ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಚಿವೆಗೆ ಸವಾಲಿನ ಸಾಲು

ದೇಶದ ಆರ್ಥಿಕ ಸಂಕಷ್ಟ ದೂರವಾಗಬೇಕಾದರೆ...
Last Updated 14 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸವಾಲುಗಳನ್ನು ಎದುರಿಸುತ್ತಲೇ ತನ್ನ ಜೀವಿತಾವಧಿಯನ್ನು ಮುಗಿಸಿದ ಬುದ್ಧ, ‘ಬೇಡಿದ್ದನ್ನು ಕೊಡುವ ಯಾವ ಅಗೋಚರ ಶಕ್ತಿಯೂ ಈ ಜಗತ್ತಿನಲ್ಲಿ ಇಲ್ಲ. ನಿನ್ನ ಪರಿಶ್ರಮದಿಂದಲೇ ಪಡೆಯಬೇಕು’ ಎಂದು ಹೇಳಿದ್ದನ್ನು, ಬುದ್ಧನ ದೇಶದಲ್ಲೇ ಈಗ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಹಿತನುಡಿಯೆಂದು ಭಾವಿಸುವ ಬುದ್ಧಿ ತೋರಿಸಬೇಕು. ದೇವರ ಆಟವೆಂದಾಗಲೀ ಕೊರೊನಾ ಕಾಟವೆಂದಾಗಲೀ ಹೇಳಿದ ಮಾತ್ರಕ್ಕೆ ಆರ್ಥಿಕ ಸಂಕಷ್ಟಗಳು ದೂರವಾಗುವುದಿಲ್ಲ. ಇದನ್ನು ನಿರ್ಮಲಾ ಅವರು 2021-22ನೇ ಸಾಲಿನ ಬಜೆಟ್ ಹೆಣೆಯುವಾಗಲಾದರೂ ನೆನಪಿಸಿಕೊಳ್ಳಬೇಕು.

ಹಾಗೆಂದು, ಸಚಿವೆ ಹಿಂದಿನ ಎರಡು ಬಜೆಟ್‌ಗಳನ್ನು ಮಂಡಿಸುವಾಗೇನೂ ನೆಮ್ಮದಿಯ ನಿಟ್ಟುಸಿರನ್ನು ಬಿಡುವ ಭಾಗ್ಯ ಪಡೆದಿರಲಿಲ್ಲ. 2019ರ ಜುಲೈ 5ರಂದು ತಮ್ಮ ಪ್ರಥಮ ಬಜೆಟ್ ಮಂಡಿಸುವಾಗ ಅವರು ಸರ್ಕಾರದ ನೀತಿಯಿಂದಲೇ ಹುಟ್ಟಿಕೊಂಡ ಆರ್ಥಿಕ ಸಂಕಷ್ಟಗಳನ್ನು ಗಮನಿಸಬೇಕಾಗಿತ್ತು. ಅವಸರದಿಂದ ಕೈಗೊಂಡ ನೋಟು ರದ್ದತಿ ಕ್ರಮ, ದೋಷಪೂರಿತ ಜಿ.ಎಸ್‌.ಟಿ.ಯಿಂದ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂ.ಎಸ್.ಎಂ.ಇ) ವಲಯ ತತ್ತರಿಸಿಹೋಗಿದ್ದರಿಂದ, ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದ, ಸಾಂಪ್ರದಾಯಿಕವಾಗಿ ದೇಶದಲ್ಲಿ ಅಸ್ತಿತ್ವ ಹೊಂದಿದ್ದ ಕೈಗಾರಿಕೆಗಳ ಉತ್ತೇಜನಕ್ಕಾಗಿಯೇ ಪ್ರತ್ಯೇಕ ಉನ್ನತೀಕರಣ ಮತ್ತು ಪುನರುಜ್ಜೀವನ ಯೋಜನಾ ನಿಧಿಯನ್ನು ಸ್ಥಾಪಿಸಲು ಅವರು ಮುಂದಾಗಬೇಕಾಯಿತು.

ದೇಶದಲ್ಲಿ ಅಧಿಕ ಆರ್ಥಿಕ ಚಟುವಟಿಕೆ, ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗಾಗಿ ನವೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಸಚಿವೆಗೆ ಕಷ್ಟದ ಕೆಲಸವೇ ಆಗಿತ್ತು. ಹವಾಮಾನ ಬದಲಾವಣೆಯ ಹೊಡೆತವನ್ನು ಎದುರಿಸಲು ಜಲಶಕ್ತಿ ಸಚಿವಾಲಯ ಘೋಷಣೆ ಮಾಡಿದರೂ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವುದು ಈ ತನಕ ಸಾಧ್ಯವಾಗಿಲ್ಲವಾದ್ದರಿಂದ ಅದು ಇನ್ನೂ ಕ್ರಿಯಾಶೀಲವಾಗಿಲ್ಲ.

ತೀವ್ರವಾಗಿ ಕುಸಿಯುತ್ತಿದ್ದ ಆರ್ಥಿಕತೆಯನ್ನು ಮೇಲೆತ್ತುವ ಉದ್ದೇಶದೊಂದಿಗೆ 2020ರ ಫೆಬ್ರುವರಿ 1ರಂದು ನಿರ್ಮಲಾ ಮಂಡಿಸಿದ ಎರಡನೆಯ ಬಜೆಟ್, ಮೊದಲನೆಯ ಬಜೆಟ್‌ಗಿಂತ ಹೆಚ್ಚು ದುರ್ಬಲವಾಗಿದ್ದುದನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಗುರುತಿಸುತ್ತ ‘ಇದು ಗೊತ್ತು ಗುರಿಯಿಲ್ಲದ ಬಜೆಟ್. ಬಿಜೆಪಿಯವರಿಗೂ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಚಾಟಿ ಬೀಸಿದ್ದರು. ಕೊರೊನಾ ದಾಳಿ ಪ್ರಾರಂಭವಾದ ಮೇಲಂತೂ ಈ ಬಜೆಟ್‌ನ ಶಕ್ತಿ ಕರಗಿಹೋಯಿತು.

2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಗುರಿ. 2024ರ ವೇಳೆಗೆ ಐದು ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯ ನಿರ್ಮಾಣವಾಗಬೇಕಾದರೆ ಶೇ 8ರಿಂದ ಶೇ 9ರಷ್ಟು ಬೆಳವಣಿಗೆ ದರ ಅಗತ್ಯವೆಂದು ಸರ್ಕಾರದ ವರದಿಗಳೇ ತಿಳಿಸಿವೆ. ಸರ್ಕಾರದ ನೀತಿಯ ವೈಫಲ್ಯಗಳ ಜತೆಗೆ ಕೊರೊನಾ ಹಾವಳಿ ಹಸ್ತಲಾಘವ ನಡೆಸುತ್ತಿರುವಾಗ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯು (–) ಶೇ 9.5ಕ್ಕೆ ಕುಸಿಯಲಿದೆ ಎಂದು ಆರ್‌ಬಿಐ ಅಂದಾಜು ಮಾಡಿರುವಾಗ, ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಐದು ಲಕ್ಷ ಕೋಟಿ ಡಾಲರ್‌ಗಳ ಅರ್ಥವ್ಯವಸ್ಥೆ ನಿರ್ಮಾಣ ಸಾಧ್ಯವೇ ಎಂದು ಈಗ ಪ್ರಶ್ನಿಸಬೇಕಾಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ತೀರಾ ಇತ್ತೀಚೆಗೆ ಆದ ಹೆಚ್ಚಳವನ್ನೇ ಆಧರಿಸಿ, ಆರ್ಥಿಕ ಚೇತರಿಕೆಯ ಲಕ್ಷಣ ಗೋಚರಿಸುತ್ತಿದೆಯೆಂದು ಸರ್ಕಾರ ಹೇಳುತ್ತಿರುವಾಗಲೇ ಆರ್ಥಿಕ ಹಿಂಜರಿತದ ಕಾರ್ಮೋಡದ ಸಾಧ್ಯತೆಯನ್ನು ರಿಸರ್ವ್‌ ಬ್ಯಾಂಕ್ ತೋರಿಸಿದೆ. ಜನಸಾಮಾನ್ಯರಿಗೆ ಏಟು ಹಾಕುತ್ತಿರುವ, ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಸಹ್ಯ ಮಿತಿಯನ್ನು ಮೀರಿ ಶೇ 7.34ರಷ್ಟಾದ ಚಿಲ್ಲರೆ ಹಣದುಬ್ಬರದ ಸವಾಲು ಸ್ಪಷ್ಟವಾಗಿ ಗೋಚರಿಸುತ್ತಿರುವುದಂತೂ ಹೌದು.

ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಧಾರಣೆಯ ಅಗತ್ಯವನ್ನು ಪ್ರತಿಪಾದಿಸುವ ಎನ್.ಕೆ.ಪಿ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗದ ವರದಿಯು ಕೇಂದ್ರ ಹಣಕಾಸು ಸಚಿವಾಲಯವನ್ನು ತಲುಪಿದೆ. ತಮ್ಮ ತೃತೀಯ ಬಜೆಟ್ ಭಾಷಣದಲ್ಲಿ ಸಚಿವೆ ಈ ಸವಾಲಿನತ್ತ ಗಮನ ನೀಡಬೇಕಾಗಿದೆ.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಹಾಗೂ ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯ ವಿರುದ್ಧ ರೈತ ಸಮುದಾಯ ಸಿಡಿದೆದ್ದಿದೆ. ಬರಲಿರುವ ಬಜೆಟ್‌ನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ಸಂತೈಸುವ ಪ್ರಯತ್ನ ಆಗಲಿದೆಯೆಂದು ಹೇಳಬಹುದು. ಕೃಷಿ ರಂಗದಲ್ಲಿ ನವೋದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವುದಾಗಿ ನಿರ್ಮಲಾ ತಮ್ಮ ಪ್ರಥಮ ಬಜೆಟ್ ಭಾಷಣದಲ್ಲೇ ತಿಳಿಸಿದ್ದರು. ಈ ತನಕ ಅದಕ್ಕೆ ಬೇಕಾದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಮೂರನೆಯ ಬಜೆಟ್ ಇದಕ್ಕೆ ಸಂಬಂಧಿಸಿದಂತೆ ಏನು ಮಾಡಲಿದೆ ಎಂಬುದು ಈಗಿರುವ ಪ್ರಶ್ನೆ.

ಬೇಡಿಕೆ ಕುಸಿತದಿಂದ ಹಾನಿಗೊಳಗಾದ ತಯಾರಿಕಾ ರಂಗವು ಸಿಬ್ಬಂದಿ ಕಡಿತವನ್ನು ಮುಂದುವರಿಸಿದ್ದು, ನಿರುದ್ಯೋಗ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ತಯಾರಿಕಾ ವೆಚ್ಚ ಹೆಚ್ಚುತ್ತಿರುವುದು ಈ ರಂಗಕ್ಕೆ ಇನ್ನೊಂದು ಸಮಸ್ಯೆಯಾಗಿ ಪರಿಣಮಿಸಿದರೆ, ಸಚಿವೆಗೆ ಅದು ಮತ್ತೊಂದು ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT