ಸೋಮವಾರ, ಮೇ 10, 2021
19 °C

ಸೈದ್ಧಾಂತಿಕ ರಾಜಕೀಯದ ಮಾದರಿ

ಡಾ. ಆರ್.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಜಾರ್ಜ್‌ ಫರ್ನಾಂಡಿಸ್ ನೆನಪಾದರೆ ಮೈನವಿರೇಳುತ್ತದೆ. ಮಿಂಚಿನಂತಹ ವ್ಯಕ್ತಿತ್ವ ಅವರದು. ಕೈಗೆ, ಕುತ್ತಿಗೆಗೆ ಕೋಳ ಧರಿಸಿ, ತುರ್ತುಸ್ಥಿತಿಯ ವಿರುದ್ಧ ಕೈ ಎತ್ತಿ ನಿಂತ ಅವರ ಭಾವಚಿತ್ರ ಅವರ ವ್ಯಕ್ತಿತ್ವಕ್ಕೆ ರೂಪಕವಾಗಿ ಹೋಗಿದೆ. ಇಲ್ಲಿ ಇಂಗ್ಲಿಷ್‌ ಕವಿ ಶೆಲ್ಲಿಯ ಕವಿತೆಯಲ್ಲಿ ಬರುವ ಗ್ರೀಕ್ ಪಾತ್ರ ಪ್ರೊಮೀದಿಯಸ್ ನೆನಪಾಗುತ್ತಾನೆ. ಕಣ್ಣುತಪ್ಪಿಸಿ ಸ್ವರ್ಗದಿಂದ ಬೆಂಕಿಯನ್ನು ಕದ್ದುತಂದು ಭೂಮಿಗೆ ನೀಡಿದವನು ಆತ. ತನ್ಮೂಲಕ, ದೇವತೆಗಳ ದಬ್ಬಾಳಿಕೆಯನ್ನು ಕೊನೆಗೊಳಿಸಿದವನು. ಕ್ರಾಂತಿಕಾರಿ ಮತ್ತು ಆದರ್ಶವಾದಿ. ಅಂತಹುದೇ ವ್ಯಕ್ತಿ ಜಾರ್ಜ್‌ ಫರ್ನಾಂಡಿಸ್. ಮೂಲಭೂತವಾಗಿಯೇ ರೆಬೆಲ್ ಆಗಿದ್ದವರು. ಜೀವನದುದ್ದಕ್ಕೂ ಎಡಪಂಥೀಯ ಆದರ್ಶಗಳ ಯುಟೋಪಿಯನ್ ಕನಸು ಹೊತ್ತು ಬದುಕಿದವರು.

ಫರ್ನಾಂಡಿಸ್‍ ಅವರ ಇಂತಹ ಸಮಾಜವಾದಿ ಬದ್ಧತೆಯೇ ಅವರನ್ನು ದೇಶದ ಮುಂಚೂಣಿಯ ಎಡಪಂಥೀಯ ನಾಯಕರನ್ನಾಗಿಸಿದ್ದು. ಮುಂಬೈನ ರೈಲ್ವೆ ಕಾರ್ಮಿಕರ ಮಹಾನಾಯಕರಾಗಿ ಬೆಳೆದು ನಿಂತವರು ಅವರು. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕ ಎಸ್.ಕೆ ಪಾಟೀಲರನ್ನು ಮುಂಬೈನಲ್ಲಿ ಸೋಲಿಸಿ ಲೋಕಸಭೆಗೆ ಆಯ್ಕೆಯಾದವರು. ರಕ್ಷಣಾ ಸಚಿವ ಸ್ಥಾನ ಸೇರಿದಂತೆ ಹಲವು ಹಿರಿಯ ಹುದ್ದೆಗಳನ್ನು ಹೊಂದಿದರೂ ಎಲ್ಲಿಯೂ ತಾತ್ವಿಕ ಹೊಂದಾಣಿಕೆ ಮಾಡಿಕೊಂಡವರಲ್ಲ. ಅಲ್ಲದೆ ತಾವಿದ್ದ ಎಲ್ಲ ಕಡೆಯಲ್ಲಿಯೂ ಒಳಗಿನವರಂತೆ ಕಂಡರೂ ಭಿನ್ನವಾಗಿ, ವಿರೋಧಿಯಂತೆಯೇ ಇದ್ದವರು. ಕಾಂಗ್ರೆಸ್ ವಿರೋಧಿಯಾಗಿದ್ದ ಫರ್ನಾಂಡಿಸ್ ನಂತರದ ವರ್ಷಗಳಲ್ಲಿ ಆ ಕಾರಣಕ್ಕೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡವರು. ರಾಷ್ಟ್ರೀಯ ಪ್ರಜ್ಞೆಯಲ್ಲಿ ಫರ್ನಾಂಡಿಸ್‍ ಜೀವಂತವಾಗಿರುವುದು ತಮ್ಮ ಅಪ್ಪಟ ಸಮಾಜವಾದಿ ನಿಲುವುಗಳಿಂದಾಗಿ.

ವಿಷಯಕ್ಕೆ ಬರುವ ಮೊದಲು, ಬಹುಶಃ ಫರ್ನಾಂಡಿಸ್‍ಗೆ ವಿರುದ್ಧವಾದ, ಆದರೆ ಸಮಾನಾಂತರ ವ್ಯಕ್ತಿತ್ವ ಹೊಂದಿದ್ದಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿತ್ವವನ್ನೂ ಇಲ್ಲಿ ಗಮನಿಸಬೇಕು. ಫರ್ನಾಂಡಿಸ್‍ ಅಪ್ಪಟ ಎಡಪಂಥೀಯರಾದರೆ, ವಾಜಪೇಯಿ ಅಪ್ಪಟ ಬಲಪಂಥೀಯರು. ಬಲಪಂಥೀಯ ರಾಜಕೀಯಕ್ಕೆ ಜನಮತವೇ ಇಲ್ಲದ ಸಂದರ್ಭದಲ್ಲಿ, ದೇಶವನ್ನೆಲ್ಲ ಸುತ್ತಾಡಿ ಭಾರತೀಯ ಜನಸಂಘ ಕಟ್ಟಿದವರು ವಾಜಪೇಯಿ. ಎಂಬತ್ತರ ದಶಕದಲ್ಲಿ ಎಲ್.ಕೆ.ಅಡ್ವಾಣಿ ಅವರೊಂದಿಗೆ ಸೇರಿ ಭಾರತೀಯ ಜನತಾ ಪಕ್ಷ ಸ್ಥಾಪಿಸಿ ನಿರಂತರ ಹೋರಾಟ, ತಾತ್ವಿಕ ಸಂಘಟನೆಯ ಮೂಲಕ ರಾಷ್ಟ್ರವನ್ನೆಲ್ಲ ಸಂಚರಿಸಿ, ಪಕ್ಷವು ಭಾರತದ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿದವರು. ವಾಜಪೇಯಿಯವರ ವ್ಯಕ್ತಿತ್ವ ಹೇಗಿತ್ತೆಂದರೆ, ಅಪ್ಪಟ ಎಡಪಂಥೀಯರೂ ಅದನ್ನು ಗೌರವಿಸುತ್ತಿದ್ದರು, ಗೌರವಿಸುತ್ತಾರೆ. ಫರ್ನಾಂಡಿಸ್‍ ಅವರನ್ನು ಬಲಪಂಥೀಯರೂ ಹೇಗೆ ಗೌರವಿಸುತ್ತಾರೋ ಹಾಗೆ.

ಸ್ಥೂಲವಾಗಿ ಎಡ–ಬಲಗಳ ರಾಜಕೀಯ ತತ್ವಗಳನ್ನೇ ಆಧರಿಸಿ ಸಾರ್ವಜನಿಕ ಮಾತುಗಳು ವಿಪರೀತಕ್ಕೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ನಾವು ಫರ್ನಾಂಡಿಸ್ ಮತ್ತು ವಾಜಪೇಯಿ ಅವರನ್ನು ನೆನೆಯಬೇಕು. ಇಬ್ಬರೂ ಹೇಗೆ ತಮ್ಮ ಸಿದ್ದಾಂತಗಳನ್ನು ಇಟ್ಟುಕೊಂಡೇ ಅವುಗಳ ಕಠಿಣ ಮಿತಿಗಳನ್ನು ಮೀರಿದ್ದರು ಎನ್ನುವುದನ್ನು ಅರಿಯಬೇಕು. ಇಬ್ಬರೂ ಪಂಥಗಳ ಕುರಿತು ಭಾವುಕರಾಗಿದ್ದರೂ ಅವುಗಳಿಗಿಂತಲೂ ವಿಶಾಲವಾದ ಮಾನವೀಯತೆಯನ್ನು ಪ್ರೀತಿಸುವ ಹೃದಯ ಹೊಂದಿದ್ದರು. ಹೀಗಾಗಿ ಇಬ್ಬರ ಭಾಷಣಗಳೂ ತಮ್ಮ ತತ್ವಗಳ ಸಮರ್ಥನೆಯಲ್ಲಿ ಉಕ್ಕಿ ಹರಿಯುವ ಸಾಗರದಂತೆ ಅಬ್ಬರಿಸಿದರೂ ಮಾನವೀಯ ಮೌಲ್ಯಗಳ ಮಿತಿಗಳನ್ನು ದಾಟುತ್ತಿರಲಿಲ್ಲ. ಪಂಥಗಳು ಅಥವಾ ತತ್ವಗಳು ಕಾಲಕಾಲಕ್ಕೆ ಬೇರೆ ವಿಚಾರಗಳೊಂದಿಗೆ ಸೇರಿಕೊಳ್ಳುತ್ತಾ, ಬೆಳೆದುಕೊಳ್ಳುತ್ತಾ, ಸಮಕಾಲೀನವಾಗುತ್ತಾ ಹೋಗುತ್ತವೆ, ಮತ್ತೆ ಹೀಗೆಯೇ ಬೇರೆ ಪಂಥಗಳು ಹುಟ್ಟಿಕೊಳ್ಳುತ್ತವೆ ಎನ್ನುವುದೂ ತಿಳಿದಿತ್ತು. ಹಾಗಾಗಿಯೇ ಇಬ್ಬರೂ ಕೋಟ್ಯಂತರ ಜನರ ಪ್ರೀತಿ ಹಾಗೂ ವಿಶ್ವಾಸ ಪಡೆದು ಮಹಾನಾಯಕರೆನಿಸಿದರು.

ನಮ್ಮಇಂದಿನ ಹಲವು ಪಂಥಬದ್ಧ ರಾಜಕಾರಣಿಗಳಲ್ಲಿ ಮತ್ತು ಮುಖ್ಯವಾಗಿ ಬೌದ್ಧಿಕರಲ್ಲಿ ಈ ಮಾನವೀಯ ಕಾಳಜಿ ಮಾಯವಾದಂತಿದೆ. ಸೈದ್ಧಾಂತಿಕರು ಭಾವನೆಯಿಲ್ಲದ ತತ್ವಗಳನ್ನು ತಯಾರಿಸುವ ಕಾರ್ಖಾನೆಗಳಾಗಿ ಹೋಗಿದ್ದಾರೆ. ತಾತ್ವಿಕ ಚರ್ಚೆ ತೀರಾ ಕೆಳಗಿಳಿದು ಬೈಗುಳದ ಹಂತ ತಲುಪಿದೆ. ಕೈಕೈ ಮಿಲಾಯಿಸುವ ಮಟ್ಟ ತಲುಪಿದೆ. ಸಿದ್ಧಾಂತಗಳು, ತತ್ವಗಳು, ಆದರ್ಶಗಳು ತಮ್ಮ ಮಾನವೀಯತೆ, ಮಾಧುರ್ಯ, ಸ್ಫೂರ್ತಿ ಕಳೆದುಕೊಂಡು ಬೀದಿ ಜಗಳದ ಮಾತುಗಳಂತೆ ಕೇಳಿಬರುತ್ತಿವೆ. ಚುನಾವಣಾ ಪ್ರಚಾರ ಭಾಷಣಗಳು ಮೃಗಬೇಟೆಯ ಕೇಕೆಯ ಅಬ್ಬರದಂತೆ ಕೇಳಿಬರುತ್ತಿವೆ. ಇಂತಹ ಕಲುಷಿತ ವಾತಾವರಣದಲ್ಲಿರುವ ನಾವು ವಾಜಪೇಯಿ ಮತ್ತು ಫರ್ನಾಂಡಿಸ್‍ ಅವರನ್ನು ಮತ್ತೊಮ್ಮೆ ಗಮನಿಸಬೇಕು. ಸಾಧ್ಯವಾದರೆ ನೆಹರೂ, ರಾಮಕೃಷ್ಣ ಹೆಗಡೆ, ಪ್ರಣವ್‌ ಮುಖರ್ಜಿ, ಪಿ.ವಿ.ನರಸಿಂಹರಾವ್ ಅವರನ್ನೂ ನೆನಪಿಸಿಕೊಳ್ಳಬೇಕು. ಅವರಂತೆ ಸಿದ್ಧಾಂತಗಳ ಒಳಗಿದ್ದೂ ಅವುಗಳನ್ನು ಅವಶ್ಯಕತೆಯಿದ್ದಲ್ಲಿ ಮೀರಿ ನಿಲ್ಲುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಸೈದ್ಧಾಂತಿಕ ರಾಜಕೀಯದ ಮಾದರಿಗಳು ಅವರು. ಇಲ್ಲವಾದರೆ ಬಹುಶಃ ಮುಂದಿನ ಜನಾಂಗ ಚುನಾವಣಾ ಪ್ರಚಾರ ಎಂದರೆ, ಕೇವಲ ಕೆಟ್ಟ ಭಾಷೆಯಲ್ಲಿ ಪರಸ್ಪರ ತಮ್ಮ ವಿಚಾರಗಳನ್ನು ಹೇಳಿಕೊಂಡು ಬೈದಾಡಿಕೊಳ್ಳುವುದು ಎಂದು ಭಾವಿಸಿಬಿಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು