ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಮುಟ್ಟಿನ ನಿರ್ವಹಣೆ: ದಾಟೋಣ ಮಿಥ್ಯೆ

ಆರ್ಥಿಕ ನಷ್ಟವಿಲ್ಲದಂತೆ, ಆರೋಗ್ಯಕ್ಕೆ ಹಾನಿಯಾಗದಂತೆ ಮುಟ್ಟಿನ ಅವಧಿಯನ್ನು ನಿರ್ವಹಿಸಬೇಕಾಗಿದೆ
ಡಾ. ವೀಣಾ ಎಸ್. ಭಟ್
Published 28 ಮೇ 2024, 0:34 IST
Last Updated 28 ಮೇ 2024, 0:34 IST
ಅಕ್ಷರ ಗಾತ್ರ

ಜೀವಸೃಷ್ಟಿಯ ಮೂಲಕ್ರಿಯೆಯಾದ ಮುಟ್ಟು, ಸೃಷ್ಟಿಯ ಅತಿಶ್ರೇಷ್ಠವಾದ ಹಾಗೂ ಜೀವಜಗತ್ತನ್ನು ಮುಂದುವರಿಸಲು ಅತ್ಯಗತ್ಯವಾದ ಕ್ರಿಯೆ. ಆದರೆ ಇಂದಿನ ಆಧುನಿಕ ಯುಗದಲ್ಲೂ ಮುಟ್ಟಿನ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಅರಿಯದೆ, ಅದನ್ನು ಒಂದು ಅಶುದ್ಧ ಕ್ರಿಯೆ, ಅನಿಷ್ಟ ಎಂದೆಲ್ಲ ಪರಿಗಣಿಸುವವರೇ ಹೆಚ್ಚು.

ಈ ದಿಸೆಯಲ್ಲಿ ವ್ಯಾಪಕ ಅರಿವು ಮೂಡಿಸಲು 2014ರಿಂದ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನ ಆಚರಿಸುತ್ತಾ ಬರಲಾಗಿದೆ. ‘ಎಲ್ಲರೂ ಒಟ್ಟಾಗಿ ವಿಶ್ವದಲ್ಲಿ ಮುಟ್ಟಿನ ಬಗ್ಗೆ ಸ್ನೇಹಪರ ವಾತಾವ ರಣವನ್ನು ದೊರಕಿಸೋಣ’ ಎಂಬ ಈ ಬಾರಿಯ ಘೋಷವಾಕ್ಯವು ಮಹಿಳೆಯರ ಸಮಗ್ರ ಆರೋಗ್ಯ ಕಾಪಾಡುವ ಆಶಯಕ್ಕೆ ಪೂರಕವಾಗಿದೆ.

ಮುಟ್ಟಿನ ಸಮಯದಲ್ಲಿ ಬಳಸುವ ಉತ್ಪನ್ನಗಳು, ಅವುಗಳಿಂದ ಮಹಿಳೆಯರ ಆರೋಗ್ಯ ಹಾಗೂ ಪರಿಸರಕ್ಕೆ ಆಗುತ್ತಿರುವ ಹಾನಿ, ಮುಟ್ಟಿನ ಕಾರಣದಿಂದ ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಆರ್ಥಿಕತೆಗೆ ಆಗುತ್ತಿರುವ ನಷ್ಟದಂತಹ ಸಂಗತಿಗಳ ಬಗ್ಗೆ ಅರಿವು ಮೂಡಿಸಲು ಇದೊಂದು ಸುಸಂದರ್ಭ.

ಮುಟ್ಟಿನ ಬಗ್ಗೆ ಜನಸಾಮಾನ್ಯರಲ್ಲಿ ಹಲವಾರು ಮಿಥ್ಯೆಗಳಿವೆ. ಮಡಿ-ಮೈಲಿಗೆಯ ಕಾರಣಕ್ಕೆ, ನಿಯಮಿತ ಅವಧಿಗಿಂತ ಮೊದಲು ಅಥವಾ ನಂತರ ಮುಟ್ಟಾಗಲು ಅನುವಾಗುವಂತಹ ಮಾತ್ರೆಗಳನ್ನು ಸೇವಿಸುವ ಪರಿಪಾಟವೂ ನಿಂತಿಲ್ಲ. ಸುಸ್ಥಿರ ಮುಟ್ಟಿನ ನಿರ್ವಹಣೆಗೆ ನಾವೆಷ್ಟು ಸಿದ್ಧರಾಗಿದ್ದೇವೆ? ಎಲ್ಲಕ್ಕಿಂತ ಹೆಚ್ಚಾಗಿ, ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವು ದಕ್ಕೆ ಎಷ್ಟು ಆದ್ಯತೆ ನೀಡುತ್ತಿದ್ದೇವೆ? ಆ ಪ್ರಯತ್ನ ಆಶಾದಾಯಕವಾಗಿ ಇದೆಯೇ? ಉತ್ತರ ‘ಇಲ್ಲ’ ಎಂದೇ ಹೇಳಬಹುದು. ‘ಹೌದು’ ಎಂದಾಗಿದ್ದರೆ, ಏಕಬಳಕೆಯ ಪ್ಲಾಸ್ಟಿಕ್‌ಮಿಶ್ರಿತ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕೆಯು ವಾರ್ಷಿಕವಾಗಿ ₹ 17,000 ಕೋಟಿಯಷ್ಟು ಬೃಹತ್‌ ಉದ್ದಿಮೆಯಾಗಿ ಬೆಳೆಯುತ್ತಿರಲಿಲ್ಲ.

ಈ ಮೊದಲು ಮುಟ್ಟಿನ ಸ್ರಾವ ನಿರ್ವಹಣೆಗೆ ಹಳೆ ಬಟ್ಟೆಯನ್ನು ಬಳಸುತ್ತಾ ಬೇಸತ್ತಿದ್ದ ಮಹಿಳೆಯರಿಗೆ, ಸ್ಯಾನಿಟರಿ ನ್ಯಾಪ್ಕಿನ್ ಬಳಕೆ ಆರಂಭವಾದದ್ದು ಸ್ವರ್ಗವೇ ಧರೆಗಿಳಿದು ಬಂದ ಹಾಗಾಗಿತ್ತು. ಇದರಿಂದ ಅವರು ತಮ್ಮ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅನುಕೂಲವಾಗಿ, ಅವರಲ್ಲಿ ಆತ್ಮವಿಶ್ವಾಸ ಮೂಡತೊಡಗಿತು. ಆದರೆ ದಿನಗಳೆದಂತೆ ನ್ಯಾಪ್ಕಿನ್‌ ಬಳಕೆಯ ದುಷ್ಪರಿಣಾಮಗಳ ಅರಿವಾಗತೊಡಗಿತು. ನ್ಯಾಪ್ಕಿನ್‍ನಲ್ಲಿ ಬಳಸುವ ಕಚ್ಚಾವಸ್ತುಗಳಾದ ಪೆಟ್ರೋಲಿಯಂ, ಸ್ರಾವ ಹೀರುವಿಕೆಗೆ ಬಳಸುವ ಪಾಲಿಕ್ರಿಲೇಟ್ ಜೆಲ್, ಕಲೆ ಕಾಣದಂತೆ ಮಾಡುವ ಪಾಲಿಥೀನ್, ಪರಿಮಳಕಾರಕವಾಗಿ ಬಳಸುವ ರಾಸಾಯನಿಕಗಳಿಂದ ಅಲರ್ಜಿ, ಸೋಂಕು, ಹಾರ್ಮೋನು ಏರುಪೇರು, ಗರ್ಭಗೊರಳಿನ ಕ್ಯಾನ್ಸರ್‌ ಸಾಧ್ಯತೆಯಂತಹ ಅಪಾಯಗಳ ಅರಿವಾಗತೊಡಗಿತು. ಅಷ್ಟಾದರೂ ಒಂದೆಡೆ ಬಟ್ಟೆಯ ಬಗ್ಗೆ ಅಪಪ್ರಚಾರ, ಇನ್ನೊಂದೆಡೆ ಪ್ಯಾಡ್ ಬಳಕೆಯ ಬಗ್ಗೆ ವ್ಯಾಪಕ ಪ್ರಚಾರ ಹೆಚ್ಚುತ್ತಾ ಹೋಯಿತು.

ಏಕಬಳಕೆಯ ಒಂದು ಪ್ಯಾಡ್ ನಾಲ್ಕು ಪ್ಲಾಸ್ಟಿಕ್ ಬ್ಯಾಗ್‌ಗಳು ಉಂಟುಮಾಡುವ ತ್ಯಾಜ್ಯಕ್ಕೆ ಸಮ. ಈ ಮೊದಲೇ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯ ದೊಡ್ಡ ಸಂಕಷ್ಟ ಭೂತಾಕಾರವಾಗಿ ನಿಂತಿರುವಾಗ, ನೂರಾರು ವರ್ಷವಾದರೂ ಮಣ್ಣಲ್ಲಿ ಮಣ್ಣಾಗದ, ಜೈವಿಕವಾಗಿ ವಿಭಜಿಸಲ್ಪಡದ ಈ ಏಕಬಳಕೆಯ ಪ್ಯಾಡ್ ವಿಲೇವಾರಿ ಅತಿದೊಡ್ಡ ಸಮಸ್ಯೆಯಾಗಿದೆ. ಮನೆ, ಶಾಲೆಗಳ ಶೌಚಾಲಯದ ಮೂಲಕ ಒಳಚರಂಡಿಯನ್ನು ಸೇರಿ ಅದು ಕಟ್ಟಿಕೊಳ್ಳಲು ಕಾರಣವಾಗುತ್ತಿದೆ. ಬಳಸಿ ಬಿಸಾಡಿದ್ದು ನಾಯಿ, ಹಂದಿ, ಹಸುಗಳ ಎಳೆದಾಟಕ್ಕೂ ಪೌರಕಾರ್ಮಿಕರ ಸೆಣಸಾಟಕ್ಕೂ ಕಾರಣವಾಗಿ ಕೋಟ್ಯಂತರ ಟನ್‍ಗಟ್ಟಲೆ ತ್ಯಾಜ್ಯವು ಭೂಮಿಗಷ್ಟೇ ಅಲ್ಲ ಪ್ರಾಣಿ-ಪಕ್ಷಿ, ಜಲಚರಗಳ ದೇಹವನ್ನೂ ಸೇರಿ, ಅವುಗಳನ್ನು ಸಂಕಷ್ಟಕ್ಕೆ ಈಡುಮಾಡುತ್ತಿದೆ.

ಪ್ಯಾಡ್ ಸುಟ್ಟರೆ ಬರುವ ಡಯಾಕ್ಸಿನ್ ಎಂಬ ವಿಷ ಅನಿಲವು ಕ್ಯಾನ್ಸರ್‌ಕಾರಕ. ಪ್ಯಾಡ್‍ಗೆ ತಿಂಗಳಿಗೆ ನೂರಾರು ರೂಪಾಯಿ ಖರ್ಚು. ಆರೋಗ್ಯಕ್ಕೂ ಆರ್ಥಿಕತೆಗೂ ಪರಿಸರಕ್ಕೂ ಸಂಕಷ್ಟ ಒಡ್ಡಿ, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುವುದು ಪ್ರಜ್ಞಾವಂತರಲ್ಲಿ ಜಾಗ್ರತೆಯ ಕಿಡಿ ಹೊತ್ತಿಸಿತು. ಇದರ ಪರಿಣಾಮವಾಗಿ ಜಾರಿಗೆ ಬಂದದ್ದು ಮರುಬಳಕೆಯ ಕಾಟನ್‍ಪ್ಯಾಡ್ ಹಾಗೂ ಮೆನ್‍ಸ್ಟ್ರುಯಲ್‍ ಕಪ್ ಬಳಕೆಯ ಬೆಳಕಿನ ದಾರಿ. ಆದರೆ ಇವುಗಳ ಬಳಕೆ ಮತ್ತು ಪ್ರಚಾರ ಇನ್ನಷ್ಟೇ ವ್ಯಾಪಕಗೊಳ್ಳಬೇಕಿದೆ.

ಈ ಮಧ್ಯೆ ಬಯೊಡೀಗ್ರೇಡಬಲ್ ಪ್ಯಾಡ್‍ಗಳ ಬಗ್ಗೆ ಅಲ್ಲಲ್ಲಿ ಪ್ರಚಾರ, ಉತ್ತೇಜನ ದೊರೆಯುತ್ತಿದೆಯಾದರೂ ಅವುಗಳ ನೈಜತೆಯ ಬಗ್ಗೆ ಸಂಶೋಧನೆ ಆಗಬೇಕಿದೆ. ಒಳಉಡುಪಿಗೆ ಅಂಟಿಸಬಲ್ಲ ಮರು ಬಳಕೆಯ ಕಾಟನ್‍ಪ್ಯಾಡ್‌ಗೆ ದರವೂ ಕಡಿಮೆ, ಜೊತೆಗೆ ಸ್ಥಳೀಯವಾಗಿ ತಯಾರಿಸಲು ಸಾಧ್ಯ. ತ್ಯಾಜ್ಯವೂ ಇಲ್ಲ, ಶೌಚಾಲಯ, ಚರಂಡಿ ಕಟ್ಟುವಿಕೆಯೂ ಇಲ್ಲ. ತಣ್ಣೀರಿನಲ್ಲಿ ಸ್ವಚ್ಛವಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಸೂಕ್ತವಾಗಿ ಮರುಬಳಕೆ ಮಾಡಬಹುದು.

ಇವೆಲ್ಲಕ್ಕಿಂತ ಹೆಚ್ಚಾಗಿ, ಮುಟ್ಟಿನ ಸುಸ್ಥಿರ ನಿರ್ವಹಣೆಗೆ ಮೆನ್‍ಸ್ಟ್ರುಯಲ್ ಕಪ್ (ಮುಟ್ಟಿನ ಬಟ್ಟಲು) ಅತ್ಯುತ್ತಮ ಸಾಧನವಾಗಿ ಒದಗಿಬಂದಿದೆ. ವೈದ್ಯಕೀಯ ದರ್ಜೆಯ ಸಿಲಿಕಾನ್‍ನಿಂದ ತಯಾರಿಸಿರುವ ಇದು ಮೆತ್ತಗಿದ್ದು ಮಣ್ಣಿನಲ್ಲಿ ಕರಗುವಂತಹದ್ದು. ಇದಕ್ಕಾಗಿ ತಿಂಗಳಿಗೆ ಖರ್ಚಾಗುವುದು ಬರೀ ₹ 5. ಆರಂಭದ ಹಿಂಜರಿಕೆಯನ್ನು ಮೆಟ್ಟಿದರೆ ಆತ್ಮವಿಶ್ವಾಸದಿಂದ ಮುಟ್ಟಿನ ನಿರ್ವಹಣೆಯನ್ನು ಮಾಡಬಹುದು. ವೈದ್ಯರು, ಆರೋಗ್ಯ ಕಾರ್ಯಕರ್ತೆಯರು ಎಲ್ಲರೂ ಸ್ವತಃ ಬಳಸಿ, ಉಳಿದವರಿಗೂ ಈ ಬಗ್ಗೆ ಅರಿವು ಮೂಡಿಸುತ್ತಾ ಹೋದರೆ ಆರ್ಥಿಕ ನಷ್ಟವಿಲ್ಲದೆ, ಆರೋಗ್ಯಕ್ಕೆ ಹಾನಿಯಿಲ್ಲದೆ ಪರಿಸರವನ್ನೂ ಕಾಪಾಡುತ್ತ ಮುಟ್ಟಿನ ಸುಸ್ಥಿರ ನಿರ್ವಹಣೆಗೆ ನಾಂದಿ ಹಾಡಲು ನೆರವಾಗಬಲ್ಲದು.

ಲೇಖಕಿ: ಸ್ತ್ರೀರೋಗ ತಜ್ಞೆ, ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT