ಮಂಗಳವಾರ, ಅಕ್ಟೋಬರ್ 27, 2020
28 °C

ನೀವು ‘ಹಸಿರು ಬಳಕೆದಾರ’ರೇ?

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಪರಿಸರಕ್ಕೆ ಪೂರಕವಾದ ವಸ್ತುಗಳ ಮಾರಾಟ ವೃದ್ಧಿಸಲು ಬೆಲೆಯನ್ನು ಕಡಿಮೆ ಇರಿಸಿ, ಹೆಚ್ಚಿನ ಪ್ರಚಾರ ನೀಡಿದಲ್ಲಿ ಜನ ‘ಹಸಿರು ಬಳಕೆದಾರ’ರಾಗುತ್ತಾರೆ.

---

 

ನೀವು ಅಂಗಡಿ- ಶೋರೂಂಗಳಲ್ಲಿ ಐಎಸ್‍ಐ ಮಾರ್ಕ್, ತ್ರೀ ಸ್ಟಾರ್, ಫೈವ್ ಸ್ಟಾರ್ ರೇಟಿಂಗ್, ವೆಜ್, ನಾನ್‍ವೆಜ್, ಆರ್ಗ್ಯಾನಿಕ್, ಯು.ವಿ ಫ್ರೀ ಎಂಬ ಅಡಿ- ತಲೆಬರಹ ಮತ್ತು ಚಿಹ್ನೆಗಳಿರುವುದನ್ನು ಗಮನಿಸಿ ಸಾಮಾನು ಖರೀದಿಸಿರುತ್ತೀರಿ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾಗಿದ್ದರೆ ಯಾವ ವೋಲ್ಟೇಜ್‍ನಲ್ಲಿ ನಡೆಯುತ್ತದೆ, ವ್ಯಾಟೇಜ್ (ಯಂತ್ರ, ಉಪಕರಣ ನಡೆಯಲು ಬೇಕಾಗುವ ವಿದ್ಯುತ್‌ ಶಕ್ತಿ) ಎಷ್ಟು ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೀರಿ.

ನೆನಪಿಸಿಕೊಳ್ಳಿ, ‘ಮಣ್ಣಿನ ಮಡಕೆ’ಯ ಚಿತ್ರವಿರುವ ಸಾಮಾನನ್ನು ಎಂದಾದರೂ ಖರೀದಿಸಿದ್ದೀರ? ‘ಹೌದು’ ಎಂದಾದರೆ ನಿಮಗೆ ಪರಿಸರದ ಕಾಳಜಿ ಇದ್ದು, ಜವಾಬ್ದಾರಿಯುತ ಹಸಿರು ಬಳಕೆದಾರ ಎನ್ನಿಸಿಕೊಳ್ಳುತ್ತೀರಿ. ‘ಇಲ್ಲ’ ಎಂದಾದರೆ ಪರಿಸರದ ಕುರಿತು ನಿಮಗಿರುವ ಕಾಳಜಿ ಕಡಿಮೆ ಎಂದು ನಿರೂಪಿಸುತ್ತೀರಿ. ಇಂಥದ್ದೊಂದು ಚಿಹ್ನೆ ಇರುವ ಸಾಮಾನು ಮಾರುಕಟ್ಟೆಯಲ್ಲಿ ಇದೆಯೇ ಎಂದು ಅಚ್ಚರಿ ಸೂಚಿಸುತ್ತೀರಿ ಎಂದಾದರೆ, ನಿಮ್ಮನ್ನು ಪರಿಸರಸ್ನೇಹಿ ಕೊಳ್ಳುವಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ನಾವೆಲ್ಲ ಒಟ್ಟಾಗಿ
ವಿಫಲರಾಗಿದ್ದೇವೆ ಎಂದರ್ಥ.

ಹೌದು, ನಾವಿರುವ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ತಯಾರಾದ ಪದಾರ್ಥಗಳ ಮೇಲೆ ‘ಮಣ್ಣಿನ ಮಡಕೆ’ಯ ಚಿತ್ರ ಇರುತ್ತದೆ. ಅದನ್ನು ‘ಎಕೊ ಮಾರ್ಕ್’ ಎನ್ನುತ್ತಾರೆ. ಕೊಂಡು ಬಳಸುವವರನ್ನು ಜಾಗೃತ ‘ಹಸಿರು ಬಳಕೆದಾರ’ ಎನ್ನುತ್ತಾರೆ. ಇದರ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಸೆ. 28ನ್ನು ವಿಶ್ವ ಹಸಿರು ಬಳಕೆದಾರರ ದಿನ ಎಂದು ಆಚರಿಸಲಾಗುತ್ತದೆ.

ಪ್ರತೀ ರಾಷ್ಟ್ರವೂ ಪರಿಸರಕ್ಕೆ ಹೊರೆಯಾಗದಂತೆ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಜನರಿಗೆ ತಲುಪಿಸುತ್ತಿದೆ. ಆ ವಸ್ತುಗಳ ಮೇಲೆ, ಇದು ಲೆಡ್‍ಫ್ರೀ, ಕೃತಕ ಬಣ್ಣಗಳಿಲ್ಲ, ರಾಸಾಯನಿಕಮುಕ್ತ, ಆಹಾರದಲ್ಲಿ ಅನಿಮಲ್ ಫ್ಯಾಟ್ ಬಳಸಿಲ್ಲ, ಪ್ರಾಣಿಯ ಚರ್ಮದಿಂದ ಮಾಡಿದ್ದಲ್ಲ ಎಂಬಂಥ ತಲೆಬರಹ ಮತ್ತು ಅದಕ್ಕೆ ಸಂಬಂಧಿಸಿದ ಚಿಹ್ನೆಯನ್ನು ಮುದ್ರಿಸಿರುತ್ತವೆ. ಜರ್ಮನಿ ತನ್ನ ಪರಿಸರಸ್ನೇಹಿ ಉತ್ಪನ್ನಗಳಿಗೆ ‘ಬ್ಲೂ ಏಂಜಲ್’ ಚಿಹ್ನೆ ನೀಡಿದರೆ, ಅಮೆರಿಕ ‘ಗ್ರೀನ್ ಸೀಲ್’ ಹಾಕುತ್ತದೆ. ವಿದ್ಯುತ್ ಉಳಿಸುವ ಉತ್ಪನ್ನ
ಗಳಿಗೆ ‘ಎನರ್ಜಿ ಸ್ಟಾರ್’ ರೇಟಿಂಗ್ ನೀಡಿ ಗ್ರಾಹಕರನ್ನು ಆಕರ್ಷಿಸುತ್ತವೆ. ಬಾಚಣಿಗೆಯಿಂದ ಹಿಡಿದು ಕಾರಿನವರೆಗೆ ಒಟ್ಟು ಐದು ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ಎಕೊ ಲೇಬಲ್ ನೀಡಿರುವ ಜಪಾನ್ ವಿಶ್ವಕ್ಕೇ ಮಾದರಿ ಎನಿಸಿದೆ. ಇಟಲಿ 280, ಫ್ರಾನ್ಸ್ 195ಕ್ಕೆ ನೀಡಿದ್ದರೆ, ನಮ್ಮಲ್ಲಿ ಅವುಗಳ ಸಂಖ್ಯೆ ಕೇವಲ 25.

ಐಎಸ್‍ಐ ಮಾರ್ಕ್ ಇರುವ ಉತ್ಪನ್ನಗಳಿಗೆ ನಮ್ಮಲ್ಲಿ ಭಾರಿ ಬೇಡಿಕೆ ಇದೆ. ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸುವಾಗ ಐಎಸ್‍ಐ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರಿ ಜಾಹೀರಾತುಗಳು ಜನರಿಗೆ ತಿಳಿವಳಿಕೆ ಹೇಳುತ್ತಲೇ ಇರುತ್ತವೆ. ಈಗ ಐಎಸ್‍ಐ ಮಾರ್ಕಿನ ಜೊತೆ ಬಿಇಇ, ಅಂದರೆ ಬ್ಯೂರೊ ಆಫ್ ಎನರ್ಜಿ ಎಫಿಶಿಯನ್ಸಿ ಗುರುತಿರುವ ಉತ್ಪನ್ನಗಳು ಶಕ್ತಿಯನ್ನು ಉಳಿತಾಯ ಮಾಡುತ್ತವೆ, ಅವುಗಳನ್ನು ಖರೀದಿಸುವುದು ಸೂಕ್ತ ಎನ್ನಲಾಗುತ್ತಿದೆ. ಔದ್ಯಮಿಕ ಉತ್ಪನ್ನಗಳಿಗೆ ಐಎಸ್‍ಐ ಮಾರ್ಕ್ ನೀಡುವ ಭಾರತೀಯ ಮಾನಕ ಬ್ಯೂರೊದಿಂದ (ಬಿಐಎಸ್‌) ಪ್ರಮಾಣಿತವಾದ ಪರಿಸರಸ್ನೇಹಿ ಉತ್ಪನ್ನಗಳಿಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು 1992ರಿಂದ ಎಕೊ ಮಾರ್ಕ್ ಲೇಬಲ್ ನೀಡುತ್ತಿದೆ.

ನೈಸರ್ಗಿಕ ಮೂಲಗಳಿಂದ ತಯಾರಾದ, ಬಳಸುವವರ ಆರೋಗ್ಯ ಕೆಡಿಸದ, ಪೂರ್ತಿ ರೀಸೈಕಲ್ ಆಗುವ, ಬಾಲಕಾರ್ಮಿಕರನ್ನು ಬಳಸಿಕೊಂಡಿರದ ಉತ್ಪನ್ನಕ್ಕೆ ಮಾತ್ರ ಮಡಕೆಯ ಚಿತ್ರದ ಎಕೊ ಮಾರ್ಕ್ ಲೇಬಲ್ ಸಿಗುತ್ತದೆ. ಕಾಗದ, ಸುಗಂಧದ್ರವ್ಯ, ಟಾಯ್ಲೆಟ್ ಸೋಪ್, ಬಟ್ಟೆ, ಅಡುಗೆ ಎಣ್ಣೆ, ಔಷಧಿ, ಕೀಟನಾಶಕ, ಪ್ಲಾಸ್ಟಿಕ್, ಪೇಂಟ್, ಬ್ಯಾಟರಿ, ಆಹಾರ ಉತ್ಪನ್ನ, ಕಾಫಿ, ವನಸ್ಪತಿ, ಚಹಾ, ಮರದ ಉತ್ಪನ್ನ, ರುಚಿವರ್ಧಕ, ನೋವು ನಿವಾರಕ ಸ್ಪ್ರೇಗಳು, ಎಣ್ಣೆಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನದಂತಹ ವಸ್ತುಗಳಿಗೆ ಈಗಾಗಲೇ ಎಕೊ ಮಾರ್ಕ್ ಲಭಿಸಿದೆಯಾದರೂ ಮಾಹಿತಿ ಕೊರತೆಯಿಂದ ಕೊಳ್ಳುವ ಗ್ರಾಹಕರೂ ಕಮ್ಮಿ ಎಂಬ ನೋವು ಉತ್ಪಾದಕರದ್ದು.

ಎಕೊ ಮಾರ್ಕ್ ಪಡೆಯಲು ಐಎಸ್‍ಐ ಮಾರ್ಕ್ ಹೊಂದಿರಲೇಬೇಕು. ಅದನ್ನು ಪಡೆದುಕೊಳ್ಳಲು ಅತ್ಯುತ್ತಮ ಗುಣಮಟ್ಟ ಹೊಂದಿ, ಹಲವು ಸೂಕ್ಷ್ಮ ಪರೀಕ್ಷೆಗಳನ್ನು, ತಪಾಸಣೆಗಳನ್ನು ಹಾದು ಬರಬೇಕು, ಉತ್ಪಾದನೆಗೆ ಲೈಸೆನ್ಸ್ ಬೇಕು. ಅದಕ್ಕೆ ಹಣ ಖರ್ಚಾಗುವುದರಿಂದ ಕಡಿಮೆ ಬಂಡವಾಳ ಹೂಡಿ ಉತ್ಪನ್ನ ತಯಾರಿಸುವ ಅನೇಕ ಕಂಪನಿಗಳು ಅದರ ಗೊಡವೆಗೇ ಹೋಗುವುದಿಲ್ಲ. ಹೆಚ್ಚಿನ ಶ್ರಮವಹಿಸಿ ತಯಾರಿಸಿದ ಎಕೊ ಮಾರ್ಕ್ ಉತ್ಪನ್ನಗಳ ಬೆಲೆ ಜಾಸ್ತಿಯೇ ಇರುವುದರಿಂದ ಗ್ರಾಹಕರು ಅದರತ್ತ ಆಕರ್ಷಿತರಾಗದೆ, ಮಾರುಕಟ್ಟೆಯಲ್ಲಿರುವ ಕಡಿಮೆ ಬೆಲೆಯ ಎರಡನೇ ದರ್ಜೆಯ ಉತ್ಪನ್ನಗಳನ್ನೇ ಕೊಂಡು ಮುಗಿಸುತ್ತಾರೆ.

ಮಾರಾಟ ವೃದ್ಧಿಸಲು ಬೆಲೆಯನ್ನು ಕಡಿಮೆ ಇರಿಸಿ, ಹೆಚ್ಚಿನ ಪ್ರಚಾರ ನೀಡಿದಲ್ಲಿ ಜನ ಹಸಿರು ಬಳಕೆದಾರರಾಗುತ್ತಾರೆ. ಇಲ್ಲವೇ ಎಲ್ಲ ಉತ್ಪನ್ನಗಳಿಗೂ ಎಕೊ ಲೇಬಲ್‍ ಅನ್ನು ಕಡ್ಡಾಯಗೊಳಿಸಿದರೆ ಎಲ್ಲೆಲ್ಲೂ ಹಸಿರು ಬಳಕೆದಾರರು ಸಿಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು