ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಭಾಷೆ ಭಿನ್ನ: ಕಲಿಯದಿದ್ದರೇನು ಚೆನ್ನ?

Published : 11 ಸೆಪ್ಟೆಂಬರ್ 2024, 22:01 IST
Last Updated : 11 ಸೆಪ್ಟೆಂಬರ್ 2024, 22:01 IST
ಫಾಲೋ ಮಾಡಿ
Comments

ಪ್ರಾಥಮಿಕ ಶಾಲೆಗಳ ಭಾಷಾ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಶಿಕ್ಷಕರೊಂದಿಗೆ ಸಂವಾದಿಸುತ್ತಿದ್ದಾಗ ಕೆಲವು ಕುತೂಹಲಕಾರಿ ಅಂಶಗಳು ಹೊರಬಂದವು. ಮನೆಯಲ್ಲಿ ಹಿಂದಿ ಮಾತನಾಡುವ ತಮ್ಮ ವಿದ್ಯಾರ್ಥಿಗೆ ಇಂಗ್ಲಿಷ್‌ ಭಾಷೆಯ ಲಿಪಿ ಬಳಸಿ ಕನ್ನಡ ಕಲಿಸುವುದರಲ್ಲಿ ಯಶಸ್ವಿಯಾಗಿದ್ದನ್ನು ಶಿಕ್ಷಕರೊಬ್ಬರು ಹಂಚಿಕೊಂಡರು. ಬಿಹಾರಿ ಮಾತನಾಡುವ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಮಾತನಾಡುತ್ತಾ ಕನ್ನಡ ಕಲಿಸುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕ ಕುರಿತು ಇನ್ನೊಬ್ಬ ಶಿಕ್ಷಕರು ವಿವರಿಸಿದರು.

ಇಂದಿನ ತರಗತಿಗಳು ಶಿಕ್ಷಕರಿಗೆ ಸವಾಲಿನಿಂದ ಕೂಡಿರುತ್ತವೆ. ಪಠ್ಯ ವಿಷಯವನ್ನು ಪೂರ್ಣಗೊಳಿಸಿದರಷ್ಟೇ ಸಾಕಾಗದೆ ಮಕ್ಕಳು ಏಕೆ ಮತ್ತು ಹೇಗೆ ಕಲಿಯುತ್ತಿದ್ದಾರೆ ಅಥವಾ ಕಲಿಯುತ್ತಿಲ್ಲ ಎಂಬ ಕುರಿತು ನಿರಂತರ ಪರಾಮರ್ಶೆ ಮಾಡಬೇಕಾಗುತ್ತದೆ. ಶಿಕ್ಷಕರು ಈ ದಿಸೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಕುರಿತು ಕುತೂಹಲಿಗಳು, ಚಿಂತನಶೀಲರು, ಅನ್ವೇಷಣಾ ಪ್ರವೃತ್ತಿಯವರು ಆಗಿರಬೇಕಾಗುತ್ತದೆ.

ಉತ್ತರ ಕರ್ನಾಟಕದ ಜಿಲ್ಲೆಯೊಂದರ ಚಿಕ್ಕ ಗ್ರಾಮದ ಶಾಲೆಯ ಶಿಕ್ಷಕಿಯೊಬ್ಬರ ಅನುಭವಕಥನ ಪ್ರಸ್ತುತವಾದುದು. ಲಂಬಾಣಿ ಭಾಷೆ ಮಾತನಾಡುವ ಊರಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಹೊಸದರಲ್ಲಿ ಅವರು ಮಕ್ಕಳನ್ನು ಸೆಳೆಯಲು ಕತೆ ಹೇಳುತ್ತಿದ್ದರು. ಆದರೂ ಮಕ್ಕಳಿಂದ ಸ್ಪಂದನೆ ದೊರೆಯುತ್ತಿರಲಿಲ್ಲ. ಇದರಿಂದ ಚಿಂತಿತರಾಗಿ ಕಾರಣ ತಿಳಿಯಲು ಮುಂದಾಗುತ್ತಾರೆ. ಊರಿನಲ್ಲಿ ಕನ್ನಡ ಮತ್ತು ಲಂಬಾಣಿ ಭಾಷೆ ಎರಡನ್ನೂ ಬಲ್ಲ ಒಬ್ಬ ಬಾಲಕಿಯ ಸಹಾಯ ಪಡೆಯುತ್ತಾರೆ. ತಾವು ನಿರೂಪಿಸಿದ ಕತೆ ಮಕ್ಕಳಿಗೆ ಅರ್ಥವಾಗಿಲ್ಲ ಎಂಬುದು ಆಗ ಶಿಕ್ಷಕಿಗೆ ತಿಳಿಯುತ್ತದೆ. ಅವರು ಮಕ್ಕಳು ಹೆಚ್ಚು ಮಾತನಾಡುವ ಕೆಲವು ಲಂಬಾಣಿ ಪದಗಳನ್ನು ಕಲಿತು, ಅವುಗಳನ್ನು ಕನ್ನಡ ಭಾಷೆಯ ಸರಳ ಪದ ಮತ್ತು ಚಿತ್ರಗಳ ಜೊತೆ ಸೇರಿಸಿ, ಪಾಠ ಮಾಡಿ ಯಶಸ್ಸು ಗಳಿಸುತ್ತಾರೆ. ಈ ರೀತಿ ಊರಿನ ಜನರ ಜೊತೆ ಬೆರೆತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ  ಕಾರ್ಯನಿರ್ವಹಿಸಿದ ಶಿಕ್ಷಕರು ಯಶಸ್ವಿಯಾದ ಅನೇಕ ಉದಾಹರಣೆಗಳಿವೆ.

ಕೆಲ ವರ್ಷಗಳ ಹಿಂದೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ಜನ ಬೆಂಗಳೂರು ಮತ್ತು ಇತರ ಪ್ರದೇಶಗಳಿಗೆ ಹೆಚ್ಚಾಗಿ ವಲಸೆ ಬರುತ್ತಿದ್ದರು. ಪ್ರಸ್ತುತ ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂನಂತಹ ಉತ್ತರ ಭಾರತದ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪಶ್ಚಿಮ ಬಂಗಾಳದಿಂದ ಅನೇಕ ಕುಟುಂಬಗಳು ಬಂದಿರುವ ಬಗ್ಗೆ ತಿಳಿದುಬಂತು. ರಾಜ್ಯದ ಹಲವೆಡೆ ವಿವಿಧ ಭಾಷೆ ಮಾತನಾಡುವ ಜನರು ಉದ್ಯೋಗ ಅರಸಿ ವಲಸೆ ಬರುತ್ತಿದ್ದು, ಇವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ.

ಬಹುಭಾಷಾ ಸನ್ನಿವೇಶ ಸಾಮಾನ್ಯ ಎನಿಸುವ ವಾತಾವರಣ ಕೆಲವು ಶಾಲೆಗಳಲ್ಲಿ ಸೃಷ್ಟಿಯಾಗಿದೆ. ತಮ್ಮ ಮನೆಭಾಷೆಯಲ್ಲದ ಶಿಕ್ಷಣ ಮಾಧ್ಯಮದಲ್ಲಿ ಕಲಿಯುವ ಸವಾಲು ಮಕ್ಕಳದ್ದಾದರೆ, ತಮಗೆ ತಿಳಿದಿರದ ಹಲವು ಭಾಷೆಗಳ ಮಕ್ಕಳು ತರಗತಿಯಲ್ಲಿದ್ದಾಗ ಕಲಿಸುವುದು ಹೇಗೆ ಎಂಬ ಸವಾಲನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಈ ರೀತಿಯ ಭಾಷಾ ತೊಡಕಿಗೆ ಪರಿಹಾರವನ್ನು ಕೆಲವು ಉತ್ಸಾಹಿ ಶಿಕ್ಷಕರು ತಮ್ಮದೇ ಆದ ವಿಧಾನದಲ್ಲಿ ಕಂಡುಕೊಂಡು, ಗುಣಮಟ್ಟದ ಕಲಿಕೆಯನ್ನು ಸಾಧ್ಯವಾಗಿಸಿದ್ದಾರೆ. ತರಗತಿಯೊಳಗಿನ ಭಾಷಾ ತೊಡಕಿಗೆ ಸಾಂಸ್ಥಿಕ ಪರಿಹಾರ ಕಂಡುಕೊಳ್ಳುವೆಡೆ ಪ್ರಯತ್ನಗಳಾಗಬೇಕಿದೆ.

ರಾಜ್ಯದ ಹೊರಗಿನ ಪ್ರದೇಶಗಳಿಂದ ಬಂದ ಮಕ್ಕಳಿಗೆ ಮಾತ್ರ ಈ ಭಾಷಾ ತೊಡಕು ಸೀಮಿತವಾಗಿಲ್ಲ. ನಮ್ಮದೇ ರಾಜ್ಯದ ಬೀದರ್‌, ಕಲಬುರಗಿ, ರಾಯಚೂರು, ಧಾರವಾಡದಂತಹ ಜಿಲ್ಲೆಗಳಿಂದ ಬೆಂಗಳೂರು ಮತ್ತು ಇತರೆಡೆ ವಲಸೆ ಹೋಗಿರುವ ಕುಟುಂಬಗಳ ಮಕ್ಕಳು ಅಲ್ಲಿನ ಶಾಲೆಗಳಲ್ಲಿ ಕಲಿಯುವಾಗಲೂ ಇಂತಹದ್ದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ತಮ್ಮ ಮನೆಯಲ್ಲಿ ಮಾತನಾಡುವ ಕನ್ನಡಕ್ಕೂ ಪಠ್ಯಪುಸ್ತಕದಲ್ಲಿ ಮುದ್ರಿತವಾಗಿರುವ ಮತ್ತು ಶಿಕ್ಷಕರು ತರಗತಿಯಲ್ಲಿ ಮಾತನಾಡುವ ಕನ್ನಡ ಭಾಷೆಗೂ ವ್ಯತ್ಯಾಸವಿರುತ್ತದೆ. ಈ ರೀತಿಯ ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷೆಯ ಹಿನ್ನೆಲೆಗಳಿಂದ ಬರುವ ಮಕ್ಕಳು ಶಾಲೆಯಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಹೀಗಾಗಿ ಇದು, ಮಕ್ಕಳು ಶಾಲೆಯನ್ನು ಬಿಡುವ ಸಮಸ್ಯೆ ಮತ್ತು ಕಲಿಕೆಯ ಹಿಂದುಳಿಯುವಿಕೆಗೆ ಕಾರಣವಾಗುತ್ತದೆ.

ಶಿಕ್ಷಕರು ಇಂತಹ ಸನ್ನಿವೇಶದಲ್ಲಿ ಮಕ್ಕಳು ಮಾತನಾಡುವ ಧಾರವಾಡ ಕನ್ನಡ, ರಾಯಚೂರು ಅಥವಾ ಬೀದರ್‌ ಕನ್ನಡದ ಕೆಲ ಪದಗಳನ್ನು ಮಕ್ಕಳೊಂದಿಗಿನ ತಮ್ಮ ಮಾತುಕತೆ, ಬೋಧನೆಯಲ್ಲಿ ಬಳಸಿದರೆ ಅವರು ತರಗತಿಗೆ ಹೊಂದಿಕೊಂಡು, ಪರಿಣಾಮಕಾರಿಯಾಗಿ ಕಲಿಯುತ್ತಾರೆ.

ಬಹುಸಂಸ್ಕೃತಿ ಮತ್ತು ಬಹುಭಾಷಾ ಹಿನ್ನೆಲೆಗಳ ಮಕ್ಕಳಿರುವ ತರಗತಿಗಳಲ್ಲಿ ವಿಭಿನ್ನ ಸಂಸ್ಕೃತಿಗಳಿಂದ ಉಂಟಾಗುವ ತೊಡಕನ್ನು ಶಿಕ್ಷಕರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು, ಚಲನಶೀಲವಾಗಿ ಮತ್ತು ನಾವೀನ್ಯದಿಂದ ಕಲಿಸಲು ಪ್ರಯತ್ನಿಸಬೇಕು. ಮಕ್ಕಳಾಡುವ ಭಾಷೆಯ ಕೆಲವು ಸಾಮಾನ್ಯ ಪದಗಳನ್ನು ಕಲಿತು, ಅವುಗಳನ್ನು ತರಗತಿಯಲ್ಲಿ ಬಳಸುತ್ತಾ ಆಹ್ಲಾದಕರ ಪರಿಸರವನ್ನು ಸೃಷ್ಟಿಸಬೇಕು. ಪೋಷಕರ ಜೊತೆ ಸಂಪರ್ಕ ಸಾಧಿಸಿ ಅವರ ಸಂಸ್ಕೃತಿಯನ್ನು ಅರಿಯುವ ಪ್ರಯತ್ನ ಮಾಡಿದಲ್ಲಿ, ಹೊಸ ಬೋಧನಾ ವಿಧಾನಗಳ ಕುರಿತು ಮಕ್ಕಳು ಚಿಂತಿಸಲು ಸಹಾಯವಾಗುತ್ತದೆ. 

ಬಹುಭಾಷಾ ತರಗತಿಗಳನ್ನು ಸಮರ್ಥವಾಗಿ ಮುನ್ನಡೆಸಲು ನವೀನ ಕಾರ್ಯತಂತ್ರಗಳ ಅನುಷ್ಠಾನಕ್ಕೆ ಸಂಬಂಧಿಸಿ ಹೆಚ್ಚಿನ ಪರ್ಯಾಲೋಚನೆಯ ಅಗತ್ಯವಿದೆ. 

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT