ಸೋಮವಾರ, ಏಪ್ರಿಲ್ 19, 2021
23 °C
ಖಾಸಗಿ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬೇಕಾದ ಸಹಕಾರಿ ಸಕ್ಕರೆ ಕಾರ್ಖಾನೆಗಳು ಬಂದ್ ಆಗುತ್ತಿರುವುದು, ಖಾಸಗಿ ಕಂಪನಿಗಳ ಪಾಲಾಗುತ್ತಿರುವುದು ಕಳವಳಕಾರಿ

ಸಂಗತ: ಸಹಕಾರಿ ದುಡ್ಡು ಯಲ್ಲಮ್ಮನ ಜಾತ್ರೆ!

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ ಜಿಲ್ಲೆಯ ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯು ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಾಗಿಲು ಮುಚ್ಚಿತು. ಆಡಳಿತ ಮಂಡಳಿಯವರ ಒಂದು ವಿವೇಚನಾರಹಿತ ನಿರ್ಧಾರ ಈ ದೊಡ್ಡ ಅನಾಹುತಕ್ಕೆ ಕಾರಣ ವಾಯಿತು. ಕಾರ್ಖಾನೆಯ ಉದ್ಯೋಗಿಗಳಿಗೆ ಒಂದೇ ವರ್ಷದ ಅವಧಿಯಲ್ಲಿ 450 ಆರ್‌ಸಿಸಿ ಮನೆಗಳನ್ನು ಕಟ್ಟಲು ನಿರ್ಧರಿಸಿ ಪ್ರಭಾವಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಯಿತು.

ಕಾರ್ಮಿಕರ ವಾಸಕ್ಕೆ ಒಳ್ಳೆಯ ಮನೆಗಳನ್ನು ನಿರ್ಮಿಸುವ ಅವರ ನಿರ್ಧಾರ ಘನವಾದದ್ದು. ಆದರೆ ಸಕ್ಕರೆ ಮಾರಾಟದಿಂದ ಬಂದ ಎಲ್ಲ ಹಣವನ್ನು ಮನೆಗಳನ್ನು ಕಟ್ಟುವುದಕ್ಕೆ ವ್ಯಯ ಮಾಡಿದ್ದರಿಂದ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿ ಸಾಧ್ಯವಾಗಲಿಲ್ಲ. ರೈತರ ಹೋರಾಟ, ದೊಂಬಿ ನಡೆದು ಕಾರ್ಖಾನೆ ತಣ್ಣಗೆ ಕಣ್ಣು ಮುಚ್ಚಿತು. ಕಾರ್ಖಾನೆ ಕಟ್ಟಿದ ಹೊಸ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕನೊಬ್ಬ ಉದ್ಯೋಗ ಕಳೆದುಕೊಂಡ ಸಂಕಟದಲ್ಲಿ ಮನೆ ಯಲ್ಲಿಯೇ ನೇಣು ಹಾಕಿಕೊಂಡು ಸಾವಿಗೆ ಶರಣಾದ ನೋವಿನ ಸಂಗತಿ ಎಲ್ಲರ ಮನಸ್ಸಿನಲ್ಲಿ ಉಳಿದಿದೆ.

ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜ್ ಈಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಕುರಿತು ನೀಡಿದ ಉತ್ತರ ಅವುಗಳ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿದೆ. ಅವರ ಪ್ರಕಾರ, ‘ರಾಜ್ಯದಲ್ಲಿ ಒಟ್ಟು 30 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಲಾಗಿದೆ. ಇವುಗಳಲ್ಲಿ 17 ಕಾರ್ಖಾನೆಗಳು ಹಾನಿ ಅನುಭವಿಸಿ ಸ್ಥಗಿತಗೊಂಡಿವೆ. ಈ ಪೈಕಿ, ದೀರ್ಘಕಾಲ ಸ್ಥಗಿತಗೊಂಡ 8 ಕಾರ್ಖಾನೆಗಳನ್ನು 40 ವರ್ಷಗಳ ಲೀಸ್‌ ಮೇಲೆ ನಡೆಸಲು ಖಾಸಗಿ ಉದ್ದಿಮೆಗಳಿಗೆ ಒಪ್ಪಿಸಲಾಗಿದೆ. ಮತ್ತೆ ಐದು ಕಾರ್ಖಾನೆ ಗಳನ್ನು ಗುತ್ತಿಗೆ ಕೊಡುವ ಬಗ್ಗೆ ಪರಿಶೀಲನೆ ನಡೆದಿದೆ. ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಾಯಂ ಆಗಿ ಸಮಾಪನೆ ಮಾಡಲಾಗಿದೆ. ರಾಜ್ಯದ 30 ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಕೇವಲ 13 ಸಹಕಾರಿ ರಂಗದಲ್ಲಿ ಉಳಿದು ಉತ್ಪಾದನೆಯಲ್ಲಿ ತೊಡಗಿವೆ’.

ಖಾಸಗಿ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲ ಬೇಕಾದ ಸಹಕಾರಿ ಸಕ್ಕರೆ ಕಾರ್ಖಾನೆಗಳು ಬಂದ್ ಆಗು ತ್ತಿರುವುದು ಮತ್ತು ಲೀಸ್‌ ಮೇಲೆ ಖಾಸಗಿ ಕಂಪನಿಗಳ ಪಾಲಾಗುತ್ತಿರುವುದು ಕಳವಳಕಾರಿ ಸಂಗತಿ. ಸಹಕಾರಿ ತತ್ವ ಕ್ರಮೇಣ ಹಿನ್ನೆಲೆಗೆ ಸರಿಯುತ್ತಿರುವುದು ದಟ್ಟವಾಗಿ ಕಾಣುತ್ತಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳ ನಷ್ಟಕ್ಕೆ ಬದ್ಧತೆ, ಉದ್ಯಮಶೀಲತೆ, ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ, ಪ್ರಾಮಾಣಿಕತೆ ಹಾಗೂ ಮಿತವ್ಯಯದ ಕೊರತೆ ಮುಖ್ಯ ಕಾರಣಗಳಾಗಿವೆ.

ತಂದೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಮಗ ಖಾಸಗಿ ಕಾರ್ಖಾನೆಯ ಮಾಲೀಕ, ಅಣ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ತಮ್ಮ ಖಾಸಗಿ ಕಾರ್ಖಾನೆಯ ಒಡೆಯ. ಹೀಗೆ ಒಂದೇ ಕುಟುಂಬದ ಹಿಡಿತದಲ್ಲಿ ಸಹಕಾರಿ-ಖಾಸಗಿ ಕಾರ್ಖಾನೆಗಳಿರುವ ಬಹಳಷ್ಟು ಉದಾಹರಣೆಗಳು ರಾಜ್ಯದಲ್ಲಿವೆ. ಹೆಚ್ಚು ಸಕ್ಕರೆ ಇಳುವರಿಯ ಉತ್ತಮ ಗುಣಮಟ್ಟದ ಕಬ್ಬನ್ನು ತಮ್ಮ ಖಾಸಗಿ ಕಾರ್ಖಾನೆಗೆ ಕಳುಹಿಸಿ, ಕಳಪೆ ಗುಣಮಟ್ಟದ ಕಬ್ಬನ್ನು ಸಹಕಾರಿ ಕಾರ್ಖಾನೆಗಳಿಗೆ ಹಂಚಿಕೆ ಮಾಡುವ ಸಹಕಾರಿ ಮುಖಂಡರಿದ್ದಾರೆ.

ಕೈಗಾರಿಕೆಗಳನ್ನು ನಡೆಸುವುದು ಒಂದು ಕಲೆ. ಇಲ್ಲಿ ವ್ಯವಹಾರ, ವ್ಯಾಪಾರ, ಹಣದ ಝೇಂಕಾರ ಇರುವುದರಿಂದ ಆರ್ಥಿಕ ಶಿಸ್ತು ಮತ್ತು ಸಮಯಪಾಲನೆ ಮುಖ್ಯ. ಪರಧನದ ಮಾಯೆಗೆ ಸೋಲದ ಸಂಯಮವೂ ಬೇಕು. ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎನ್ನುವ ಭಾವನೆಯ ಜನರು ಬಹಳ ಹಾನಿಯುಂಟು ಮಾಡುತ್ತಾರೆ.

ಕಬ್ಬು ಕೂಡ ಕಲ್ಪವೃಕ್ಷವಿದ್ದಂತೆ. ಕಬ್ಬಿನಿಂದ ಸಕ್ಕರೆ, ಇಥೆನಾಲ್, ಆಲ್ಕೊಹಾಲ್, ವಿದ್ಯುತ್, ಸಾವಯವ ಗೊಬ್ಬರ, ಔಷಧಗಳು ಉತ್ಪಾದನೆಯಾಗು ತ್ತವೆ. ಈ ಎಲ್ಲ ವಸ್ತುಗಳು ಮೌಲ್ಯವರ್ಧನೆಗೊಂಡು ಮಾರಾಟವಾಗುತ್ತವೆ. ಹೀಗಿದ್ದರೂ ಹಾನಿಯಾಗುತ್ತದೆ
ಎಂದರೆ ಅದಕ್ಕೆ ಬದ್ಧತೆಯ ಕೊರತೆಯೇ ಕಾರಣ ಎಂದು ಅನಿವಾರ್ಯವಾಗಿ ಹೇಳಬೇಕಾಗುತ್ತದೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳ ನಿರ್ವಹಣೆಯಲ್ಲಿ ದೇಶಕ್ಕೆ ಗುಜರಾತ್ ರಾಜ್ಯ ಮಾದರಿಯಾಗಿದೆ. ಅಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಇವೆಲ್ಲವೂ ಸಹಕಾರಿ ರಂಗಕ್ಕೆ ಸೇರಿವೆ. ಇಲ್ಲಿ ಒಂದೂ ಖಾಸಗಿ ಸಕ್ಕರೆ ಕಾರ್ಖಾನೆ ಇಲ್ಲವೆಂಬುದು ಗಮನಾರ್ಹ. ಈ ಕಾರ್ಖಾನೆಗಳು ಕಬ್ಬಿಗೆ ಅತೀ ಹೆಚ್ಚು ಬೆಲೆ ನೀಡುತ್ತಿರುವುದು ಬಹುದೊಡ್ಡ ಸಾಧನೆ. ಕಾರ್ಖಾನೆ ವಿಷಯದಲ್ಲಿ ಗುಜರಾತಿನಲ್ಲಿ ರಾಜಕೀಯ ಮೇಲಾಟ ನಡೆಯುವುದಿಲ್ಲ. ಆಡಳಿತವು ಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ ಇಲಾಖೆ ಉಪನಿಬಂಧಕರನ್ನು ಮ್ಯಾನೇಜಿಂಗ್ ಡೈರೆಕ್ಟರ್‌ ಎಂದು ನೇಮಕ ಮಾಡಲಾಗುತ್ತದೆ. ಆದರೆ ಗುಜರಾತಿನಲ್ಲಿ ಸಕ್ಕರೆ ಕೈಗಾರಿಕೆಯಲ್ಲಿ ಪರಿಣತಿ ಪಡೆದ ಹಿರಿಯ ತಜ್ಞರನ್ನು ಎಂ.ಡಿ. ಆಗಿ ನೇಮಿಸಲಾಗುತ್ತದೆ. ತಜ್ಞರೇ ಎಂ.ಡಿ. ಆಗುವುದರಿಂದ ಕಾರ್ಖಾನೆ ವ್ಯವಸ್ಥಿತ ವಾಗಿ ನಡೆಯಲು ಅನುಕೂಲವಾಗುತ್ತದೆ. ಆಡಳಿತ ಮಂಡಳಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ.

ಗುಜರಾತಿನ ಕಾರ್ಖಾನೆಗಳು ಕಬ್ಬನ್ನು ಹನಿ ನೀರಾವರಿ ವಿಧಾನ ಬಳಸಿ ಬೆಳೆಯಲು ಪ್ರೋತ್ಸಾಹಿಸು ತ್ತಿವೆ. ಹನಿ ನೀರಾವರಿಗೆ ಹಣಕಾಸಿನ ವ್ಯವಸ್ಥೆಗಾಗಿ ಕಾರ್ಖಾನೆ, ಬ್ಯಾಂಕ್‌, ರೈತರ ಮಧ್ಯೆ ತ್ರಿಪಕ್ಷೀಯ ಒಪ್ಪಂದ ಏರ್ಪಡಿಸಲಾಗಿದೆ.‌ ಕರ್ನಾಟಕದ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತದ ಹೊಣೆ ಹೊತ್ತವರು ಗುಜರಾತ್ ಸಹಕಾರಿ ಗಳ ಬದ್ಧತೆಯನ್ನು ಅಭ್ಯಾಸ ಮಾಡಿ ಅಳವಡಿಸಿ ಕೊಳ್ಳುವುದು ಅವಶ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು