ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿವಿಧೆಡೆ ಫಲಕ: ಫಲ ನಾಸ್ತಿ!

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಎಷ್ಟೋ ಕಡೆ ಫಲಕಗಳಿರುತ್ತವೆ. ಆದರೆ ಫಲ ಮಾತ್ರ ನಾಸ್ತಿ ಎಂಬಂತೆ ಆಗಿರುತ್ತದೆ. ಪಟ್ಟಣಗಳಲ್ಲಿ ‘ಇಲ್ಲಿ ಕಸ ಹಾಕಬೇಡಿ’ ಎಂಬ ಪಂಚಾಯಿತಿಯ ಫಲಕದ ಕೆಳಗೇ ಪಾಲಿಥಿನ್‌ ಚೀಲಗಳಲ್ಲಿ ತಂದು ಹಾಕಿದ ರಾಶಿ ರಾಶಿ ಕಸವೇ ತುಂಬಿರುತ್ತದೆ. ಬಸ್‌ ನಿಲ್ದಾಣದ ಹಿಂಭಾಗದಲ್ಲಿ ‘ಇಲ್ಲಿ ಮೂತ್ರ ಮಾಡಬಾರದು’ ಎಂಬ ಫಲಕದ ಸನಿಹ ಮೂತ್ರದ ಕೊಚ್ಚೆ ತುಂಬಿರುತ್ತದೆ. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಫಲಕ ತೂಗಾಡುತ್ತಿರುವ ಬ್ಯಾಂಕಿಗೆ ಹೋದರೆ, ಅಲ್ಲಿರುವ ನೌಕರನಿಗೆ ಹಿಂದಿ, ತಮಿಳು ಬಿಟ್ಟರೆ ಕನ್ನಡ ಸ್ವಲ್ಪವೂ ಬಾರದಿರುವ ಸಾಧ್ಯತೆಯೇ ಹೆಚ್ಚು. ಹಾಗಿದ್ದರೆ ಈ ಫಲಕಗಳು ಯಾರಿಗಾಗಿ? ಅನುಷ್ಠಾನಕ್ಕೆ ತರಲು ಕಷ್ಟವಾಗುವ ಫಲಕಗಳಿಂದ ಲಾಭವಾದರೂ ಏನಿದೆ?

ಸರ್ಕಾರಿ ಸಾರಿಗೆ ಬಸ್‌ಗಳಲ್ಲಂತೂ ಫಲಕಗಳು ನಿರರ್ಥಕ ಎಂಬ ಭಾವವನ್ನೇ ಸೃಷ್ಟಿಸಿವೆ. ‘ಅಂಗವಿಕಲರು’, ‘ಹಿರಿಯ ನಾಗರಿಕರು’, ‘ಸ್ವಾತಂತ್ರ್ಯ ಹೋರಾಟಗಾರರು’ ಎಂದೆಲ್ಲ ಮೀಸಲಾದ ಆಸನಗಳನ್ನು ಅವುಗಳ ಮೇಲಿರುವ ಫಲಕಗಳು ಸೂಚಿಸುತ್ತವೆ. ಹಿರಿಯ ನಾಗರಿಕರಿಗೆ ಟಿಕೆಟ್‌ ನೀಡಿದ ಕೂಡಲೇ ಅವರಿಗೆ ಮೀಸಲಿರುವ ಆಸನವನ್ನು ತೆರವು ಮಾಡಿಸಿಕೊಡಬೇಕಾದದ್ದು ನಿರ್ವಾಹಕರ ಕರ್ತವ್ಯ. ಕೊಡಲೇಬೇಕು ಎಂಬ ನಿಯಮವೂ ಇದೆ. ಆದರೆ ಅಸಹಾಯಕರು, ವಯಸ್ಸಾದವರು ಕಂಬಿ ಹಿಡಿದುಕೊಂಡು ಜೋತಾಡುತ್ತಿದ್ದರೂ ಅವರಿಗೆ ಮೀಸಲಾದ ಆಸನಗಳನ್ನು ಕೊಡಿಸಲು ಮುಂದಾಗುವ ನಿರ್ವಾಹಕರ ಸಂಖ್ಯೆ ಎಷ್ಟಿದೆ? ಹಾಗೆಯೇ ಸರ್ಕಾರಿ ಬಸ್‌ ಪ್ರಯಾಣಿಕರು ತಮ್ಮ ಮೊಬೈಲ್‌ ಶಬ್ದವನ್ನು ಇತರರಿಗೆ ತೊಂದರೆಯಾಗುವಂತೆ ಜೋರಾಗಿ ಬಳಸಬಾರದು ಎಂಬ ಫಲಕವೂ ಕೆಲವೆಡೆ ಇರುತ್ತದೆ. ಆದರೆ ಇದು ಎಷ್ಟು ಕಡೆ ಪಾಲನೆಯಾಗುತ್ತಿದೆ?

ಅನೇಕ ಸರ್ಕಾರಿ ಕಚೇರಿಗಳಲ್ಲಿ ಫಲಕವೊಂದು ಗಮನ ಸೆಳೆಯುತ್ತದೆ. ‘ಕೆಲಸ ಮಾಡಿಕೊಡಲು ನೌಕರರು ಲಂಚ ಕೇಳಿದರೆ ಇಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿ’ ಎಂದಿರುತ್ತದೆ. ಅದೇ ಪ್ರಕಾರ, ಅವರು ಲಂಚವನ್ನೇನೂ ಕೇಳುವುದಿಲ್ಲ. ಆದರೆ ಹತ್ತಾರು ಬಾರಿ ಆ ಕಚೇರಿಗೆ ಹೋಗಿಬಂದರೂ ಕೆಲಸ ಮಾತ್ರ ಆಗುವುದಿಲ್ಲ. ಏನಾದರೂ ಕುಂಟು ನೆವ ಹೇಳಿ ನೌಕರರು ಸಾಗಹಾಕುತ್ತಾರೆ. ತಾಲ್ಲೂಕು ಕಚೇರಿ, ಸಾರಿಗೆ ಅಧಿಕಾರಿಗಳ ಕಚೇರಿಗಳ ಸುತ್ತಲೂ ಇರುವ ದಲ್ಲಾಳಿಗಳ ಮೂಲಕ ಹೋದರೆ ತಕ್ಷಣ ಕೆಲಸವಾಗುತ್ತದೆ. ಕಚೇರಿಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದ ಮಾತ್ರಕ್ಕೆ ಲಂಚದ ಪಿಡುಗು ಕೊನೆಗೊಂಡಿದೆ ಎಂದು ಯಾರೂ ಭಾವಿಸುವಂತಿಲ್ಲ.

ಪೊಲೀಸ್‌ ಠಾಣೆಗಳಲ್ಲೂ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಪೊಲೀಸ್‌ ಠಾಣೆಯಿಂದ ನಿರಾಕ್ಷೇಪಣಾ ಪತ್ರ ಬೇಕಾಗುತ್ತದೆ. ಈ ಸಂಬಂಧದ ತನಿಖೆ ನಡೆದು ಸಹಿ ತೆಗೆದುಕೊಂಡ ಬಳಿಕ, ಆ ದಾಖಲೆಗಳನ್ನು ತಯಾರಿಸಿದ ವ್ಯಕ್ತಿ ಅರ್ಜಿದಾರರನ್ನು ಬೀಳ್ಕೊಡಲು ಹೊರಗೆ ಬರುತ್ತಾನೆ. ಸಿ.ಸಿ. ಟಿ.ವಿ. ಕ್ಯಾಮೆರಾ ದೃಷ್ಟಿಯಿಂದ ದೂರವಾದ ಕೂಡಲೇ ಮಾಮೂಲು ತೆಗೆದುಕೊಳ್ಳುತ್ತಾನೆ.

ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ನೀಡಬೇಕೆಂಬ ಫಲಕಗಳಿವೆ. ಆದರೆ ಹಣ ಕೊಡುವ, ತೆಗೆದುಕೊಳ್ಳುವಂತಹ ವ್ಯವಹಾರ ಮಾಡುವಾಗ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲಲಾಗದೆ ಕಷ್ಟಪಡುತ್ತಿದ್ದರೂ ಅವರ ಕೆಲಸವನ್ನು ಮೊದಲು ಮಾಡಿಕೊಡುವ ಬಗೆಗೆ ಗಮನಹರಿಸುವ ನೌಕರವರ್ಗ ಅಪರೂಪವಾಗಿದೆ.

ಫಲಕಗಳ ಆಶಯ ನೆರವೇರದೇ ಹೋಗಲು ಸರ್ಕಾರದ ತಟಸ್ಥಭಾವ ಒಂದು ಕಾರಣವಾದರೆ, ನೌಕರ ವರ್ಗದವರಿಗೆ ಇರುವ ನಿರ್ಲಕ್ಷ್ಯ ಭಾವ ಇನ್ನೊಂದು ಕಾರಣವಾಗುತ್ತದೆ. ತನ್ನ ಹಕ್ಕು ಏನೆಂಬುದನ್ನು ತಿಳಿದುಕೊಂಡ ವಿದ್ಯಾವಂತ ವರ್ಗ ಅದೆಷ್ಟೋ ಸಲ ಪ್ರತಿಭಟಿಸದೇ ಹೋಗುತ್ತದೆ. ವಿಧಾನಸೌಧದ ಮುಂಭಾಗದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದರು. ಕೆತ್ತಿಸಿದ ಮಾತ್ರಕ್ಕೆ ಅದರ ಆಶಯ ಫಲಿಸಿದೆಯೇ? ಸೌಧದ ಒಳಗೆ ಹೋಗುವ ಜನಪ್ರತಿನಿಧಿಗಳೇ ಅದನ್ನು ಪಾಲಿಸುತ್ತಿಲ್ಲ. ಅವರೇ ಪಾಲಿಸದಿದ್ದಾಗ ನೌಕರಶಾಹಿಯನ್ನು ಅದಕ್ಕೆ ಬದ್ಧರಾಗಿರುವಂತೆ ಮಾಡಲು ಸಾಧ್ಯವೇ? ಆದೇಶಗಳು ಮತ್ತು ಫಲಕಗಳಲ್ಲಿನ ಆಶಯಗಳು ಕಾರ್ಯರೂಪಕ್ಕೆ ಬರಲೇಬೇಕು ಎನ್ನುವುದಾದರೆ ಅದನ್ನು ಮಾಡಲು ಮಾರ್ಗಗಳು ಇವೆ. ಆದರೆ ಅಂತಹ ಇಚ್ಛಾಶಕ್ತಿ ಆಳುವವರಲ್ಲಿ ಕಾಣಸಿಗುವುದಿಲ್ಲ ಎಂಬುದು ಬಹುದೊಡ್ಡ ಲೋಪ. 

ಬದಲಾದ ಕಾಲಘಟ್ಟದಲ್ಲಿ ವಿಜ್ಞಾನ– ತಂತ್ರಜ್ಞಾನದ ಫಲವಾಗಿ ಕಚೇರಿಗಳಲ್ಲಿ ಸುಗಮವಾದ ಕಾರ್ಯವ್ಯವಸ್ಥೆ ಜಾರಿಗೆ ಬರಬೇಕಿತ್ತು. ಆದರೆ ಬಂದಿಲ್ಲ. ಡಿಜಿಟಲ್‌ ಸೌಲಭ್ಯ ಬಂದಿದ್ದರೂ ಸರ್ವರ್‌ ಸರಿಯಿಲ್ಲದ ನಿತ್ಯ ಸಮಸ್ಯೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪ್ರಜಾಪ್ರಭುತ್ವದ ಆಶಯಗಳು, ನೆಲದ ಕಾನೂನನ್ನು ಜಾರಿಗೆ ತರಲು ನಿಯೋಜಿತರಾದ ನೌಕರವರ್ಗ ದಕ್ಷತೆಯಿಂದ ಕಾರ್ಯನಿರ್ವಹಿಸುವಂತಾದರೆ ನಮ್ಮಲ್ಲಿನ ಅನೇಕ ಎಡರು–ತೊಡರುಗಳು ನಿವಾರಣೆ ಆಗುತ್ತವೆ. ಅವರ ಇಚ್ಛಾಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT