ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಯಿರಿ ಆಲಯದ ಅಂತಃಶಕ್ತಿ

ಮನೆಯ ಕದ ಮುಚ್ಚಿ, ಮನದ ಬಾಗಿಲು ತೆರೆದುಕೊಳ್ಳಿ...
Last Updated 1 ಏಪ್ರಿಲ್ 2020, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡಲು ದೇಶದಾದ್ಯಂತ ಇದೇ 14ರವರೆಗೆ ಲಾಕ್‌ಡೌನ್‌ ಘೋಷಣೆಯಾಗಿದೆ. ಈ ಅವಧಿಯಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕಾಲ ಕಳೆಯುವುದು ಹೇಗೆ ಎಂಬ ಚಿಂತೆ ಬಹಳಷ್ಟು ಜನರನ್ನು ಕಾಡಿರಬಹುದು. ಅನಿವಾರ್ಯವಾಗಿ ಬಂದ ಲಾಕ್‌ಡೌನ್ ಎಂಬ ‘ಶಿಕ್ಷೆ’ಯ ಕೆಲವೇ ದಿನಗಳನ್ನು ಕಳೆಯುವುದರೊಳಗೆ ನನಗೆ ಹೊಸ ಬಯಲು ಆಲಯ ಗೋಚರಿಸತೊಡಗಿತು.

ಮೊನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಗೆಳೆಯ ಶ್ರೀಕಾಂತ ಸೊಗಲದನಿಗೆ ಫೋನ್ ಮಾಡಿದೆ. ಫೋನ್‌ ಎತ್ತಿಕೊಂಡ ಅವನ ಮಗಳು ರೂಪಾಲಿ (ಖುಷಿ) ‘ಅಂಕಲ್, ಡ್ಯಾಡಿ ಸ್ನಾನ ಮಾಡ್ತಿದ್ದಾರೆ’ ಎಂದವಳೇ ಮಾತು ಮುಂದುವರಿಸಿ ‘ಈ ಲಾಕ್‌ಡೌನ್ ನನ್ನ ಪಾಲಿಗಂತೂ ಸೂಪರ್!’ ಎಂದಳು. ನನಗೆ ಅಚ್ಚರಿಯಾಯಿತು. ‘ಯಾಕಮ್ಮ... ಮನೆಯಲ್ಲಿ ಕುಳಿತು ಬೇಸರ ಆಗಿದೆ ಅಂತ ಜನರೆಲ್ಲ ಹೇಳ್ತಾ ಇದ್ದಾರೆ. ನೀನು ಮಾತ್ರ ಸೂಪರ್ ಅನ್ನುತ್ತಿದ್ದೀಯಾ’ ಎಂದೆ.

ನಗುತ್ತಾ ಆಕೆ ಹೇಳತೊಡಗಿದಳು- ‘ಅಮ್ಮ, ಅಪ್ಪ, ನಾನು, ಅಣ್ಣ ರವಿ, ನಮ್ಮ ಅಜ್ಜಿ ಎಲ್ಲರೂ ಮನೆಯಲ್ಲಿಯೇ ಇದ್ದೇವೆ. ಒಟ್ಟಿಗೆ ಊಟ ಮಾಡುತ್ತಿದ್ದೇವೆ. ಹೋಟೆಲ್ ಇಲ್ಲ. ಅಮ್ಮನ ಅಡುಗೆ ಸೂಪರ್. ಅದನ್ನು ತಿಂದರೆ ಕೊರೊನಾ ಅಲ್ಲ, ಯಾವ ಜಡ್ಡೂ ಬರದು’ ಎಂದಳು.

‘ನಿಮ್ಮ ಡ್ಯಾಡಿ ಹೇಗೆ ಸಮಯ ಕಳೀತಿದ್ದಾರೆ’ ಎಂದೆ. ‘ಡ್ಯಾಡಿ, ಭಗವದ್ಗೀತೆಯ ಮೂಲಕೃತಿ ತಂದಿದ್ದಾರೆ. ಅದನ್ನು ಪಠಣ ಮಾಡುತ್ತಾ, ನಡುನಡುವೆ ಗೀತೆಯ ಅನೇಕ ಮಹತ್ವದ ವಿಷಯಗಳನ್ನು ನಮಗೆ ಹೇಳುತ್ತಿರುತ್ತಾರೆ. ಇದು ತುಂಬ ಖುಷಿ ಕೊಡುತ್ತಿದೆ’ ಎಂದಳು.

ಗಾಂಧೀಜಿ, ವಿನೋಬಾ ಭಾವೆ, ರಾಜೇಂದ್ರ ಪ್ರಸಾದ್‌, ಲೋಕಮಾನ್ಯ ತಿಲಕರಂತಹ ಸ್ವಾತಂತ್ರ್ಯ ಯೋಧರು ಜೈಲಿನಲ್ಲಿದ್ದಾಗ ಗೀತೆಯ ಪಠಣ ಮಾಡುತ್ತಿದ್ದುದು ನನಗೆ ನೆನಪಾಯಿತು. ತಿಲಕರು ಈ ಅವಧಿಯಲ್ಲಿ ಗೀತೆಯ ಅಧ್ಯಯನ ಮಾಡಿ ‘ಗೀತಾರಹಸ್ಯ’ ಎಂಬ ಮಹತ್ವದ ಕೃತಿ ರಚಿಸಿದರು. ವಿನೋಬಾ ಭಾವೆ ಜೈಲಿನಲ್ಲಿಯೇ ಗೀತೆಯ ಬಗ್ಗೆ ಪ್ರವಚನ ಮಾಡುತ್ತಿದ್ದರು. ಅವರು ‘ಗೀತಾಯಿ’ ಎಂಬ ಕೃತಿ ರಚಿಸಿದ್ದಾರೆ.

ಎಲ್ಲ ಸ್ವಾತಂತ್ರ್ಯಯೋಧರಿಗೆ ಅವರು ಜೈಲಿನಲ್ಲಿಯೇ ಅಂತಃಶಕ್ತಿ ತುಂಬುತ್ತಿದ್ದರು. ಹೀಗಾಗಿ ಅವರೆಲ್ಲ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಜೈಲುಶಿಕ್ಷೆ ಅನುಭವಿಸುವಂತಾಯಿತು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾ 27 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ಅನುಭವಿಸಿದರು. ಆ ಅವಧಿಯಲ್ಲಿ ಗಾಂಧೀಜಿ ಮತ್ತು ಟಾಲ್‌ಸ್ಟಾಯ್ ಕೃತಿಗಳೇ ಅವರಿಗೆ ಬಹುದೊಡ್ಡ ಆತ್ಮವಿಶ್ವಾಸ, ಧೈರ್ಯ ತುಂಬಿದವು.

ಲಾಕ್‌ಡೌನ್ ಅವಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಹೇಗೆ ಎಂದು ಮೌನವಾಗಿ ಯೋಚಿಸತೊಡಗಿದೆ. ಗುಂಡಿ ಬಿಚ್ಚಿಹೋಯಿತೆಂಬ ಕಾರಣಕ್ಕೆ ಆ ಬಟ್ಟೆಗಳನ್ನೇ ಬಿಸಾಕಿಬಿಡುತ್ತಿದ್ದೆವು. ಮನೆಯಲ್ಲಿ ಒಂದು ಸೂಜಿದಾರ ಯಾವತ್ತೂ ಇರಬೇಕು ಎಂದು, ನಾನು ಚಿಕ್ಕವನಿದ್ದಾಗ ಅಮ್ಮ ಹೇಳುತ್ತಿದ್ದರು. ನಾನು ಸೂಜಿ– ದಾರ ಹುಡುಕಿ ತಂದು, ಕಿತ್ತುಹೋದ ಗುಂಡಿಗಳಿಗೆ ಹೊಲಿಗೆ ಹಾಕಿ ಸರಿಪಡಿಸಿದೆ. ಅಮ್ಮನ ಮಾತಿನಲ್ಲಿದ್ದ ಬಹುದೊಡ್ಡ ಅರ್ಥಶಾಸ್ತ್ರದ ಗುಟ್ಟು ಅರ್ಥವಾಯಿತು.

ಕುಟುಂಬದವರೊಟ್ಟಿಗೆ ಸಂತೋಷವಾಗಿ ಬದುಕುವ ಅವಕಾಶವೊಂದನ್ನು ಲಾಕ್‌ಡೌನ್‌ ನಮಗೆ ಕೊಟ್ಟಿದೆ. ಹಾಗೆಯೇ ವಾಹನಗಳ ಓಡಾಟ ಇಲ್ಲ. ಹೆಚ್ಚು ಖರ್ಚು ಇಲ್ಲ. ಪರಿಸರ ಕಲುಷಿತವಾಗುವ ಪ್ರಮೇಯವೇ ಇಲ್ಲ. ಬೆಂಗಳೂರು, ಮುಂಬೈನಂತಹ ನಗರಗಳ ಹವಾಮಾನವು 30 ವರ್ಷಗಳ ಹಿಂದೆ ಇದ್ದ ರೀತಿಗೆ ಬಂದಿದೆ ಎಂದು ವರದಿಯಾಗಿದೆ.

ನೀರು, ಭೂಮಿ, ಕೃಷಿ ಕುರಿತು ಓದಲೆಂದು ನಾನು ಪುಸ್ತಕಗಳನ್ನು ತಂದು ಇಟ್ಟಿದ್ದರೂ ಸಮಯವಿಲ್ಲದೇ ಓದಲಾಗಿರಲಿಲ್ಲ. ಈಗ ಕುಳಿತು ಅವನ್ನೆಲ್ಲ ಓದಬೇಕು ಅನಿಸತೊಡಗಿದೆ. ಲಾಕ್‌ಡೌನ್ ಸಮಯವನ್ನು ಹೀಗೆ ಅರ್ಥಪೂರ್ಣವಾಗಿ ಕಳೆಯಬಹುದು ಅಲ್ಲವೇ?

ನಮ್ಮ ಜನರ ಹಾಸ್ಯಪ್ರಜ್ಞೆ ನಿಜಕ್ಕೂ ಮೆಚ್ಚುವಂಥದ್ದು. ಕೊರೊನಾ ಬಗ್ಗೆ ಎಂತಹ ಸೊಗಸಾದ ಹಾಸ್ಯ ಚಟಾಕಿಗಳನ್ನು ಬರೆದು ಮೆಸೇಜ್ ಮಾಡುತ್ತಿದ್ದಾರೆ. ಸದಾ ಸಾವಿನ ಹೆದರಿಕೆಯಲ್ಲಿದ್ದ ಶಹಜಾದೆ ಎಂಬ ಕಲಾವಿದೆ ತನ್ನನ್ನು ತಾನು ಕಾಪಾಡಿಕೊಳ್ಳಲು ‘ಅರೇಬಿಯನ್ ನೈಟ್ಸ್’ ಎಂಬ ಸೊಗಸಾದ ಕಥೆಗಳನ್ನು ರಚಿಸಿದ್ದನ್ನು ಇದು ನೆನಪಿಸುತ್ತಿದೆ.

ಲಾಕ್‌ಡೌನ್ ನಂತರ ಭಾರತದಲ್ಲಿ ಹೊಸ ಯುಗ ಆರಂಭವಾಗಲಿದೆ. ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗಲಿದೆ. ಸ್ವದೇಶಿ ಅಭಿಯಾನ ಶುರುವಾಗುತ್ತದೆ ಎಂಬ ಆಶಯ ಮೂಡುತ್ತಿದೆ.

ನಾನು ತುಂಬ ಸಂತೋಷದಿಂದ ಹೇಳುವ ಸಂಗತಿಯೆಂದರೆ, ನಾವೆಲ್ಲ ಮುಂಜಾನೆ ಕಡ್ಡಾಯವಾಗಿ ಯೋಗ ಮಾಡುತ್ತಿದ್ದೇವೆ. ಕೊರೊನಾ ತಡೆಯಲು ಬೇಕಾಗುವ ಸ್ಯಾನಿಟೈಸರ್ ಅನ್ನು ನಮ್ಮ ಸಿಬ್ಬಂದಿ ಮೂಲಕ ತಯಾರಿಸಿ ಹಂಚುತ್ತಿದ್ದೇವೆ. ಮುಖ್ಯವಾಗಿ, ಮನೆಯವರೆಲ್ಲ ಕೂಡಿ ಊಟ ಮಾಡುತ್ತಿದ್ದೇವೆ. ತುಂಬ ತುಂಬ ಮಾತನಾಡುತ್ತಿದ್ದೇವೆ. ಈಗ ಮನೆಯೇ ಮಂತ್ರಾಲಯವೂ ಆಗಿದೆ, ಕೂಡಲಸಂಗಮವೂ ಆಗಿದೆ. ಇದು ಕೊರೊನಾ ಗೆಲ್ಲುವ ಶಕ್ತಿಯನ್ನು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT