇಜೆಡ್‌ನವರು ಖರೀದಿಸಿ, ಕೈಗಾರಿಕೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಉಳಿದ ಮೂರು ಘಟಕಗಳ ನೀರನ್ನು ಸಂಸ್ಕರಿಸಿ ಚರಂಡಿಗೆ ಬಿಡಲಾಗುತ್ತಿದೆ.ಇದಕ್ಕೆ ಹೆಚ್ಚಿನ ಅನುದಾನ ಅಗತ್ಯವಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವ ಯೋಚನೆಯಿದೆ’ ಎನ್ನುತ್ತಾರೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ.

‘ಒಂದೂವರೆ ತಿಂಗಳಿಂದ ನಗರದ ಒಳಚರಂಡಿ ನೀರನ್ನು ಶುದ್ಧೀಕರಿಸದೆ, ನೇರವಾಗಿ ಮರವೂರು ವೆಂಟೆಡ್‌ ಡ್ಯಾಮ್‌ಗೆ ಬಿಡಲಾಗುತ್ತಿದೆ. ಅದೇ ನೀರಿಗೆ ಆಲಂ, ಬ್ಲೀಚಿಂಗ್ ಪೌಡರ್‌ ಹಾಕಿ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಇದು ಗೊತ್ತಿದ್ದರೂ ಜನರು ಧ್ವನಿ ಎತ್ತುತ್ತಿಲ್ಲ. ಒಳಚರಂಡಿ ನೀರನ್ನು ಫಲ್ಗುಣಿ ನದಿಗೆ ಬಿಟ್ಟ ಪರಿಣಾಮ ಮೀನುಗಳ ಮೈಮೇಲೆ ಕಜ್ಜಿಗಳು ಕಾಣಿಸಿಕೊಂಡಿದ್ದವು’ ಎಂದು ಶಶಿಧರ ಶೆಟ್ಟಿ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT