ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆರ್ಥಿಕತೆ; ಬೇಕು ದೃಢ ಹೆಜ್ಜೆ

ವೃತ್ತಿ ತರಬೇತಿಯ ವ್ಯಾಪ್ತಿಯನ್ನು ಹಿಗ್ಗಿಸುವುದರ ಜೊತೆಗೆ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಇಂದಿನ ಅಗತ್ಯ
Last Updated 3 ಜುಲೈ 2020, 20:37 IST
ಅಕ್ಷರ ಗಾತ್ರ

ಕೋವಿಡ್-19, ಜನರ ಜೀವಕ್ಕೆ ಮಾತ್ರವಲ್ಲದೆ ಆರ್ಥಿಕತೆಗೂ ಆತಂಕಕಾರಿಯಾದಾಗ ಲಾಕ್‌ಡೌನ್‌ ನಂತಹ ಕ್ರಮಗಳು ಅನಿವಾರ್ಯವಾದವು. ಅದರಿಂದ ಹದಗೆಟ್ಟ ಕೃಷಿ ಚಟುವಟಿಕೆ, ಕೈಗಾರಿಕೋತ್ಪಾದನೆ ಹಾಗೂ ಮುಚ್ಚಲ್ಪಟ್ಟ ಸೇವಾ ವಲಯಗಳು ಜಿ.ಡಿ.ಪಿ.ಯಲ್ಲಿ ತೀಕ್ಷ್ಣ ಇಳಿಕೆಗೆ ಕಾರಣವಾದವು. ಇದರ ಪರೋಕ್ಷ ಪರಿಣಾಮವೇ ನಿರುದ್ಯೋಗದ ಸಮಸ್ಯೆ.

ಈ ಸ್ಥಿತಿಯಲ್ಲಿ ಜನರ ಜೀವ ರಕ್ಷಣೆ ಮತ್ತು ಆರ್ಥಿಕಾಭಿವೃದ್ಧಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಜನಸಂಖ್ಯಾ ಬಾಹುಳ್ಯವಿರುವ ಭಾರತದಂತಹ ರಾಷ್ಟ್ರಗಳಲ್ಲಿ ಈ ಸವಾಲು ಹೆಚ್ಚು ಜಟಿಲವೂ ಆಗಿದೆ.

ಈಗಿನ ಬಿಕ್ಕಟ್ಟಿನ ವಿರುದ್ಧ ಸರ್ಕಾರ ಮತ್ತು ನಾಗರಿಕರು ಒಟ್ಟಾಗಿ ಹೋರಾಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಉದಾತ್ತ ಮನೋಭಾವದವರು ನೀಡಿದ ದೇಣಿಗೆಯ ಸಹಕಾರದೊಂದಿಗೆ ಸರ್ಕಾರವು ಕೊರೊನಾ ವೈರಸ್‌ನ ಬಾಧೆಗೆ ಒಳಗಾದವರಿಗೆ ಉಚಿತ ಆಹಾರ, ವೈದ್ಯಕೀಯ ಸೌಲಭ್ಯ ಮತ್ತಿತರ ಅಗತ್ಯಗಳನ್ನು ಪೂರೈಸಲು ದೊಡ್ಡ ಪ್ರಮಾಣದ ವೆಚ್ಚವನ್ನು ಮಾಡುತ್ತಿದೆ. ಆದರೆ, ಈ ಪೂರೈಕೆಗಳು ತಾತ್ಕಾಲಿಕ. ದಾನದಿಂದ ಆರ್ಥಿಕತೆ ನಡೆಯುವುದಿಲ್ಲ. ಹಣದ ಸೃಷ್ಟಿ ಮತ್ತು ವಿನಿಯೋಗದ ಆವರ್ತವು ನಿಶ್ಚಲವಾಗ
ಬಾರದು. ಇದನ್ನು ಹೇಗೆ ಕ್ರಿಯಾಶೀಲವಾಗಿ ಇಡುವುದು ಎಂಬುದೇ ಮುಖ್ಯ ಪ್ರಶ್ನೆಯಾಗಿದೆ.

ಮೊದಲನೆಯ ಪಂಚವಾರ್ಷಿಕ ಯೋಜನೆಯನ್ನು ಜಾರಿಗೊಳಿಸುವಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬಡತನ, ಅಜ್ಞಾನ ಮತ್ತು ಕಾಯಿಲೆಗಳನ್ನು ದೇಶದ ಬಹುದೊಡ್ಡ ಶತ್ರುಗಳು ಎಂದು ಕರೆದಿದ್ದರು. ಈ 70 ವರ್ಷಗಳಲ್ಲಿ ಈ ಶತ್ರುಗಳನ್ನು ನಾಶಗೊಳಿಸುವ ಪ್ರಯತ್ನ ನಡೆದಿದೆ. ಆದರೆ, ಇಂದಿಗೂ ಇವುಗಳಿಂದ ದೇಶವನ್ನು ಪೂರ್ತಿಯಾಗಿ ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಒಂದು ಸಮಸ್ಯೆಯನ್ನು ಪರಿಹರಿಸಿದಾಗ ಮತ್ತೊಂದು ಸಮಸ್ಯೆಯು ಹೆಡೆ ಎತ್ತಿರುತ್ತದೆ. ನೆರೆ, ಬರ ಮುಂತಾದ ನೈಸರ್ಗಿಕ ವಿಕೋಪಗಳು ಆರ್ಥಿಕತೆಗೆ ಒಂದು ಮಟ್ಟದ ಹಾನಿಯನ್ನು ಉಂಟುಮಾಡಿದರೆ, ದುರಾಸೆಯ ರಾಜಕೀಯ ನಾಯಕರು, ಭ್ರಷ್ಟ ಅಧಿಕಾರಿಗಳು ಮತ್ತು ಸ್ವಾರ್ಥಸಾಧನೆಯನ್ನೇ ಕಾರ್ಯಸೂಚಿಯಾಗಿ ಉಳ್ಳ ಕೆಲವು ಉದ್ಯಮಿಗಳು ಅದಕ್ಕಿಂತ ಹೆಚ್ಚಾಗಿ ಜನರ ಶೋಷಣೆಯನ್ನು ಮಾಡುತ್ತಿದ್ದಾರೆ.

ಲೆಕ್ಕಕ್ಕೆ ಸಿಗದ ಹಣವನ್ನು ಹೊರಗೆ ತಂದರೆ, ನಾವು ಆರೋಗ್ಯಕರ ಮತ್ತು ಸುಸ್ಥಿರ ಆರ್ಥಿಕತೆಯನ್ನು ಸಾಧಿಸಲು ಸಾಧ್ಯವಿದೆ. ಪ್ರಾಮಾಣಿಕತೆ, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಮತ್ತು ಹಣಕಾಸು ಶಿಸ್ತು ಮಾತ್ರವೇ ಆರ್ಥಿಕತೆಯನ್ನು ಅಭಿವೃದ್ಧಿಯ ಕಡೆಗೆ ಮೇಲೆತ್ತಬಲ್ಲವು. ನಮ್ಮ ಪುರಾತನ ಸಂಸ್ಕೃತಿ ಮತ್ತು ತತ್ವಜ್ಞಾನವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದಾದರೆ, ಅವುಗಳನ್ನು ವೈಭವೀಕರಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಆರ್ಥಿಕ ಹಿಂಜರಿತ ಮತ್ತು ವಿವಿಧ ವಲಯಗಳ ಮೇಲೆ ಅದರ ಪರಿಣಾಮಗಳನ್ನು ಕೇಂದ್ರ ಸರ್ಕಾರದ 2020–21ರ ಆಯವ್ಯಯ ಪತ್ರವು ಪರಿಗಣನೆಗೆ ತೆಗೆದುಕೊಂಡಿಲ್ಲ. ಉದ್ಯೋಗ ಹೆಚ್ಚಳವನ್ನು ಉತ್ತೇಜಿಸುವುದರ ಬದಲಿಗೆ, ಮಧ್ಯಮ ವರ್ಗಕ್ಕೆ ಒಂದಷ್ಟು ಕೊಡುಗೆ ಕೊಟ್ಟು, ಕೆಲವು ಕಾರ್ಪೊರೇಟ್ ಸಂಸ್ಥೆಗಳ ಸಂಪತ್ತನ್ನು ಹೆಚ್ಚಿಸುವ ದಿಸೆಯಲ್ಲಿ ಸರ್ಕಾರವು ಆಸಕ್ತವಾಗಿರುವಂತಿದೆ. ದುರ್ಬಲಗೊಳ್ಳುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಈ ಬಜೆಟ್‌ ಉತ್ತೇಜನ ನೀಡಬಹುದು ಎಂಬ ನಿರೀಕ್ಷೆಯು ಹುಸಿಯಾಗಿದೆ.

ಈಗಿನ ಹಣಕಾಸು ವರ್ಷದಲ್ಲಿ ಜಿ.ಡಿ.ಪಿಯು ಶೇ 5ರ ಕೆಳಗಿಳಿದಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಅತೀ ಕೆಳ ಮಟ್ಟಕ್ಕಿಳಿದಿರುವ ದಾಖಲೆಯಾಗಿದೆ. ಕೃಷಿ, ಗಣಿಗಾರಿಕೆ ಮತ್ತು ಕೈಗಾರಿಕೆ ಸೇರಿದಂತೆ ಬಹುತೇಕ ಉತ್ಪಾದನಾ ವಲಯಗಳು ಆರ್ಥಿಕಾಭಿವೃದ್ಧಿಯಲ್ಲಿ ಗಂಭೀರ ಸ್ವರೂಪದ ಹಿನ್ನಡೆಯನ್ನು ಕಂಡಿವೆ.

2017-18ರ ಶ್ರಮಿಕ ಶಕ್ತಿ ಸಮೀಕ್ಷೆಯು ಆರ್ಥಿಕ ಹಿಂಜರಿತವನ್ನು ಸೂಚಿಸಿತ್ತು. ಗ್ರಾಮಗಳಿಂದ ನಗರ ಗಳಿಗೆ ಮತ್ತು ನಗರಗಳಿಂದ ಗ್ರಾಮಗಳಿಗೆ ಶ್ರಮಿಕ ಶಕ್ತಿಯ ಚಲನೆಯನ್ನು ಊಹಿಸಲೂ ಸಾಧ್ಯವಿಲ್ಲವಾಗಿದೆ. ಏಕೆಂದರೆ ಹೆಚ್ಚುವರಿಯಾಗಿ ಉಳಿದಿರುವ ಶ್ರಮಿಕ ಶಕ್ತಿಯನ್ನು ಭರ್ತಿ ಮಾಡಿಕೊಳ್ಳಲು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡೂ ವಿಫಲವಾಗಿವೆ. ಆದ್ದರಿಂದ ಸರ್ಕಾರವು ಗುಡಿ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ನೀಗಬಲ್ಲ ಶ್ರಮಿಕ ನಿರ್ದೇಶಿತ ಕಾರ್ಯಕ್ರಮಗಳ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಬೇಕಿದೆ.

ನಮ್ಮ ಜನಸಂಖ್ಯೆಯು ಬಹಳ ದೊಡ್ಡದಾಗಿದ್ದರೂ ದೇಶದಲ್ಲಿ ಕೌಶಲಭರಿತ ಶ್ರಮಿಕರ ತೀವ್ರ ಕೊರತೆ ಇದೆ. ಸಮೂಹಕ್ಕೆ ನಾವು ಮೂಲಭೂತ ಶಿಕ್ಷಣವನ್ನು ನೀಡಿದರೆ ಸಾಲದು. ವೃತ್ತಿ ತರಬೇತಿಯ ವ್ಯಾಪ್ತಿಯನ್ನು ಹೆಚ್ಚಿಸಬೇಕು. ಅದರೊಂದಿಗೆ ಯುವಕರನ್ನು ಕೌಶಲಪೂರ್ಣರಾಗುವಂತೆಯೂ ಮಾಡಬೇಕಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಬಗೆಯ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸಿ ಸಮತೋಲನದ ಆರ್ಥಿಕ ಅಭಿವೃದ್ಧಿಗೆ ಪಣ ತೊಡುವುದು ಇಂದಿನ ಅಗತ್ಯವಾಗಿದೆ. ಆ ಮೂಲಕ ಮಾತ್ರ ‘ಜನರಿಂದ ಜನರಿಗಾಗಿ ಜನರ ಸರ್ಕಾರ’ ಎಂಬ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಎತ್ತಿ ಹಿಡಿಯಲು ಸಾಧ್ಯ.

-ಲೇಖಕ: ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ, ಸುಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT