ಸೋಮವಾರ, ಮಾರ್ಚ್ 30, 2020
19 °C

ದಿಕ್ಕೆಟ್ಟು ಓಡುತ್ತಿದೆ ‘ಕರಿಕೋಣ’

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

Prajavani

ಬಹಳ ಸೊಗಸಾದ (?) ತರ್ಕದ ಬಲೆಯೊಂದು ನಮ್ಮೆದುರು ಹರಡಿಕೊಂಡಿದೆ. ಅದು, ಅಂತರರಾಷ್ಟ್ರೀಯ ಖ್ಯಾತಿಯ ಓಟಗಾರ ಉಸೇನ್ ಬೋಲ್ಟ್ ಮಿಗಿಲೋ ಅಥವಾ ಎಲೆಮರೆ ಕಾಯಿಯಂತೆ ಇರುವ ಕಂಬಳದ ಶ್ರೀನಿವಾಸ ಗೌಡರು ಮಿಗಿಲೋ ಎಂಬುದು. ಗೌಡರು ಬೋಲ್ಟ್‌ಗಿಂತಲೂ ಶ್ರೇಷ್ಠ ಎಂಬುದು ಕೆಲವರ ವಾದ. ಇದೇ ವೇಳೆ, ಬೋಲ್ಟ್ ಸಾಧನೆಯನ್ನು ಅವ ಮಾನಿಸಲಾಗುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಈ ಎರಡರ ಹೋಲಿಕೆ ಸರಿಯಲ್ಲ ಎಂಬುದು ಇನ್ನೊಂದು ವಾದ. ಇದೆಲ್ಲದರೊಟ್ಟಿಗೆ, ಗೌಡರ ಜೊತೆಗೆ ಓಡಿದ ‘ತಾಟೆ’ ಹಾಗೂ ‘ಮೋಡ’ ಎಂಬ ಕೋಣಗಳಿಗೆ ಸಲ್ಲಬೇಕಾದ ಮನ್ನಣೆ ಸಲ್ಲಲಿಲ್ಲ ಎನ್ನುತ್ತದೆ ಮತ್ತೊಂದು ವಾದ.

ಗೌಡರ ಸಾಧನೆ ಬೋಲ್ಟ್ ಅವರಿಗಿಂತಲೂ ಮಿಗಿಲು ಎಂಬ ವಾದದಲ್ಲಿ ಭಾವನಾತ್ಮಕ ಅಂಶಗಳು ಸೇರಿಕೊಂಡಿವೆ. ಬೋಲ್ಟ್ ಮತ್ತು ಗೌಡರಿಗೆ ದೊರೆತ ತರಬೇತಿ, ಗೌಡರು ಒಬ್ಬ ಕಾರ್ಮಿಕ, ಭಾರತೀಯ ಎಂಬ ಭಾವನೆ, ಅಲ್ಲದೆ ಕಂಬಳದ ಕೆಸರು, ಕೋಣ ಗಳು ಎಸೆಯುವ ಸವಾಲು ಇತ್ಯಾದಿ ಸಂಗತಿಗಳು ಮುನ್ನೆಲೆಗೆ ಬಂದು, ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿವೆ. ಇದು ಬೋಲ್ಟ್ ಮತ್ತು ಗೌಡರ ನಡುವೆ ಯಾರು ಶ್ರೇಷ್ಠರು ಎಂಬುದನ್ನು ನಿಕಷಕ್ಕೆ ಒಡ್ಡಲೇಬೇಕು ಎಂಬ ಯತ್ನಗಳಿಗೂ ಇಂಬು ನೀಡಿದೆ.

‘ಗೌಡರಿಗೆ ಕೋಚುಗಳ ತರಬೇತಿ ಅಗತ್ಯ ಇದೆ’, ‘ಗೌಡರು ಮತ್ತು ಬೋಲ್ಟ್ ನಡುವೆ ಸ್ಪರ್ಧೆ ಏರ್ಪಡಿಸಬೇಕು’ ‘ಬೋಲ್ಟ್ ಅವರನ್ನು ಕಂಬಳದ ಕೆಸರಿನಲ್ಲಿಯೂ ಗೌಡರನ್ನು ಟ್ರ್ಯಾಕಿನ ಮೇಲೂ ಓಡಿಸಬೇಕು’ ಎಂಬ ತಲೆಮೊದಲಿಲ್ಲದ ಮಾತುಗಳು ತೂರಿಬಂದಿವೆ. ಗೌಡರನ್ನು ಮುನ್ನೆಲೆಗೆ ತರುವುದರ ಹಿಂದೆ ಬೋಲ್ಟ್ ಅವರ ಸಾಧನೆಯನ್ನು ಕಡೆಗಣ್ಣಿನಿಂದ ನೋಡಲಾಗುತ್ತಿದೆ ಎಂಬ ಭಾವನೆಯೂ ಇದೇ ವೇಳೆ ಮೊಳೆತಿದೆ. ಮನುಷ್ಯ- ಮನುಷ್ಯರ ನಡುವೆ ಸ್ಪರ್ಧೆ ಏರ್ಪಡುವುದಕ್ಕೂ ಕೋಣಗಳ ಜೊತೆ ಓಡುವುದಕ್ಕೂ ವ್ಯತ್ಯಾಸ ಇದೆ.

ಬೋಲ್ಟ್ ಎದುರಿಸಿದ ಕಷ್ಟಗಳು, ಅಂತರರಾಷ್ಟ್ರೀಯ ಮನ್ನಣೆ ಪಡೆದ ಅವರ ಸಾಧನೆಯ ಹಿಂದಿರುವ ಪರಿಶ್ರಮ, ಈಗಾಗಲೇ ಕ್ರೀಡಾಪ್ರಿಯರಲ್ಲಿ ಸುಸ್ಥಾಪಿತಗೊಂಡ ಅವರ ಬಿಂಬ ಎಲ್ಲವೂ ಇಂತಹ ವಾದದ ಹಿಂದೆ ಕೆಲಸ ಮಾಡಿವೆ. ಇವರಿಬ್ಬ ರನ್ನೂ ಪರಸ್ಪರ ಹೋಲಿಸುವುದಾಗಲೀ ಅಥವಾ ವ್ಯತ್ಯಾಸ ಕಂಡುಹಿಡಿಯುವುದಾಗಲೀ ತಪ್ಪು. ಇಬ್ಬರ ಸಾಧನೆಯೂ ಶ್ರೇಷ್ಠ. ಆದರೆ ವೇದಿಕೆ ಮಾತ್ರ ಬೇರೆ ಬೇರೆ.

ಪಾಪ್ ಗಾಯಕನೊಟ್ಟಿಗೆ ಪಾಡ್ದನ ಹಾಡುವ ಜನಪದರ ತುಲನೆ ಸರಿಯೇ ಎಂಬ ತರ್ಕ ಎದ್ದಿದೆ. ಈ ವಾದ ಕೊಂಚಮಟ್ಟಿಗೆ ಸಮತೋಲಿತವಾಗಿ ಇಡೀ ಬೆಳವಣಿಗೆಯನ್ನು ಗ್ರಹಿಸಿದಂತಿದೆ. ಇದನ್ನು ಮಂಡಿಸುತ್ತಿರುವುದು ವಿವಿಧ ಕ್ಷೇತ್ರಗಳ ತಜ್ಞರು. ಅಲ್ಲದೆ ಓಟಗಾರರಿಗಿಂತಲೂ ಕೋಣಗಳು ಮಿಗಿಲೋ ಎಂಬ ವಾದವೂ ಸರಬರ ಸದ್ದು ಮಾಡುತ್ತಿದ್ದು ಮೂಕ ಪ್ರಾಣಿಗಳ ಪ್ರತಿಭೆ ಯನ್ನೂ, ವರ್ಷವಿಡೀ ತಮ್ಮ ‘ಧಣಿ’ಗಾಗಿ ಬೆವರು ಸುರಿ ಸುವ ಅವುಗಳ ಶ್ರಮವನ್ನೂ ಕೊಂಡಾಡಲಾಗುತ್ತಿದೆ.

ಈ ಎಲ್ಲ ಚಿಂತನ- ಮಂಥನದ ನಡುವೆ ಒಂದು ‘ಕರಿಕೋಣ’ ಮಾತ್ರ ಯಾರಿಗೂ ಕಾಣದಂತೆ ದಿಕ್ಕೆಟ್ಟು ಓಡುತ್ತಿದೆ. ಅದು ದೇಶದ ಕ್ರೀಡಾ ವ್ಯವಸ್ಥೆ. ಕಾಳಜಿ ಇಲ್ಲದ ವ್ಯವಸ್ಥೆ ಎಂಬ ಆಪಾದನೆ ಹೊತ್ತ ಈ ಕೋಣಕ್ಕೆ ಮೊದಲಿನಿಂದಲೂ ಸರಿಯಾದ ಮೂಗುದಾರ ಇಲ್ಲ. ಗೌಡರು ಕೇಂದ್ರ ಕ್ರೀಡಾ ಸಚಿವರ ಕಣ್ಣಿಗೆ ಬಿದ್ದುದನ್ನೇ ದೊಡ್ಡದೆಂಬಂತೆ ಬಿಂಬಿಸಲಾಗುತ್ತಿದೆ. ಗೌಡರಿಗೆ ತರಬೇತಿ ಕೊಡಿಸುವುದಕ್ಕೆ ಮಾತ್ರ ಕ್ರೀಡಾ ಸಚಿವರ ಕಾರ್ಯವ್ಯಾಪ್ತಿ ಸೀಮಿತಗೊಂಡಿದೆಯೇ ಅಥವಾ ಕಂಬಳದಂತಹ ಕ್ರೀಡೆಗಳಿಗೆ ಜಾಗತಿಕ ಮನ್ನಣೆ ತಂದುಕೊಡುವುದಕ್ಕೆ ಏನಾದರೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆಯೇ? ಕಂಬಳ ನಿಷೇಧ ದೊಡ್ಡ ಗದ್ದಲ ಎಬ್ಬಿಸಿದಾಗ ಕ್ರೀಡಾ ಸಚಿವಾಲಯದ ನಿಲುವು ಏನಾಗಿತ್ತು? ಭಾವನಾತ್ಮಕ ಸಂಗತಿಗಳನ್ನು ಬದಿಗಿಟ್ಟು ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಏಕೆಂದರೆ ದೇಶದಲ್ಲಿ ಇರುವ ಗೌಡರಂತಹ ಅಸಂಖ್ಯ ಪ್ರತಿಭೆಗಳನ್ನು ಗುರುತಿಸಿ ಗುರಿ ಮುಟ್ಟಿಸುವ ಹೊಣೆಗಾರಿಕೆ ಕ್ರೀಡಾ ಆಡಳಿತಕ್ಕೆ ಇಲ್ಲ ಎಂಬುದು ನಿರ್ವಿವಾದದ ಸಂಗತಿ. ಬೋಲ್ಟ್ ಅವರನ್ನು ಕಂಡು ಉತ್ತರ ಕನ್ನಡದ ಸಿದ್ದಿ ಜನಾಂಗದ ಪ್ರತಿಭೆಗಳಿಗೆ ತರಬೇತಿ ಕೊಡಿಸಲು ಈ ಹಿಂದೆ ಯತ್ನ ನಡೆದಿತ್ತು. ಈಗ ಗೌಡರಿಗೆ ಆ ‘ಸದವಕಾಶ’ ಒದಗಿಸಲಾಗುತ್ತಿದೆ. ಆದರೆ ಮಹತ್ವದ ಸಂಗತಿ ಅದು ಅಲ್ಲವೇ ಅಲ್ಲ. ಏಕೆಂದರೆ ಹೀಗೆ ತರಬೇತಿ ಕೊಡಿಸುವುದು ಕೇವಲ ಸಾಂದರ್ಭಿಕ ಕಾಳಜಿಯಾಗಿ ತೋರುತ್ತದೆ. ಒಂದು ಘಟನೆಯಾಚೆಗೆ ಚಾಚಿಕೊಳ್ಳುವ ಆಸ್ಥೆ ಈ ಬಗೆಯ ಯತ್ನಗಳಿಗೆ ಇರದು.

ಕ್ರೀಡೆ ಎಂದರೆ ಕ್ರಿಕೆಟ್ ಎಂದೇ ನಂಬಿರುವ ಭಾರತದಂತಹ ಸಂದರ್ಭದಲ್ಲಿ ಕಬಡ್ಡಿ, ಹಾಕಿ, ಚದು ರಂಗದಂತಹ ಸುಸಂಘಟಿತ ಕ್ರೀಡೆಗಳಿಗೇ ಮನ್ನಣೆ ಸಿಗುತ್ತಿಲ್ಲ. ಇನ್ನು ಕಂಬಳ, ಹಗ್ಗಜಗ್ಗಾಟ, ಕೊಕ್ಕೊ, ಕುಸ್ತಿ, ಬಿಲ್ವಿದ್ಯೆ, ವಲ್ಲಂಕಲಿ, ಮಲ್ಲಕಂಬಗಳ ಗತಿಯೇನು ಎಂಬ ಪ್ರಶ್ನೆ ಬಹಳ ಹಿಂದಿನಿಂದಲೂ ಇದೆ. ಈ ಬಗೆಯ ತಾತ್ಸಾರಕ್ಕೆ ಜನರ ಮನಃಸ್ಥಿತಿಯೂ ಕಾರಣ. ಕಬಡ್ಡಿ, ಫುಟ್‌ಬಾಲ್ ಮನರಂಜನೆಯಾಗಿ ಟಿ.ವಿಗಳಲ್ಲಿ ಕಂಡುಬರುತ್ತಿವೆಯೇ ವಿನಾ ನಿಜವಾಗಿಯೂ ಕ್ರೀಡೆಯಾಗಿ ಜನರ ಮನದಲ್ಲಿ ನೆಲೆ ನಿಂತಿವೆಯೇ ಎಂಬ ಪ್ರಶ್ನೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು