ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ವಿದ್ಯುತ್ ಸಮಸ್ಯೆ; ಗೋಳು ತಪ್ಪಿಸದ ಸೌರವಿದ್ಯುತ್‌

ಸಾಮಾನ್ಯ ರೈತರಿಗಿದು ವೆಚ್ಚದಾಯಕ, ಸಬ್ಸಿಡಿಗೆ ಹಲವು ನಿಬಂಧನೆ l ಕೆಲವೆಡೆ ಕೊಂಚ ಅನುಕೂಲ
Last Updated 19 ಮಾರ್ಚ್ 2022, 21:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೌರವಿದ್ಯುತ್‌ ಪಂಪ್‌ಸೆಟ್‌ಗಳ ಬಳಕೆ ಹೆಚ್ಚಾದರೆ ಸಾಂಪ್ರದಾಯಿಕ ವಿದ್ಯುತ್‌ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಸೌರ ವಿದ್ಯುತ್‌ ಪಂಪ್‌ಸೆಟ್‌ ಸಾಮರ್ಥ್ಯದ ಮಿತಿ ಹಾಗೂ ಸಬ್ಸಿಡಿ ವಿತರಣೆಯಲ್ಲಿ ಆಗುತ್ತಿರುವ ಲೋಪದಿಂದ ರೈತರು ಹಿಂದೆಸರಿಯುತ್ತಿದ್ದಾರೆ.

ಸಬ್ಸಿಡಿ ನೆರವಿನಿಂದ ಅನೇಕರು ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಪರ್ಯಾಯ ಇಂಧನದ ಮೂಲಕ ಕೃಷಿಯಲ್ಲಿ ಯಶಸ್ಸು ಪಡೆದ ರೈತಾಪಿ ವರ್ಗ ವಿರಳ. ದುಬಾರಿ ವೆಚ್ಚ ಭರಿಸುವ ಶಕ್ತಿ ಇಲ್ಲದ ಸಾಮಾನ್ಯ ರೈತರು ಇದಕ್ಕೆ ಆಸಕ್ತಿ ತೋರುತ್ತಿಲ್ಲ. ಅತಿ ಆಳದ ಕೊಳವೆಬಾವಿಯಿಂದ ನೀರು ಮೇಲೆತ್ತುವ ಬಯಲುಸೀಮೆ ರೈತರು ಸೌರವಿದ್ಯುತ್‌ನಿಂದ ವಿಮುಖರಾಗಿದ್ದಾರೆ.

ಕೃಷಿ ಪಂಪ್‌ಸೆಟ್‌ಗೆ ಸೌರವಿದ್ಯುತ್‌ ಸಂಪರ್ಕ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಜಾಲಮುಕ್ತ ಸೌರ ನೀರಾವರಿ ಪಂಪ್‌ಸೆಟ್‌ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ಪಂಪ್‌ಸೆಟ್‌ಗೆ ತಗಲುವ ₹ 4.6 ಲಕ್ಷ ವೆಚ್ಚದಲ್ಲಿ ರೈತರು ₹ 1 ಲಕ್ಷ ಭರಿಸುವುದು ಕಡ್ಡಾಯ. 2020ರವರೆಗೆ ಈ ಯೋಜನೆಯಲ್ಲಿ 3,710 ಪಂಪ್‌ಸೆಟ್‌ಗಳಿಗೆ ಮಾತ್ರ ಸೌರವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. 5 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಅತಿ ಆಳದಿಂದ ನೀರು ಹೊರತೆಗೆಯುವುದಿಲ್ಲ. ಸೋಲಾರ್‌ ಪ್ಯಾನಲ್‌ಗಳಿಂದ ಇದಕ್ಕೆ ಸಾಕಾಗುವಷ್ಟು ವಿದ್ಯುತ್‌ ಸಿಗದಿರುವುದರಿಂದ ಈ ಯೋಜನೆಗೆ ಹಿನ್ನಡೆಯಾಗಿದೆ.

ರಾಜ್ಯ ಸರ್ಕಾರದ ‘ಸೂರ್ಯ ರೈತ ಯೋಜನೆ’ ಹಾಗೂ ಕೇಂದ್ರ ಸರ್ಕಾರದ ‘ಕಿಸಾನ್‌ ಊರ್ಜಾ ಸುರಕ್ಷಾ ಮತ್ತು ಉತ್ಥಾನ್‌ ಮಹಾ ಅಭಿಯಾನ್‌ (ಕುಸುಮ್‌) ಯೋಜನೆ’ ಜಾರಿಯಲ್ಲಿವೆ. 7.5 ಎಚ್‌ಪಿ ಮೋಟರ್‌ಗೆ ಪೂರೈಸುವಷ್ಟು ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿಯಾಗಿ ಉತ್ಪಾದನೆ ಆಗುವ ವಿದ್ಯುತ್‌ಅನ್ನು ರೈತರು ಗ್ರಿಡ್‌ಗೆ ಪೂರೈಸಬೇಕು. ಈ ನಿರ್ಬಂಧ ರೈತರನ್ನು ನಿರೀಕ್ಷಿತ ಪ್ರಮಾಣದಲ್ಲಿ ಆಕರ್ಷಿಸುತ್ತಿಲ್ಲ.

ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿರುವ ಜಿಲ್ಲೆಗಳಲ್ಲಿ ಸೋಲಾರ್‌ ಪಂಪ್‌ಸೆಟ್‌ ರೈತರಿಗೆ ವರವಾಗಿಲ್ಲ. ಸಾವಿರ ಅಡಿ ಆಳದ ಕೊಳವೆಬಾವಿಗಳಿಂದ ನೀರು ಎತ್ತುವ ಸಾಮರ್ಥ್ಯ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಇಲ್ಲವೆಂಬುದು ರೈತರ ಅಳಲು. ಸಬ್ಸಿಡಿ ಆಸೆಯಿಂದ ಸೋಲಾರ್‌ ಸೌಲಭ್ಯ ಪಡೆದಿದ್ದ ಕೆಲವರು ಪ್ಯಾನಲ್‌ಗಳನ್ನು ಮಾರಾಟ ಮಾಡಿದ್ದಾರೆ. ಅಂತರ್ಜಲ ಮಟ್ಟ ಚೆನ್ನಾಗಿರುವ ಮಲೆನಾಡಿನ ಅಂಚು ಹಾಗೂ ಕರಾವಳಿಯಲ್ಲಿ ಮಾತ್ರ ಇದರಿಂದ ಕೊಂಚ ಅನುಕೂಲವಾಗಿದೆ.

ಸೋಲಾರ್ ಸಂಪರ್ಕ ಪಡೆದ ಪಂಪ್‌ಸೆಟ್‌ಗಳು
ಈವರೆಗೆ ರಾಜ್ಯದಾದ್ಯಂತ ವಿವಿಧ ಇಲಾಖೆ ಮತ್ತು ಸಂಸ್ಥೆಗಳಿಂದ ಒಟ್ಟು 6,426 (ಕ್ರೆಡೆಲ್‌–3,710, ಪಿಎಂ ಕುಸುಮ್‌ ಬಿ ಅಡಿ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ– 130, ಕೃಷಿ ಇಲಾಖೆ– 201,ಸಣ್ಣ ನೀರಾವರಿ– 2,075, ಬೆಸ್ಕಾಂನ ಸೂರ್ಯ ರೈತ– 310 ) ಸೌರ ನೀರಾವರಿ ಪಂಪ್‌ಸೆಟ್‌ ಅಳವಡಿಸಲಾಗಿದೆ.

*

ನಿಯಮಿತವಾಗಿ ವಿದ್ಯುತ್‌ ಪೂರೈಕೆ ಆಗುತ್ತಿರಲಿಲ್ಲ. ರಾತ್ರಿ ವೇಳೆ ನೀರು ಹಾಯಿಸಲು ಕಷ್ಟವಾಗುತ್ತಿತ್ತು. ಕೊಳವೆಬಾವಿಯ ಆಳ ಕಡಿಮೆ ಇರುವುದರಿಂದ ಸೌರ ವಿದ್ಯುತ್‌ ಬಳಕೆ ಆರಂಭಿಸಿದೆ.
–ಡಾ.ಶಂಕರ್‌ ಪಾಟೀಲ್‌,ಬಾತಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT