ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇದು ಅಧಿಕಪ್ರಸಂಗಿ ‘ವೈರಸ್‌’!

ನಮಗೇನೂ ಆಗದು ಎಂದುಕೊಳ್ಳುವ ನಮ್ಮ ಹುಂಬತನ, ಎಷ್ಟೆಲ್ಲ ಜನರಿಗೆ ಸಂಕಷ್ಟ ತಂದೊಡ್ಡಬಹುದು ಗೊತ್ತೇ?
Last Updated 23 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಲಾಕ್‍ಡೌನ್‍ನಿಂದ ದೇಶವೇ ಅಕ್ಷರಶಃ ತಟಸ್ಥವಾಗಿ ತಿಂಗಳೇ ಉರುಳಿಹೋಗಿದೆ. ವೈರಸ್ ಹರಡದಿರಲು ನಾವು ಪರಸ್ಪರರ ಸಂಪರ್ಕಕ್ಕೆ ಬರದಿರುವುದೊಂದೇ ದಾರಿ. ಆದರೆ ನಮ್ಮವರ ನಿಷ್ಕಾಳಜಿ ಮತ್ತು ಅತಿಬುದ್ಧಿವಂತಿಕೆಯೇ ಈ ವೈರಸ್ ಮಿಂಚಿನ ವೇಗದಲ್ಲಿ ಸಂಚರಿಸುವಂತೆ ಮಾಡಿ, ಲಾಕ್‍ಡೌನ್ ಅನ್ನು ಇನ್ನೂ ಹೆಚ್ಚಿನ ದಿನಗಳ ಕಾಲ ಮುಂದುವರಿಸುತ್ತವೇನೋ ಎಂಬ ಭಯ ಉಂಟಾಗಿದೆ.

ಈ ಭಯಕ್ಕೆ ಕಾರಣವೆಂದರೆ, ರಾಜ್ಯ ಸರ್ಕಾರ ಘೋಷಿಸಿರುವ ಸಡಿಲಿಕೆಯನ್ನು ಜನ ತಪ್ಪಾಗಿ ಅರ್ಥ ಮಾಡಿಕೊಂಡಿರುವುದು. ಈ ಸಡಿಲಿಕೆ ಇರುವುದು ಅತ್ಯವಶ್ಯಕ ಸೇವೆಗಳಿಗೆ ಮಾತ್ರ. ಇನ್ನೂ ಹತ್ತು ದಿನ ಲಾಕ್‍ಡೌನ್ ಅನ್ನು ಯಶಸ್ವಿಯಾಗಿಸಬೇಕಾದ ಗುರುತರ ಹೊಣೆ ನಮ್ಮೆಲ್ಲರದ್ದೂ ಆಗಿದೆ.

ಆದರೆ ಸಮಸ್ಯೆಯ ಆಳ ಅರ್ಥವಾಗಬೇಕೆಂದರೆ, ಅದು ನಮ್ಮ ಅನುಭವಕ್ಕೇ ಬರಬೇಕು ಎಂಬ ಮೂರ್ಖತನ ನಮ್ಮದು. ಇಟಲಿಯಿಂದ, ಅಮೆರಿಕದಿಂದ ಪಾಠ ಕಲಿಯೋಣವೆಂದರೆ, ನಮ್ಮ ಅಂಗಳಕ್ಕೆ ಬಂದಮೇಲೆ ನೋಡೋಣ ಎನ್ನುವವರು ನಾವು. ನಮ್ಮೆಲ್ಲರಲ್ಲಿ ಮನೆಮಾಡಿರುವ ಈ ‘ವೈರಸ್’ ಅಧಿಕಪ್ರಸಂಗತನದ್ದು, ತನಗೇನೂ ಆಗುವುದಿಲ್ಲ ಎಂಬ ಹುಂಬತನದ್ದು, ನೋಡೇ ಬಿಡೋಣ ಏನಾಗುತ್ತದೆ ಎಂಬ ದಾರ್ಷ್ಟ್ಯದ್ದು. ಇಂತಹ ವೈರಸ್‍, ಜಗತ್ತಿನ ಎಲ್ಲ ಕಡೆಯೂ ಸರ್ವೇ ಸಾಮಾನ್ಯ. ಬಹುಶಃ ಇದೇ ಕೊರೊನಾಗೆ ಜತೆಯಾದದ್ದು. ಇದರ ಸಹಕಾರ ಇಲ್ಲದಿದ್ದರೆ ಪಾಪ, ಕೊರೊನಾ ವೈರಸ್ ಬಾಲ ಮುದುರಿಕೊಂಡು ಓಟ ಕಿತ್ತಿರುತ್ತಿತ್ತು!

ಲಾಕ್‍ಡೌನ್ ಮತ್ತೆ ಮುಂದುವರಿದರೆ ಏನಾಗಬಹುದೆಂದು ಯೋಚನೆಯನ್ನೂ ಮಾಡಲಾಗದು. ದಿನದಿನವೂ ದುಡಿದು ತಿನ್ನುವ ಅಸಂಖ್ಯ ಜನ ನಾಳೆಯೇನು ಎಂಬ ಚಿಂತೆ ಹೊತ್ತು ಮನೆಯಲ್ಲಿ ಕಣ್ಣೀರಿಡುತ್ತಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ, ಲಾಕ್‍ಡೌನ್ ಮುಂದೆ ಹೋದರೆ ಉಳ್ಳವರು ಹೇಗೋ ಬದುಕಿಯಾರು. ಆದರೆ ನಮ್ಮಂತಹ ಸಾಮಾನ್ಯ ಜನ ಸಂಕಷ್ಟ ಅನುಭವಿಸಬೇಕಾಗುತ್ತದೆ.

ಇತ್ತೀಚಿನ ಎರಡು ಉದಾಹರಣೆಗಳನ್ನು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಮೊನ್ನೆ ಉಡುಪಿ ಜಿಲ್ಲಾಧಿಕಾರಿಯು ವಿವಾಹಕ್ಕಾಗಿ ಮದುಮಗಳು ಮತ್ತು ಇತರ ನಾಲ್ವರಿಗೆ ಚಿಕ್ಕಮಗಳೂರು ಜಿಲ್ಲೆಗೆ ಬರಲು ನೀಡಿದ ಅನುಮತಿಯನ್ನು ಚಿಕ್ಕಮಗಳೂರಿನ ಅಧಿಕಾರಿಗಳು ಮಾನ್ಯ ಮಾಡದೇ ವಿವಾಹ ಮುಂದೂಡಲ್ಪಟ್ಟಿತು. ಇದನ್ನು ಪ್ರಶ್ನಿಸಿದಾಗ, ಉಡುಪಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಕಾರಣ ಅನುಮತಿ ನೀಡಿಲ್ಲ ಎಂದು ಚಿಕ್ಕಮಗಳೂರಿನ ಅಧಿಕಾರಿಗಳು ಹೇಳಿದ್ದಾರೆ. ಹಾಗಾದರೆ ಕೊರೊನಾ ಹಾಟ್‍ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಿಂದ ರಾಮನಗರಕ್ಕೆ ಮದುವೆ ನಡೆಸಲು ವಾಹನಗಳ ಹಿಂದೆ ವಾಹನಗಳು ಹೋದವಲ್ಲ, ಅಲ್ಲಿ ಅನುಮತಿ ಹೇಗೆ ಸಿಕ್ಕಿತು? ಇಲ್ಲಿ ಮದುಮಗಳ ಸಮೇತ ಐದು ಮಂದಿಗೆ ಅನುಮತಿ ಇಲ್ಲ! ಇದಕ್ಕೇನು ಹೇಳುತ್ತೀರಿ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ.

ನಮ್ಮ ಇಡೀ ರಾಜ್ಯದಲ್ಲಿ ಜಿಲ್ಲಾಡಳಿತಗಳ ನಡುವೆ ಕೊರೊನಾ ವಿಚಾರದಲ್ಲಿ ಆಡಳಿತಾತ್ಮಕ ಸಮನ್ವಯ ಸಾಧ್ಯವಾಗಿಲ್ಲ ಎಂದು ಇದರ ಅರ್ಥವೇ ಅಥವಾ ಅಂತಸ್ತಿಗೆ ತಕ್ಕಂತೆ ನಿಯಮವೇ?

ಅದೊಂದೇ ಅಲ್ಲ, ಎಲ್ಲ ಕಡೆಯೂ ಬಡವರೇ ಸಂಕಷ್ಟಕ್ಕೆ ಒಳಗಾಗುವುದು. ಈ ಹಿಂದೆ, ಉಳ್ಳವರ ಮಕ್ಕಳನ್ನು ವಿದೇಶದಿಂದ ವಿಮಾನದ ಮೂಲಕ ಕರೆಸಿಕೊಳ್ಳಲಾಯಿತು. ಕಳೆದ ವಾರ ಉತ್ತರಪ್ರದೇಶ ಸರ್ಕಾರವು ರಾಜಸ್ಥಾನದ ಕೋಟಾಕ್ಕೆ 300 ಬಸ್‍ಗಳನ್ನು ಕಳುಹಿಸಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿತ್ತು. ಇದೀಗ ಮಧ್ಯಪ್ರದೇಶ ಸರ್ಕಾರದ ಸರದಿ. ಅದು 150 ಬಸ್‌ಗಳನ್ನು ಕಳಿಸಿ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಬೇರೆಬೇರೆ ಜಿಲ್ಲೆಗಳಲ್ಲಿ ಇರುವ ಅವರವರ ಮನೆಗಳಿಗೆ ಕಳುಹಿಸಿಕೊಟ್ಟಿದೆ. ಇದರಲ್ಲಿ ತಕರಾರು ಮಾಡುವಂತಹದ್ದೇನಿಲ್ಲ, ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಮಾಡಬೇಕಾದ ಕೆಲಸವೇ ಅದು. ಆ ಮಕ್ಕಳ ಜಾಗದಲ್ಲಿ ನಮ್ಮ ಮಕ್ಕಳಿದ್ದರೆ ನಾವು ಸರ್ಕಾರದಿಂದ ಅದನ್ನೇ ನಿರೀಕ್ಷಿಸುತ್ತಿದ್ದೆವು. ಆದರೆ ನಮ್ಮ ತಕರಾರು ಇರುವುದು ಅದಕ್ಕಲ್ಲ. ತೆಲಂಗಾಣದ ಮೆಣಸಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಛತ್ತೀಸಗಡದ 12 ವರ್ಷದ ಬಾಲೆ ವಾಪಸ್ ಊರಿಗೆ ಮರಳಲು ಇತರ 11 ಜನರೊಂದಿಗೆ ನಡೆದುಕೊಂಡೇ ಹೊರಟಿದ್ದಳಲ್ಲ, ಸತತ ಮೂರು ದಿನ ನಡೆದ ಜಾಮ್ಲೋ ಮಕ್ದಾಮ್ ಎಂಬ ಈ ಹುಡುಗಿ ಇನ್ನೇನು ತನ್ನೂರು ತಲುಪಬೇಕು ಎನ್ನುವಷ್ಟರಲ್ಲಿ ಕುಸಿದುಬಿದ್ದು ಮೃತಪಟ್ಟಳಲ್ಲ!

ಟ್ಯೂಷನ್ ಕೇಂದ್ರಗಳಿಂದಲೇ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ಕೋಟಾದಿಂದ ಉಳ್ಳವರ ಮಕ್ಕಳನ್ನು ಕರೆದೊಯ್ಯುವಲ್ಲಿ ಎಲ್ಲ ಸರ್ಕಾರಗಳಿಗೂ ಇರುವ ಆಸಕ್ತಿ, ನೂರಾರು ಕಿಲೊಮೀಟರ್ ನಡೆದು ಹೋಗುವ ಕೂಲಿಕಾರ್ಮಿಕರ ಬಗ್ಗೆ, ಅವರ ಮಕ್ಕಳ ಬಗ್ಗೆ ಏಕಿಲ್ಲ?

ಅದಕ್ಕೇ ಲಾಕ್‍ಡೌನ್ ನಿಯಮಗಳನ್ನು ಪಾಲಿಸೋಣ. ಜಾಗ್ರತೆ ಇರಲಿ, ಭಯ ಬೇಡ ಎಂದು ವೈದ್ಯರು ಹೇಳಿದ್ದು ರೋಗದ ಬಗ್ಗೆ ಬಹಳ ಯೋಚಿಸಿ ತಲೆ ಕೆಡುವುದು ಬೇಡವೆಂದೇ ಹೊರತು, ಏನೂ ಆಗುವುದಿಲ್ಲ ಎಂದು ಬಿಂದಾಸ್ ಆಗಿ ತಿರುಗಲು ಅಲ್ಲ. ಒತ್ತಡರಹಿತರಾಗಿರುವುದು ಮತ್ತು ಅಸಡ್ಡೆ ತೋರುವುದು ಎರಡಕ್ಕೂ ಅಂತರ ಬಹಳವಿದೆ. ಅರ್ಥಮಾಡಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT