ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ವಿನೋದದ ಆಸ್ವಾದಕ್ಕೆ ವ್ಯವಧಾನವಿರಲಿ

ಹಾಸ್ಯ ಮನೋವೃತ್ತಿಯು ಸಾಮಾಜಿಕ ಅಂತರವನ್ನು ತಗ್ಗಿಸುತ್ತದೆ
Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಏಪ್ರಿಲ್ 1 ಬಂದು ಹೋಗಿದೆ. ಆಪ್ತೇಷ್ಟರು ಪೆಟ್ರೋಲ್ ಬೆಲೆ ಇಳಿಯಿತೆಂದೋ ಹತ್ತೇ ತಿಂಗಳು ಶುಲ್ಕ ವಿಧಿಸುವ ಶಾಲೆ ಅಥವಾ ಒಂದೂ ಗುಂಡಿಯಿರದ ರಸ್ತೆ ಇದೆಯೆಂದೋ ಹೇಳಿ ಮೂರ್ಖರನ್ನಾಗಿಸಿರಬಹುದು. ಮೂರ್ಖರನ್ನಾಗಿಸುವುದಕ್ಕಿಂತಲೂ ಮೂರ್ಖರಾದಿರಿ ಎಂದು ಮನವರಿಕೆ ಮಾಡಿಸುವುದು ತ್ರಾಸವಂತೆ!

ಗಂಭೀರ ವಿನೋದ, ರಚನಾತ್ಮಕ ವಿಡಂಬನೆಯು ನೋವು ಕುಗ್ಗಿಸಿ, ನಲಿವು ಹಿಗ್ಗಿಸುವ ಚೈತನ್ಯ. ನವರಸಗಳಲ್ಲಿ ಒಂದಾದ ಹಾಸ್ಯವು ಜಗತ್ತನ್ನು ಇನ್ನಷ್ಟು ಸುಂದರ ವಾಗಿಸುತ್ತದೆ. ಸಂಘಶಕ್ತಿ ವೃದ್ಧಿಸಿ, ಸೃಜನಶೀಲತೆಗೆ ಅನುವಾಗಿಸುವ ಧೀಃಶಕ್ತಿ ಅದು. ತಮಾಷೆಯು ನಗುವಿನಲ್ಲಿ ಸಮಾರೋಪಗೊಳ್ಳುವುದು. ಆದರೆ ಎಡೆಬಿಡದ ಮಾಹಿತಿ ದಾಹದಿಂದ ತುಂಬಿಹೋಗಿರುವ ನಮ್ಮ ಬದುಕಿನ ಶೈಲಿ, ವಿನೋದದ ಆಸ್ವಾದಕ್ಕೆ ನಮಗೆ ವ್ಯವಧಾನ ಇಲ್ಲದಂತೆ ಮಾಡುತ್ತಿದೆ. ಹಾಸ್ಯಕರ ಮನಸ್ಸುಗಳೊಂದಿಗೆ ನಾವು ಬೆರೆಯುತ್ತಿಲ್ಲ. ಮೊಬೈಲ್ ರಿಂಗಣಿಸುತ್ತಲೇ ಒಂಟಿತನಕ್ಕೆ ಮಣೆ ಹಾಕಿರುತ್ತೇವೆ.

ಮನುಷ್ಯನು ಸಮಾಜದ ಹೊರಗೆ ಬದುಕಲಾಗದು ಎನ್ನುವುದು ಸತ್ಯ. ನಾವೇ ಕಚಗುಳಿಯಿಟ್ಟುಕೊಂಡು ನಗಲು ಸಾಧ್ಯವೇ? ಯಾವುದೇ ತಮಾಷೆಯ ವಿಶ್ಲೇಷಣೆಗೆ ಇಳಿಯಬಾರದು. ಪ್ರಯೋಗಾರ್ಥವಾಗಿ ಕಪ್ಪೆಯ ಅಂಗ ವಿಚ್ಛೇದಿಸಿದರೆ ಅದು ಸಾಯುವುದು! ಪ್ರಸಂಗ ನಿಜಕ್ಕೂ ಸಂಭವಿಸಿರಲಿ, ಇಲ್ಲದಿರಲಿ ಗಹಗಹಿಸುವ ನಗುವಂತೂ ಘಟಿಸಿರುತ್ತದೆ. ನಗಿಸಿ ನಗುವವರೊಂದಿಗೆ ಒಂದಾದರೆ ಭಾವ ಅರಳುತ್ತದೆ. ಹಾಸ್ಯವನ್ನು ವಿವೇಚಿಸಲು, ಅನುಸರಿಸಲು, ಮೆಚ್ಚಲು ಸಮರ್ಥರಾಗುತ್ತೇವೆ. ಹಾಸ್ಯಪ್ರವೃತ್ತಿ ಮೈದಳೆಯುತ್ತದೆ.

ವಿನೋದ ಪ್ರವರ್ತಕರಿಗೆ ಸಿಟ್ಟೆಂಬುದಿರದು. ವ್ಯಾಜ್ಯದತ್ತ ವಾಲುವ ಸಂದರ್ಭಗಳಿಗೆ ಲಂಗರು ಬಿಗಿದು ಅವನ್ನು ಅವರು ಯಥಾಸ್ಥಿತಿಗೆ ತರಬಲ್ಲರು. ಸಮಯ, ಸನ್ನಿವೇಶಗಳೇ ಅವರಿಗೆ ಸ್ಫೂರ್ತಿ. ಚಟಾಕಿಗಳನ್ನು ಪರಿಸ್ಥಿತಿಗಳಿಗೆ ಹೊಂದಿಸುವ ಪ್ರಯತ್ನ ನಗೆಪಾಟಲು. ಒಂದರ್ಥದಲ್ಲಿ ಹಾಸ್ಯ ಮನೋವೃತ್ತಿಯು ಸಾಮಾಜಿಕ ಅಂತರವನ್ನು ಕಡಿಮೆಯಾಗಿಸುತ್ತದೆ. ನಗೆ ಬಲ್ಲದವರೂ ಒಗ್ಗಟ್ಟಾಗಿದ್ದಾರು, ಆದರೆ ಅವರಲ್ಲಿ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹೊಂದಾಣಿಕೆ ಕೈಗೂಡೀತೆ?

ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್ ತನ್ನ ಬೋಧನೆಗೆ ವಿಡಂಬನೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದ. ಒಮ್ಮೆ ಆತನ ಮಿತ್ರನೊಬ್ಬ ‘ನಿನ್ನ ಆಪ್ತ ನಿನ್ನ ಬಗ್ಗೆ ಏನು ನಿಂದಿಸಿದ ಗೊತ್ತೇ?’ ಎಂದ. ಸಾಕ್ರೆಟಿಸ್ ‘ಅದು ಸತ್ಯವೇ? ಅದು ಒಳ್ಳೆಯದೇ? ನನಗದರಿಂದ ಪ್ರಯೋಜನವೇ?’ ಅಂತ ಪ್ರಶ್ನಿಸಿದ. ಮೂರು ಪ್ರಶ್ನೆಗಳಿಗೂ ಮಿತ್ರ ‘ಇಲ್ಲ’ ಎಂದೇ ಉತ್ತರಿಸಿದ. ‘ಹಾಗಿದ್ದಮೇಲೆ ನೀನು ನನಗೆ ಹೇಳುವುದೇನಿದೆ’ ಅಂದ ಸಾಕ್ರೆಟಿಸ್! ಇತರರು ತಮ್ಮ ಕುರಿತು ಏನೇನೋ ಮಾತನಾಡಿಕೊಳ್ಳುತ್ತಾರೆಂದು ವೃಥಾ ಕೊರಗುವವರಿಗೆ ಈ ಪಾಠ ಇಂದಿಗೂ ಪ್ರಸ್ತುತ. ಹಾಗೆ ನೋಡಿದರೆ ಮೌನ, ಆಂಗಿಕ ಹಾವಭಾವಗಳೇ ವಿನೋದದ ಹೆಚ್ಚು ಸಮರ್ಥ ವಾಹಕಗಳು.

ಬಹುಮುಖ್ಯವೆಂದರೆ, ಮತ್ತೊಬ್ಬರನ್ನು ನೋಯಿಸಿಯಾದರೂ ನಾವು ನಗಬೇಕಾದ್ದಿಲ್ಲ.
ವಿನೋದ ಅಷ್ಟು ದುಬಾರಿಯಾಗಬೇಕಿಲ್ಲ! ಒಮ್ಮೆ ಅಬ್ರಹಾಂ ಲಿಂಕನ್ ಚುನಾವಣಾ ಭಾಷಣ ಮಾಡುತ್ತಿದ್ದರು. ಮುಂದಿನ ಸಾಲಿನಲ್ಲಿದ್ದ ಯುವಕನೊಬ್ಬ ‘ಬಿಡಿ ಸಾರ್, ನೀವು ಎರಡು ಮುಖದವರು’ ಎಂದು ಅಬ್ಬರಿಸಿದ. ಸ್ವಲ್ಪ ಕೂಡ ಸಹನೆಗೆಡದ ಲಿಂಕನ್ ಹೀಗೆ ಪ್ರತಿಕ್ರಿಯಿಸಿದ್ದರು: ‘ತಮ್ಮಾ, ಖಂಡಿತ ಇಲ್ಲ. ಹಾಗೊಂದು ವೇಳೆ ಇದ್ದಿದ್ದರೆ ನಾನು ಈ ಮುಖವನ್ನೇಕೆ ಧರಿಸಿರುತ್ತಿದ್ದೆ ಹೇಳು ಮಾರಾಯ!’ ಭಾವೀ ಅಧ್ಯಕ್ಷರು ಸಭೆಗೆ ಎಂಥ ಕಳೆ ಮೂಡಿಸಿದ್ದರು ಎಂಬುದನ್ನು ಹೇಳುವ ಅಗತ್ಯವಿಲ್ಲ.

ಅಧಿಕಾರವು ಗೌರವಕ್ಕೂ ಮಿಗಿಲಾಗಿ ಹಾಸ್ಯ ಪ್ರವೃತ್ತಿಯಿಂದ ಅಧಿಕವಾಗಿ ಶೋಭಿಸುತ್ತದೆ. ಹಾಸ್ಯವು ಉಚಿತವಾಗಿ ಹಂಚಬಹುದಾದ ಅಮೂಲ್ಯ ಔಷಧ. ವಾಯಿದೆ ದಿನಾಂಕದ ಗೊಡವೆಯಿಲ್ಲ, ಅಡ್ಡಪರಿಣಾಮ ವಿಲ್ಲ, ವ್ಯಸನವಾಗಿಸಿಕೊಂಡರೆ ಮತ್ತೂ ಉತ್ತಮವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನವಂತೆ ವಿನೋದ ಒಳಗೊಳ್ಳದ ವಿಷಯವೇ ಇಲ್ಲ. ಮೊಗೆದಂತೆ ಮೂರ್ಖರಾಗಬಹುದು, ಮೂರ್ಖರನ್ನಾಗಿಸಬಹುದು.

ಮುಕ್ಕಾಲು ಶತಮಾನದ ಹಿಂದೆ ಅನ್ನಿ. ಜ್ವರಪೀಡಿತ ರೋಗಿಗೆ ವೈದ್ಯರೊಬ್ಬರ ‘ಸಂಜೆ ಒಂದು ಗುಳಿಗೆ, ನಾಳೆ ಬೆಳಗ್ಗೆ ಎದ್ದರೆ ಇನ್ನೊಂದು’ ಎಂಬ ಸೂಚನೆ ಇಂದಿಗೂ ನವನವೀನವಾಗಿ ನಗಿಸಿಕೊಳ್ಳುವುದು. ಜನಪದರಂತೂ ಅಜೀರ್ಣವಾಗುವಷ್ಟು ನಗಿಸುತ್ತಾರೆ. ಗಾದೆ, ಒಗಟುಗಳಲ್ಲಿ ಅವರ ವ್ಯಂಗ್ಯ, ವಿಡಂಬನೆಯ ದಟ್ಟ ಹರವಿದೆ. ತೊಟ್ಟಿಲು ಮಾರುವಾಕೆಗೆ ಎದುರಿಗೆ ಬರುವ ಸ್ತ್ರೀಯರೆಲ್ಲ ಗರ್ಭಿಣಿಯರಂತೆ ತೋರುತ್ತಾರೆ.

ಆ ಗ್ರಾಮದಲ್ಲಿ ವೃತ್ತಿನಾಟಕ ಕಂಪನಿಯೊಂದು ಟೆಂಟ್ ಹಾಕಿತ್ತು. ಕಂಪನಿಗೆ ಹೆಚ್ಚು ಕಲೆಕ್ಷನ್ ಇರಲಿಲ್ಲ. ಕಲಾವಿದರು ಬಿಟ್ಟುಹೋಗತೊಡಗಿದ್ದರು. ‘ಭಕ್ತ ಧ್ರುವ’ ನಾಟಕ. ಕಾರಣಾಂತರದಿಂದ ಅಂದು ನಾರಾಯಣನ ಪಾತ್ರ ಕಂಪನಿ ಒಡೆಯನದೆ. ಧ್ರುವನ ತಪಸ್ಸಿಗೆ ಪ್ರತ್ಯಕ್ಷಗೊಂಡು ‘ಏನು ವರ ಬೇಕು, ಕೇಳು ಬೇಗ’ ಎನ್ನುವನು. ‘ಯಾವ ವರವೂ ಬೇಡ, ಬಾಕಿಯಿರುವ ಮೂರು ತಿಂಗಳ ಪಗಾರ ದಯಪಾಲಿಸಿದರಾಯ್ತು ದೇವ’ ಎಂದಿದ್ದ ಧ್ರುವ!

ಅಂತೆಯೇ ಅರಸ ಕೈತಟ್ಟುತ್ತಾನೆ. ‘ಏನಪ್ಪಣೆ ಸ್ವಾಮಿ, ಹೇಳೋಣವಾಗಲಿ’ ಎಂದು ಸೇವಕರು ಪೈಪೋಟಿಯಲ್ಲಿ ಮುಂದೆ ಬಂದಾರೆಂಬ ನಿರೀಕ್ಷೆ ಅವನಿಗೆ. ಆದರೆ ‘ಇಲ್ಲಿ ಯಾರೂ ಇಲ್ಲ’ ಎಂಬ ಉದ್ಗಾರ ಸೈಡ್‍ವಿಂಗಿನಿಂದ ಅನುರಣಿಸಿದರೆ? ನಿಜಜೀವನದ ಸಂಗತಿಗಳು ರಂಗಸ್ಥಳ ದಲ್ಲಿ ತೆರೆದುಕೊಂಡರೆ ಆಗುವ ಆಭಾಸಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ.

ಜಾಣತನವೇನಿದ್ದರೂ ಅದು ಮೂರ್ಖತನದ ಮೂಲಕವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT