ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಹಿವಾಟು ಹೆಚ್ಚಳಕ್ಕೆ ಬೇಕು ಕ್ರಮ

ದೇಶದಲ್ಲಿ ವಹಿವಾಟನ್ನು ಸಹಜಸ್ಥಿತಿಗೆ ತರಲು ಇನ್ನೂ ಗಂಭೀರವಾದ ಪ್ರಯತ್ನಗಳನ್ನು ನಡೆಸಬೇಕಾದ ಅನಿವಾರ್ಯ ಸಮಯ ಇದಾಗಿದೆ
Last Updated 21 ಅಕ್ಟೋಬರ್ 2020, 21:35 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದ ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಇಂತಹ ಸ್ಥಿತಿಯಲ್ಲಿ, ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗಾಗಿ ಆರ್ಥಿಕ ಉತ್ತೇಜನ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕವಾಗಿ, ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ರೂಪುರೇಷೆಯನ್ನು ಸಿದ್ಧಪಡಿಸಿದ ಮೊದಲ ದೇಶ ಜರ್ಮನಿ. ಈ ದಿಸೆಯಲ್ಲಿ ನಮ್ಮ ಸರ್ಕಾರ ಸಹ ತನ್ನದೇ ಆದ ಕೆಲವು ಕ್ರಮಗಳನ್ನು ಘೋಷಿಸಿದೆ.

ಭಾರತ ಮತ್ತು ಚೀನಾ ನಡುವಿನ ಪ್ರಸಕ್ತ ಬೆಳವಣಿಗೆಗಳಿಂದ ಚೀನಾದ ಉತ್ಪನ್ನಗಳ ವಿರುದ್ಧ ಭಾರತೀಯರಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದು ಸ್ಥಳೀಯ ಉತ್ಪನ್ನಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಇಂತಹ ಸನ್ನಿವೇಶದಲ್ಲಿ ಸುಧಾರಣೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಸುಧಾರಣೆಗಳಿಗೆ ಸರ್ಕಾರವು ಗಮನಾರ್ಹ ಪ್ರೋತ್ಸಾಹ ನೀಡಿದರೆ, ಉದ್ಯಮಗಳು ದೇಶದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತವೆ ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದರ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ.

ಸುಲಲಿತ ವಹಿವಾಟು ಶ್ರೇಯಾಂಕದಲ್ಲಿ (ಈಸ್ ಆಫ್‌ ಡೂಯಿಂಗ್ ಬ್ಯುಸಿನೆಸ್) ಭಾರತ ಇತ್ತೀಚೆಗೆ ಗಮನಾರ್ಹ ಸ್ಥಾನವನ್ನು ಗಳಿಸಿದ್ದರೂ ಏಷ್ಯಾದಲ್ಲಿ ದೇಶ ಅತ್ಯಂತ ಆದ್ಯತೆಯ ಹೂಡಿಕೆ ಕೇಂದ್ರವಾಗಿ ಹೊರಹೊಮ್ಮಲು ಇನ್ನೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಹಲವು ಕಂಪನಿಗಳು ಚೀನಾದಿಂದ ತಮ್ಮ ಉದ್ಯಮವನ್ನು ಬೇರೆ ದೇಶಗಳಿಗೆ ಸಾಗಿಸಲು ಯೋಜನೆ ರೂಪಿಸುತ್ತಿರುವುದರಿಂದ ಭಾರತ ತನ್ನ ಮೇಕ್ ಇನ್ ಇಂಡಿಯಾ ಧ್ಯೇಯವನ್ನು ಪೂರೈಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಆದರೆ, ಪಾರದರ್ಶಕತೆ ಹೆಚ್ಚಿಸಲು ಹಲವು ಮೂಲಭೂತ ಸುಧಾರಣೆಗಳನ್ನು ಮಾಡಲೇಬೇಕಾಗಿದೆ.

ಈ ಹಿಂದೆ ಮಾಡಿದ ಇಂತಹ ಪ್ರಯತ್ನಗಳಿಂದ, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿವೆ. ಇದು ನಮಗೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಉದ್ಯೋಗ ಅನುಪಾತವನ್ನು ಸುಧಾರಿಸಲು ಅನುವು ಮಾಡಲಿದೆ. ಗೋದಾಮು ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಯಮ ಗಳನ್ನು ಸಡಿಲಿಸುವುದು ಮತ್ತು ಪೂರೈಕೆ ಸರಣಿಯನ್ನು ಸುಧಾರಿಸಲು ಸಗಟು ಮಾರುಕಟ್ಟೆ ನಿಯಂತ್ರಣವನ್ನು ಸಡಿಲಿಸುವ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳಬೇಕು.

ಭಾರತದ ಜಿಡಿಪಿಯಲ್ಲಿ ಶೇ 10ರಷ್ಟು ಪಾಲನ್ನು ಹೊಂದಿರುವ ಚಿಲ್ಲರೆ ಉದ್ಯಮವು, ಶೇ 8ರಷ್ಟು ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ದೇಶದಲ್ಲಿ ಅಂದಾಜು 1.2 ಕೋಟಿ ಕಿರಾಣಿ ಅಂಗಡಿಗಳಿವೆ. ಹಳ್ಳಿಯಲ್ಲಿ ಕೆಲವೇ ನೂರು ಜನರಿಗೆ ಸೇವೆ ಸಲ್ಲಿಸುವ ಸಣ್ಣ ಕಿರಾಣಿ ಅಂಗಡಿಯಿಂದ ನಗರಗಳಲ್ಲಿನ ದೊಡ್ಡ ಸ್ಟೋರ್‌ಗಳವರೆಗೆ ಎಲ್ಲವೂ ಇದರಲ್ಲಿ ಒಳಗೊಂಡಿವೆ.

ಗ್ರಾಹಕರ ನಾಡಿಮಿಡಿತವನ್ನು ಅರ್ಥ ಮಾಡಿ ಕೊಳ್ಳುವ ಕಿರಾಣಿ ಅಂಗಡಿಗಳು, ಆಹಾರ ಮತ್ತು ದಿನಸಿ ಸಾಮಗ್ರಿಗಳ ವಹಿವಾಟಿನಲ್ಲಿ ಅತ್ಯಂತ ಪರಿಣತಿ ಹೊಂದಿರುತ್ತವೆ. ಇಂಡಿಯಾ ಬ್ರ್ಯಾಂಡ್ ಈಕ್ವಿಟಿ ಫೌಂಡೇಶನ್‌ನ (ಐಬಿಇಎಫ್‌) ವರದಿ ಪ್ರಕಾರ, ರಿಟೇಲ್ ವಲಯದಲ್ಲಿ ಭಾರತವು ಜಾಗತಿಕವಾಗಿ ಐದನೇ ಅತಿ ಮುಖ್ಯವಾದ ದೇಶವಾಗಿದೆ.

ದೇಶದ ಮೂಲಸೌಕರ್ಯ ವಲಯದಲ್ಲಿ ರಿಯಲ್ ಎಸ್ಟೇಟ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ, ಇದು ಪ್ರಮುಖ ಉದ್ಯೋಗ ಸೃಷ್ಟಿ ವಲಯವೂ ಹೌದು. ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಚಿಲ್ಲರೆ ವಲಯವು ಮಹತ್ವದ ಪಾಲು ಹೊಂದಿದೆ. ಆದಾಗ್ಯೂ ಶೇ 90ರಷ್ಟು ಚಿಲ್ಲರೆ ವಲಯವು ಅಸಂಘಟಿತ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡರೂ, ಈ ವಲಯವನ್ನು ಸಂಘಟಿಸಲು ಇನ್ನಷ್ಟು ಕ್ರಮಗಳ ಅಗತ್ಯವಿದೆ.

ಎಪಿಎಂಸಿ ಕಾಯ್ದೆಯಲ್ಲಿ ತಂದಿರುವ ಬದಲಾವಣೆಯು ಕೃಷಿ ವಲಯದಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸುತ್ತದೆ. ಇದು ಸರ್ಕಾರದ ಅತ್ಯಂತ ಪ್ರಮುಖ ನಡೆಯಾಗಿದ್ದು, ರೈತರು ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ. ಇದು ಪರೋಕ್ಷವಾಗಿ ಇನ್ನಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಜರ್ಮನಿಯಲ್ಲಿ ನೀಡಿದ ಕೆಲವು ತೆರಿಗೆ ರಿಯಾಯಿತಿಗಳು ಅಲ್ಲಿನ ಖರೀದಿದಾರರಲ್ಲಿ ಉತ್ಸಾಹ ಮೂಡಿಸಿರುವುದು ಕಂಡುಬಂದಿದೆ. ಅತ್ಯವಶ್ಯಕ ಸಾಮಗ್ರಿಗಳಾಗಿದ್ದರೂ ಸಾಬೂನು, ಶೌಚ ಸಾಮಗ್ರಿಗಳು, ಬಿಸ್ಕೆಟ್‌ಗಳು ಮತ್ತು ಸಂಸ್ಕರಿತ ಆಹಾರಗಳು ಶೇ 18ರ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಸರ್ಕಾರವು ಇಂತಹ ಸಾಮಗ್ರಿಗಳ ಮೇಲಿನ ತೆರಿಗೆಯನ್ನು ಶೇ 12ಕ್ಕೆ ಇಳಿಸುವುದರ ಜೊತೆಗೆ, ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆಯಲ್ಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಕಡಿಮೆ ಮಾಡುವ ಕುರಿತೂ ಚಿಂತಿಸಬೇಕು.

ದೇಶದಲ್ಲಿ ವಹಿವಾಟನ್ನು ಸಹಜಸ್ಥಿತಿಗೆ ತರಲು ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸಮಯ ಇದು. ಅದರಲ್ಲೂ ವಿಶೇಷವಾಗಿ ಉತ್ಪಾದನೆ, ಚಿಲ್ಲರೆ ಮತ್ತು ಕೃಷಿ ವಲಯದಲ್ಲಿ ಆಧುನೀಕರಣ ಹಾಗೂ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಭಾರತದ ಭವಿಷ್ಯ ಉದ್ಯಮಶೀಲತೆಯಲ್ಲಿ ಅಡಗಿದೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗುವ ಉದ್ದಿಮೆಗಳ ಉತ್ತೇಜನಕ್ಕೆ ಸರ್ವ ಪ್ರಯತ್ನಗಳನ್ನೂ ಮಾಡಬೇಕಾದುದು ಈಗ ಅನಿವಾರ್ಯ.

ಲೇಖಕ: ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ,ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT