ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜಾತಿ ಎಂಬ ವರ್ತಮಾನದ ಹೆಗ್ಗುರುತು

ವರ್ತಮಾನ ಒಡ್ಡುವ ಸವಾಲುಗಳನ್ನು ಮೀರಿಯೂ ತಮ್ಮ ಜಾತಿ ಉಳಿಸಿಕೊಳ್ಳುವ ಉಮೇದಿಗೆ ಏನೆನ್ನುವುದು?
Last Updated 30 ಜನವರಿ 2020, 20:10 IST
ಅಕ್ಷರ ಗಾತ್ರ

ಜಾತಿ ಶ್ರೇಣಿಯಲ್ಲಿ ಒಂದೇ ಹಂತದಲ್ಲಿರುವ ಎರಡು ಭಿನ್ನ ಜಾತಿಗಳಿಗೆ ಸೇರಿದ ಪ್ರೇಮಿಗಳ ಮದುವೆಗೆ ಎದುರಾದ ತೀವ್ರ ವಿರೋಧ ಮತ್ತು ಮದುವೆ ನಂತರ ನಡೆದ ಹೊಡೆದಾಟದಿಂದ ಮನನೊಂದ ಸ್ನೇಹಿತರೊಬ್ಬರು, ‘ಜಾತಿ ರೋಗ ಈಗ ಮೊದಲಿಗಿಂತಲೂ ಉಲ್ಬಣಿಸಿದೆ. ನಾಲ್ಕು ದಶಕಗಳ ಹಿಂದೆ ನಮ್ಮ ತಂದೆ-ತಾಯಿ ಅಂತರ್ಜಾತಿ ವಿವಾಹವಾಗಲೂ ಈ ಪರಿಯ ವಿರೋಧ ಎದುರಾಗಿರಲಿಲ್ಲ. ಮದುವೆ ನಂತರವೂ ತಾವು ಬೆಳೆದ ಹಳ್ಳಿಯಲ್ಲಿಯೇ ಬದುಕು ಕಟ್ಟಿಕೊಳ್ಳಲು ಸಾಧ್ಯವಿತ್ತು. ಈಗ ಹೆತ್ತವರೇ ತಮ್ಮ ಮಕ್ಕಳನ್ನು ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜಾತಿ ತಾರತಮ್ಯ ಈಗ ಮೊದಲಿನಷ್ಟು ಇಲ್ಲ’ ಎನ್ನುವ ಅಭಿಪ್ರಾಯವನ್ನು ಆಗಾಗ ಕೇಳುತ್ತಿದ್ದುದರಿಂದ, ‘ಜಾತಿಪ್ರಜ್ಞೆ ಹಿಂದಿಗಿಂತಲೂ ಈಗ ತೀವ್ರವಾಗಿದೆ’ ಎಂದ ಸ್ನೇಹಿತನ ಅಭಿಪ್ರಾಯ ಸುಮ್ಮನೆ ತಿರಸ್ಕರಿಸುವಂತಹದ್ದು ಖಂಡಿತ ಅಲ್ಲ ಎನಿಸಿತು.

ನಗರೀಕರಣ, ಕೈಗಾರಿಕೀಕರಣ, ಆಧುನೀಕರಣಕ್ಕೆ ತೆರೆದುಕೊಂಡಿರುವ ಈ ಹೊತ್ತಿನಲ್ಲೂ ಜಾತಿ ನಮ್ಮನ್ನು ಬಾಧಿಸುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಇಲ್ಲವೆನ್ನಲು ಸಕಾರಣಗಳೇ ಇಲ್ಲದಿರುವ ವಿಷಮ ಸಂದರ್ಭ ನಮ್ಮೆದುರು ಇರುವುದು ಅರಿವಾಗುತ್ತದೆ. ವರ್ತಮಾನ ಸೃಷ್ಟಿಸಿರುವ ಅಸ್ಮಿತೆಯ ಸಮಸ್ಯೆಯಿಂದ (ಐಡೆಂಟಿಟಿ ಕ್ರೈಸಿಸ್) ಪಾರಾಗಲು ಜಾತಿ ಎಂಬುದು ಸುಲಭದ ಆಯ್ಕೆಯಾಗಿರುವುದು ಕೂಡ ಸುಸ್ಪಷ್ಟ. ದಾಖಲೆಗಳಲ್ಲಿ ಇರುವ ಹೆಸರಿನಲ್ಲಿ ಜಾತಿಯ ಉಲ್ಲೇಖವಿರದಿದ್ದರೂ, ಸಾಮಾಜಿಕ ಬಳಕೆಯಲ್ಲಿ ತಮ್ಮ ಹೆಸರಿಗೆ ಜಾತಿಯನ್ನು ಜೋಡಿಸಿಕೊಳ್ಳುವ ಜರೂರತ್ತು ಏಕೆ ಎದುರಾಗಿದೆ ಎಂಬುದನ್ನು ಪರಿಶೀಲಿಸಿದರೆ, ಅಸ್ಮಿತೆಯ ಸಮಸ್ಯೆ ಮತ್ತು ಜಾತಿಯ ನಡುವೆ ಕೂಡಿಕೊಂಡಿರುವ ಕೊಂಡಿಗಳು ಮತ್ತಷ್ಟು ಬಿಗಿಯಾಗಿರುವುದು
ಮನದಟ್ಟಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ನಮೂದಿಸಿರುವ ಹೆಸರು, ಇ-ಮೇಲ್ ಐ.ಡಿ, ವಾಹನಗಳು ಹೀಗೆ ಎಲ್ಲ
ವನ್ನೂ ತಮ್ಮ ಜಾತಿ ಯಾವುದೆಂದು ಜಗತ್ತಿಗೆ ಸಾರಲು ಬಳಸಿಕೊಳ್ಳುವ ಉಮೇದಿನ ಹಿಂದಿರುವ ಕಾರಣ
ಗಳನ್ನು ಅರಿಯುವುದು ತ್ರಾಸದಾಯಕವೇನಲ್ಲ. ಆದರೆ, ಜಾತಿಯ ಮೂಲಕ ಅಸ್ಮಿತೆಯ ಸಮಸ್ಯೆಯಿಂದ ಪಾರಾಗಲು ಯತ್ನಿಸಲು ಯಾರಿಗೆಲ್ಲ ಸಾಧ್ಯವಿದೆ ಎಂಬುದನ್ನು ಗಮನಿಸಿದರೆ, ಜಾತಿ ಶ್ರೇಣಿಯಲ್ಲಿ ಕೆಳಹಂತದಲ್ಲಿರುವ ಜಾತಿಗಳಿಗೆ ಸೇರಿದವರನ್ನು ಇಲ್ಲೂ ಅಂಚಿಗೆ ತಳ್ಳುತ್ತಿರುವುದು ಢಾಳಾಗಿಯೇ ಗೋಚರಿಸುತ್ತದೆ.

ಮಕ್ಕಳಿಗೆ ಹೆಸರಿಡುವಾಗ ಜಾತಿಸೂಚಕವನ್ನು ಬಳಸುವ ಕುರಿತು ಇತ್ತೀಚೆಗೆ ಸಹೋದ್ಯೋಗಿಗಳ ನಡುವೆ ನಡೆದ ಚರ್ಚೆಗೆ ಸಾಕ್ಷಿಯಾಗಿದ್ದ ನನಗೆ, ಜಾತಿಯನ್ನು ಮೇಲರಿಮೆಯಾಗಿ ಪರಿಗಣಿಸುವ ಅವಕಾಶ ಇರುವವರು ಜಾತಿಸೂಚಕ ಬಳಸಲು ಇನ್ನಿಲ್ಲದ ಮುತುವರ್ಜಿ ತೋರುತ್ತಿರುವುದು ಸ್ಪಷ್ಟವಾಯಿತು. ತನ್ನ ಹೆಸರಿನಲ್ಲಿ ಜಾತಿಸೂಚಕ ಪದವಿದ್ದರೂ, ಮಗಳಿಗೆ ಹೆಸರು ಇಡುವಾಗ ಜಾತಿ ಗುರುತು ಸಿಗದಂತೆ ನಿಗಾ ವಹಿಸಿದ್ದ ಕಾರಣ ವಿವರಿಸಿದ ಸಹೋದ್ಯೋಗಿಯೊಬ್ಬರು, ‘ನಮ್ ಜಾತಿ ಹೆಸ್ರು ಗೊತ್ತಾಗಿ, ಆ ಕಾರಣಕ್ಕೆ ನನ್ನ ಮಗಳು ತನಗೆ ಸಿಗಬೇಕಾದ ಅವಕಾಶಗಳಿಂದ ವಂಚಿತಳಾಗುವುದು ಬೇಡ ಎಂದು, ನನ್ನ ಹೆಸರಿನಲ್ಲಿರುವ ಜಾತಿಸೂಚಕವನ್ನು ಮಗಳ ಹೆಸರಿಗೆ ಸೇರಿಸಲು ಮುಂದಾಗಲಿಲ್ಲ’ ಎಂದರು. ಇದೇ ವೇಳೆ, ತಮ್ಮ ಮಗಳ ಹೆಸರಿಗೆ ಜಾತಿಯನ್ನೂ ಜೋಡಿಸಿರುವ ಮತ್ತೊಬ್ಬರು, ‘ಹೀಗೆ ಹೆಸರಿಡುವುದರಲ್ಲಿ ತಪ್ಪೇನೂ ಇಲ್ಲ’ ಎಂದು ವಾದಿಸಿದರು. ಜಾತಿಸೂಚಕ ಬಳಸುವುದರೆಡೆಗೆ ಒಲವು ತೋರಿದವರು, ಜಾತಿಯ ಕಾರಣಕ್ಕೆ ಸಾಮಾಜಿಕ ಗೌರವ ದಕ್ಕಿಸಿಕೊಳ್ಳಬಹುದೆಂದು ಭಾವಿಸುವ ಮತ್ತು ಜಾತಿ ಮೇಲರಿಮೆಯಿಂದ ಬೀಗುವ ಫ್ಯೂಡಲ್ ವರ್ತನೆಗೆ ಹೆಸರಾದ ಜಾತಿಸೂಚಕವನ್ನು ತಮಗೂ ತಮ್ಮ ಮಕ್ಕಳಿಗೂ ಸೇರಿಸಿದವರಾಗಿದ್ದರು.

ಪ್ರತೀ ಜಾತಿ ಮತ್ತದರೊಳಗಿನ ಒಳಪಂಗಡಗಳು ತಮ್ಮ ಗುರುತಿಸುವಿಕೆಗೆ ಬೇಕಿರುವ ‘ನಾಯಕ’ನ ಹುಡುಕಾಟದಲ್ಲಿರುವುದು ಏಕೆಂದು ಅರಿಯಲು ಹೊರಟರೂ ಅಸ್ಮಿತೆಯ ಸಮಸ್ಯೆ ಈ ಹೊತ್ತಿನಲ್ಲಿ ಹೇಗೆಲ್ಲ ಬಾಧಿಸುತ್ತಿದೆ ಎಂಬುದರ ಅರಿವಾಗುತ್ತದೆ. ತಮ್ಮ ಸಮುದಾಯದ ನಾಯಕನನ್ನಾಗಿ ಗುರುತಿಸಲು ಆಯ್ದುಕೊಳ್ಳುವ ವ್ಯಕ್ತಿತ್ವಕ್ಕೆ ಸಮರವೀರನ ಪೋಷಾಕು ತೊಡಿಸುವಲ್ಲಿ ತೋರುವ ಉತ್ಸಾಹ ಕೂಡ
ಗಮನಾರ್ಹವಾದುದು.

ಜಾತಿ ಈಗಿಲ್ಲವೆಂದೋ, ಜಾತಿಯ ಅಗತ್ಯವೇ ತಮಗಿಲ್ಲವೆಂದೋ ಒಂದೆಡೆ ಹೇಳಿಕೊಳ್ಳುವ ನಾವೇ ವಾಸ್ತವದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದೇವೆ ಮತ್ತು ಹೇಗೆಲ್ಲ ಜಾತಿ ವ್ಯವಸ್ಥೆಯ ತಳಪಾಯ ಭದ್ರಪಡಿಸಲು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಆತ್ಮವಂಚಕ ಪ್ರವೃತ್ತಿ ಬದಿಗಿರಿಸಿ ಪರಿಶೀಲಿಸಿದರೆ, ಜಾತಿಗೂ ನಮಗೂ ಈ ಹೊತ್ತಿನಲ್ಲೂ ಇರುವ ಗಾಢ ಬೆಸುಗೆ ಗೋಚರವಾದೀತು.

ಪ್ರೇಮವಿವಾಹಗಳನ್ನು ಹೊರತುಪಡಿಸಿ ಉಳಿದ ಮದುವೆಗಳಲ್ಲಿ ವಧು- ವರರ ಜಾತಿ ಬಹುತೇಕ ಒಂದೇ ಆಗಿರುವುದು, ಇಂದಿಗೂ ಜಾತಿಪ್ರಜ್ಞೆ ನಮ್ಮೊಳಗೆ ಆಳವಾಗಿಯೇ ಬೇರೂರಿರುವುದಕ್ಕೆ ಒಂದು ನಿದರ್ಶನ. ತಮ್ಮ ಜಾತಿಯಲ್ಲಿ ವಧು ಸಿಗುವುದಿಲ್ಲವೆಂಬ ಕಾರಣಕ್ಕೆ ಅನಿವಾರ್ಯವಾಗಿ ಅನ್ಯ ಜಾತಿಯ ಹುಡುಗಿಯನ್ನು ವರಿಸಿ, ಆನಂತರ ತಮ್ಮದೇ ಜಾತಿಗೆ ಬರಮಾಡಿಕೊಳ್ಳಲು ಕೆಲ ವಿಧಿವಿಧಾನಗಳನ್ನು ಅನುಸರಿಸುವ ನಿದರ್ಶನಗಳೂ ಇವೆ. ವರ್ತಮಾನ ಒಡ್ಡುವ ಇಂತಹ ಸವಾಲುಗಳನ್ನು ಮೀರಿಯೂ ತಮ್ಮ ಜಾತಿ ಉಳಿಸಿಕೊಳ್ಳುವ ಉಮೇದಿಗೆ ಏನೆನ್ನುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT