ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ನಾಡಿಗೆ ಮಾದರಿ ಈ ನೀರಾವರಿ ಯೋಜನೆ

Last Updated 9 ಜನವರಿ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೊದಲಿಗೆ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿದ ಕೀರ್ತಿರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿಗೆ ಸಲ್ಲುತ್ತದೆ. ಇಲ್ಲಿಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆ ನಾಡಿಗೆ ಮಾದರಿಯಾಗಿವೆ.

ಕಾವೇರಿ ಉಪನದಿ ಶಿಂಷಾ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಕೆರೆಗೆ ನೀರು ತುಂಬಿಸಲಾ ಗುತ್ತಿದೆ. ಗರಕಹಳ್ಳಿ ಯೋಜನೆಯಲ್ಲಿ 14 ಹಾಗೂ ಕಣ್ವ ಯೋಜನೆಯಲ್ಲಿ 106 ಕೆರೆಗಳಿಗೆ ನೀರು ಹರಿಸಲಾಗಿದೆ. ಕಣ್ವದ 86 ಕೆರೆ ಭರ್ತಿಯಾಗಿದ್ದು, ಚನ್ನಪಟ್ಟಣ ತಾಲ್ಲೂಕಿನ ಕೃಷಿ ಚಿತ್ರಣ ಬದಲಾಗಿದೆ.

ಹೇಮಾವತಿ ನದಿ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆ ಆರೇಳು ವರ್ಷದಿಂದ ಕುಂಟುತ್ತ ಸಾಗಿದೆ. ಯೋಜನೆ ಸಾಕಾರಗೊಂಡಲ್ಲಿ ಮಾಗಡಿ ತಾಲ್ಲೂಕಿನ 68, ತುಮಕೂರು ಜಿಲ್ಲೆಯ 15 ಕೆರೆಗಳಿಗೆ ನೀರು ಹರಿಯಲಿದೆ. 289 ಗ್ರಾಮ ಗಳ ಕುಡಿಯುವ ನೀರಿನ ಅಭಾವ ನೀಗಲಿದೆ. ಕನಕಪುರ ತಾಲ್ಲೂಕಿನಲ್ಲಿ ರಾಂಪುರ ಏತ ನೀರಾವರಿ ಚಾಲ್ತಿಯಲ್ಲಿದೆ. ₹480 ಕೋಟಿ ವೆಚ್ಚದ ಮತ್ತೊಂದು ಕಾಮಗಾರಿಗೂ ಚಾಲನೆ ನೀಡಲಾಗಿದೆ.

ಬೆರಳೆಣಿಕೆ ಕೆರೆಗಳಿಗೆ ನೀರು: ತುಮಕೂರು ಜಿಲ್ಲೆಯಲ್ಲಿ ಹೊನ್ನವಳ್ಳಿ, ಗೂಳೂರು, ಹೆಬ್ಬೂರು, ಶ್ರೀರಂಗ, ಬಿಕ್ಕೇಗುಡ್ಡ ಏತ ನೀರಾವರಿಯಡಿ ಕೆರೆ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಬಹುತೇಕ ಕೆರೆಗಳಿಗೆ ಇನ್ನೂ ನೀರು ತುಂಬಿಸಲು ಸಾಧ್ಯವಾಗಿಲ್ಲ.

ದಬ್ಬೇಘಟ್ಟ ಏತನೀರಾವರಿಯಿಂದ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಜಿಲ್ಲೆಗೆ ಪ್ರತಿ ವರ್ಷ ಹಾಸನದ ಗೊರೂರಿನ ಹೇಮಾವತಿ ಜಲಾಶಯದಿಂದ 24.5 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಕುಡಿಯುವ ನೀರಿನ ಕೆರೆ ತುಂಬಿಸಲಾಗುತ್ತಿದೆ. ಏತ ನೀರಾವರಿ ಯೋಜನೆಯ ಎಲ್ಲ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ.

ಕೆ.ಸಿ ವ್ಯಾಲಿ ವರದಾನ: ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ, ಕೋಲಾರ ಜಿಲ್ಲೆಯ ಕೆರೆ ತುಂಬಿಸುವ ಕೆ.ಸಿ (ಕೋರಮಂಗಲ– ಚಲ್ಲಘಟ್ಟ) ವ್ಯಾಲಿಯೋಜನೆ ಅಡಿ ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಯ 80 ಕೆರೆ ಮತ್ತು 98 ಚೆಕ್‌ಡ್ಯಾಂ ತುಂಬಿಸಲಾಗಿದೆ. ಕೊಳಚೆ ನೀರನ್ನು ಮತ್ತಷ್ಟು ಸಂಸ್ಕರಿಸಿ ಎನ್ನುವ ಬೇಡಿಕೆ ಬಲವಾಗಿದೆ.

₹1,280 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಲ್ಲಿ ಜಿಲ್ಲೆಗೆ 6 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಬತ್ತಿದ್ದ 500 ಕೊಳವೆಬಾವಿಗಳು ಮರುಪೂರಣಗೊಂಡಿವೆ. 2018ರಲ್ಲಿ ಪೂರ್ಣಗೊಂಡ ಕೆ.ಸಿ ವ್ಯಾಲಿ ಯೋಜನೆ ಮೊದಲ ಹಂತದಲ್ಲಿ ಕೋಲಾರ ಜಿಲ್ಲೆಯ 137 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ 8 ಕೆರೆ ತುಂಬಿಸಿದರೆ, 257 ಕೆರೆ ತುಂಬಿಸುವ ₹450 ಕೋಟಿ ವೆಚ್ಚದ 2ನೇ ಹಂತದ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.

ಪೂರಕ ಮಾಹಿತಿ:ಆರ್‌. ಜಿತೇಂದ್ರ, ಗಿರೀಶ್‌ ಜೆ.ಆರ್‌., ಪ್ರಶಾಂತ್‌ ಕುರ್ಕೆ, ಸಾದಿಕ್‌ ಪಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT