ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಶುದ್ಧ ನೀರು ಪೂರೈಕೆ ಎಂದು? ಜೀವಕ್ಕೆ ಎರವಾಗುತ್ತಿದೆ ಜೀವಜಲ

ಕಲುಷಿತ ನೀರು: ತಿಂಗಳಲ್ಲಿ 9 ಮಂದಿ ಸಾವು
Last Updated 2 ಜುಲೈ 2022, 20:17 IST
ಅಕ್ಷರ ಗಾತ್ರ

ಕಲಬುರಗಿ: ಕುಡಿಯಲು ಯೋಗ್ಯವಾದ ಶುದ್ಧ ನೀರು ಪೂರೈಸುವುದು ಸರ್ಕಾರದ ಹೊಣೆ. ಆದರೆ ರಾಜ್ಯದೆಲ್ಲೆಡೆ ಶುದ್ಧ ನೀರು ಪೂರೈಸುವ ಕಾರ್ಯ ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಉಳ್ಳವರು ಕ್ಯಾನ್‌ ನೀರು ಇಲ್ಲವೇ ನೀರು ಶುದ್ಧೀಕರಣ ವ್ಯವಸ್ಥೆ ಮಾಡಿಕೊಂಡರೆ, ಉಳಿದವರು ಸ್ಥಳೀಯ ಸಂಸ್ಥೆಗಳೇ ಪೂರೈಸುವ ನೀರನ್ನೇ ಶುದ್ಧವೆಂದು ಬಳಸುವಂತಾಗಿದೆ. ಹೀಗೆ ಬಳಸುವ ನೀರಿನಲ್ಲಿ ಕಲುಷಿತ ಅಂಶದ ಪ್ರಮಾಣ ಕೊಂಚ ಹೆಚ್ಚಿದ್ದರೂ ಜನರು ವಾಂತಿ–ಭೇದಿಯಿಂದ ಬಳಲುತ್ತಾರೆ. ಹಲವು ಸಂದರ್ಭಗಳಲ್ಲಿ ಪ್ರಾಣಕ್ಕೂ ಎರವಾಗುತ್ತಿದೆ.

ರಾಯಚೂರಿನಲ್ಲಿ ನಗರಸಭೆಯಿಂದ ಪೂರೈಕೆಯಾದ ಕಲುಷಿತ ನೀರನ್ನು ಕುಡಿದು ಜೂನ್‌ ತಿಂಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ಹಲವು ವರ್ಷಗಳಿಂದ ಹೂಳು ತುಂಬಿದ್ದ ಟ್ಯಾಂಕ್‌ಗಳ ಸ್ವಚ್ಛತೆ, ಸೋರಿಕೆಯಾಗುತ್ತಿರುವ ಪೈಪ್‌ಗಳ ದುರಸ್ತಿಯನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ. (ಒಂದು ಶುದ್ಧೀಕರಣ ಘಟಕದಲ್ಲಂತೂ 8 ರಿಂದ 10 ಅಡಿ ಹೂಳು ತುಂಬಿತ್ತು.) ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನು ಅಮಾನತು ಮಾಡಿದೆ. ಇಷ್ಟೆಲ್ಲ ಆದರೂ ಬೇಗ ಶುದ್ಧ ನೀರು ಸಿಗುವ ನಂಬಿಕೆ ಜನರಲ್ಲಿ ಇನ್ನೂ ಮೂಡಿಲ್ಲ.

ಕಲಬುರಗಿ, ಶಿವಮೊಗ್ಗ, ಮಂಡ್ಯ ಜಿಲ್ಲೆ ಸೇರಿದಂತೆ ಹಲವುಕಡೆ ಕುಡಿಯಲು ಯೋಗ್ಯವಲ್ಲದ ರಾಡಿಮಿಶ್ರಿತ ನೀರು ಪೂರೈಕೆ ಆಗುತ್ತಿದೆ. ಇಲ್ಲೂ ಕೂಡ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಕೆಲದಿನಗಳ ಹಿಂದೆ
ಶಿವಮೊಗ್ಗದಲ್ಲಿ ಜಲಮಂಡಳಿಯಿಂದ ಪೂರೈಕೆಯಾದ ಕಲುಷಿತನೀರು ಕುಡಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆಯಲ್ಲಿ ಟ್ಯಾಂಕ್‌ನಿಂದ ಪೂರೈಕೆ ಯಾದ ಮಲಿನ ನೀರು ಕುಡಿದು ಗ್ರಾಮಸ್ಥರೊಬ್ಬರು ಸಾವಿಗೀಡಾಗಿದ್ದರು.

‘ಕಲಬುರಗಿಯ ಕೆಲ ಬಡಾವಣೆಗಳಿಗೆ ಪೂರೈಕೆ ಯಾಗುವ ಪಾಚಿಮಿಶ್ರಿತ ಮತ್ತು ರಾಡಿ ನೀರು ಕುಡಿಯಲು ಅಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಲ್ಲ’ ಎಂದು ಸಂಘ ಸಂಸ್ಥೆಗಳು ಹಲವು ಬಾರಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿವೆ.
ಶಾಸಕರೂ ಧ್ವನಿಯೆತ್ತಿದ್ದಾರೆ. ನೀರು ಪೂರೈಕೆ ವ್ಯವಸ್ಥೆ ನಿರ್ವಹಿಸುವ ಎಲ್‌ ಅಂಡ್ ಟಿ ಕಂಪನಿಯ ಸಿಬ್ಬಂದಿ, ‘ಶುದ್ಧೀಕರಣ ಘಟಕಕ್ಕೆ ಹೊಸ ಸಾಧನಗಳನ್ನು ಅಳವಡಿಸದೇ ಮತ್ತು ಯಂತ್ರಗಳನ್ನು ಸರಿಯಾಗಿ ದುರಸ್ತಿ ಮಾಡಿಸದೇ ನಾವೇನೂ ಮಾಡಲಾಗದು’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬಹುತೇಕ ಕಡೆ ನೀರು ಶುದ್ಧೀಕರಣ ಘಟಕಗಳು ಸುಸ್ಥಿತಿಯಲ್ಲಿಲ್ಲ. ಹಳೆಯ ಕಾಲದ ಯಂತ್ರಗಳೇ ಕಾರ್ಯನಿರ್ವಹಿಸುತ್ತಿವೆ. ಅದೂ ಅಸಮರ್ಪಕವಾಗಿ. ಹೊಸ ಯಂತ್ರಗಳ ಅಳವಡಿಕೆಯಾಗಿಲ್ಲ ಎಂಬ ಆರೋಪ ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ಸುಧಾರಣೆಗೆಂದು ಅನುದಾನ ನೀಡಿದರೂ ಅದರ ಸದ್ಬಳಕೆ ಆಗುತ್ತಿಲ್ಲ ಎನ್ನುವ ದೂರುಗಳಿವೆ. ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರವು ರಾಯಚೂರು ನಗರಸಭೆಗೆ 2020 ರಿಂದ 2023ರ ವರೆಗಿನ ಅವಧಿಯಲ್ಲಿ ₹ 23.51 ಕೋಟಿ ಅನುದಾನ ನೀಡಿದೆ. ಆದರೆ, ನಗರಸಭೆ ಅಧಿಕಾರಿಗಳು ಅನುದಾನ ಬಳಕೆ ಮಾಡುವುದಿರಲಿ, ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆಯನ್ನೂ ಸಿದ್ಧಪಡಿಸಿಲ್ಲ ಎನ್ನುವುದೇ ದುರಂತ.

ರಾಯಚೂರಿನಲ್ಲಿ ಮೃತಪಟ್ಟ ಏಳು ನತದೃಷ್ಟರ ಪೈಕಿ ಮೂವರ ಕುಟುಂಬಕ್ಕೆ ನಗರಸಭೆಯಿಂದ ತಲಾ ₹ 10 ಲಕ್ಷ ಪರಿಹಾರ ಧನ ಕೈಸೇರಿದೆ. ರಾಜ್ಯ ಸರ್ಕಾರ ಘೋಷಿಸಿದ ₹ 5 ಲಕ್ಷ ಇನ್ನೂ ಅವರಿಗೆ ದೊರಕಿಲ್ಲ. ಉಳಿದ ನಾಲ್ವರಿಗೆ ಯಾವುದೇ ಪರಿಹಾರ ಬಂದಿಲ್ಲ. ‘ಎಷ್ಟು ಲಕ್ಷ ಪರಿಹಾರ ಕೊಟ್ಟರೇನು, ಅಗಲಿದವರು ಮತ್ತೆ ಬದುಕಿ ಬರುತ್ತಾರೆಯೇ’ ಎಂದು ಕುಟುಂಬ ಸದಸ್ಯರು ಕಣ್ಣೀರಾಗುತ್ತಾರೆ.

‘ಈಗಲಾದರೂ ಸಾವಿನ ಸರಣಿ ನಿಲ್ಲಿಸಿ, ಜನರು ಆರೋಗ್ಯದಿಂದ ಬದುಕಲು ಶುದ್ಧ ನೀರು ಪೂರೈಸಿ’ ಎಂದು ರಾಯಚೂರಿನ ನಿವಾಸಿಗಳು ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದ್ದಾರೆ.

‘ಕುದಿಸಿ ಆರಿಸಿದ ನೀರಿನ ಬಳಕೆ ಸೂಕ್ತ’

‘ಟ್ಯಾಂಕ್‌ ಶುಚಿಗೊಳಿಸುವುದರ ಜೊತೆಗೆ ಕ್ಲೋರಿನೇಷನ್ ಮತ್ತು ಬ್ಲೀಚಿಂಗ್ ಪುಡಿ ಮಿಶ್ರಣ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಪ್ರತಿದಿನವೂ ನೀರನ್ನು ಪರೀಕ್ಷಿಸಲಾಗುತ್ತಿದೆ. ಶುದ್ಧ ನೀರು ಪೂರೈಕೆಯಾಗುತ್ತಿದೆ. ಜನರು ಆತಂಕಪಡಬೇಕಿಲ್ಲ’ ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ಕಲುಷಿತ ನೀರು ಪೂರೈಕೆಯಾಗುತ್ತಿದ್ದ ವೇಳೆ 40ಕ್ಕೂ ಹೆಚ್ಚು ವಾಂತಿ ಮತ್ತು ಭೇದಿ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಅದರ ಪ್ರಮಾಣ 8ರಿಂದ 10ಕ್ಕೆ ಇಳಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸಿವೆ.

‘ಸ್ಥಾವರದಲ್ಲಿ ನೈರ್ಮಲ್ಯ ಕಾಪಾಡಿ, ಮನೆಗಳಿಗೆ ನೀರು ಪೂರೈಸಿದರೂ ಜನರು ಕುದಿಸಿ ಆರಿಸಿದ ನೀರು ಕುಡಿಯುವುದು ಅಗತ್ಯ. ಮಳೆಗಾಲದಲ್ಲಿ ಮಾತ್ರವಲ್ಲ, ಬೇರೆ ಸಮಯದಲ್ಲೂ ಕಾಯ್ದಾರಿಸಿದ ನೀರು ಕುಡಿಯುವುದು ಉತ್ತಮವೆಂದು ವೈದ್ಯರೇ ಸಲಹೆ ನೀಡುತ್ತಾರೆ. ಅದನ್ನು ಪಾಲಿಸುವುದು ಸೂಕ್ತ’ ಎಂದು ಅವರು ಹೇಳುತ್ತಾರೆ.

‘ಸುಧಾರಿಸದಿದ್ದರೆ ಮತ್ತೆ ಹೋರಾಟ’

‘ಶುದ್ಧ ನೀರಿಗಾಗಿ ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ತಂದಿದ್ದೇವೆ. ಆದರೆ ಸಾವು ನೋವುಗಳು ಸಂಭವಿಸಿದ ನಂತರವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ’ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಮುಖಂಡ ಡಾ.ರಜಾಕ್ ಉಸ್ತಾದ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಟ್ಯಾಂಕ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಶುದ್ಧ ನೀರು ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆದರೆ, ಪುನಃ ಕಲುಷಿತ ನೀರು ಪೂರೈಕೆಯಾದಲ್ಲಿ ಹೋರಾಟ ಮಾಡುವುದು ಅನಿವಾರ್ಯ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT