ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಹಗರಣಗಳಿಗೂ ರಾಜಕಾರಣಿಗಳಿಗೂ ನಿಕಟ ನಂಟು

Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ರಾಜಕಾರಣಕ್ಕೂ ನಿಕಟ ನಂಟು. ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು, ದಲ್ಲಾಳಿಗಳ ಜತೆಗೆ ರಾಜಕಾರಣಿಗಳೂ ಶಾಮೀಲಾಗಿರುವ ನಿದರ್ಶನಗಳಿವೆ.

ಕೆಲವೆಡೆ ನೇರವಾಗಿ ರಾಜಕಾರಣಿಗಳೇ ಇಂತಹ ಹಗರಣಗಳಲ್ಲಿ ಆರೋಪಿಗಳು. ಹಲವು ಪ್ರಕರಣಗಳಲ್ಲಿ ರಾಜಕಾರಣಿಗಳು ತೆರೆಯ ಮರೆಯಲ್ಲಿ ಸೂತ್ರಧಾರರಂತೆ ಕೆಲಸ ಮಾಡಿರುವ ಆರೋಪಗಳಿವೆ. ರಾಜ್ಯದ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ಪ್ರಮುಖ ಪ್ರಕರಣಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ದಶಕ ಕಳೆದರೂ ಇತ್ಯರ್ಥವಾಗದ ‘ಸೂಡಾ’ ಹಗರಣ

ಶಿವಮೊಗ್ಗ: ಮಲ್ಲಿಗೇನಹಳ್ಳಿ ಬಳಿ 2008–12ರ ಅವಧಿಯಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ವಾಜಪೇಯಿ ಬಡಾವಣೆಯ ನಿವೇಶನಗಳ ಹಂಚಿಕೆ ಹಗರಣ ಇಂದಿಗೂ ಇತ್ಯರ್ಥವಾಗಿಲ್ಲ.

ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಸ್. ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿ ಅವಧಿಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತರು ತನಿಖೆ ನಡೆಸಿದ್ದರು. ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.

ಪ್ರಾಧಿಕಾರ ಅಭಿವೃದ್ಧಿಪಡಿಸಿದ 1,802 ನಿವೇಶನಗಳಲ್ಲಿ 1,305 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯಲ್ಲಿ ಅಕ್ರಮ ನಡೆದಿತ್ತು. ಒಂದೇ ಕುಟುಂಬದ ಹಲವರಿಗೆ ಹಲವು ನಿವೇಶನ, ಶ್ರೀಮಂತರಿಗೆ, ಅರ್ಜಿಯನ್ನೇ ಸಲ್ಲಿಸದವರಿಗೆ, ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಗರಣದ ಫಲವಾಗಿ ಇಂದಿಗೂ ಅಲ್ಲಿ ನಿವೇಶನ ಪಡೆದವರು ಮನೆಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಬಡಾವಣೆ ಅಭಿವೃದ್ಧಿಯಾಗಿಲ್ಲ. ಹಗರಣಕ್ಕೆ ಕಾರಣರಾಗಿದ್ದವರು ಇಂದು ನಿಗಮ, ಮಂಡಳಿಗಳಲ್ಲಿ, ವಿವಿಧ ಅಧಿಕಾರ ಸ್ಥಾನಗಳನ್ನು ಪಡೆದಿದ್ದಾರೆ.

ಮನೆಗಳೇ ನಿರ್ಮಾಣಗೊಳ್ಳದ ಬಡಾವಣೆ

ದಾವಣಗೆರೆ: ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 1998ರಲ್ಲಿ ನೋಟಿಫಿಕೇಶನ್‌ ಹೊರಡಿಸಿ 2002ರಿಂದ ಹಂಚಿಕೆ ಆಗಿದ್ದ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಶೇ 85ಕ್ಕೂ ಅಧಿಕ ನಿವೇಶನಗಳಲ್ಲಿ ಮನೆಗಳೇ ನಿರ್ಮಾಣಗೊಂಡಿಲ್ಲ.

ದೂಡಾದ ಅಧಿಕಾರ ಹಿಡಿದವರು, ಪ್ರಭಾವಿಗಳು ತಮ್ಮ ಹೆಸರಲ್ಲಿ, ಸಂಬಂಧಿಕರ ಹೆಸರಲ್ಲಿ ನಿವೇಶನ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಎನ್ನದೇ ಎಲ್ಲ ಪಕ್ಷಗಳ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳಿವೆ.

ಚಿತ್ರದುರ್ಗದಲ್ಲಿ ಕೂಡಾವು (ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ) ಎರಡು ದಶಕಗಳಿಂದ ನಿವೇಶನ ಹಂಚಿಕೆ ಮಾಡಿಲ್ಲ.

ಕುಟುಂಬ ಸದಸ್ಯರಿಗೇ ನಿವೇಶನ: ಸಿಬಿಐ ವಿಚಾರಣೆ

ಮಂಡ್ಯ: ನಗರಾಭಿವೃದ್ಧಿ ಪ್ರಾಧಿಕಾರವು ವಿವೇಕಾನಂದ ನಗರದಲ್ಲಿ ಅಭಿವೃದ್ಧಿಗೊಳಿಸಿರುವ 107 ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಶಾಸಕರಾದ ಸಿ.ಎಸ್‌.ಪುಟ್ಟರಾಜು, ಎಂ.ಶ್ರೀನಿವಾಸ್‌, ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಸೇರಿ ಒಟ್ಟು 24 ಆರೋಪಿಗಳ ವಿರುದ್ಧ ಸಿಬಿಐ ವಿಚಾರಣೆ ನಡೆಯುತ್ತಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಯಮ ಮೀರಿ ತಮ್ಮ ಕುಟುಂಬ ಸದಸ್ಯರಿಗೆ, ಸಂಬಂಧಿಕರಿಗೆ ನಿವೇಶನ ಹಂಚಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಇದೇ ಜುಲೈ ತಿಂಗಳಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು. ಕೆಲವರು ವಿಚಾರಣೆ ಎದುರಿಸಿದ್ದರೆ, ಕೆಲವರು ಹಾಜರಾತಿ ವಿನಾಯಿತಿ ಕೋರಿ ಮನವಿ ಸಲ್ಲಿಸಿದ್ದರು.

ವಿಚಾರಣೆ ಪ್ರಕ್ರಿಯೆ ಮುಗಿಯುವವರೆಗೂ ದೇಶ ತೊರೆಯದಂತೆ ಆರೋಪಿಗಳಿಗೆ ಸೂಚಿಸಲಾಗಿತ್ತು. ದಂತ ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಶಾಸಕ ಪುಟ್ಟರಾಜು ಮನವಿ ಮಾಡಿದ್ದರು. ಸದ್ಯ ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ.

2009ರಲ್ಲಿ ಅಭಿವೃದ್ಧಿಗೊಳಿಸಲಾದ ವಿವೇಕಾನಂದ ಬಡಾವಣೆಯಲ್ಲಿ107ನಿವೇಶನಗಳ ಅಕ್ರಮ ಹಂಚಿಕೆ ಕುರಿತು 2010ರಲ್ಲಿ ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ‘ನಿವೇಶನಕ್ಕಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸುವ ಮುನ್ನವೇ ಆರೋಪಿಗಳು ತಮ್ಮ ಕುಟುಂಬ ಸದಸ್ಯರಿಗೆ ನಿವೇಶನ ಖಾತೆ ಮಾಡಿಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ನಂತರ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯಿತು. 2015ರಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. 2016ರಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಬಿಲ್ಡರ್‌ಗಳ ತಪ್ಪಿಗೆ ಖರೀದಿದಾರರಿಗೆ ಶಿಕ್ಷೆ!

ಉಡುಪಿ: ಎರಡು ದಶಕಗಳ ಹಿಂದೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಖರೀದಿಸಿದ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ನಿವೇಶನವನ್ನು ಮಾರಾಟ ಮಾಡಲಾಗದೆ, ಮನೆಯನ್ನೂ ಕಟ್ಟಲಾಗದೆ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

1990 ಹಾಗೂ 2000ದ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಭೂಪರಿವರ್ತನೆ ಮಾಡಿ ಬಡಾವಣೆಗಳನ್ನು ನಿರ್ಮಿಸಿ ನೂರಾರು ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದರು. ಮಾಲೀಕರ ಹೆಸರಿಗೆ ನಿವೇಶನವೂ ನೋಂದಣಿಯಾಗಿತ್ತು. ನಿವೇಶನಗಳು ಕಾನೂನುಬದ್ಧವಾಗಿಯೇ ಇದೆ ಎಂದು ನಿಶ್ಚಿಂತೆಯಾಗಿದ್ದ ನಿವೇಶನದಾರರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಆಘಾತ ನೀಡಿದೆ.

ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ನಿವೇಶನದಾರರಿಗೆ ಮನೆ ಕಟ್ಟಿಕೊಳ್ಳಲು, ನಿವೇಶನ ಮಾರಾಟ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡುತ್ತಿಲ್ಲ. ನಿಯಮಗಳ ಪ್ರಕಾರ ಬಡಾವಣೆ ನಿರ್ಮಿಸುವಾಗ ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ಜಾಗ ಮೀಸಲಿರಿಸಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಹೇಳುತ್ತಿದ್ದು, ದಂಡ ಕಟ್ಟಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಾಗ ಬಿಟ್ಟುಕೊಡುವಂತೆ ಒತ್ತಡ ಹಾಕುತ್ತಿದೆ ಎಂಬುದು ನಿವೇಶನದಾರರು ಅಳಲು.

ಕೃಷಿ ಭೂಮಿಯನ್ನು ವಾಸಯೋಗ್ಯ ಸ್ಥಳವಾಗಿ ಭೂ ಪರಿವರ್ತನೆ ಮಾಡುವಾಗ, ನಿವೇಶನಗಳನ್ನು ಖಾತೆ ಮಾಡಿಕೊಡುವಾಗ ಕಂದಾಯ ಇಲಾಖೆಗೆ ನಿಯಮಗಳನ್ನು ಉಲ್ಲಂಘಿಸಿರುವುದು ಅರಿವಿಗೆ ಬರಲಿಲ್ಲವೇ ಎಂದು ನಿವೇಶನದಾರರು ಪ್ರಶ್ನಿಸುತ್ತಿದ್ದಾರೆ.

‘ನಿವೇಶನ ಖರೀದಿದಾರರು ಅಕ್ರಮ ಎಸಗಿಲ್ಲವಾದರೂ, ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೇಶನ ಖರೀದಿಸಿದರೂ ಮನೆಕಟ್ಟಿಕೊಳ್ಳಲು ಆಗುತ್ತಿಲ್ಲ. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎನ್ನುತ್ತಾರೆ ನಿವೇಶನ ಸಂತ್ರಸ್ತರು.

ಏಳು ವರ್ಷ ಕಳೆದರೂ ಮುಗಿಯದ ತನಿಖೆ

ರಾಮನಗರ: ಇಲ್ಲಿನ ರಾಮನಗರ–ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು ಏಳು ವರ್ಷಗಳೇ ಕಳೆದಿವೆ. ಇದರಿಂದ ಪ್ರಾಧಿಕಾರದ ಬೊಕ್ಕಸವೇ ಬರಿದಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲದಂತೆ ಆಗಿದೆ.

2013ರಲ್ಲಿ ಈ ಹಗರಣ ನಡೆದಿದ್ದು, ರಾಷ್ಟ್ರೀಕೃತ ಬ್ಯಾಂಕ್‌ ಒಂದರ ಖಾತೆಯಲ್ಲಿದ್ದ ಹಣವನ್ನು ಇತರೆ ಬ್ಯಾಂಕುಗಳ ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಹೆಚ್ಚಿನ ಬಡ್ಡಿ ಕಾರಣಕ್ಕೆ ಮತ್ತೊಂದು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಠೇವಣಿ ಬದಲಿಗೆ ಖಾಸಗಿ ವ್ಯಕ್ತಿಗಳ ಖಾತೆಗಳಿಗೆ ಈ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು.

ಹೀಗೆ ಬರೋಬ್ಬರಿ ₹ 18ರಿಂದ ₹ 21 ಕೋಟಿ ಮೊತ್ತದ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಪ್ರಾಧಿಕಾರದ ಅಂದಿನ ಆಯುಕ್ತ ಚಿದಾನಂದ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಆರಂಭದಲ್ಲಿ ಸಿಐಡಿ ತನಿಖೆ ನಡೆದಿದ್ದು, ನಂತರದಲ್ಲಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು.

ಈಗ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಪ್ರತ್ಯೇಕ ಪ್ರಾಧಿಕಾರಗಳು ರಚನೆಯಾಗಿವೆ. ಆದರೆ, ಪ್ರಕರಣ ಇತ್ಯರ್ಥಗೊಂಡು ಹಣ ಮರು ಸಂದಾಯ ಆಗದ ಕಾರಣ ಎರಡೂ ಪ್ರಾಧಿಕಾರಗಳ ಚಟುವಟಿಕೆಗಳು ಕೇವಲ ನಕ್ಷೆ ಅನುಮೋದನೆಯಂತಹ ಚಟುವಟಿಕೆಗಳಿಗೆ ಸೀಮಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT