ಶುಕ್ರವಾರ, ಜನವರಿ 21, 2022
30 °C

ಆನೆ ಲೆಟರ್ | ನಮ್ಮ ನಡುವಿನ ಸಾಮರಸ್ಯ ನಿರಂತರ ಇರಲಿ...

ರಜನಿ ಶ್ರೀವತ್ಸ Updated:

ಅಕ್ಷರ ಗಾತ್ರ : | |

‘ಆನೆಗಳು ಪರಿಸರಕ್ಕೆ ಎಷ್ಟು ಅಗತ್ಯ?’ ಈ ಪ್ರಶ್ನೆಗೆ ಆನೆಯೊಂದು ಉತ್ತರ ನೀಡಿದರೆ ಹೇಗಿರುತ್ತೆ. ಹತ್ತಾರು ವರ್ಷಗಳಿಂದ ಆನೆಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ವನ್ಯಜೀವಿ ತಜ್ಞೆ ರಜನಿ ಶ್ರೀವತ್ಸ ಆನೆಗಳು ಕೊಟ್ಟಿರುವ ಉತ್ತರವನ್ನು ಅಕ್ಷರರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

---

ಆತ್ಮೀಯ ಸಹಜೀವಿಗಳೇ, 

ನಿನ್ನೆಯಷ್ಟೇ (ಆಗಸ್ಟ್ 12)  ಆನೆಗಳ ದಿನ ಆಚರಿಸಿದಿರಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ನನಗಾಗಿ ಒಂದು ದಿನ ಮೀಸಲಿಟ್ಟಿದ್ದೀರೆಂದು ತಿಳಿದು ಸಂತಸವಾಯಿತು. ಪ್ರಕೃತಿಯಲ್ಲಿರುವ ಸವಲತ್ತುಗಳಿಗೆಲ್ಲ ನೀವಷ್ಟೇ ಪಾಲುದಾರರು ಎಂಬಂತೆ ಬದುಕುತ್ತಿರುವ ನೀವು ನನ್ನಂತಹ ಇತರ ಜೀವಿಗಳ ಇರುವಿನೆಡೆಗೂ ಗಮನ ಹರಿಸುತ್ತಿರುವುದು ಸಮಾಧಾನಕರ ಸಂಗತಿ. ನಮ್ಮ ನಡುವಿನ ಸಾಮರಸ್ಯ ಇದೊಂದು ದಿನಕ್ಕಷ್ಟೇ ಸೀಮಿತವಾಗದೆ  ಅನುದಿನದ ಆಚರಣೆ ಆಗಲಿ ಎಂಬ ಕಳಕಳಿಯ  ಮನವಿಯೊಂದಿಗೆ ನನ್ನ ಪ್ರಪಂಚವನ್ನು ನಿಮ್ಮ ಮುಂದೆ ತೆರೆದಿಡಲು ಬಯಸುತ್ತೇನೆ. 

ಆನೆಗಳ ಕುರಿತು ಇನ್ನಷ್ಟು ಅರಿಯಲು www.prajavani.net/tags/elephant ಲಿಂಕ್ ಕ್ಲಿಕ್ ಮಾಡಿ

ನನ್ನ ಗರ್ಭವಾಸ್ಥೆಯ ಸಮಯ ನಿಮ್ಮದಕ್ಕೆ ಹೋಲಿಸಿದರೆ ದುಪ್ಪಟ್ಟು. ಸುಮಾರು ಇಪ್ಪತ್ತರಿಂದ ಇಪ್ಪತ್ತೆರಡು ತಿಂಗಳು ಅಮ್ಮನ ಮಡಿಲಿನೊಳಗೆ ಹುದುಗಿಕೊಂಡಿರುವ ನಾನು ಅಲ್ಲಿಂದ ಹೊರಬಂದ ಮೇಲೂ ಅಮ್ಮನ ಮುದ್ದಿನ ಕೂಸೇ. ಕೇವಲ ಅಮ್ಮನಿಗಷ್ಟೇ ಅಲ್ಲ, ಅಮ್ಮನ ಜೊತೆಯಲ್ಲಿರುವ ಉಳಿದೆಲ್ಲ ಹಿರಿಯರಿಗೂ ನನ್ನ ಮೇಲೆ ಅಷ್ಟೇ ಪ್ರೀತಿ. ನನ್ನ ಸುರಕ್ಷಿತವಾಗಿಡಲೆಂದು ಅವರೆಲ್ಲರೂ ಒಟ್ಟಾಗಿ ವಹಿಸುವ ಎಚ್ಚರಿಕೆ, ಕಾಳಜಿ ನನ್ನ ಸಮಾಜದಲ್ಲಿ ನೆಲೆಸಿರುವ ಒಗ್ಗಟ್ಟಿಗೆ ಸಾಕ್ಷಿ.

ನಾವು ಸಂಘ  ಜೀವಿಗಳು. ಒಗ್ಗಟ್ಟಿನಲ್ಲಿ ಬಲವಿದೆ ಮಾತಿಗೆ ನಮ್ಮದು ಅಭಿಮತವಿದೆ. ನಮ್ಮದು ಮಾತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ. ತಂಡದ ನಾಯಕತ್ವ ನಿರ್ಧಾರವಾಗುವುದು ಹಿರಿತನದ ಆಧಾರದ ಮೇಲೆ. ಹೆಣ್ಣು ಸಂತತಿ ಈ ರೀತಿ ತಂಡೋಪತಂಡವಾಗಿ ಬದುಕಿದರೆ, ಗಂಡಾನೆಗಳು ಪ್ರೌಡಾವಸ್ಥೆಗೆ ಕಾಲಿಡುತ್ತಿದಂತೆ (ಅಂದಾಜು ಹನ್ನೆರಡರಿಂದ ಹದಿನೈದನೇ ವಯಸ್ಸಿಗೆ ) ತನ್ನ ಮೂಲ ಗುಂಪಿನಿಂದ ಹೊರಬಂದು ಒಂಟಿಯಾಗಿ ಬದುಕುತ್ತವೆ. 

ನಮ್ಮ ದೇಹರಚನೆಯ ವೈಶಿಷ್ಟ್ಯವನ್ನು ನೀವು ತಿಳಿಯಲೇ ಬೇಕು. ಮೊರದಗಲದ ಕಿವಿ, ಮಾರುದ್ದದ ಸೊಂಡಿಲ ಮಹತ್ವ ಗಮನಾರ್ಹವಾದುದು. ನಮ್ಮ ಶ್ರವಣ ಸಾಮರ್ಥ್ಯ ಅದೆಷ್ಟು ತೀಕ್ಷ್ಣವೆಂದರೆ ನಿಮ್ಮ ಕಿವಿಗೇ ತಲುಪದಷ್ಟು ಕ್ಷೀಣ ಸದ್ದಿನ ಮೂಲಕ ನಾವು ಸುಮಾರು ನಾಲ್ಕರಿಂದ ಐದು ಕಿ.ಮೀ. ದೂರದಿಂದಲೇ ಪರಸ್ಪರ ಸಂವಹಿಸಬಲ್ಲೆವು. ನಮ್ಮ ಸೊಂಡಿಲಿನ ಸೂಕ್ಷ್ಮತೆ ಅದೆಷ್ಟೆಂದರೆ ಮೈಲುಗಟ್ಟಲೆ ದೂರದಿಂದಲೇ ನೀರಿನ ಇರುವಿಕೆಯನ್ನು ಗುರುತಿಸಬಲ್ಲೆವು. ಇನ್ನು ನಮ್ಮ ದಂತಗಳು ನಿಮ್ಮ ಪಾಲಿಗೆ ಎಷ್ಟು ಅಮೂಲ್ಯವೋ  ನಮ್ಮ ಪಾಲಿಗೂ ಅಷ್ಟೇ ಅಮೂಲ್ಯ. ಅವು ನಮ್ಮ ಪಾಲಿನ ಪ್ರಮುಖ ರಕ್ಷಣಾ ಸಾಧನ. ಅಷ್ಟೇ ಅಲ್ಲ, ಭಾರಿ ಮರಗಳನ್ನು ಉರುಳಿಸಲು, ನೀರಿನ ಕೊರತೆ ಕಂಡು ಬಂದಾಗ ನೆಲವನ್ನು ಅಗೆಯಲು, ಭಾರವಾದ ಸೊಂಡಿಲನ್ನು ಇಳಿಬಿಡಲು ಇದೇ  ನಮಗೆ ಸಹಕಾರಿ. ನಿಮಗೆ ಗೊತ್ತಾ, ನಮ್ಮ ದಂತ ಜೀವನ ಪರ್ಯಂತ ಬೆಳೆಯುತ್ತಲೇ ಇರುತ್ತದೆ.

ನಮ್ಮ ಗಾತ್ರಕ್ಕೆ ತಕ್ಕಂತೆ, ನಮ್ಮ ಅಗತ್ಯತೆಗಳೆಲ್ಲವೂ ದೊಡ್ಡದೇ. ಸಮೃದ್ಧ ನೀರು, ಹಚ್ಚ ಹಸಿರು, ವಿಶಾಲ ಆವಾಸ ಸ್ಥಾನ ಇದ್ದಲ್ಲಿ ನಮ್ಮ ಠಿಕಾಣಿ. ದಿನವೊಂದಕ್ಕೆ ಸರಾಸರಿ ನೂರರಿಂದ ನೂರೈವತ್ತು ಲೀಟರ್ ನೀರು ಕುಡಿಯುವ ನಮ್ಮ ಆಹಾರದ ಅಗತ್ಯತೆ ಸುಮಾರು ನೂರರಿಂದ ನೂರೈವತ್ತು ಕೆಜಿ. ನೀವು ತಿಳಿದಂತೆ ಬಾಳೆಹಣ್ಣು, ಕಬ್ಬು, ಬೆಲ್ಲ ಇದಿಷ್ಟೇ ನಮ್ಮ ಮೆಚ್ಚಿನ ಆಹಾರವಲ್ಲ. ನೈಸರ್ಗಿಕವಾಗಿ ಬೆಳೆಯುವ ಬಿದಿರು, ಹುಲ್ಲು, ಮರದ ತೊಗಟೆಗಳು ನಮಗಿಷ್ಟ. ನೀರು ಮತ್ತು  ಆಹಾರವನ್ನರಸುತ್ತಾ ವರ್ಷಾವೊಂದಕ್ಕೆ ನೂರಾರು ಕಿ.ಮೀ. ಸಂಚರಿಸುವ ನಾವು ಬೀಜ ಪ್ರಸರಣ ಕ್ರಿಯೆಯಲ್ಲಿಯೂ ಪಾಲುದಾರರಾಗಿದ್ದೇವೆ.

ನಡೆಯುವ ಹಾದಿಗೆ ಅಡ್ಡವಾಗಿ ಸಿಗುವ ಮರದ ರೆಂಬೆ, ಕೆಲವೊಮ್ಮೆ ಇಡೀ ಮರವೊಂದನ್ನೇ ನೆಲಕ್ಕುರುಳಿಸುತ್ತಾ, ಹೊಸ ಚಿಗುರಿಗೆ ಅನುವು ಮಾಡಿಕೊಡುವುದಲ್ಲದೆ, ಇತರ ಸಣ್ಣ ಪ್ರಾಣಿಗಳಿಗೆ ನೀರಿನ ಸೆಲೆಯನ್ನು ಗುರುತಿಸುವಲ್ಲಿ ನೆರವಾಗುತ್ತೆವೆ ಕೂಡ. ಈ ಕಾರಣದಿಂದಾಗಿ ನಮಗೆ ‘ಪರಿಸರ ವ್ಯವಸ್ಥೆಯ ಎಂಜಿನಿಯರ್’ ಎಂಬ ಬಿರುದು ಇದೆ!

ಹೀಗೆ ಒಮ್ಮೆ ಕಂಡುಕೊಂಡ ಹಾದಿಯನ್ನು ಹತ್ತಾರು ವರ್ಷಗಳ ನಂತರವೂ ನೆನಪಲ್ಲಿಟ್ಟುಕೊಂಡು ಅಗತ್ಯ ಬಿದ್ದಾಗ ಮರಳಿ ಭೇಟಿ ಕೊಡಬಲ್ಲ ಸಾಮರ್ಥ್ಯವಿರುವ ನಮಗೆ ನಮ್ಮ ಈ ವರದಾನವೇ ಅಭಿಶಾಪವಾಗಿ ಕಾಡಲಾರಂಭಿಸಿರುವುದು ದುರಾದೃಷ್ಟಕರ. ನಾಲ್ಕಾರು ದಶಕಗಳ ಹಿಂದೆ ಸಾಗಿ ಬಂದ ಜಾಡು ಹಿಡಿದು ಈಗ ಮತ್ತೆ ಅಲ್ಲಿ ಹೆಜ್ಜೆ ಹಾಕುವಾಗ ಕಂಡು ಬರುವ ಬದಲಾವಣೆಗಳು ನಮ್ಮ ನೆನಪಿನ ಶಕ್ತಿಯನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಹಿಂದೊಮ್ಮೆ ನದಿ, ಕೆರೆ, ಝರಿ ಇದ್ದ ಜಾಗದಲ್ಲಿ ಅದರ ಅಸ್ತಿತ್ವದ ಕುರುಹೂ ಇಲ್ಲದಂತಹ ರೂಪಾಂತರ. ಹಿಂದೊಮ್ಮೆ ದಟ್ಟ ಕಾಡಿದ್ದ ಜಾಗದಲ್ಲೀಗ ಗದ್ದೆ ತೋಟ ಎಸ್ಟೇಟ್‌ಗಳು! ಅದರ ರಕ್ಷಣೆಗೆಂದು ನೀವು  ಬೇಲಿಗೆ ಬಿಗಿದ ವಿದ್ಯುತ್ ತಂತಿಗಳು. ಇಂತಹ ಬದಲಾದ ಪರಿಸ್ಥಿತಿಗೆ ದಿಕ್ಕೆಟ್ಟು ಹೆಜ್ಜೆ ತಪ್ಪಿ ನಾಡಿನೊಳಗಡಿಯಿಟ್ಟರೆ ನಿಮ್ಮ ತಿಳಿಗೇಡಿ ವರ್ತನೆಗಳು ಇವೆಲ್ಲ  ನಮ್ಮನ್ನು ಕೆಲವೊಮ್ಮೆ ಕಂಗಾಲಾಗಿಸಿ ಬಿಟ್ಟರೆ ಮತ್ತೆ ಕೆಲವೊಮ್ಮೆ ರೊಚ್ಚಿಗೆಬ್ಬಿಸಿ ಬಿಡುತ್ತವೆ. 

ಹಿಂದೆಲ್ಲ ಪ್ರಕೃತಿಯೊಡ್ಡುತ್ತಿದ್ದ  ಸವಾಲುಗಳನ್ನೆದುರಿಸಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದ  ನಮಗೆ ಈಗ ನೀವು ಒಡ್ಡುತ್ತಿರುವ ಸವಾಲುಗಳು ದುರ್ಭರವೆನಿಸುಬಿಡುತ್ತಿವೆ. ಎಣೆಯಿಲ್ಲದಂತೆ ಕಾಡನ್ನು ಕಬಳಿಸುತ್ತಾ ನಮ್ಮ ಆವಾಸ ಸ್ಥಾನವನ್ನು ಕುಗ್ಗಿಸುತ್ತಲೇ ಇರುವ ನಿಮ್ಮ ಸ್ವಾರ್ಥದೆಡೆಗೆ ನನ್ನ ಅಸಹಾಯಕ ನಿಟ್ಟುಸಿರಿದೆ. ನೆಲದ ಮೇಲಿನ ಅತಿ ದೊಡ್ಡ ಸ ಸ್ತನಿಯಾದ ನನ್ನನ್ನು ಅಂಕುಶ, ಸರಪಳಿಯ ಮೂಲಕ ನಿಮ್ಮ ಅಜ್ಞಾನುಸಾರಿಯನ್ನಾಗಿಸಲು ಹವಣಿಸುವ ನಿಮ್ಮ ದುರುಳತನದೆಡೆಗೆ  ನನ್ನ ಆಕ್ರೋಶವಿದೆ. ದಂತದ ನೆಪದಲ್ಲಿ ನನ್ನ ಹತ್ಯೆಗಯ್ಯುವ ನಿಮ್ಮ ಅತಿಲೋಲುಪತನಕ್ಕೆ ನನ್ನ ಧಿಕ್ಕಾರವಿದೆ. ಹಾಗೆಯೇ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತ ನಮ್ಮ ಉಳಿವಿಗಾಗಿ ಶ್ರಮಿಸುತ್ತಿರುವ ನಿಮ್ಮ ಪ್ರಯತ್ನದೆಡೆಗೆ ನನ್ನ ಕೃತಜ್ಞತೆ ಇದೆ. 

ನಾವು ಮೂಲತಃ ಸೌಮ್ಯ ಜೀವಿಗಳು. ಜೊತೆಗೆ ಸಂಕೋಚ ಸ್ವಭಾದವರು ಕೂಡ. ಪುಂಡಾಟಿಕೆ, ದಾಂದಲೆ, ಆಕ್ರಮಣ ಇದು ನಮ್ಮ ಸಹಜ ಸ್ವಭಾವವಲ್ಲ. ನಮ್ಮ ಖಾಸಗಿತನಕ್ಕೆ ಧಕ್ಕೆ ಬಾರದಂತೆ ನಮ್ಮ ಉಳಿವಿಗೆ ಸಂಚಕಾರ ಬಾರದಂತೆ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಟ್ಟರೆ ಅದೇ ನೀವು ನಮಗೆ ಕೊಡಬಹುದಾದ ಅತಿ ದೊಡ್ಡ ಕೊಡುಗೆ. ಹಾಗೆಯೇ ಅದಷ್ಟೇ ನಮ್ಮ ನಿರೀಕ್ಷೆ ಕೂಡ.

ಇತಿ ನಿಮ್ಮ ಪ್ರೀತಿಯ

ಆನೆ

ಇನ್ನಷ್ಟು... 

‘ಭತ್ತದ ಕಳ್ಳಿ’ಯಿಂದ ಕಲಿತ ಪಾಠ: ಆನೆಗಳೊಂದಿಗೆ ಸಹಬಾಳ್ವೆಗೆ ಅಸ್ಸಾಂ ರೈತರ ಯೋಚನೆ 

ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳಿಗೆ ಮೇಲ್ಸೇತುವೆ 

ಆನೆ ದಾರಿಯಲ್ಲಿ ಅಲ್ಲೋಲಕಲ್ಲೋಲ 

ಆನೆ ಪಥದಲ್ಲಿ ಮನುಷ್ಯರ ಹೆಜ್ಜೆಗಳು! 

ಅಣ್ಣಾಮಲೈ ಅರಣ್ಯದ ಆನೆ ಸ್ಕೂಲ್ 

ಮಾಲೂರಿನ ರೈತ ಶಿವಣ್ಣನ ಆನೆಗಳು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು