ಭಾನುವಾರ, ಏಪ್ರಿಲ್ 2, 2023
23 °C
ತಪ್ಪುಗಳ ಆಚೆಗೂ ವಿಸ್ತರಿಸಿಕೊಳ್ಳುವ ನೆಹರೂ ಅವರ ವ್ಯಕ್ತಿತ್ವ ಮಹತ್ವದ್ದು

ಸಂಗತ | ಮಕ್ಕಳ ದಿನಾಚರಣೆ: ದೇಶ ಕಟ್ಟಿದ ಮಾದರಿ ಕಾಯಕ ನೆಹರೂ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಆನಂದ ಭವನ ಎಸ್ಟೇಟ್‌ನ ಅರಮನೆಯಂತಹ ಮನೆಯಲ್ಲಿ ಬೆಳೆದ ಬಾಲಕನೊಬ್ಬ ಸೈಮನ್ ಕಮಿಷನ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಲಾಠಿ ಏಟಿಗೆ ಮೂರ್ಚೆ ತಪ್ಪಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ಸುಮಾರು 9 ವರ್ಷ ಸೆರೆಮನೆಯಲ್ಲಿ ಕಳೆದದ್ದು ಊಹಿಸಿಕೊಳ್ಳಲು ಕಷ್ಟವಾಗುವ ಇತಿಹಾಸ. ಏಕೆಂದರೆ ಆಗರ್ಭ ಶ್ರೀಮಂತರು ಸಾಮಾನ್ಯವಾಗಿ ಇಂತಹ ಸಂಕಷ್ಟ ಗಳಿಗೆ ತಮ್ಮನ್ನು‌ ಒಡ್ಡಿಕೊಳ್ಳುವುದು ತೀರಾ ಕಡಿಮೆ. ಆದರೆ ಜವಾಹರಲಾಲ್ ನೆಹರೂ ತಮ್ಮನ್ನು ಆ ರೀತಿಯ ಸಂಕಷ್ಟಗಳಿಗೆ ಒಡ್ಡಿಕೊಂಡಿದ್ದರು ಮತ್ತು ತಮ್ಮ ಖಾಸಗಿ ಸಂಪತ್ತಿನ ಬಹುಪಾಲನ್ನು ದೇಶಕ್ಕಾಗಿ ಅರ್ಪಿಸಿದ್ದರು.

ತಾರುಣ್ಯದಲ್ಲಿ ಥಿಯೊಸಾಫಿಕಲ್ ಸೊಸೈಟಿಯಿಂದ ಪ್ರಭಾವಿತರಾಗಿ ನೆಹರೂ, ಹಿಂದೂ ಮತ್ತು ಬೌದ್ಧ ಧಾರ್ಮಿಕ ಸಾಹಿತ್ಯದ ಅಭ್ಯಾಸದಲ್ಲಿ ತೊಡಗಿದ್ದು ಭಾರತ ವನ್ನು ಅವರು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿತ್ತು ಎಂಬುದನ್ನು ‘ಡಿಸ್ಕವರಿ ಆಫ್ ಇಂಡಿಯಾ’ ಸೂಚಿಸುತ್ತದೆ. ಈ ಸಾಂಸ್ಕೃತಿಕ ಸೂಕ್ಷ್ಮತೆಯು ಸ್ವತಃ ತಾನು ಹಿಂದಿಯ ಪರವಾಗಿಯೇ ಇದ್ದರೂ ಹಿಂದಿಯನ್ನು ಒಲ್ಲದವರ ಮೇಲೆ ಹೇರದೆ ಇರುವ ಎಚ್ಚರವನ್ನು ನೆಹರೂ ಅವರಲ್ಲಿ ತಂದಿತ್ತು.

ನೆಹರೂ ಸಮಾಜವಾದಿ ಆಗಿದ್ದರೂ ಅವರು ಜಾರಿಗೆ ತಂದ ಆರ್ಥಿಕ ನೀತಿಯು ಕೆನೇಶಿಯನ್ ಆರ್ಥಿಕತೆಯ ಮಾದರಿಯನ್ನು ಹೋಲುತ್ತದೆ. ಇದು, ಸರ್ಕಾರವೇ ನಿರ್ವಹಿಸಬೇಕಾದ ಆರ್ಥಿಕ ಸಂಗತಿಗಳನ್ನು ಸರ್ಕಾರವೇ ನಿರ್ವಹಿಸುವುದಕ್ಕೂ, ಖಾಸಗಿ ಘಟಕಗಳು ನಿರ್ವಹಿಸಿ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸ ಬಹುದಾದ ಕ್ಷೇತ್ರಗಳನ್ನು ಖಾಸಗಿಯವರು ನಿರ್ವಹಿ ಸುವುದಕ್ಕೂ ಸೂಕ್ತವಾದ ವಿಶಿಷ್ಟ ಆರ್ಥಿಕತೆಯ ಮಾದರಿಯೊಂದನ್ನು ನಿರ್ವಹಿಸಿಕೊಟ್ಟಿತ್ತು.

ಬ್ರಿಟಿಷರ ವಿರುದ್ಧ ನಡೆದ ಹಲವು ರೈತ ಬಂಡಾಯ ಗಳು, ಕಾಶ್ಮೀರದಲ್ಲಿ ರಾಜ ಹರಿಸಿಂಗ್ ವಿರುದ್ಧ ನಡೆದ ರೈತ ಬಂಡಾಯ ಈ ಎಲ್ಲಕ್ಕೂ ಕಾರಣ ರೈತರ ಮೇಲೆ ಹಾಕುತ್ತಿದ್ದ ತೆರಿಗೆ. ಬ್ರಿಟಿಷರು ಸುಮಾರು ಶೇ 60ರಷ್ಟು ತೆರಿಗೆಯನ್ನು ಹಾಕಿದ್ದರು. 10 ಕ್ವಿಂಟಲ್ ಭತ್ತ ಬೆಳೆದ ರೈತ 6 ಕ್ವಿಂಟಲ್ ಅನ್ನು ಸರ್ಕಾರಕ್ಕೆ ಕೊಟ್ಟರೆ ಉಳಿಯುವುದರಲ್ಲಿ ಕುಟುಂಬ ನಿರ್ವಹಣೆ ಮತ್ತು ಬೇಸಾಯದ ಖರ್ಚನ್ನು ನಿರ್ವಹಿಸಬೇಕಿತ್ತು. ಈ ಅತಿಯಾದ ತೆರಿಗೆ ಗಳನ್ನು ತೆರವುಗೊಳಿಸಲು ನೆಹರೂ ಪ್ರಾರಂಭಿಸಿದ್ದರು.‌ ಮನಮೋಹನ್ ಸಿಂಗ್ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಅದು ಪೂರ್ಣಗೊಂಡು ಕೃಷಿರಂಗವು ತೆರಿಗೆಯಿಂದ ನಿರಾಳ ಭಾವ ಪಡೆಯಿತು.

ನೆಹರೂ ನೇತೃತ್ವದ ಸರ್ಕಾರದ ನಿರ್ಮಾಣಗಳಾದ ಬೃಹತ್ ನೀರಾವರಿ ಯೋಜನೆಗಳು, ಕೃಷಿಯ ಆಧುನೀ ಕರಣ ಎಲ್ಲವೂ ಭಾರತದ ಆಹಾರದ ಸ್ವಾವಲಂಬನೆಗೆ ಕಾರಣ.‌ ಬ್ರಿಟಿಷರು ಪೂರ್ತಿ ಲೂಟಿ ಹೊಡೆದು ಬಿಟ್ಟು ಹೋದ ಹತಾಶ ದೇಶದ ಪ್ರಧಾನಿಯಾಗಿ ಅದರ ಮರು ಸಂಕಲ್ಪದ ಕನಸನ್ನು ಜನರಲ್ಲಿ ಬಿತ್ತಿದ ನೆಹರೂ ಪ್ರಾತಃಸ್ಮರಣೀಯರಾಗಿದ್ದಾರೆ. ನೆಹರೂ ಅವರಿಗೆ ಮನುಷ್ಯರು ಮನುಷ್ಯರಷ್ಟೇ ಆಗಿದ್ದರು. ಹಿಂದೂ, ಮುಸ್ಲಿಮರಾಗಿರಲಿಲ್ಲ. ಇದರರ್ಥ ಮುಸ್ಲಿಂ ಲೀಗ್‌ನ ರಾಜಕೀಯವನ್ನು ಅವರು ಎದುರಿಸಲಿಲ್ಲ ಎಂದಲ್ಲ.

ಸೈನಿಕ ಬಲದಲ್ಲಿ ದುರ್ಬಲವಾಗಿದ್ದ ಭಾರತವನ್ನು ಸಶಕ್ತಗೊಳಿಸಲು 1949ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯನ್ನು ಸ್ಥಾಪಿಸಲಾಯಿತು. ಹೋಮಿ ಜಹಾಂಗೀರ್ ಭಾಭಾ ಅವರೊಂದಿಗಿದ್ದ ವೈಯಕ್ತಿಕ ಸ್ನೇಹವನ್ನು ಬಳಸಿಕೊಂಡು 1948ರಲ್ಲಿ ಪರಮಾಣು ಆಯೋಗವನ್ನು ನೆಹರೂ ಸ್ಥಾಪಿಸಿದರು. 1962ರಲ್ಲಿ ಸ್ಥಾಪಿಸಲಾದ ಇಸ್ರೊದ ಪ್ರಾರಂಭದ ದಿನಗಳಲ್ಲಿ ಭಾರತದ ಕೃತಕ ಉಪಗ್ರಹಗಳನ್ನು ಫ್ರಾನ್ಸ್, ರಷ್ಯಾಕ್ಕೆ ಕೊಂಡೊಯ್ದು ಉಡ್ಡಯನ ಮಾಡಬೇಕಿತ್ತು. ಇವತ್ತು ಇಸ್ರೊವೇ ಅನ್ಯ ದೇಶಗಳ ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡುತ್ತಿದೆ. ಈ ಅಗಾಧ ಬೆಳ ವಣಿಗೆಯು ನೆಹರೂ ದೂರದೃಷ್ಟಿಯ ಫಲವೇ ಆಗಿದೆ.

ಇಂದು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಎಲ್ಲರೂ ಒಪ್ಪುವ ಕಾರ್ಮಿಕ ಹಿತರಕ್ಷಣೆ, ಜಾತೀ ಯತೆಯ ನಿರ್ಮೂಲನೆ, ರೈತ ಕಲ್ಯಾಣ, ಅಸ್ಪೃಶ್ಯತೆ ನಿಷೇಧದಂತಹ ವಿಚಾರಗಳ ನಡಾವಳಿಗಳನ್ನು 1931ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಿ ಅನುಮತಿಯನ್ನು ಪಡೆದಿದ್ದವರು ನೆಹರೂ. ಈಗ ಶಾಲಾ ಕಾಲೇಜುಗಳಲ್ಲಿ ವಾಚಿಸಲಾಗುವ ಸಂವಿಧಾನದ ಪ್ರಸ್ತಾವನಾ ಬರಹವು ಸಂವಿಧಾನ ಸಭೆಯಲ್ಲಿ ನೆಹರೂ ಅವರು ಮಂಡಿಸಿದ ‘ಆಬ್ಜೆಕ್ಟಿವ್ ರೆಸಲ್ಯೂಷನ್’ನ ಭಾಗವಾಗಿತ್ತು. ದುರ್ಬಲ ವರ್ಗಗಳಿಗೆ ಮೀಸಲಾತಿ ಸೌಲಭ್ಯವನ್ನು ನೆಹರೂ ನೇತೃತ್ವದ ಸರ್ಕಾರವೇ ಜಾರಿಗೆ ತಂದಿತ್ತು.‌ ಆದರೆ ಪ್ರತಿಭೆಯ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇತ್ತು ಎಂದರೆ 1961ರಲ್ಲಿ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, ಮೀಸಲಾತಿಯು ಪ್ರತಿಭಾವಂತರನ್ನು ದ್ವಿತೀಯ ಅಥವಾ ತೃತೀಯ ದರ್ಜೆಯವರಾಗದಂತೆ ನೋಡಿಕೊಳ್ಳಬೇಕು ಎಂದಿದ್ದರು.

ಅಧಿಕಾರಸ್ಥಾನದಲ್ಲಿ ಇದ್ದವರ ಕೆಲವು ನಿರ್ಧಾರ ಗಳು ಆ ಕ್ಷಣಕ್ಕೆ ಸೂಕ್ತ ಎನಿಸಿದರೂ, ನಂತರದ ದಿನಗಳಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವುದು ಸಹಜ.‌ ಪಾಕ್ ಆಕ್ರಮಿತ ಕಾಶ್ಮೀರವು ನೆಹರೂ ಅವರಿಂದಲೇ ಸೃಷ್ಟಿಯಾದ ಸಮಸ್ಯೆಗಳಲ್ಲಿ ಒಂದು. ಇಂತಹ ತಪ್ಪುಗಳ ಬಗ್ಗೆ ನೆಹರೂ ಅವರು ಜಯಪ್ರಕಾಶ್ ನಾರಾಯಣ ಅವರೊಂದಿಗೆ, ‘ನನ್ನಿಂದ ಆಗಿರಬಹುದಾದ ತಪ್ಪುಗಳಿಗೆ ಕಾರಣ ನನಗೂ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇಲ್ಲದಿರುವುದೇ ಆಗಿದೆ’ ಎಂದಿರುವುದು ದಾಖಲಾಗಿದೆ. ಆದರೆ ಅಂತಹ ತಪ್ಪುಗಳ ಆಚೆಗೂ ವಿಸ್ತರಿಸಿಕೊಳ್ಳುವ ನೆಹರೂ ಅವರ ವ್ಯಕ್ತಿತ್ವ ಮಹತ್ವದ್ದು.

ನೆಹರೂ ಅವರ ಬಗ್ಗೆ ಅವರ ಒಡನಾಡಿ ರಾಮಧಾರಿ ಸಿಂಹ ಅವರು, ‘ಭಾರತೀಯರು ಧಾರ್ಮಿಕ‌ ನಂಬಿಕೆಗಳನ್ನು ನೆಚ್ಚಿಕೊಳ್ಳದ ಒಬ್ಬ ವ್ಯಕ್ತಿ ಯನ್ನು ವ್ಯಾಪಕವಾಗಿ ಆದರಿಸಿದ್ದರೆ ಅದು ನೆಹರೂ ಅವರೊಬ್ಬರೇ’ ಎಂದು ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು