ಮರ್ಯಾದೆ ಹೆಸರಿನ ಮರ್ಯಾದೆಗೇಡು ಹತ್ಯೆಗಳು ಸಮಾಜದಲ್ಲಿ ವೃದ್ಧಿಸುತ್ತಿರುವ ಜಾತಿಪ್ರೇಮಕ್ಕೆ ನಿದರ್ಶನಗಳಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿರುವ ದಿನಗಳಲ್ಲೂ ಜಾತಿಪ್ರೇಮವನ್ನು ಮೈಗೂಡಿಸಿಕೊಂಡಿರುವ ಸಮಾಜ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ.

ಯಶವಂತ ಚಿತ್ತಾಲರು ಹೇಳಿದಂತೆ, ‘ಮನುಷ್ಯ ಯಾವ ಕ್ರೂರ ಮೃಗಗಳಿಗೂ ಹೆದರಬೇಕಾಗಿಲ್ಲ. ಹೆದರಬೇಕಿರುವುದು ತನ್ನಂತೆಯೇ ಕಾಣಿಸುತ್ತಿರುವ ಮನುಷ್ಯರಿಗೆ’ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ. ಮನುಷ್ಯ ಸುಶಿಕ್ಷಿತನಾದಷ್ಟೂ ಜಾತಿಪ್ರೇಮ ಸಾಂಕ್ರಾಮಿಕ ಜಾಡ್ಯದಂತೆ ವ್ಯಾಪಿಸುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗಿಂತ ನಗರ ಪ್ರದೇಶಗಳ ಜನರು ನಾಗರಿಕತೆಯನ್ನು ಹೆಚ್ಚು ಮೈಗೂಡಿಸಿಕೊಂಡಿರುತ್ತಾರೆ ಎನ್ನುವ ನಂಬಿಕೆ ಇದೆ. ವಿಪರ್ಯಾಸವೆಂದರೆ, ಇಂದು ನಗರ ಪ್ರದೇಶಗಳಲ್ಲೂ ಜಾತಿಸಮಸ್ಯೆ ತಾಂಡವವಾಡುತ್ತಿದೆ. ಜಾತಿಗೊಂದು ವಸತಿ ಸಂಕೀರ್ಣಗಳು ನಗರಗಳಲ್ಲಿ ತಲೆ ಎತ್ತಿವೆ. ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮನೆಗಳು ಬಾಡಿಗೆಗೆ ದೊರೆಯುವುದು ದುರ್ಲಭವಾಗಿದೆ. ಇತ್ತೀಚೆಗೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಶಿಕ್ಷಕರು ಜಾತಿಕಾರಣದಿಂದಾಗಿ ಅನುಭವಿಸಿದ ವೇದನೆ ಹೇಳತೀರದು. ಜಾತಿಪ್ರೇಮದಿಂದಾಗಿ ಅದೆಷ್ಟೋ ಮನೆಗಳಲ್ಲಿ ಶಿಕ್ಷಕರನ್ನು ಬಿರುಬಿಸಿಲಿನಲ್ಲಿಯೇ ನಿಲ್ಲಿಸಿ ಮಾಹಿತಿ ನೀಡಿದ ಉದಾಹರಣೆಗಳಿವೆ.

ಇಂದಿಗೂ ಅಪರಿಚಿತರನ್ನು ‘ನಿಮ್ಮ ಸರ್ನೇಮ್ ಏನು?’ ಎಂದು ಕೇಳುವ ಪದ್ಧತಿ ಕೆಲವೆಡೆ ರೂಢಿಯಲ್ಲಿದೆ. ಮನೆತನದ ಹೆಸರು ಜಾತಿ ಸೂಚಕವಾಗಿರುವುದು ಸಾಮಾನ್ಯವಾಗಿದೆ. ಈ ಕಾರಣದಿಂದ ಮನುಷ್ಯನ ಜಾತಿಯನ್ನು ಗುರುತಿಸಲು ಮನೆತನದ ಹೆಸರನ್ನು ಕೇಳಲಾಗುತ್ತದೆ. ಜಾತಿ ಸೂಚಕವಾಗಿರುವ ಮನೆತನದ ಹೆಸರಿನ ಗೊಡವೆಯೇ ಬೇಡವೆಂದು ಹಿಂದುಳಿದ ವರ್ಗಗಳ ವಿದ್ಯಾವಂತರು ಊರಿನ ಹೆಸರನ್ನು ಅಡ್ಡಹೆಸರಾಗಿಸಿಕೊಳ್ಳುತ್ತಿರುವ ಮನೋಭಾವ ನಿಧಾನವಾಗಿ ರೂಪುಗೊಳ್ಳುತ್ತಿದೆ. ಈ ವಿಷಯದಲ್ಲಿ ಜಾತಿ ಸೂಚಕವಾದ ಮನೆತನದ ಹೆಸರನ್ನು ಕೈಬಿಟ್ಟ ಗದುಗಿನ ‘ವೀರೇಶ್ವರ ಪುಣ್ಯಾಶ್ರಮ’ದ ನಡೆ ಮಾದರಿಯಾದುದು. ಆಶ್ರಮದಲ್ಲಿ ಆಗ ಗುರುಗಳಾಗಿದ್ದ ಪಂಡಿತ ಪುಟ್ಟರಾಜ ಗವಾಯಿ ಅವರು, ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನು ಆತನ ಊರಿನ ಹೆಸರಿನಿಂದ ಕರೆಯುತ್ತಿದ್ದರು. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಬಳಸುತ್ತಿರಲಿಲ್ಲ. ಮನೆತನದ ಹೆಸರು ಜಾತಿ ಸೂಚಕ ಆಗಿರುವುದರಿಂದ ಆಶ್ರಮದಲ್ಲಿ ಜಾತಿವ್ಯವಸ್ಥೆ ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲ. ಇಂಥದ್ದೊಂದು ಜಾತ್ಯತೀತ ಕಲ್ಪನೆ ಇಂದು ಮಠಗಳಲ್ಲಿ ಮರೆಯಾಗಿದೆ.

ಸಮಾಜದಲ್ಲಿ ಮನೆಮಾಡಿರುವ ಎಲ್ಲ ಅಸಂಗತಗಳಿಗೆ ಶಿಕ್ಷಣವೇ ಏಕೈಕ ಪರಿಹಾರ. ಈ ಕಾರಣದಿಂದಲೇ ಅಂಬೇಡ್ಕರ್ ದಲಿತ ಮತ್ತು ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆತರಲು ಶಿಕ್ಷಣವನ್ನು ಅಸ್ತ್ರವಾಗಿ ಬಳಸಿಕೊಂಡರು. ದುರಂತವೆಂದರೆ, ಬದಲಾವಣೆಗೆ ಕಾರಣವಾಗಬೇಕಾದ ಶಿಕ್ಷಣ ವ್ಯವಸ್ಥೆ ಇಂದು ಜಾತಿಪ್ರೇಮದ ಕಬಂಧಬಾಹುಗಳಲ್ಲಿ ಸೆರೆಯಾಗಿದೆ. ಮಾದರಿಯಾಗಬೇಕಾದ ಶಿಕ್ಷಕರು ಜಾತಿಪ್ರೇಮದ ಅಮಲಿನಲ್ಲಿ ಕ್ರೌರ್ಯ ಮೆರೆಯುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು. ಜ್ಞಾನವನ್ನು ವೃದ್ಧಿಸಬೇಕಾದ ವಿಶ್ವವಿದ್ಯಾಲಯಗಳು ಜಾತಿಕೇಂದ್ರಗಳಾಗಿ ರೂಪಾಂತರಗೊಂಡಿವೆ. ವಿ.ವಿಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ಬೆಳೆಯುತ್ತಿದೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜಾತಿ, ಉಪಜಾತಿಗಳಾಗಿ ಒಡೆದುಹೋಗಿದ್ದಾರೆ. ಒಂದು ಕೋಮಿಗೆ ಸೇರಿದ ಪ್ರಾಧ್ಯಾಪಕ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿಯ ಸಂಶೋಧನೆಗೆ ಮಾರ್ಗದರ್ಶಕನಾಗುವುದು ವಿರಳ.

ಸಮಾಜದಲ್ಲಿ ಜಾತಿವ್ಯವಸ್ಥೆ ರೂಪುಗೊಳ್ಳುವಲ್ಲಿ ಮಠ–ಮಂದಿರಗಳ ಕೊಡುಗೆ ಗಮನಾರ್ಹವಾಗಿದೆ. ಒಂದು ಕಾಲದಲ್ಲಿ ಜಾತಿವ್ಯವಸ್ಥೆಯನ್ನು ಪ್ರತಿರೋಧಿಸಿ ನಿಂತಿದ್ದ ಮಠಗಳು ಈಗ ಜಾತಿಪ್ರೇಮವನ್ನು ಪೋಷಿಸುವ ಕೇಂದ್ರಗಳಾಗಿವೆ. ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಮೂಲೆಗುಂಪಾಗಿ ಮಠಗಳು ರಾಜಕೀಯ ಪಕ್ಷಗಳಂತಾಗಿವೆ. ತಮ್ಮ ತಮ್ಮ ಜಾತಿಯ ನೇತಾರರನ್ನು ಶಾಸಕ, ಸಚಿವರನ್ನಾಗಿಸಲು ಮಠಗಳು ಪೈಪೋಟಿ ನಡೆಸುತ್ತಿವೆ.

ದೇವನೂರ ಮಹಾದೇವ ತಮ್ಮ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ವಿವರಿಸಿದ ಪ್ರಸಂಗವೊಂದು ಹೀಗಿದೆ:
‘ಯು.ಆರ್. ಅನಂತಮೂರ್ತಿ ಅವರ ಆರೋಗ್ಯ ಬಿಗಡಾಯಿಸಿ ದೆಹಲಿಯ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದಾಗ, ಅವರು ನನಗೆ ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟಂತೆ ಬೋಧೆಯಾಯ್ತಂತೆ. ಅವರು ಇದನ್ನು ನನಗೆ ಹೇಳಿದಾಗ ನಾನೆಂದೆ: ‘ಸಾರ್, ಇದು ಮಾಮೂಲಿ ನಡಿಗೆ. ಪ್ರಜ್ಞಾವಸ್ಥೆ ಸ್ಥಿತಿಯಲ್ಲಾದರೂ ನಾನು ನಿಮಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೇ?’ ಎಂದು. ದೇವನೂರರು ಹೇಳಿದಂತೆ ಮನುಷ್ಯನ ಮನಸ್ಸು ಪ್ರಜ್ಞಾಪೂರ್ವಕವಾಗಿ ಜಾತಿಯ ಸಂಕೋಲೆಗಳಿಂದ ಮುಕ್ತವಾಗಬೇಕಿದೆ.

ನಲವತ್ತು ವರ್ಷಗಳ ಹಿಂದೆ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ನನ್ನ ದೊಡ್ಡಪ್ಪ ತಮ್ಮ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದರೆಂದು ಮನೆತುಂಬ ಗೋಮೂತ್ರ ಸಿಂಪಡಿಸಿ ಪವಿತ್ರಗೊಳಿಸಿದ್ದರು. ಅಧಿಕಾರಿ ದಲಿತ ಸಮುದಾಯದವರೆನ್ನುವುದು ಅವರ ಈ ವರ್ತನೆಗೆ ಕಾರಣವಾಗಿತ್ತು. ಅದೇ ದೊಡ್ಡಪ್ಪ ನಾಲ್ಕು ವರ್ಷಗಳ ಹಿಂದೆ ತಮ್ಮ ಮೊಮ್ಮಗನ ಮದುವೆಗೆ ತಮಗೆ ಆಪ್ತರಾದ ಊರಿನ ದಲಿತ ಕುಟುಂಬದವರನ್ನು ಆಮಂತ್ರಿಸಿದ್ದರು. ಆ ಕ್ಷಣಕ್ಕೆ ದೊಡ್ಡಪ್ಪನ ಮೇಲೆ ಅಭಿಮಾನ ಮೂಡಿತು. ಜಾತಿಪ್ರೇಮದ ಜಾಡ್ಯದಿಂದ ಹೊರಬಂದು ಸಮಾಜದ ಮುಮ್ಮುಖ ಚಲನೆಯನ್ನು ಸಾಧ್ಯವಾಗಿಸುವ ಮನೋಭಾವ ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.