ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ‘ಜನಪ್ರಿಯ’ ಹಾಸ್ಯಮಾಲಿನ್ಯ!

Last Updated 24 ಜೂನ್ 2022, 19:30 IST
ಅಕ್ಷರ ಗಾತ್ರ

ಅವು ನಿಯಮಿತವಾಗಿ ಪ್ರಸಾರವಾಗುವ ಕಿರುತೆರೆ ಕನ್ನಡ ‘ಕಾಮಿಡಿ’ ಕಾರ್ಯಕ್ರಮಗಳು. ತೀರ್ಪುಗಾರರೇನೊ ಖ್ಯಾತ ನಟ ನಟಿಯರು, ನುರಿತ ಕಲಾವಿದರು, ಅನುಭವಿಗಳು. ಆದರೆ ಸ್ಪರ್ಧಾಳುಗಳು ಪುಂಖಾನುಪುಂಖವಾಗಿ ನೀಡುವ ಪ್ರದರ್ಶನಗಳಲ್ಲಿಮಾತ್ರ ಹಾಸ್ಯವು ಹದ ತಪ್ಪಿರುತ್ತದೆ. ಅಸಂಬದ್ಧ ಪ್ರಾಸಗಳು, ಚರ್ವಿತಚರ್ವಣ ಮಾತುಗಳು.

ಲೈಂಗಿಕ ಅಲ್ಪಸಂಖ್ಯಾತರು ಈಚೆಗೆ ಗೌರವದಿಂದ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ. ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಅವರಿಗೆ ನೆರವಾಗುತ್ತಿವೆ. ಈ ಷೋಗಳಲ್ಲಿ ಅವರನ್ನು ಅಪಮಾನಿಸುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಕುಳ್ಳರನ್ನು, ಅತಿ ಎತ್ತರದವರನ್ನು ಹೀಯಾಳಿಸಲಾಗುತ್ತದೆ. ಕೆಮ್ಮು, ಮುಪ್ಪು, ಬಕ್ಕತಲೆ, ಉಬ್ಬು ಹಲ್ಲು, ಕಪ್ಪು ಮುಖ... ಇಂಥವು ನಗೆಯ ಮೂಲವೇ?

ಪಾತ್ರಧಾರಿಗಳ ಆಂಗಿಕ ಭಾಷೆ ಮನೆಮಂದಿಯೆಲ್ಲ ಕುಳಿತು ವೀಕ್ಷಿಸುವಂಥದ್ದೇ ಎನ್ನುವ ಪ್ರಶ್ನೆ ಮೂಡಿಸುತ್ತದೆ. ವಿಪರ್ಯಾಸವೆಂದರೆ, ಈ ಪ್ರದರ್ಶನ ಸರಣಿಗಳಲ್ಲಿ ಆರಂಭದಲ್ಲಿ ಯಾವುದೇ ವಿಷಯ
ಪ್ರಸ್ತಾಪಿಸಿದರೂ ಬಹುಮಟ್ಟಿಗೆ ಅದು ಅಂತ್ಯವಾಗು ವುದು ನಮಗೆ ಮುಜುಗರ ಆಗುವುದರಲ್ಲೇ!

ಹಾಸ್ಯ ಸಮಸ್ತರಿಗೂ ಶೈಕ್ಷಣಿಕವಾಗಬಲ್ಲದು. ಹಾಗಾಗಿ ಸಭ್ಯತೆಯ ಎಲ್ಲೆ ಮೀರದ ತಮಾಷೆಗಳು ಕುಟುಂಬದ ಮುಂದೆ ಪ್ರಸ್ತುತಗೊಳ್ಳಬೇಕು. ಹಾಸ್ಯದ ಗುರಿ ವಕ್ರವಾದ, ಗೋಜಲು ಜಯಿಸುವುದು, ಮನುಷ್ಯ ಮನುಷ್ಯರ ನಡುವಿನ ಆಪ್ತತೆಯನ್ನು ಮತ್ತಷ್ಟು ಹೆಚ್ಚಿಸುವುದು. ಈಚೆಗಂತೂ ರಿಯಾಲಿಟಿ ಷೋಗಳು ಪ್ರೇಕ್ಷಕರಿಗೆ ಕುಟುಂಬಸ್ನೇಹಿ ಹಾಸ್ಯ ಒದಗಿಸುವುದರಿಂದ ದೂರ ಸರಿಯುತ್ತಿವೆ. ಜನರಿಗೆ ಹುಸಿನಗೆ, ಮಗುಳ್ನಗು, ಕಚಗುಳಿ ಸೃಷ್ಟಿಸುವ ವಿಡಂಬನೆ, ವಿನೋದ ಗುರುತಿಸುವಲ್ಲಿ ನಮ್ಮ ಪ್ರಸಾರ ಜಾಲಗಳು ಸೋಲುತ್ತಿವೆ. ಒಟ್ಟಾಗಿ ನಗುವ ಕುಟುಂಬ ಒಟ್ಟಾಗಿಇರುತ್ತದೆ ಎನ್ನುವ ತಥ್ಯವನ್ನು ಅವು ಗಮನಿಸಬೇಕಿದೆ.

ಬದುಕಿನ ಸರಳ ಸಂದರ್ಭಗಳನ್ನು ಬಳಸಿ ಅದ್ಭುತ ಸದಭಿರುಚಿಯ ವಿನೋದಗಳನ್ನು ಸೃಜಿಸಲು ಸಾಧ್ಯ. ಅದು ಬಿಟ್ಟು ದ್ವಂದ್ವಾರ್ಥ ಪುಟಿದೆದ್ದರೆ ಅದು ಕ್ಷಣ ನಗೆಯುಕ್ಕಿಸಿದರೂ ಆಖೈರಾಗಿ ಬೀರುವುದು ಕೆಟ್ಟ ಸಂದೇಶವನ್ನೇ. ಜೋರು ಚಪ್ಪಾಳೆ ಅಂಗೀಕಾರದ ಮುದ್ರೆಯಲ್ಲ. ಹೇಳಬೇಕೆನ್ನುವುದು ಏನು ಎನ್ನುವಷ್ಟೇ ಯಾವಾಗ ಎನ್ನುವುದೂ ಮುಖ್ಯ. ಪ್ರಾಯೋಜಿಸುವವರ ದೆಸೆಯಿರಲಿ, ಕಲಾವಿದರಿಗೆ ಒಂದಷ್ಟು ಅವಕಾಶಗಳು ಲಭಿಸಲಿ, ತಂತ್ರಜ್ಞರಿಗೆ ಕೈ ತುಂಬ ಕೆಲಸವಿರಲಿ. ಯಾರು ಬೇಡವೆನ್ನುತ್ತಾರೆ? ಆದರೆ ಅದರ ಜೊತೆಗೆ, ಅದಕ್ಕೂ ಪ್ರಧಾನವಾಗಿ ಸೃಜನಶೀಲ, ನಿರಪೇಕ್ಷ ವಿಡಂಬನೆ ಬಿತ್ತರಗೊಳ್ಳುವುದನ್ನು ಮಂದಿ ನಿರೀಕ್ಷಿಸುತ್ತಾರೆ. ವಿಡಂಬನೆಯು ನಗುವನ್ನು ಸರ್ವದಾ ಸಿಡಿಸಬೇಕಿಲ್ಲ. ಅದು ಬದುಕಿನಲ್ಲಿ ವಿನೋದ ಸೃಷ್ಟಿಸಬಲ್ಲ, ವಿಮರ್ಶಿಸಬಲ್ಲ ಪ್ರಜ್ಞೆ ಜಾಗೃತಗೊಳಿಸಿದರಾಯಿತು. ಕಿರುಚಾಟ, ಅರಚಾಟ, ಎರಚಾಟ, ಅನುಕರಣ, ಭವ್ಯ ರಂಗಸಜ್ಜಿಕೆ, ಅದ್ಧೂರಿ ವೇಷಭೂಷಣದಲ್ಲಿ ವಿನೋದವಿರದು. ಹಾಸ್ಯದ ಯಶಸ್ಸೆಂದರೆ ಸದಭಿರುಚಿಯ ಪ್ರೇಕ್ಷಕರು ಮತ್ತಷ್ಟು ಬಯಸುವುದು. ಅದುವೆ ಗಂಭೀರವಾಗಿರುವ ತಮಾಷೆಯ ಮಾರ್ಗ.

ಟೀಕಿಸುವುದಕ್ಕೂ ಒಂದು ಶಿಸ್ತಿದೆ, ಕ್ರಮವಿದೆ. ನಯ, ನಿರರ್ಗಳ ಮಾತು ಎಲ್ಲರನ್ನೂ ಸೆಳೆಯುವುದು. ಒಬ್ಬರನ್ನು ರೇಗಿಸುವುದಾದರೂ ಅದು ಶಿಷ್ಟವಾಗಿರಬೇಕು ತಾನೆ? ಏಕೆಂದರೆ ಅದರ ಉದ್ದೇಶ ನಗಿಸುವುದೇ ವಿನಾ ಭಾವನೆಗಳನ್ನು ನೋಯಿಸುವುದಲ್ಲ. ಕಿರುತೆರೆಗೆ ನಿರ್ಮಿಸಲಾಗುವ ಯಾವುದೇ ಕಾರ್ಯಕ್ರಮವಿರಲಿ,
ಅದಕ್ಕೆ ಎಷ್ಟೊಂದು ಹಣ, ಸಮಯ ವ್ಯಯವಾಗುತ್ತದೆ. ಪ್ರಸಾಧನ, ಸಾರಿಗೆ ಏರ್ಪಾಡು, ಶಬ್ದ ಮತ್ತು ಬೆಳಕಿನ ವ್ಯವಸ್ಥೆ, ಕಲಾವಿದರಿಗೆ ಸಂಭಾವನೆ, ಭೋಜನ... ಒಂದೇ ಎರಡೇ? ಹಲವು ಬಾರಿ ತಾಲೀಮು ನಡೆಸುವುದು ಬೇರೆ. ಇಂತಿರುವಾಗಪ್ರೇಕ್ಷಕವರ್ಗ ಅಸಮಾಧಾನಗೊಂಡರೆ ನೀರಿನಲ್ಲಿ ಹುಳಿ ಹಿಂಡಿದಂತಾದೀತು?

ಸಾಹಿತಿಗಳಾದ ಕೈಲಾಸಂ ಅವರಾಗಲಿ, ಬೀಚಿಯವರಾಗಲಿ ಅಥವಾ ರಾಶಿ ಅವರಾಗಲಿ ತಮ್ಮ ಹಾಸ್ಯ ವಾಙ್ಮಯದಲ್ಲಿ ಅಶ್ಲೀಲತೆಯನ್ನುತರಲಿಲ್ಲ. ಯಾರಿಗೂ ಬೇಸರವಾಗದಂತೆ ಎಚ್ಚರವಹಿಸಿ ಕೌಶಲದಿಂದ ನವಿರಾದ ವಿನೋದವನ್ನು ಹಂಚಿದರು. ಸಿನಿಮಾ, ಕಿರುತೆರೆಗಳಲ್ಲಿ ಒಂದು ಕಾಲದಲ್ಲಿ ವಿಜೃಂಭಿಸಿದ ಗಂಭೀರ ವಿಡಂಬನೆ ಇಂದು ಇಲ್ಲವಾಗಿದೆ. ‘ನಾನು ಕೊಟ್ಟ ಸಾಲ ಬರುತ್ತದೆ ತಾನೆ? ನಿಶ್ಚಿಂತನಾಗಿರಲೇ?’ ಅಂತ ಒಂದು ಪಾತ್ರ ಪ್ರಶ್ನಿಸುತ್ತದೆ.ಅದಕ್ಕೆ ಇನ್ನೊಂದು ಪಾತ್ರ ‘ಖಂಡಿತ, ಬೇಕಾದರೆ ಎದೆ ಮೇಲೆ ಒಂದು ಕಲ್ಲು ಇಟ್ಟುಕೊ’ ಎಂದು ಅಭಯ ಹೇಳುವುದು! ಇದು ಅರ್ಧ ಶತಮಾನದ ಹಿಂದಿನ ಕನ್ನಡ ಸಿನಿಮಾದ ಸಂಭಾಷಣೆ. ನಿರ್ದೇಶಕರು ಅದೆಷ್ಟು ಸೂಕ್ಷ್ಮವಾಗಿ ಜನಪದವನ್ನು ಗ್ರಹಿಸಿರಬೇಕು?

ಅಂತೆಯೇ ಮನೆಯೊಡೆಯನನ್ನು ಓಲೈಸಲು ಹೊಸ ಆಳು ಇಂದಿನ ಪತ್ರಿಕೆಯನ್ನು ನಿನ್ನೆಯಿಂದಲೂ ಹುಡುಕುತ್ತಿರುವೆ ಅಂತ ನಾಟಕವಾಡುವುದು. ಅಂತಹ ಶುದ್ಧ ಬೋಧಪ್ರದ ವಿನೋದ ಇಂದೂ ಸಾಧ್ಯ. ಮುಖ್ಯವಾಗಿ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹಾಸ್ಯದ ಸರ್ವೇಕ್ಷಣೆ ನಡೆಸಬೇಕಷ್ಟೆ.

ಬಹುಮಂದಿ ಶುದ್ಧ ವಿಡಂಬನೆ ಕಳೆದುಕೊಳ್ಳುವುದು ಅವರಿಗೆ ಅದು ಲಭಿಸಲಿಲ್ಲ ಎಂದಲ್ಲ. ಅವರು ಆ ನಿಲ್ದಾಣದಲ್ಲಿ ಹೆಚ್ಚು ಹೊತ್ತು ಇರದೆ ದೌಡಾಯಿಸಿರುವುದು! ನೋಡುಗರ ಮನಸ್ಸುಗಳಲ್ಲಿಸಾತ್ವಿಕತೆ ಹರವದಿದ್ದರೆ ಟಿಆರ್‌ಪಿ ಕಟ್ಟಿಕೊಂಡು ಜನರಿಗೆ ಆಗಬೇಕಾದ್ದೇನು? ಬೋಧಪ್ರದ ವಿನೋದಕ್ಕೆ ಹುಡುಕಾಟ ನಡೆಯಲಿ. ಟಿ.ವಿ. ಮುಂದೆ ಕೂತವರು ಒಬ್ಬೊಬ್ಬರಾಗಿ ಎದ್ದು ಹೊರಹೋಗದಂತಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT