ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯ: ಅಧ್ಯಯನ ಪೀಠಗಳ ಏದುಸಿರು

ರಾಜ್ಯದ ವಿಶ್ವವಿದ್ಯಾಲಯಗಳ ಹಲವು ಪೀಠಗಳಿಗೆ ಸ್ವಂತ ಕಟ್ಟಡವೂ ಇಲ್ಲ, ಅನುದಾನವೂ ಇಲ್ಲ
Last Updated 24 ಅಕ್ಟೋಬರ್ 2021, 2:10 IST
ಅಕ್ಷರ ಗಾತ್ರ

ಕಲಬುರಗಿ: ಮಹನೀಯರ ಹೆಸರಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಪೀಠಗಳಲ್ಲಿ ಬಹುತೇಕ ಇದ್ದೂ ಇಲ್ಲದಂತಿವೆ. ಸರ್ಕಾರದ ನೆರವು ದೊರಕದೇ, ಸಕಾಲಕ್ಕೆ ಕಾರ್ಯಕ್ರಮಗಳನ್ನು ನಡೆಸಲಾಗದೇ, ಸ್ವಂತ ಕಟ್ಟಡವಿಲ್ಲದೆ ಪೀಠಗಳು ಏದುಸಿರು ಬಿಡುತ್ತಿವೆ. ಅಧ್ಯಯನ ಪೀಠಗಳಲ್ಲಿ ಅಧ್ಯಯನವೇ ಇಲ್ಲದ ಪರಿಸ್ಥಿತಿ ಮುಂದುವರಿದಿದೆ.

ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಮಹಿಳಾವಿಶ್ವವಿದ್ಯಾಲಯ, ದಾವಣಗೆರೆವಿಶ್ವವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸರಾಸರಿ 6ರಿಂದ 20 ಅಧ್ಯಯನ ಪೀಠಗಳಿವೆ. ಕೆಲವೇ ಪೀಠಗಳಿಗೆ ₹ 5 ಲಕ್ಷದಿಂದ ₹ 3 ಕೋಟಿಯವರೆಗೆ ಇಡುಗಂಟನ್ನು ಸರ್ಕಾರ ಬಿಡುಗಡೆ ಮಾಡಿದೆ. ನಂತರ ಹೆಚ್ಚಿಸುವ ಕಾಳಜಿ ತೋರಿಲ್ಲ.

ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಆರಂಭವಾದ ಪೀಠಗಳಲ್ಲಿ ಕಟ್ಟಡ, ಸಿಬ್ಬಂದಿ ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ ಸಮುದಾಯಗಳನ್ನು ಓಲೈಸಲು ಕಾಟಾಚಾರಕ್ಕೆಂಬಂತೆ ಕೆಲ ಪೀಠಗಳನ್ನು ಸರ್ಕಾರ ಘೋಷಿಸಿದರೂ ಅನುದಾನ ನೀಡಿಲ್ಲ.

ಸದ್ಯ ಕರ್ನಾಟಕ ವಿಶ್ವವಿದ್ಯಾಲಯದ ಪೀಠಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಬಸವ, ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಕನಕದಾಸ ಹಾಗೂ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠಗಳಿಗೆ ಸುಸಜ್ಜಿತ ಕಟ್ಟಡಗಳಿವೆ. ಕೆಲವೆಡೆ ಡಿಪ್ಲೊಮಾ ಕೋರ್ಸ್‌ಗಳೂ ನಡೆಯುತ್ತಿವೆ. ಆದರೆ, ದಾವಣಗೆರೆ ವಿ.ವಿ., ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ, ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ.ಗಳಲ್ಲಿನ ಹಲವು ಪೀಠಗಳಿಗೆ ಅನುದಾನವೇ ಘೋಷಣೆಯಾಗಿಲ್ಲ.

ಗುಲಬರ್ಗಾ ವಿ.ವಿ.ಯಲ್ಲಿರುವ 10 ಪೀಠಗಳ ಪೈಕಿ ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಗೆ ಸ್ವಂತ ಕಟ್ಟಡವಿದೆ. 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ₹ 4 ಕೋಟಿ ಬಿಡುಗಡೆ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 1 ಕೋಟಿ ನೀಡಿದ್ದರಿಂದ ಕಟ್ಟಡ ನಿರ್ಮಾಣವಾಯಿತು.

ಮೈಸೂರು ವಿಶ್ವವಿದ್ಯಾಲಯದಲ್ಲಿ 18 ಪೀಠಗಳಿವೆ. ಹೊಸದಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಅನಂತಮೂರ್ತಿ ಪೀಠ ಆರಂಭವಾಗಬೇಕಿದೆ. ಬೆಳಗಾವಿಯಲ್ಲಿ 4 ಪೀಠಗಳಿದ್ದು, ಅದೇ ಜಿಲ್ಲೆಗೆ ಸೇರಿದ ಕಿತ್ತೂರು ಚನ್ನಮ್ಮ ಹೆಸರಿನಲ್ಲಿ ಪೀಠ ಘೋಷಣೆಯಾದರೂ ಅನುದಾನ ಬಿಡುಗಡೆಯಾಗಿಲ್ಲ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಭಾಷೆ, ಬ್ಯಾಂಕ್‌, ಕಲೆ, ಸಂಸ್ಕೃತಿಗೆ ಸೇರಿದ ಒಟ್ಟು 20 ಅಧ್ಯಯನ ಪೀಠ ಹಾಗೂ ಕೇಂದ್ರಗಳಿದ್ದು, ₹ 5 ಲಕ್ಷದಿಂದ ₹ 3 ಕೋಟಿ ತನಕ ದತ್ತಿನಿಧಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ₹ 1 ಕೋಟಿಗಿಂತ ಹೆಚ್ಚು ದತ್ತಿನಿಧಿ ಹೊಂದಿರುವ ನಾಲ್ಕೈದು ಪೀಠಗಳನ್ನು ಹೊರತು ಪಡಿಸಿ, ಉಳಿದವು ವಾರ್ಷಿಕ ಬಜೆಟ್‌ ಕೊರತೆಯಿಂದ ಬಳಲುತ್ತಿವೆ. ಗುಲಬರ್ಗಾ ವಿ.ವಿ.ಯಲ್ಲಿ ಬಂಜಾರ ಸಮುದಾಯದವರ ಬೇಡಿಕೆ ಮೇರೆಗೆ ಬಂಜಾರ ಕುಲಗುರು ಸಂತ ಸೇವಾಲಾಲರ ಅಧ್ಯಯನ ಪೀಠವನ್ನು ಘೋಷಿಸಿದ್ದರೂ ಅನುದಾನ ನೀಡಿಲ್ಲ.

‘ಪೀಠ ಘೋಷಣೆಯಷ್ಟೇ ಸರ್ಕಾರದ ಆದ್ಯತೆಯಾಗಬಾರದು. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಡಿಪ್ಲೊಮಾ ಕೋರ್ಸ್‌ ಆರಂಭಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಆಯ್ಕೆ ಆಧಾರಿತ ಪಠ್ಯಕ್ರಮವನ್ನು (ಸಿಬಿಸಿಎಸ್‌) ರೂಪಿಸಬೇಕು. ಇಲ್ಲದಿದ್ದರೆ, ವರ್ಷಕ್ಕೊಮ್ಮೆ ಜಯಂತಿ ಆಚರಿಸಲಷ್ಟೆಪೀಠ ಸೀಮಿತವಾಗುತ್ತದೆ’ ಎನ್ನುತ್ತಾರೆ ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT