ಭಾನುವಾರ, ಮೇ 9, 2021
28 °C
ಕಾಂಡೋಂ ಹಂಚಿಕೆಯಿಂದ ಕೋವಿಡ್‌ ಹರಡಲು ಪರೋಕ್ಷ ನೆರವು?

ಕೋವಿಡ್ ಮತ್ತು ಏಡ್ಸ್ ನಿಯಂತ್ರಣ ಯೋಜನೆ

ರೂಪ ಹಾಸನ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡವು ಕಳೆದ ಮೇ ತಿಂಗಳಲ್ಲಿ ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ವರದಿಯಲ್ಲಿ, ‘ಭಾರತದ ಕೆಂಪುದೀಪ ಪ್ರದೇಶಗಳನ್ನು ಮುಚ್ಚಿದರೆ, ಹೊಸ ಕೋವಿಡ್ ಪ್ರಕರಣಗಳ ಪೈಕಿ ಶೇ 72ರಷ್ಟನ್ನು ತಡೆಗಟ್ಟಬಹುದು. ಸಾರ್ವಜನಿಕ ಲೈಂಗಿಕ ಚಟುವಟಿಕೆ ತಾಣಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದರೆ ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣವು ಶೇ 63ರಷ್ಟು ತಗ್ಗಲಿದೆ’ ಎಂದು ಒತ್ತಿ ಹೇಳಲಾಗಿತ್ತು.

‘ಕೋವಿಡ್‌ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದನ್ನು ತಡೆಯಲು ಕೆಂಪುದೀಪ ಪ್ರದೇಶಕ್ಕೆ ನಿರ್ಬಂಧ ಅನಿವಾರ್ಯ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ದಾಖಲೆಗಳ ಪ್ರಕಾರ, ದೇಶದಲ್ಲಿ ನೋಂದಣಿಯಾದ 6,37,500 ಲೈಂಗಿಕ ಕಾರ್ಯಕರ್ತೆಯರಿದ್ದು, ಪ್ರತಿದಿನ ಐದು ಲಕ್ಷ ಗ್ರಾಹಕರು ‘ಕೆಂಪುದೀಪ’ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿಯ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡಿದರೆ ಸೋಂಕು ವೇಗವಾಗಿ ಹರಡುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾದ್ದರಿಂದ ಸೋಂಕು ಕ್ಷಿಪ್ರವಾಗಿ ಹರಡುವ ಅಪಾಯವಿದೆ’ ಎಂದು ಸಂಶೋಧಕರು
ಎಚ್ಚರಿಸಿದ್ದರು.

ಈ ಎಚ್ಚರಿಕೆಯನ್ನು ಪರಿಗಣಿಸಿ ಆಸ್ಟ್ರೇಲಿಯಾ, ಜರ್ಮನಿ, ನೆದರ್ಲೆಂಡ್ಸ್‌ನಲ್ಲಿ ವೇಶ್ಯಾಗೃಹಗಳನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಿದ್ದನ್ನೂ ತನ್ಮೂಲಕ ಅಲ್ಲಿ ಸೋಂಕು ಹರಡುವ ಪ್ರಮಾಣ ಗಣನೀಯವಾಗಿ ತಗ್ಗಿದ್ದನ್ನೂ ಜಪಾನ್‍ನಲ್ಲಿ ಇಂತಹ ನಿಯಂತ್ರಣ ವಿಧಿಸದ ಕಾರಣ ಅಲ್ಲಿ ಸೋಂಕಿನ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಿದ್ದನ್ನೂ ವರದಿಯು ಉಲ್ಲೇಖಿಸಿತ್ತು. ಭಾರತ ಸರ್ಕಾರಕ್ಕೆ ತುರ್ತು ಜಾಗೃತಿಯ ಸಂದೇಶ ನೀಡಿತ್ತು. ಆದರೆ ಇಲ್ಲಿ ಕಠಿಣ ಕ್ರಮ ಇರಲಿ, ಈ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು ಬಿಟ್ಟರೆ ಬೇರೆಡೆ ಚರ್ಚೆಯೂ ಆಗಲಿಲ್ಲ!

ಭಾರತದಲ್ಲಿ ‘ಕೆಂಪುದೀಪ’ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಲ್ಲಿಯೂ ವೇಶ್ಯಾವಾಟಿಕೆಯ ಬೇರು ವ್ಯಾಪಿಸಿದೆ. ಏಡ್ಸ್ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುವ ಬೃಹತ್ ಸ್ವಯಂಸೇವಾ ಸಂಸ್ಥೆಯಾದ ನ್ಯಾಕೋ, ನಮ್ಮ ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರತೀ ರಾಜ್ಯದಲ್ಲಿಯೂ ಮುಖ್ಯಮಂತ್ರಿಯೇ ರಾಜ್ಯ ಶಾಖೆಗಳ ಅಧ್ಯಕ್ಷರಾಗಿರುತ್ತಾರೆ. ಆರೋಗ್ಯ ಸಚಿವರೇ ಮುಖ್ಯಕಾರ್ಯದರ್ಶಿಯಾಗಿರುತ್ತಾರೆ. ಸರ್ಕಾರ ಮತ್ತು ವಿಶ್ವಮಟ್ಟದ ಸ್ವಯಂಸೇವಾ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿಗಳ ಅನುದಾನವು ಕಾಂಡೋಂ ಹಂಚಿಕೆಯ ಯೋಜನೆಗಾಗಿ ಹರಿದುಬರುತ್ತದೆ. ಒಂದರ್ಥದಲ್ಲಿ, ಸರ್ಕಾರದ ಬೆಂಬಲದಿಂದಲೇ ವೇಶ್ಯಾವಾಟಿಕೆ ಪರೋಕ್ಷವಾಗಿ ಕಾನೂನುಬದ್ಧವೇ ಆಗಿಹೋಗಿದೆ!

ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಲಕ್ಷಾಂತರ ತಳಹಂತದ ಲೈಂಗಿಕ ಕಾರ್ಯಕರ್ತೆಯರು, ಸಲಿಂಗಕಾಮಿಗಳು, ಲಿಂಗತ್ವ ಅಲ್ಪಸಂಖ್ಯಾತರನ್ನು ಕಾಂಡೋಮ್ ವಿತರಣೆಯ ಜಾಲದಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಕಾಂಡೋಂ ಹಂಚಿಕೆಗೆ ಪ್ರೋತ್ಸಾಹಧನದ ಜೊತೆಗೆ ಗುರಿ ನೀಡಿ, ಇನ್ನಷ್ಟು ಪ್ರೋತ್ಸಾಹಧನದ ಆಮಿಷವನ್ನು ಒಡ್ಡಲಾಗುತ್ತದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ವೇಶ್ಯಾವಾಟಿಕೆ ವ್ಯಾಪಕವಾಗುತ್ತಿದೆ. ಇದು ನೋಂದಣಿಯಾದವರ ಲೆಕ್ಕಾಚಾರವಷ್ಟೇ. ಸೆಕ್ಸ್ ಟೂರಿಸಂ, ಸೆಕ್ಸೋದ್ಯಮ, ಹಲ ಬಗೆಯ ಮಾಫಿಯಾಗಳು... ಹೀಗೆ ಇಂತಹ ಜಾಲಕ್ಕೆ ಬಿದ್ದವರ ಲೆಕ್ಕ ಅಂದಾಜಿಸಲೂ ಸಾಧ್ಯವಿಲ್ಲ. ಇದು ಗೋಪ್ಯ ಚಟುವಟಿಕೆಯಾದ್ದರಿಂದ ಕೊರೊನಾ ಸೋಂಕಿನ ಮೂಲವನ್ನು ಪತ್ತೆ ಹಚ್ಚುವುದು ಅಸಾಧ್ಯ. ಹೀಗಾಗಿ ಸೋಂಕಿನ ವ್ಯಾಪಕತೆ ವಿಪರೀತವಾಗಿ ಹೆಚ್ಚುತ್ತದೆ ಎಂಬುದು ತಜ್ಞರ ಆತಂಕ.

ಹೀಗೆಂದೇ, ರಾಜ್ಯದ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರ ಗಮನಕ್ಕೆ ಇದನ್ನು ತಂದಾಗ, ಅವರು ವೇಶ್ಯಾವಾಟಿಕೆಯನ್ನು ನಿರ್ಬಂಧಿಸಲು ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಮಂಡಳಿ ಹಾಗೂ ಗೃಹ ಇಲಾಖೆಗೆ ಕಳೆದ ಮೇ ತಿಂಗಳಲ್ಲೇ ಲಿಖಿತ ಆದೇಶ ನೀಡಿದ್ದರು. ಇದರಿಂದ ಸಂಕಷ್ಟಕ್ಕೆ ಒಳಗಾಗುವ ಕಾಂಡೋಂ ವಿತರಣೆ ಜಾಲದಲ್ಲಿರುವ ಸಂತ್ರಸ್ತರಿಗೆ ತಕ್ಷಣಕ್ಕೆ ಆಹಾರಧಾನ್ಯ, ಸಹಾಯಧನ ವಿತರಣೆ ಮತ್ತು ಅವರ ಶಾಶ್ವತ ಪುನರ್ವಸತಿಗೆ ವಿಸ್ತೃತ ವರದಿಯೊಂದಿಗೆ ತಕ್ಷಣವೇ ಪ್ರಸ್ತಾವವನ್ನು ಸಲ್ಲಿಸಲು ಸೂಚಿಸಿದ್ದರು. ಈ ಕಾಂಡೋಂ ವಿತರಣೆ ಜಾಲದಲ್ಲಿರುವ ಎಲ್ಲ ಸಮುದಾಯಗಳಿಗೂ ಕೋವಿಡ್ ಸೋಂಕಿನ ಜಾಗೃತಿ ನೀಡಬೇಕೆನ್ನುವುದು ಆದ್ಯತೆಯಾಗಿತ್ತು. ಆದರೆ ಯಾವುದೂ ಕಾರ್ಯಗತವಾಗಿಲ್ಲ. ಸರ್ಕಾರದ ನೆರವಿನೊಂದಿಗೇ ಏಡ್ಸ್ ನಿಯಂತ್ರಣ ಸಂಸ್ಥೆ ‘ಸುರಕ್ಷಿತ ಲೈಂಗಿಕತೆ’ ಹೆಸರಿನಲ್ಲಿ ನಿರಾತಂಕವಾಗಿ ಪ್ರತಿನಿತ್ಯ ಕಾಂಡೋಂ ವಿತರಣೆ ಮಾಡುತ್ತಲೇ ಇದೆ. ತನ್ಮೂಲಕ ವೇಶ್ಯಾವಾಟಿಕೆಗೆ ಪರೋಕ್ಷ ಪ್ರಚೋದನೆ ನೀಡುತ್ತಲೇ ಇದೆ! ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ, ವಿಪತ್ತು ನಿರ್ವಹಣಾ ತಡೆ ಕಾಯ್ದೆಗಳೂ ಪಾಪ, ಕೇವಲ ಆದೇಶಗಳಾಗಿ ಸತ್ತು ಬಿದ್ದಿವೆ.

ಕೋವಿಡ್ ಸೋಂಕು ಮಿತಿಮೀರಿರುವ ಈ ಸಮಯದಲ್ಲಿ, ಪರಸ್ಪರ ವೈರುಧ್ಯದ- ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಆದ್ಯತೆ ನೀಡಬೇಕೇ ಅಥವಾ ಏಡ್ಸ್ ನಿಯಂತ್ರಣಕ್ಕಾಗಿ ಕಾಂಡೋಂ ವಿತರಣೆಗೆ ಆದ್ಯತೆ ನೀಡಬೇಕೇ ಎಂಬುದನ್ನು ಸರ್ಕಾರ ಮತ್ತು ಆರೋಗ್ಯ ಇಲಾಖೆ ತಕ್ಷಣಕ್ಕೆ ಜವಾಬ್ದಾರಿಯುತವಾಗಿ ನಿರ್ಧರಿಸಿ, ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು