ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ...

Last Updated 5 ಸೆಪ್ಟೆಂಬರ್ 2021, 3:41 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಬೆಳಗಾವಿ, ಹಾವೇರಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಹಾಗೂ ಕರಾವಳಿ ಭಾಗದ ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಸಿಗದೇ ಸೋಂಕಿತರು ಮೃತಪಟ್ಟ ಒಂದೂ ಪ್ರಕರಣ ವರದಿಯಾಗಿಲ್ಲ.

ಈ ಭಾಗದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಿದ್ದು, ಆಮ್ಲಜನಕ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಿಂದಲೇ ಆಮ್ಲಜನಕ ಪೂರೈಕೆಯಾಗುತ್ತದೆ. ಬಳ್ಳಾರಿ– ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಎಂದೂ ಆಮ್ಲಜನಕದ ಕೊರತೆ ಎದುರಾಗಿಲ್ಲ. ಆದರೆ, ಎರಡನೇ ಅಲೆ ಬಂದಾಗ ಜಿಲ್ಲೆಯಲ್ಲಿ ನಿತ್ಯ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಎಲ್ಲ ಆಮ್ಲಜನಕ ಸಹಿತ ಹಾಸಿಗೆಗಳು ತುಂಬಿರುತ್ತಿದ್ದವು. ತುರ್ತಾಗಿ ಆಮ್ಲಜನಕ ಹಾಸಿಗೆ ಸಿಗದೆ ಕೆಲವರು ಮೃತಪಟ್ಟಿದ್ದರೇ ಹೊರತು ಆಮ್ಲಜನಕದ ಕೊರತೆಯಿಂದಲ್ಲ. ಉತ್ತರ ಕರ್ನಾಟಕ ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇತ್ತು.

ಎರಡನೇ ಅಲೆಯ ಸಂದರ್ಭದಲ್ಲಿ ಈ ಭಾಗದ ಬಹುತೇಕ ಜಿಲ್ಲೆಗಳಿಗೆ ಧಾರವಾಡದಿಂದಲೇಆಮ್ಲಜನಕ ಪೂರೈಕೆಯಾಯಿತು. ಬಳ್ಳಾರಿಯ ತೋರಣಗಲ್‌ನಲ್ಲಿರುವ ಜಿಂದಾಲ್ ಪ್ಲಾಂಟ್‌ನಿಂದ ಇಲ್ಲಿಗೆ ಪೂರೈಕೆಯಾಗು ತ್ತಿದ್ದ ದ್ರವೀಕೃತ ಆಮ್ಲಜನಕವು ಇಲ್ಲಿರುವ ಮೂರು ಮರುಪೂರಣ ಘಟಕಗಳ ಮೂಲಕ ಇತರ ಜಿಲ್ಲೆಗಳಿಗೆ ಪೂರೈಕೆಯಾಗುತ್ತಿತ್ತು. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಎದುರಾಗಲಿಲ್ಲ.

ಬೆಳಗಾವಿ ಜಿಲ್ಲೆಗೆ, ದ್ರವೀಕೃತ ವೈದ್ಯಕೀಯ ಆಮ್ಲಜನಕಕ್ಕಾಗಿ ಬೇರೆ ಜಿಲ್ಲೆಗಳ ಮೇಲೆ ಅವಲಂಬನೆ ಯಾಗುವುದು ತಪ್ಪಿಲ್ಲ. ಸದ್ಯಕ್ಕೆ ನಿತ್ಯ 10 ಕೆ.ಎಲ್. ದ್ರವೀಕೃತ ವೈದ್ಯಕೀಯ ಆಮ್ಲಜನಕ ಬೇಕಾಗುತ್ತದೆ. ಅದಕ್ಕಾಗಿ ಹೊಸಪೇಟೆ ಹಾಗೂ ಹುಬ್ಬಳ್ಳಿಯನ್ನು ಅವಲಂಬಿಸಬೇಕಿದೆ. ಸ್ವಂತವಾಗಿ ನಿತ್ಯ 1,799 ಜಂಬೊ ಸಿಲಿಂಡರ್‌ ಉತ್ಪಾದಿಸಬಹುದಾದ ಸಾಮರ್ಥ್ಯವಿದೆ. ಮೂರನೇ ಅಲೆ ಬಂದಲ್ಲಿ ನಿರ್ವಹಿಸುವುದಕ್ಕೆ ಸಾಧ್ಯ ವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದಿಸಿ, ಸಂಗ್ರಹಿಸಿ ಪೂರೈಸುವ ಮೂರು ಘಟಕಗಳಿವೆ. ಅವುಗಳಿಂದ ನಿತ್ಯ 600 ಹಾಸಿಗೆಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ವ್ಯವಸ್ಥೆಯಾಗುತ್ತದೆ. ಇದಲ್ಲದೇ, ಅಥಣಿ, ರಾಯಬಾಗ, ಚಿಕ್ಕೋಡಿ, ಬೈಲಹೊಂಗಲ ಮತ್ತು ಗೋಕಾಕ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಹಾಸಿಗೆಗಳಿಗೆ ನಿರಂತರವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಬಹುದಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಿಮಿಷಕ್ಕೆ ಸಾವಿರ ಲೀಟರ್‌ ಪ್ರಾಣವಾಯು
ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿ ನಿಮಿಷಕ್ಕೆ ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವ ಘಟಕ ಸಿದ್ಧಗೊಳ್ಳುತ್ತಿದೆ. ಮುಧೋಳ, ಜಮಖಂಡಿಯಲ್ಲಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ತಯಾರಿಸುವ ಘಟಕಗಳು ಮಂಜೂರಾಗಿದ್ದು, ಮುಧೋಳ ಘಟಕ ಉತ್ಪಾದನೆ ಆರಂಭಿಸಿದೆ. ಬೀಳಗಿ, ಬಾದಾಮಿ ಹಾಗೂ ಹುನಗುಂದ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆಮ್ಲಜನಕ ಉತ್ಪಾದನಾ ಘಟಕ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆಮ್ಲಜನಕ ಉತ್ಪಾದನಾ ಘಟಕ

ಕರಾವಳಿಯನ್ನು ಕಾಡಲಿಲ್ಲ ಆಮ್ಲಜನಕ
ಮಂಗಳೂರು:
ಕರಾವಳಿಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಆಗದಂತೆ, ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ರಾಜ್ಯದಲ್ಲಿ ಆಮ್ಲಜನಕದ ತೀವ್ರ ಕೊರತೆ ಎದುರಾದ ಸಂದರ್ಭದಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ‘ಸಮುದ್ರ ಸೇತು–2’ ಮೂಲಕ ವಿದೇಶಗಳಿಂದ ಬಂದ ದ್ರವೀಕೃತ ಆಮ್ಲಜನಕದ ಪೈಕಿ ಅರ್ಧದಷ್ಟನ್ನು ಕರಾವಳಿ ಜಿಲ್ಲೆಗಳಿಗೆ ಮೀಸಲಿಡಲಾಗಿತ್ತು.

**
ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 4,240 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
-ಡಾ.ರಾಜಕುಮಾರ ಯರಗಲ್‌, ಡಿಎಚ್‌ಒ, ವಿಜಯಪುರ

*
ಕೋವಿಡ್ ಮೂರನೇ ಅಲೆ ನಿರ್ವಹಿಸಲು ಅತ್ಯಗತ್ಯವಾಗಿರುವ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಭಾವ ಆಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
-ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ ಬೆಳಗಾವಿ

*
ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಾಗಿರಲಿಲ್ಲ. ಸಂಭಾವ್ಯ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ವೈದ್ಯಕೀಯ ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ.
-ಡಾ.ಸತೀಶ್‌ ಬಸರಿಗಿಡದ, ಡಿಎಚ್‌ಒ, ಗದಗ

*
ತಾಲ್ಲೂಕು ಕೇಂದ್ರಗಳಲ್ಲೂ ಆಮ್ಲಜನಕ ಘಟಕ ಪ್ರಾರಂಭಿಸಲಾಗಿದೆ. ಕುಂದಗೋಳದಲ್ಲಿ ಪ್ರತಿ ನಿಮಿಷಕ್ಕೆ 500 ಲೀಟರ್ ಹಾಗೂ ನವಲಗುಂದದಲ್ಲಿ 285 ಲೀಟರ್‌ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿದೆ.
-ಡಾ.ಯಶವಂತ ಮದಿನಕರ್, ಡಿಎಚ್‌ಒ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT