ಸೋಮವಾರ, ಸೆಪ್ಟೆಂಬರ್ 20, 2021
30 °C
ಮಾನವ ಸಂಪನ್ಮೂಲ ಅಭಿವೃದ್ಧಿಗೆ ಈ ಮೂಲ ಆದಾಯ ವರವಾಗಲಿದೆ

‘ಮೂಲ ಆದಾಯ’ ಪರಿಕಲ್ಪನೆಯ ಸುತ್ತ...

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಮಧ್ಯಪ್ರದೇಶದಲ್ಲಿ 2011ರಲ್ಲಿ ಯುನಿಸೆಫ್ ಸಹಯೋಗದೊಂದಿಗೆ 20 ಹಳ್ಳಿಗಳ ನಾಗರಿಕರಿಗೆ ‘ಪಾಕೆಟ್‍ಮನಿ’ ಕೊಡುವ ವಿನೂತನ ಪ್ರಯೋಗ ಮಾಡಲಾಯಿತು. ಎಲ್ಲ ನಾಗರಿಕರ ಬ್ಯಾಂಕ್ ಖಾತೆ ತೆರೆದು, ಪ್ರತಿಯೊಬ್ಬರಿಗೆ ತಿಂಗಳಿಗೆ ₹ 2000 ಜಮಾ ಮಾಡಲಾಯಿತು. ಬಡವ– ಬಲ್ಲಿದ ಎಂಬ ಭೇದವಿಲ್ಲದೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಹಣ ನೀಡಲಾಯಿತು.

ಒಂದು ವರ್ಷ ನಡೆದ ಈ ಪ್ರಯೋಗದಿಂದ ಆ ಹಳ್ಳಿಗಳ ಜನರಲ್ಲಿ ದೊಡ್ಡ ಬದಲಾವಣೆ ಕಂಡುಬಂದಿತ್ತು. ಅವರ ಜೀವನಮಟ್ಟ ಸುಧಾರಿಸಿದ್ದಲ್ಲದೆ, ಗ್ರಾಮಸ್ಥರ ಆಹಾರ ಮತ್ತು ಆರೋಗ್ಯ ಕಾಳಜಿ ಅಧಿಕವಾಯಿತು. ಶೇಕಡ 68ರಷ್ಟು ಕುಟುಂಬಗಳ ಮಕ್ಕಳ ಶಾಲಾ ಶಿಕ್ಷಣ ನಿರಂತರವಾಗಿ ಮುಂದುವರಿಯಿತು. ವೈಯಕ್ತಿಕ ಗಳಿಕೆ ಹೆಚ್ಚಾಯಿತು. ಹೊಸ ಹೊಸ ಉದ್ಯೋಗ, ವ್ಯಾಪಾರಗಳನ್ನು ಅವರು ಆರಂಭಿಸಿದರು. ಇನ್ನೂ ಒಂದು ವಿಶೇಷ ಸಂಗತಿಯೆಂದರೆ, ಯೋಜನೆಯ ಕೊನೆ ಕೊನೆಗೆ ಅವರು ಬ್ಯಾಂಕ್, ಎಲ್‌ಐಸಿ ಉಳಿತಾಯ ಯೋಜನೆಗಳ ಸದಸ್ಯರಾಗತೊಡಗಿದರು. ಹೀಗೆ ಎಲ್ಲ ನಾಗರಿಕರಿಗೆ ನಿಶ್ಚಿತ ಹಣ ಕೊಡುವುದನ್ನು ‘ಮೂಲ ಆದಾಯ’ (ಯೂನಿವರ್ಸಲ್ ಬೇಸಿಕ್ ಇನ್‍ಕಂ) ಎಂದು ಕರೆಯುತ್ತಾರೆ.

ಕೋವಿಡ್- 19ರಿಂದಾಗಿ ದೇಶದಲ್ಲಿ ಆರ್ಥಿಕ ಸ್ಥಿತಿ ಗಣನೀಯವಾಗಿ ಕುಸಿದಿದೆ. ದೇಶದ ಜನ ಸಮಸ್ಯೆಯಿಂದ ಮೈಕೊಡವಿ ಬೇಗನೆ ಎದ್ದು ನಿಲ್ಲಲು ಬೇಸಿಕ್ ಇನ್‍ಕಂ ವರದಾನವಾಗುವುದು ಎಂಬ ಮಹತ್ವದ ಚಿಂತನೆ ಆರಂಭವಾಗಿದೆ.

ಅವಶ್ಯ ಆಹಾರ ವಸ್ತುಗಳನ್ನು ಪುಕ್ಕಟೆಯಾಗಿ ವಿತರಿಸುವ ಯೋಜನೆಗಳನ್ನು ಬಹಳಷ್ಟು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅಂಗವಿಕಲ, ವಿಧವಾ, ವೃದ್ಧಾಪ್ಯ ಪಿಂಚಣಿಗಳು, ಹೆರಿಗೆ ಭತ್ಯೆ... ಹೀಗೆ ಸಾಮಾಜಿಕ ಭದ್ರತೆಯ ಹಲವು ಯೋಜನೆಗಳು ಜಾರಿಯಲ್ಲಿವೆ.

ಇವೆಲ್ಲ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಪ್ರತೀ ತಿಂಗಳು ನಿಶ್ಚಿತ ಹಣ ಆತನ ಬ್ಯಾಂಕ್ ಖಾತೆಗೆ ‘ಮೂಲ ಆದಾಯದ’ ರೂಪದಲ್ಲಿ ಜಮಾ ಮಾಡಬೇಕು. ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ, ಪಾಲಕರು ಮಕ್ಕಳಿಗೆ ಪಾಕೆಟ್‍ಮನಿ ಕೊಡುವ ತರಹ ನಾಗರಿಕರಿಗೆ ಸರ್ಕಾರ ಕೈ ಖರ್ಚಿಗೆ ಒಂದಿಷ್ಟು ಗ್ಯಾರಂಟಿ ಹಣ ಪ್ರತೀ ತಿಂಗಳು ಪಾವತಿ ಮಾಡಬೇಕು. ಇದನ್ನು ಸ್ವ ಇಚ್ಛೆ ಅನುಸರಿಸಿ ಖರ್ಚು ಮಾಡುವುದಕ್ಕೆ ಪೂರ್ಣ ಸ್ವಾತಂತ್ರ್ಯ ಇರಬೇಕು ಎನ್ನುವುದು ಈ ಕಲ್ಪನೆಯ ಆಶಯ.

ಪುಕ್ಕಟೆ ಆಹಾರಧಾನ್ಯ ಒದಗಿಸಿದರೆ ಜನರು ಆಲಸಿಗಳಾಗುತ್ತಾರೆ, ದುಡಿಯುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ. ಹೀಗೆ ಹೇಳುವವರಿಗೆ ಬಡವರ ನೋವು, ಹಸಿವಿನ ಸಂಕಟ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಗೊತ್ತಿರುವುದಿಲ್ಲ. ನಮ್ಮ ದೇಶದಲ್ಲಿ ಶೂನ್ಯ ಆದಾಯದ ಲಕ್ಷಾಂತರ ಕುಟುಂಬಗಳಿವೆ. ಅವರು ಎರಡು ಹೊತ್ತಿನ ಊಟಕ್ಕೆ ದಿನವಿಡೀ ಪರದಾಡುತ್ತಾರೆ.

ಜನಕ್ಕೆ ಹೊಟ್ಟೆತುಂಬ ಪೌಷ್ಟಿಕ ಆಹಾರ ಸಿಗಬೇಕು. ಆರೋಗ್ಯಪೂರ್ಣ ಜನಸಮುದಾಯ ದೇಶದ ಬಹುದೊಡ್ಡ ಸಂಪತ್ತು. ಆರೋಗ್ಯಪೂರ್ಣ ಮನುಷ್ಯ ದುಡಿಯದೇ ಇರಲಾರ. ಮನುಷ್ಯರ ಒಳ ಹಂಬಲ ಕಾಯಕವನ್ನು ಬಯಸುತ್ತದೆ. ಕ್ರಿಯಾಶೀಲರಾಗಿರುವುದು ಮನುಷ್ಯರ ಮೂಲ ಗುಣ ಕೂಡ.

ಜನಕ್ಕೆ ತಮ್ಮ ವೈಯಕ್ತಿಕ ಬೇಡಿಕೆಗಳ ನಿರ್ವಹಣೆಗೆ ಕನಿಷ್ಠ ಗ್ಯಾರಂಟಿ ಹಣ ಸಹಾಯಕವಾಗಬಲ್ಲದು. ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧ ಕೊಳ್ಳಲು, ಹೋಟೆಲ್‌ಗೆ ಹೋಗಿ ಕಾಫಿ ಕುಡಿಯಲು, ಪತ್ರಿಕೆ ಕೊಳ್ಳಲು... ಹೀಗೆ ನಿತ್ಯದ ಅವಶ್ಯಕತೆಗೆ ಬೇಸಿಕ್ ಇನ್‍ಕಂ ತಕ್ಷಣ ಉಪಯೋಗಕ್ಕೆ ಬರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಆತ್ಮವಿಶ್ವಾಸದ ಮನಃಸ್ಥಿತಿ ಮೂಡುತ್ತದೆ. ಸಹಾಯ ಯಾಚಿಸುವ ಸಂದರ್ಭಗಳು ಕಡಿಮೆಯಾಗುತ್ತವೆ.

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಇಂಗ್ಲೆಂಡ್‍ನ ಹಾರಡ್, ಅಮೆರಿಕದ ಎಲಿನಾರ್ ಒಸ್ಟ್ರೋ ಮುಂತಾದ ಚಿಂತಕರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ. ಬ್ರಿಟನ್, ನೆದರ್ಲೆಂಡ್ಸ್‌, ಬ್ರೆಜಿಲ್, ಮಕಾವೋ, ಇರಾನ್ ದೇಶಗಳಲ್ಲಿ ಮೂಲ ಆದಾಯ ಕುರಿತ ಚರ್ಚೆಗಳು ಹಾಗೂ ಪ್ರಯೋಗಗಳು ನಡೆಯುತ್ತಲೇ ಇವೆ. ನೆದರ್ಲೆಂಡ್ಸ್‌ನ ಉಟ್ರೇಟ್ ಎಂಬ ನಗರದಲ್ಲಿ 2017ರಿಂದ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಪ್ರತೀ ನಾಗರಿಕನಿಗೆ ತಿಂಗಳಿಗೆ 15 ಪೌಂಡ್ ನೀಡಲಾಗುತ್ತದೆ.

ಜನರ ಜೀವನಮಟ್ಟದಲ್ಲಿ ಗಣನೀಯ ಸುಧಾರಣೆ, ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆಯಲ್ಲಿ ಇಳಿಮುಖ, ಸಂತಸದ ಸೂಚ್ಯಂಕ ವೃದ್ಧಿ ಮೂಲಭೂತ ಆದಾಯದಿಂದ ಆಗುತ್ತದೆ ಎಂದು ಸ್ವಿಟ್ಜರ್ಲೆಂಡ್ ವಿಶ್ವವಿದ್ಯಾಲಯದ ತಜ್ಞರ ವರದಿ ಹೇಳಿದೆ.

ಎಷ್ಟು ಹಣವನ್ನು ಮೂಲ ಆದಾಯವೆಂದು ಸಂದಾಯ ಮಾಡಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು. ಹಿಂದಿನ ಎಲ್ಲ ಸರ್ಕಾರಗಳು ಬಡತನವನ್ನು ನಿವಾರಣೆ ಮಾಡುವುದಾಗಿ ಹೇಳುತ್ತ ಬಂದಿವೆ. ಮೂಲ ಆದಾಯದ ಪರಿಕಲ್ಪನೆ ಸಾಕಾರಗೊಂಡರೆ ಬಡತನ ಖಂಡಿತವಾಗಿಯೂ ದೂರವಾಗುತ್ತದೆ ಎನ್ನುವುದು ತಜ್ಞರ ಅಭಿಮತವಾಗಿದೆ.

ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮೂಲ ಆದಾಯದ ವಿಧಾನ ಖಂಡಿತವಾಗಿಯೂ ಹೊಸ ಉತ್ಸಾಹ ಮೂಡಿಸಬಲ್ಲದು. ಆರ್ಥಿಕ ಸಂಕಷ್ಟದಿಂದ ನಡೆಯುವ ಆತ್ಮಹತ್ಯೆಗಳು ನಿಲ್ಲುವುವು. ಜನರ ಕ್ರಿಯಾಶೀಲ ಬದುಕಿನ ಅವಧಿ ವಿಸ್ತಾರಗೊಳ್ಳುವುದು. ಇದು ಭಾರತದ ಅತ್ಯಂತ ಮಹತ್ವದ ಮತ್ತು ದೂರಗಾಮಿ ಆರ್ಥಿಕ ಅನುಕೂಲಕ್ಕೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.